Monday, December 1, 2014

ಚರ್ಚೆಯಾಗಬೇಕಾದ ಶ್ರದ್ಧಾ ಕೇಂದ್ರಗಳು


ಶಾಂತಿ ಸಮಾಧಾನ ಕಳೆದುಕೊಂಡು ಗೊಂದಲದಲ್ಲಿ ಬದುಕು ದೂಡುತ್ತಿರುವ ಒಂದು ಕಾಲ ಘಟ್ಟದಲ್ಲಿ ವ್ಯವಸ್ಥೆಯನ್ನು ಸರಿಯಾಗಿ ಉಪಯೋಗಿಸಿಕೊಳ್ಳದ ಅಸಹಾಯಕತೆಯನ್ನು ನೆನಪಿಸಿಕೊಳ್ಳಬೇಕಾಗುತ್ತದೆ. ಸುಂದರವಾದ ಜೀವನದ ವಾಸ್ತು ವಿಷಯವನ್ನು ಕಲಿಸಿಕೊಡುವ ಇಸ್ಲಾಮಿನಲ್ಲಿ ಅದರ ಎಲ್ಲಾ ಅರ್ಥಬದ್ದ ವ್ಯವಸ್ಥೆಯನ್ನು ಬಳಸಿಕೊಳ್ಳುವಲ್ಲಿ ನಾವೆಲ್ಲೋ ಎಡವಿದ್ದೇವೆ! ಧರ್ಮದ ವಿಚಾರದಲ್ಲಿ ಅಧ್ಯಯನದ ಕೊರತೆ ಮತ್ತು ಅಂಧತೆಯಿಂದಾಗಿ ಅಸಂಸ್ಕೃತಿಯ ದಾಸ್ಯತನ, ಅನ್ಯ ಧರ್ಮೀಯರೊಂದಿಗೆ ಪಲಾಯನ ದಂತಹ ವಿಚಾರಗಳು ಹೆಚ್ಚುತ್ತಿದೆ.ಸಮುದಾಯದ ಮಧ್ಯೆ ಸಮಾಜಿಕ ಸ್ತಿತ್ಯಂತರಗಳ ಸಮಸ್ಯೆ ಉದ್ಬವಿಸಿದಾಗ ಚರ್ಚೆಗಳು ನಡೆದು ವಿಬಿನ್ನವಾದ ಪರಿಹಾರ ಶೈಲಿಗಳನ್ನು ಭಿನ್ನ ವೇದಿಕೆಗಳ ಮೂಲಕ ನೀಡಲಾಗುತ್ತದೆ, ತಡೆಗಟ್ಟುವ ಬಗ್ಗೆ ಸಂಪೂರ್ಣತೆಯಿಲ್ಲದ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ, ಆದರೆ ಎಲ್ಲೋ ಇಸ್ಲಾಮಿನ ಎಲ್ಲೆಯಲ್ಲಿ ಬಹಳ ಸುಲಭವಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾದ ವ್ಯವಸ್ಥೆಯನ್ನು ತಳ್ಳಿ ಹಾಕಿ ಮುಂದೆ ಸಾಗುತ್ತಿದ್ದೇವೆ. ಮುಸ್ಲಿಮರಿಗೆ ಅರಾಧನೆಯ ಮತ್ತು ಮಾರ್ಗದರ್ಶನದ ಶ್ರದ್ಧಾ ಕೇಂದ್ರವಾಗಿ ಮಸೀದಿಗಳು ನಿರ್ಮಿಸಲ್ಪಟ್ಟಿವೆ ಆದರೆ ಅದು ಅರಾಧನೆಗೆ ಮಾತ್ರ ಸೀಮಿತವಾಗಿ ಸಮುದಾಯದ ಸಮಾಜಿಕ ಸಮಸ್ಯೆಗಳ ಗಂಭೀರತೆಯ ಚರ್ಚೆಗೆ ಪರಿಹಾರ ಕಂಡುಕೊಳ್ಳುವ ವ್ಯವಸ್ಥೆಯಾಗಿ ಉಳಿದಿಲ್ಲ, ಬದಲಾಗಿ ಪ್ರತಿಷ್ಟೆಯ ಕಣವಾಗಿ ಮಾರ್ಪಟ್ಟಿದೆ.

ಶ್ರದ್ದಾ ಕೇಂದ್ರವಾದ ಮಸೀದಿಯ ಭೋಧನೆ ಸಮುದಾಯದ ಎಲ್ಲಾ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ನೀಡಳು ಸಾಧ್ಯ, ಒಂದು ಹೊಸ ಒಗ್ಗಟ್ಟಿನ ತಲೆಮಾರನ್ನು ಕಟ್ಟಿ ಬೆಳೆಸಲು ಸಾಧ್ಯ. ಧರ್ಮವನ್ನು ಕೆಲವೊಮ್ಮೆ ಸಂಕೋಲೆಗಳ ಒಳಗೆ ಬಂಧಿಸಲ್ಪಟ್ಟ ಹಾಗೆ ಪ್ರಭಾವಿಗಳಿಂದಾಗಿ ಮಸೀದಿಗಳು ಕೂಡಾ ಸಂಕುಚಿತ ಸಂಕೋಲೆಗಳ ಒಳಗೆ ಬಂಧಿಸಲ್ಪಟ್ಟಿವೆ. ಧಾರ್ಮಿಕ ಗುರುಗಳು ಯಾರದೋ ಅಣತಿಗೆ ತಲೆಬಾಗುವ ಶನ್ನಿವೇಶ ಕೂಡಾ ಹಲವು ಕಡೆಗಳಲ್ಲಿ ಕಾಣಸಿಗುತ್ತದೆ. ಸಮಾಜಿಕ ತೊಡಕುಗಳ ಬಗ್ಗೆ ಮಸೀದಿಯೆಂಬ ಶ್ರದ್ಧಾ ಕೇಂದ್ರದಲ್ಲಿ ಚರ್ಚೆ ನಡೆಯಬೇಕು, ಶ್ರದ್ಧಾ ಕೇಂದ್ರ ಯುವ ಮನಸ್ಸುಗಳಲ್ಲಿ ಬದಲಾವಣೆಯ ಬೇರು ಬೀರಲು ಸಾಧ್ಯ, ಕೆಟ್ಟು ಹೋಗುತ್ತಿರುವ ಒಂದು ವ್ಯವಸ್ಥೆಯಲ್ಲಿ ಇಸ್ಲಾಮಿನ ಸಂಪೂರ್ಣ ಪರಿಕಲ್ಪನೆಯ ಕನ್ನಡಿಯಾಗಿ ಮಸೀದಿಗಳು ಕೆಲಸ ನಿರ್ವಹಿಸಬೇಕಾಗಿದೆ.

ಮಸೀದಿಗಳು ಧಾರ್ಮಿಕತೆಯೊಂದಿಗೆ ಸಾಮಾಜಿಕ ಭೋಧನೆಗಳನ್ನು, ಆಗು ಹೋಗುಗಳ ಬಗ್ಗೆ ಚರ್ಚಿಸುವ ಕೇಂದ್ರಗಳಾಗಬೇಕು. ಬಹಳ ಸ್ಪಸ್ಟವಾದ ಸಂದೇಶಗಳನ್ನು, ನಿರ್ದೇಶನಗಳನ್ನು ನೀಡುವ ಮೂಲಕ ಮಸೀದಿಗಳು ಕ್ರಮಬದ್ದವಾದ ಜಮಾತ್ ವ್ಯವಸ್ಥೆಗೆ ಸ್ಪಷ್ಯ ರೂಪ ನೀಡಬೇಕು. ಭಿನ್ನತೆಯ ಗೂಡಾಗಿರುವ ನಾಡಿನಲ್ಲಿ ಶ್ರದ್ಧಾ ಕೇಂದ್ರವಾದ ಮಸೀದಿಯನ್ನು ಸಾಮಾಜಿಕ ತೊಡಕುಗಳ ನಿವಾರಣೆಗಾಗಿ, ಚರ್ಚೆಗಾಗಿ ಬಳಸಿಕೊಳ್ಳುವ ತಿರ್ಮಾನಗಳು ಬರುವಂತಹದ್ದು ಅಷ್ಟು ಸುಲಭದ ಮಾತು ಕೂಡಾ ಅಲ್ಲ!! ಒಟ್ಟಾರೆಯಾಗಿ ಚರ್ಚೆಯಾಗಬೇಕಾದ ವಿಚಾರ.

No comments: