Monday, June 30, 2014

ಅರ್ಥೈಯಿಸಿ! ಅರ್ಥೈಯಿಸಿಕೊಡುವ ತಿಂಗಳಾಗಲಿ ರಮಝಾನ್ (ಲೇಖನ)




ಬದಲಾವಣೆಯ ಅವಕಾಶವಾಗಿ ರಮಝಾನ್ ಮತ್ತೊಮ್ಮೆ ಮರಳಿ ಬಂದಿದೆ, ಆತ್ಮೀಯವಾಗಿ ಸ್ವಾಗತಿಸಿ ಸತ್ಕರ್ಮದೊಂದಿಗೆ  ಮುನ್ನಡೆಯುತ್ತಿದೆ, ಸತ್ಯವಿಶ್ವಾಸಿಗಳ ಮನದಲ್ಲಿ ಮಂದಹಾಸ ಮೂಡಿದೆ. ಪುಣ್ಯ ಕಾರ್ಯಗಳಿಗೆ ದುಪ್ಪಟ್ಟು ಫಲ ಸಿಗುವ ಮಹತ್ತರ ತಿಂಗಳು ಚೈತನ್ಯ ತುಂಬಿಸಿದೆ, ಕುರಾನ್ ಅವತ್ತೀರ್ಣ ಗೊಂಡ ತಿಂಗಳಾದುದರಿಂದ ಸತ್ಯವಿಶ್ವಾಸಿಗಳ ಅಂತರಾಳದಲ್ಲಿ ಭಾವುಕತೆಯ ಉದ್ಗಾರವುಂಟಾಗಿದೆ, ಸತ್ಕರ್ಮದ ಕಡೆಗೆ ಸಂಪೂರ್ಣವಾಗಿ ವಾಲಿಕೂಳ್ಳಬೇಕಾದ ತಿಂಗಳಾಗಿ ರಮಝಾನ್ ಬೆಳಕು ಚೆಲ್ಲಿದೆ, ಪ್ರತಿಯೊಬ್ಬ ಸತ್ಯವಿಶ್ವಾಸಿಯೂ ತನ್ನನ್ನು ಬದಲಾಯಿಸಿಕೊಳ್ಳುವ ಸದವಕಾಶವಾಗಿ ರಮಝಾನ್ ಸಾಗುತ್ತಿದೆ.

 ಭರದ ಸಿದ್ದತೆಯೊಂದಿಗೆ ರಮಝಾನನ್ನು ಸ್ವಾಗತಿಸಲಾಗಿದೆ ಆದರೆ ಸ್ವಾಗತಿಸಿದವನೇ ರಮಝಾನಿನ ನೈಜತೆಯನ್ನು ಮರೆತು  ಕೇವಲ ಆಚರಣೆಯ ತಿಂಗಳು ಮಾತ್ರ ಆಗುತ್ತಿದೆಯೋ ಎಂದು ನೆನಪಿಸುವಂತೆ ಇರುತ್ತದೆ ಕೆಲವು ನಡೆ. ಸತ್ಯವಿಶ್ವಾಸಿಗಳು ತಾವಷ್ಟೇ ತಮ್ಮ ವಿಶ್ವಾಸವನ್ನು ಬಲಪಡಿಸಿಕೊಳ್ಳಬೇಕಾದ ತಿಂಗಳಾಗಿ ರಮಝಾನ್ ಉಳಿಯದೆ ಧರ್ಮದೊಳಗಿರುವ  ಆಧರ್ಮಿಗಳನ್ನು ಮತ್ತು ಸತ್ಯವಿಶ್ವಾಸದ ಪರಿಚಯ ಇಲ್ಲದ ಒಂದು ಜನ ಕೂಟಕ್ಕೆ ಇಸ್ಲಾಮಿನ ಮಹತ್ವನ್ನು ವಿವರಿಸಬೇಕಾದ ತಿಂಗಳು ಕೂಡಾ ರಮಝಾನ್ ಎನ್ನುವ ಕಲ್ಪನೆ ಮೂಡಿಬರಬೇಕಾಗಿದೆ.

ಭೂಲೋಕದ ಸರ್ವ ಮನುಷ್ಯರಿಗೆ ಸಮರ್ಪಿಸಲ್ಪಟ್ಟ ದೇವವಾಣಿ ಪವಿತ್ರ ಕುರಾನ್ ಅವತ್ತೀರ್ಣ ಗೊಂಡ ತಿಂಗಳು ರಮಝಾನ್, ಅದೇ ಮಹತ್ವದಿಂದ ಈ ತಿಂಗಳು ದೇವನ ಬಲಿ ಕಾರುಣ್ಯವನ್ನು ಯಾಚಿಸಬೇಕಾದ ತಿಂಗಳು, ಪ್ರತಿಯೊಬ್ಬ ವಿಶ್ವಾಸಿಯೂ ಕೂಡ ಕಡ್ಡಾಯ ಉಪವಾಸವನ್ನು ಹಿಡಿಯಬೇಕು ಅದು ಬಡವನ ಹಸಿವಿನ ಕಷ್ಟವನ್ನು ಅರಿಯಲು ಶ್ರೀಮಂತನಿಗೆ ಇರುವ ಅವಕಾಶ,  ಸ್ವಭಾವವನ್ನು ಸಂಸ್ಕರಿಸಿಕೊಳ್ಳಬೇಕಾದ ತಿಂಗಳು, ಸತ್ಯವಿಶ್ವಾಸವನ್ನು ಮರಳಿಸಿಕೊಳ್ಳಬೇಕಾದ ತಿಂಗಳು, ನಮಾಝಾನ್ನು ಹೆಚ್ಚಿಸಿಕೊಳ್ಳಬೇಕಾದ ತಿಂಗಳು, ತಪ್ಪಿನ ನಡೆಯನ್ನು ಸರಿ ಪಡಿಸಿಕೊಳ್ಳಬೇಕಾದ ತಿಂಗಳು, ಕಲಿಯುವ ಮತ್ತು ಕಲಿತು ಸತ್ವವಿಶ್ವಾಸವನ್ನು ಪುನರ್ಚೇತನಗೊಳಿಸಬೇಕಾದ ತಿಂಗಳು, ರಮಝಾನ್ ಧಾನ ಧರ್ಮರ್ಗಳಿಗೆ ಪ್ರೆರೇಪಿಸಬೇಕಾದ ತಿಂಗಳು, ಒಟ್ಟಿನಲ್ಲಿ ರಮಝಾನ್ ಬದಲಾವಣೆಯ ತಿಂಗಳು, ದೇವನ ಕಡೆಗೆ ಹತ್ತಿರವಾಗುವ ತಿಂಗಳು, ಆ ಮೂಲಕ ಸುಂದರ ಬಾಳನ್ನು ದೇವ ಮಾರ್ಗದಲ್ಲಿ  ಮುಂದುವರೆಸಬೇಕಾದ ತಿಂಗಳು, ದೇವ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿ ತಪ್ಪುಗಳು ಮರಳಿ ಬಾರದಂತೆ ತಿದ್ದಿಕೊಲ್ಲಬೇಕಾದ ತಿಂಗಳು.

ಇಸ್ಲಾಂ ಧರ್ಮದ ಆಳವನ್ನು ತಿಳಿಯದ ಪ್ರತಿಯೊಬ್ಬ ಮನುಷ್ಯನಿಗೆ ಇಸ್ಲಾಮಿನ ಸಂದೇಶವನ್ನು ಬಹಳ ಸುಂದರವಾಗಿ ರಮಝಾನ್ ಪರಿಚಯಪಡಿಸಬೇಕಾಗಿದೆ ಆ ಮೂಲಕ ಜಗದೊಡೆಯನನ್ನು ಮನುಕುಲದ  ಪ್ರತಿಯೊಬ್ಬರಿಗೂ ಅರ್ಥೈಸಿ ಕೊಡಬೇಕಾದ ತಿಂಗಳು, ಈ ತಿಂಗಳಲ್ಲೂ ಕೂಡಾ ಆ ಕೆಲಸ ಸಮರ್ಪಕವಾಗಿ ನಡೆಯದೇ ಇರುವುದು ವಿಷಾದನೀಯ. ರಮಝಾನಿನ ತಿಂಗಳಿನ ಮಹತ್ವವನ್ನು ಸತ್ಯವಿಶ್ವಾಸಿಗಳು ಪ್ರತಿಯೊಬ್ಬ ಮಾನವನಿಗೂ ತಲುಪಿಸಬೇಕು ಆ ಮೂಲಕ ಇಸ್ಲಾಮಿನ ನೈಜತೆಯ ಪರಿಚಯವಾಗಿ ಇಸ್ಲಾಮಿನ ಮೇಲೆ ಘಾಡವಾಗಿ ಬಿದ್ದಿರುವ ಸುಳ್ಳಾರೋಪಗಳ ನಿರಾಕರಣೆಯಾಗಬೇಕು.
ಆದರೆ ಸಹಜವಾಗಿ ಇಂದು ರಮಝಾನಿನ ಬಗ್ಗೆ ಬೀಳುವ ಪ್ರಶ್ನೆ! ರಮಝಾನ್ ಬೇರೆ ತಿಂಗಳಿಗಿಂತ ಹೆಚ್ಚು ಸ್ವಾದಿಷ್ಟವಾದ ಉಪಹಾರಗಳನ್ನು ತಿಂದು ಮೈ ಕೊಬ್ಬಿಸಿಕೊಲ್ಲಬೇಕಾದ ತಿಂಗಳೇ? ಅತಿ ಹೆಚ್ಚು ನಿದ್ರೆ ಮಾಡಬೇಕಾದ ತಿಂಗಳೇ ? ಆಹಾರವನ್ನು ಪೋಲು ಮಾಡಬೇಕಾದ ತಿಂಗಳೇ? ಭಿಕ್ಷೆ ಬೇಡುವವರು ಅಧಿಕವಾಗುವ ತಿಂಗಳೇ? ಇಂತಹ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರ ನೀಡಲು ಹಲವು ಬಾರಿ ಹೆಚ್ಚಿನವರಿಗೆ ಸಮಸ್ಯೆಯಾಗಬಹುದು, ರಮಝಾನಿನ ಮಹತ್ವದ ಬಗ್ಗೆ ಮನುಕುಲಕ್ಕೆ ಸರಿಯಾಗಿ ತಿಳಿಸಿಕೊಡಬೇಕಾಗಿದೆ, ರಮಝಾನಿನ ನೈಜ ಮಹತ್ವನ್ನು ಮರೆತು ಅಂದ ಕೆಡಿಸುವ ವರ್ತನೆಗಳ ಬಗ್ಗೆ ಸತ್ಯವಿಶ್ವಾಸಿಗಳು ಸದಾ ಬೆಳಕು ಚೆಲ್ಲಬೇಕಾಗಿದೆ, ರಮಝಾನ್ ಬಡವರ ಕಷ್ಟವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಬೇಕಾದ ತಿಂಗಳು ಎನ್ನುವುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು, ರಮಝಾನಿನ ಮಹತ್ವದ ಬಗ್ಗೆ ಅರಿವಿಲ್ಲದವನಿಗೆ ರಮಝಾನಿನ ಮಹತ್ವದ ಬಗ್ಗೆ ಅರಿವು ಮೂಡಿಸಬೇಕು, ರಮಝಾನನ್ನು ಹೆಚ್ಚು ದೇವ ಮಾರ್ಗದಲ್ಲಿ ವ್ಯಯಿಸಬೇಕು, ರಮಝಾನ್ ದಾನ ಧರ್ಮಗಳನ್ನು ಹೆಚ್ಚಿಸಬೇಕಾದ ತಿಂಗಳು, ಉತ್ತಮ ಸಭ್ಯ ನಡತೆಯನ್ನು ಮೈಗೂಡಿಸಿಕೊಲ್ಲಬೇಕಾದ ತಿಂಗಳು ಮತ್ತು ಅದನ್ನು ಜೀವನ ಪರ್ಯಂತ ಮುಂದುವರೆಸಿಕೊಲ್ಲಬೇಕಾದ ತಿಂಗಳು ಎನ್ನುವುದನ್ನು ಮುಖ್ಯವಾಗಿ ಮರೆಯಬಾರದು.

ಕುರಾನ್ ಸ್ವತಹ ಪರಿಚಯಪಡಿಸುವಂತೆ "ಸತ್ಯ ವಿಶ್ವಾಸಿಗಳೇ ಗತ ಪ್ರವಾದಿಗಳ ಅನುಯಾಯಿಗಳಿಗೆ ಕಡ್ದಾಯಗೊಳಿ ಸಿರುವಂತೆಯೇ ನಿಮ್ಮ ಮೇಲೆಯೂ ಉಪವಾಸ ಕಡ್ಡಾಯಗೊಳಿಸಲಾಗಿದೆ ಇದರಿಂದ ನಿಮ್ಮ ದರ್ಮನಿಷ್ಟೆಯ ಗುಣವಿಷೇಶತೆ  ಉಂಟಾಗುವುದೆಂದು ಆಶಿಸಲಾಗಿದೆ"  ಇಸ್ಲಾಮಿನ ಗುಣವಿಶೇಷತೆಗಳನ್ನು ಉಪವಾಸ ಆಚರಿಸುವ ಮೂಲಕ ಈ ಜಗತ್ತಿಗೆ ಸಾರಬೇಕಾದದ್ದು ಸತ್ಯವಿಶ್ವಾಸಿಯ ಕರ್ತವ್ಯ, ಸತ್ಕರ್ಮದ ಹಾದಿಯಲ್ಲಿ ಮುಂದೆ ಸಾಗಬೇಕಾದದ್ದು ಮತ್ತು ಧರ್ಮದ ಬಗ್ಗೆ ತಿಳಿಯ ಬಯಸುವವನಿಗೆ ರಮಝಾನಿನಲ್ಲಿ ಪಾಲಿಸುವ ಕ್ರಮಗಳು ಅವನನ್ನು ಇನ್ನಷ್ಟು ಹತ್ತಿರಗೊಳಿಸಬೇಕು, ಬದಲಾಗಿ ಕೆಲವು  ನಡೆ ಅವನು ಇಸ್ಲಾಮಿನಿಂದ ದೂರ ಸರಿಯುವ ಹಾಗೆ ಇರದೇ ನಮ್ಮನ್ನು ನಾವು ಪರಿಶುದ್ದಗೊಳಿಸಬೇಕು. ಧರ್ಮದ ಆಳ ತಿಳಿಯ ಬಯಸುವವನೊಬ್ಬನಿಗೆ ಇದು ಭಿಕ್ಸೆ ಬೇಡುವವರ ತಿಂಗಳು ಎಂದು ಹೇಳುವ ಹಾಗೆ ಸಮುದಾಯಕ್ಕೆ ಮಾರಕವಾಗುವ ನಡೆ ರಮಝಾನ್ ಆಗಬಾರದು, ಝಕಾತನ್ನು ಕ್ರಮ ಬದ್ದವಾಗಿ ಪಾಲಿಸಿ ಇಸ್ಲಾಮಿಗೆ ಅಂಟಿಕೊಂಡಿರುವ ಇಂತಹ ತಪ್ಪು ಕಲ್ಪನೆಗಳಿಗೆ ಇತಿಶ್ರೀ ಹಾಕಬೇಕು, ಈ ನಿಟ್ಟಿನಲ್ಲಿ ಇಸ್ಲಾಮಿನ ವಾಸ್ತವ ಕಲ್ಪನೆಯ ರಮಝಾನ್ ಮರಳಿ ಬರುವಲ್ಲಿ ಸತ್ಯವಿಶ್ವಾಸಿಯ ಪಾತ್ರ ಬಹುಮುಖ್ಯವಾಗಿದೆ.

ರಮಝಾನ್ ಶ್ರೀಮಂತರು ತಮ್ಮ ಸೊತ್ತಿನಲ್ಲಿ ಬಡವರಿಗಾಗಿ ಇರುವ ಹಕ್ಕನ್ನು ಝಕಾತ್ ಮೂಲಕ ನೀಡಬೇಕಾದ ತಿಂಗಳು, ಆ ಮೂಲಕ ಇಸ್ಲಾಂ ಬಡವರಿಗೆ ನೀಡುತ್ತಿರುವ ನ್ಯಾಯವನ್ನು ಎತ್ತಿ ತೋರಿಸಬೇಕು, ರಮಝಾನ್  ಒಂದು ನಡೆಯನ್ನು ಕಲಿಸುವ, ಸಭ್ಯತೆಯನ್ನು ಭೋಧಿಸುವ ಆ ಮೂಲಕ ದೇವನಿಗೆ ಹತ್ತಿರವಾಗುವ ತಿಂಗಳು ಎನ್ನುವುದನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕು, ನಮಾಝನ್ನು ಸಮಯಕ್ಕೆ ಸರಿಯಾಗಿ ಪಾಲಿಸಿ, ಸರ್ವರ ಮೇಲೆ ಕರುಣೆ ತೋರಿಸಿ ಇಸ್ಲಾಮೆಂಬ ಸತ್ಯದ ಧರ್ಮವನ್ನು ಎಲ್ಲೆಡೆ ಪಸರಿಸುವಲ್ಲಿ, ಧರ್ಮ ತಿಳಿಯಬಯಸುವವರಿಗೆ ಕಲಿಸಿಕೊಡುವಲ್ಲಿ ಮಾತ್ರವಲ್ಲ, ಅವರಾಗಿಯೇ ಅರ್ಥೆಯಿಸುವಲ್ಲಿ ಏಕದೇವ  ವಿಶ್ವಾಸಿಗಳಾದ ರಮಝಾನಿನ ಪಾಲಕರು ಶ್ಲಾಘನೀಯ ಪಾತ್ರ ವಹಿಸಬೇಕು.


Thursday, June 19, 2014

ರಕ್ತ ಸಂಬಂಧಕ್ಕೆ ಒದಗದ ರಕ್ತ!! ಬೇಕೇ? (ಲೇಖನ)




ರೋಗಿಯ ಕಡೆಯವ : ಹಲೋ..
ಸಾಮಾಜಿಕ ಕಾರ್ಯಕರ್ತ : ಹಲೋ, ಯಾರು?
ರೋಗಿಯ ಕಡೆಯವ : ಇದು ನೀವು ರಕ್ತ ಕೊಡುವವರಲ್ವಾ?
ಸಾಮಾಜಿಕ ಕಾರ್ಯಕರ್ತ : ಏನು?
ರೋಗಿಯ ಕಡೆಯವ : ನಿಮ್ಮಲ್ಲಿ ರಕ್ತ ಸಿಗುತ್ತದಾ?
ಸಾಮಾಜಿಕ ಕಾರ್ಯಕರ್ತ : ಹಾ ರಕ್ತವಾ?
ರೋಗಿಯ ಕಡೆಯವ :  ಹೌದು! ರಕ್ತ ಬೇಕಿತ್ತು 
ಸಾಮಾಜಿಕ ಕಾರ್ಯಕರ್ತ : ಯಾರಿಗೆ? 
ರೋಗಿಯ ಕಡೆಯವ : ನನ್ನ ತಾಯಿಗೆ!
ಸಾಮಾಜಿಕ ಕಾರ್ಯಕರ್ತ : ಏನಾಗಿದೆ?
ರೋಗಿಯ ಕಡೆಯವ : ನಿಶ್ಯಕ್ತಿ ಆಗಿದೆ, ಒಂದು ಬಾಟಲಿ ರಕ್ತ ಬೇಕೆಂದಿದ್ದಾರೆ ಡಾಕ್ಟರ್!
ಸಾಮಾಜಿಕ ಕಾರ್ಯಕರ್ತ : ಒಂದು ಬಾಟಲಿಯಾ!!?
ರೋಗಿಯ ಕಡೆಯವ : ಹೌದು, ಹಾಗೆ ತಮಗೆ ಫೋನಾಯಿಸಿದೆ!
ಸಾಮಾಜಿಕ ಕಾರ್ಯಕರ್ತ : ಯಾವ ಬ್ಲಡ್ ಗ್ರೂಪ್
 ರೋಗಿಯ ಕಡೆಯವ :  ಓ ಪೋಸಿಟಿವ್!  
ಸಾಮಾಜಿಕ ಕಾರ್ಯಕರ್ತ : ತಮ್ಮ ಬಂದು ಬಳಗದ ಬಳಿ ಯಾರಲ್ಲೂ ಆ ಗ್ರೂಪಿನ ರಕ್ತ ಇಲ್ಲವೇ?
ರೋಗಿಯ ಕಡೆಯವ : ವಿಚಾರಿಸಿಲ್ಲ!
ಸಾಮಾಜಿಕ ಕಾರ್ಯಕರ್ತ : ತಮ್ಮದು ಯಾವುದು?  
ರೋಗಿಯ ಕಡೆಯವ :  ನನ್ನದು ಓ ಪೋಸಿಟಿವ್!!  
ಸಾಮಾಜಿಕ ಕಾರ್ಯಕರ್ತ : ಮತ್ತೆ ಚಿಂತೆ ಯಾಕೆ ತಮಗೆ ಕೊಡಬಹುದಲ್ಲವೇ? 
ರೋಗಿಯ ಕಡೆಯವ : ಅಲ್ಲಾ ನನಗೆ ಭಯವಾಗುತ್ತದೆ! ನಿಮ್ಮ ಬಳಿ ಸ್ಟಾಕ್ ಇದೆಯಲ್ವಾ!!
ಸಾಮಾಜಿಕ ಕಾರ್ಯಕರ್ತ : ಯಾವಾಗಲಾದರು ಕೊಟ್ಟಿದ್ದೀರ?
ರೋಗಿಯ ಕಡೆಯವ : ಇಲ್ಲ!
ಸಾಮಾಜಿಕ ಕಾರ್ಯಕರ್ತ : ನಿಮ್ಮ ತಾಯಿಗೆ ನೀವೇ ಕೊಟ್ಟರೆ ಒಳ್ಳೆಯದಲ್ಲವೇ?
ರೋಗಿಯ ಕಡೆಯವ : ನಿಮಗೆ ಕೊಡಲಿಕ್ಕೆ ಆಗುತ್ತಾ ಇಲ್ವಾ ಹೇಳಿ!
ಸಾಮಾಜಿಕ ಕಾರ್ಯಕರ್ತ : ಕೊಡುವ ಪ್ರಶ್ನೆ ಅಲ್ಲಾ ಸಾರ್! ಒಂದೇ ಬಾಟಲಿ ರಕ್ತ ಬೇಕಾಗಿರೋದು, ಅದೂ ಅಲ್ಲದೆ ನಿಮ್ಮ ಬಳಿಯೇ ಆ ಬ್ಲಡ್ ಗ್ರೂಪ್ ಇದೆ, ಎಂದೆ ಅಷ್ಟೇ!
ರೋಗಿಯ ಕಡೆಯವ : ನನಗೆ ನಿಮ್ಮ ಪಾಠ ಬೇಡ ನೀವು ಅಷ್ಟು ಕಲೆಕ್ಟ್ ಮಾಡಿದ್ದೀವಿ, ಇಷ್ಟು ಕಲೆಕ್ಟ್ ಮಾಡಿದ್ದೀವಿ ಅಂತೀರಲ್ಲ! ನನಗೆ ಒಂದು ಬಾಟಲಿ ಕೊಡಲಿಕ್ಕೆ ಅಗುದಿಲ್ವಾ ನಿಮಗೆ?
ಸಾಮಾಜಿಕ ಕಾರ್ಯಕರ್ತ : ನಾನು ಮೊದಲೇ ಹೇಳಿದ್ದೇನೆ, ಕೊಡುವ ಪ್ರಶ್ನೆ ಅಲ್ಲ! ಸರಿ ತಾಯಿಗೆ ರಕ್ತ ಕೊಡಲಾಗದ ಮಗ ನೀವೆಂದಾದಲ್ಲಿ  ಬನ್ನಿ, ಒಂದಲ್ಲ ಹತ್ತು ಬಾಟಲಿ ಕೊಡುತ್ತೇನೆ, ಅಭ್ಯಂತರವಿಲ್ಲ!
ರೋಗಿಯ ಕಡೆಯವ : ಸರಿ ಬರುತ್ತೇನೆ!!!





ಫ್ರೀಯಾಗಿ ಸಿಗುತ್ತೆ ಎಂದು ಹೇಳಿದರೆ! ಕೆಲವರು ತಮ್ಮ ಬಳಿ ಹೆಚ್ಚುವರಿ ಹೃದಯ ಇದೆಯಾ ಎಂದು ಕೇಳಿ, ಕೊಂಡು ಹೋಗಿ ಮನೆಯಲ್ಲಿ ಇಟ್ಟುಕೊಂಡರೆ ಆಶ್ಚರ್ಯ ಪಡಬೇಕಾಗಿಲ್ಲ!! ನಮ್ಮ ಜನ ಹಾಗೇನೆ ಅವರನ್ನು ಬದಲಿಸಿದಷ್ಟು ಅವರು ಬದಲಾಗಿದ್ದಾರೆ, ತಾಯಿಗೆ ರಕ್ತ ಕೊಡಲು ಹಿಂಜರಿಯುವ ಮಗ ಇದ್ದಾನೆ ಎಂಬುವುದು ಕಲ್ಪನೆಯಲ್ಲ ವಾಸ್ತವ! ನಮ್ಮ ದೇಶದಲ್ಲಿ ಹಲವು ಸಂಘ ಸಂಸ್ಥೆಗಳು ಬಹಳಷ್ಟು ಪರಿಶ್ರಮದಿಂದ ರಕ್ತವನ್ನು ಕಲೆಕ್ಟ್ ಮಾಡಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನೆರವಾಗಲು ಪ್ರಯತ್ನಿಸುತ್ತಿದೆ, ಇದರ ಹಿಂದೆ ಪರಿಶ್ರಮ ಪಟ್ಟ ಎಲ್ಲರನ್ನು ನೆನಪಿಸಿಕೊಲ್ಲಬೇಕಾಗಿದೆ.  ಹಲವು ಬಾರಿ ಹತ್ತಾರು ಬಾಟಲಿ ರಕ್ತಕ್ಕಾಗಿ, ಅದೂ ಕೂಡ ತುಂಬಾ ಕಡಿಮೆಯಾಗಿ ಇರುವ ಕೆಲವು ಬ್ಲಡ್ ಗ್ರೂಪ್ ಗಳಿಗಾಗಿ ಹಲವು ದಿನ ಹುಡುಕಾಡಿದರೂ ಸಿಗದ ಸಂದರ್ಭ ಇರುತ್ತದೆ, ಅಂತಹ ಸಂದರ್ಭದಲ್ಲಿ ಇಂತಹ ಸಂಘ ಸಂಸ್ಥೆಗಳು ದಾಸ್ತಾನಿಟ್ಟ ರಕ್ತ ನೆರವಿಗೆ ಬರುತ್ತದೆ.


ತುರ್ತು ಸಂದರ್ಭದಲ್ಲಿ ಸಂಘ ಸಂಸ್ಥೆಗಳು ಕೂಡಾ ತಮ್ಮ ಶಕ್ತಿಗೆ ಅನುಸಾರವಾಗಿ ರಕ್ತವನ್ನು ಹೊಂದಿಸಲು ಪ್ರಯತ್ನಿಸುತ್ತದೆ.  ನಮ್ಮಲ್ಲಿ ರಕ್ತ ದಾನ ಮಾಡುವವರಿಗಿಂತ ರಕ್ತಾ ಇದೆಯಾ ಎಂದು ಫೋನಾಯಿಸುವವರು ಜಾಸ್ತಿ! ಅದು ಕೂಡಾ ಒಮ್ಮೆಯೂ ರಕ್ತ ನೀಡುವ ಗೋಜಿಗೆ ಹೋಗದವರು ಮತ್ತು ತಮ್ಮವರಿಗಾಗಿಯು ರಕ್ತ ನೀಡಲು ಮುಂದೆ ಬರದವರು. ಅಷ್ಟು ಸುಲಭದಲ್ಲಿ ರಕ್ತ ಸಿಗುತ್ತಿದ್ದಲ್ಲಿ ಸಂಘ ಸಂಸ್ಥೆಗಳು ಇಷ್ಟೆಲ್ಲಾ ಕಷ್ಟ ಪಟ್ಟು ರಕ್ತದ ಮಹತ್ವದ ಬಗ್ಗೆ ಅರಿವು ಮೂಡಿಸಿ ದಾನಿಗಳಿಂದ ರಕ್ತ ಪಡೆಯುವ ಅಗತ್ಯ ವಿರಲಿಲ್ಲ. ಸಂಘ ಸಂಸ್ಥೆಗಳ ಬಳಿ ರಕ್ತ ಇರಬಹುದು, ಆದರೆ ಅದು ಸಣ್ಣ ಪುಟ್ಟ ವಿಚಾರಗಳಿಗೆ, ತಾವೇ ನೀಡಲು ಸಾಧ್ಯ ಇರುವವವರಿಗೆ ನೆರವಾಗಳಲ್ಲ.

ಎಲ್ಲಾ ಸಮಸ್ಯೆಗಳಿಗೆ ನೀಡಲು ಸಾದ್ಯವಾಗಿರುವಷ್ಟು ರಕ್ತದ ದಾಸ್ತಾನು ಯಾವ ಸಂಘ ಸಂಸ್ಥೆಯ ಬಳಿಯೂ ಇಲ್ಲ, ತುರ್ತು ಸಂದರ್ಭಗಳಿಗೆ ಒದಗಿಸಲು ಸಾದ್ಯವಾಗುವಷ್ಟೇ ರಕ್ತ ಇರುತ್ತದೆ, ಬೇಡಿಕೆ ಹೆಚ್ಚಾಗಿದೆ ಆದರೆ ಬೇಡಿಕಯಂತೆ ರಕ್ತ  ಪೂರೈಸಲು ಸಾಧ್ಯವಾಗುತ್ತಿಲ್ಲ, ದಾನಿಗಳ ಕೊರತೆಯಿದೆ, ಹಲವು ರಕ್ತದಾನ ಶಿಬಿರಗಳು ಬಿಕೋ ಎಂದಿದ್ದು ಇದೆ! ಇಲ್ಲಿ ಅರ್ಥ ಮಾಡಿಕೊಳ್ಳಬೇಕಾದ ವಿಚಾರ, ಇಂತಹ ರಕ್ತ ಇಷ್ಟು ಬೇಕು ಎಂದು ಡಾಕ್ಟರ ತಿಳಿಸಿದಾಗ ನಾವು ಮೊದಲು ನಮ್ಮ ರಕ್ತ ಹೊಂದುತ್ತದೆಯೇ ಎಂದು ನೋಡಬೇಕು, ಇಲ್ಲವೆಂದಾದಲ್ಲಿ ನಮ್ಮ ಬಂದು ಬಳಗದ ಬಳಿ ಮತ್ತು ಸ್ನೇಹಿತರ ಬಳಿ  ವಿಚಾರಿಸಬೇಕು ಹಾಗೂ ಅಗತ್ಯವಿದ್ದಲ್ಲ್ಲಿ ಸಂಘ ಸಂಸ್ಥೆಗಳಿಗೆ ಮೊರೆ ಹೋಗಬೇಕು, ಹೀಗಾದಲ್ಲಿ ಮಾತ್ರವೇ ಸಂಘ  ಸಂಸ್ಥೆಗಳ ರಕ್ತ  ತುರ್ತು ಸಂದರ್ಭಗಳಿಗೆ ನೆರವಾಗಲು ಸಾಧ್ಯ, ಅದನ್ನು ಬಿಟ್ಟು ಅವರ ಬಳಿ ಸ್ಟಾಕ್ ಇದೆ, ಕೇಳುವ ಕೊಡುತ್ತಾರೆ ಎಂದು ಯೋಚಿಸಿದರೆ ಅದು ಯಾವ ಅರ್ಥದಲ್ಲಿ ಸರೀ ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕು. ನಾವುಗಳೇ ನಮ್ಮವರಿಗೆ ನೆರವಾದರೆ ರಕ್ತ ಎನ್ನುವ ಅಮೂಲ್ಯ ವಸ್ತು ಮಾಫಿಯಾವಾಗುವುದನ್ನು ಕೂಡ ಕಡಿಮೆಗೊಳಿಸಬಹುದು.


ಅಗತ್ಯ ಬಿದ್ದಾಗ ರಕ್ತಕ್ಕಾಗಿ ಖಂಡಿತಾ ಸಂಘ ಸಂಸ್ಥೆಗಳ ನೆರವು ಯಾಚಿಸಬೇಕು, ಅದು ಅಷ್ಟೊಂದು ಪ್ರಮಾಣದಲ್ಲಿ ರಕ್ತ ಬೇಕಾದಾಗ ಮತ್ತು ಬೇಕಾದ ಗ್ರೂಪಿನ ರಕ್ತ ಸಿಗದೇ ಇರುವ ಸಂದರ್ಭವಾಗಿರಬೇಕು, ತುರ್ತು ಸಂದರ್ಭಗಳಿಗೆ ಒದಗುವ ಸಲುವಾಗಿಯೇ ನಾವು ರಕ್ತದಾನ ಮಾಡುತ್ತಿರಬೇಕು, ಕನಿಷ್ಠ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದಾದರೂ ಗರಿಷ್ಟ ಆರು ತಿಂಗಳಿಗೊಮ್ಮೆಯಾದರೂ ರಕ್ತವನ್ನು ದಾನವಾಗಿ ನೀಡುವ ಪರಿಪಾಟವಿಟ್ಟುಕೊಲ್ಲಬೇಕು, ಹೀಗಾದಲ್ಲಿ ಅದು ಹೆಚ್ಚೆಚ್ಚು ತುರ್ತು ಸಂದರ್ಭಗಳಲ್ಲಿ ಬಳಕೆಯಾಗಲು ಸಾದ್ಯ. ಈಗ ಹಲವು ಸಂಸ್ಥೆಗಳು ರಕ್ತವನ್ನು ಶಿಬಿರಗಳ ಮೂಲಕ ಕಲೆಕ್ಟ್ ಮಾಡುತ್ತಿವೆಯಾದರು ಅದನ್ನು ವರ್ಷ ಪೂರ್ತಿ ವಿತರಿಸಲು ಮತ್ತು  ತುರ್ತು ಚಿಕಿತ್ಸೆಗೆ ಬಳಕೆಯಾಗಲು ಬಹಳಷ್ಟು ಜಾಗರೂಕತೆಯಿಂದ ರೋಗಿಗಳಿಗೆ ನೀಡುತ್ತಿದೆ.


ಬೇಕಾದಷ್ಟು ರಕ್ತ ದಾನಿಗಳು ಸಿಗುತ್ತಿಲ್ಲ, ಆದರೆ ಬೇಡಿಕೆ ಜಾಸ್ತೀ ಇದೆ, ಹಾಗಾಗಿ ಹೆಚ್ಚು ರಕ್ತದಾನಕ್ಕೆ ಪ್ರೋತ್ಸಾಹ ನೀಡಬೇಕು, ಯುವಕರು ಈ ನಿಟ್ಟಿನಲ್ಲಿ ಮುಂದೆ ಬರಬೇಕಾಗಿದೆ, ಈಗೀಗ ಮಹಿಳೆಯರೂ ಕೂಡ ಬಹಳಷ್ಟು ಉತ್ಸುಕತೆಯಿಂದ ರಕ್ತ ನೀಡಲು ಮುಂದಾಗುತಿದ್ದರೆ, ಎಲ್ಲರೂ ಈ ನಿಟ್ಟಿನಲ್ಲಿ ರಕ್ತ ದಾನ ಶಿಬಿರಗಳನ್ನು ಏರ್ಪಡಿಸುವ ಸಂಘ ಸಂಸ್ಥೆಗಳೊಂದಿಗೆ ಕೈ ಜೋಡಿಸಬೇಕು, ಇತ್ತೀಚೆಗೆ ಮಂಗಳೂರಿನ ಮದುವೆ ಕಾರ್ಯಕ್ರಮವೊಂದರಲ್ಲಿ ರಕ್ತದಾನ ಶಿಬಿರ ಏರ್ಪಡಿಸುವ ಮೊಲಕ ವಿಶಿಷ್ಟ  ರೀತಿಯಲ್ಲಿ ರಕ್ತವನ್ನು ಸಂಗ್ರಹಿಸುವ ಯೋಜನೆಗೆ ಚಾಲನೆ ನೀಡಲಾಗಿದೆ, ತುರ್ತು ಪರಿಸ್ಥಿತಿಯಲ್ಲಿ ಬೇಕಾಗುವ ರಕ್ತವನ್ನು ಸಂಗ್ರಹಿಸುವ ಅದಕ್ಕಾಗಿ ಜನರಲ್ಲಿ ಅರಿವು ಮೂಡಿಸುವಲ್ಲಿ ವಿವಿಧ ಸಂಘ ಸಂಸ್ಥೆಗಳು ವಿವಿದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿ, ಎಲ್ಲರೂ ರಕ್ತದಾನಿಗಳಾಗೋಣ, ಸಾಯುತ್ತಿರುವ ಜೀವಗಳಿಗೆ ಆಸರೆಯಾಗೋಣ .



ರಮಝಾನ್ (ಕವನ)


    ಈಗಷ್ಟೇ ಬಿಟ್ಟು ಹೋದಂತೆ ಇತ್ತು ರಮಝಾನ್,
    ಕಣ್ಮುಚ್ಚಿ ತೆರೆಯೋದರೊಳಗೆ ಕಣ್ಮುಂದೆ ಬಂತು ರಮಝಾನ್.

    ಮಾಡಿದ ತಪ್ಪುಗಳನ್ನು ಮತ್ತೆ ನೆನಪಿಸುತಿತ್ತು ರಮಝಾನ್,
     ಬದಲಾವಣೆಯ ಪಾಠವಾಗಬೇಕಿತ್ತು ನಮಗೆ ರಮಝಾನ್.

   ಉಪವಾಸದಿಂದ ವಿಶ್ವಾಸ ಮರಳಿಸಲು ಮತ್ತೊಮ್ಮೆ ಬಂದಿದೆ ರಮಝಾನ್,
           ಸ್ವರ್ಗದ ಕಡೆ ಸಾಗುವ ದಾರಿ ಮಾಡಿಕೋ ಈ ರಮಝಾನ್.

  ನಮಾಝಿನ ಸಮಯ ಪಾಲಿಸಿ ಧನ್ಯನಾಗಿ ಮುಗಿಸು ನೀ ರಮಝಾನ್
 ಕೈ ಚಾಚುವವರಿಗಲ್ಲ, ಅರ್ಹರಿಗೆ ಝಕಾತ್ ತಲುಪಿಸಿ ಕೊನೆಯಾಗಿಸು ರಮಝಾನ್.

  ಈಮಾನಿನ ಶಕ್ತಿಯಾಗಿ, ಅಲ್ಲಾಹನಿಗೆ ಪ್ರೀತಿಯಾಗಿ ಕೊನೆಯಾಗಲಿ ರಮಝಾನ್
       ದುಷ್ಚಟಗಲು, ಅಹಂಕಾರ ಇಲ್ಲವಾಗಿ ಮುಕ್ತಾಯವಾಗಲಿ ರಮಝಾನ್.

   ನರಕದಿಂದ ದೂರವಾಗಿ, ಸ್ವರ್ಗಕ್ಕೆ ಹತ್ತಿರವಾಗುವ ದಾರಿಯಾಗಲಿ ರಮಝಾನ್
    ಪಾಪಗಲು ಇಲ್ಲವಾಗಿ, ತಪ್ಪುಗಲು ಮರಳಿ ಬಾರದ ತಿಂಗಳಾಗಲಿ ರಮಝಾನ್.


Friday, June 13, 2014

ನಿಷೇಧಿಸಬೇಕಾಗಿರುವುದು ಬುರ್ಖಾವನ್ನಲ್ಲ ಅದನ್ನು ಅಸಂಸ್ಕೃತಿಯನ್ನಾಗಿ ಬಿಂಬಿಸಿರುವ ಮಹಿಳೆಯರನ್ನು!! (ಲೇಖನ)





ಮಹಾನಗರ ಪಾಲಿಕೆಯವರು ಮಾರ್ಗದಲ್ಲಿರುವ ಕಸ ಕಡ್ಡಿಗಳನ್ನು ಗುಡಿಸಿ ಸ್ವಚ್ಛ ಮಾಡುತ್ತಾರೋ ಇಲ್ಲವೋ ಹಲವು ಫ್ಯಾಷನ್ ಬುರ್ಖಾ ಧಾರಿ ಮಹಿಳೆಯರಂತು ಆ ಕೆಲಸವನ್ನು ಬಹಳ ಸ್ವಚ್ಚಂದವಾಗಿ ಮಾಡುತ್ತಿದ್ದಾರೆ, ಧಾರ್ಮಿಕತೆಯ ಸಂಕೇತವಾಗಿ ಪ್ರದರ್ಶಿಸಲ್ಪಡಬೇಕಾಗಿದ್ದ ಪರ್ದಾ ವ್ಯವಸ್ಥೆ ಇಂದು ಫ್ಯಾಶನ್ ಸಂಸ್ಕೃತಿಯ ಭಾಗವಾಗಿ ಬೆಳೆದಿರುವುದು ವಿಪರ್ಯಾಸ, ಇದಕ್ಕೆ ಪುರುಷ ಸಮಾಜ ಮತ್ತು ಅದನ್ನು ವ್ಯಾಪಾರೀಕರಣಗೊಳಿಸಿದವರ ವ್ಯವಸ್ಥಿತ ಬೆಂಬಲವಿದ್ದರೂ ಕಡೆಯಲ್ಲಿ ತಪ್ಪುಗಳೆಲ್ಲ ಹೊರಿಸಲ್ಪಡುವುದು ಮಹಿಳೆಯ ಮೇಲೆಯೇ.

ಮುಸ್ಲಿಂ ಮಹಿಳೆಯರು ಬುರ್ಖಾವನ್ನು ಏಕೆ ಧರಿಸುತ್ತಾರೆ ಎಂದು ಸಿಕ್ಕ ಸಿಕ್ಕವರೆಲ್ಲ ಪ್ರಶ್ನಿಸಿಸಲು ತೊಡಗಿದ್ದಾರೆ, ಧರಿಸುವವರು ಧರಿಸುವ ರೀತಿಯಲ್ಲಿ ಧರಿಸಿರುತ್ತಿದ್ದರೆ ಈ ಪ್ರಶ್ನೆಗಳು ಖಂಡಿತಾ ಉದ್ಬವಾಗುತ್ತಿರಲಿಲ್ಲ. ಕಸ ಗುಡಿಸಿಕೊಂಡು ಹೋಗುವ ಬುರ್ಖಾಗಳು, ಅನಾವಸ್ಯಕವಾಗಿ ಎತ್ತಿ ಹಿಡಿದು ನಡೆಯುವ ಅಸಂಸ್ಕ್ರತಿ, ಕೋಳಿಯ ರೆಕ್ಕೆಯಂತೆ ನೇತಾಡುವ ಬುರ್ಖಾಗಳು ವಿರೋಧಿಗಳ ಮಾತಿಗೆ ಹೆಚ್ಚು ತೂಕ ತಂದು ಕೊಟ್ಟಿದೆ, ಧರಿಸುವ ಮಹಿಳೆಗೆ ಅದು ಬಂಧನದ ಗೂಡು ಎಂದು ಅನ್ನಿಸಿಲ್ಲವಾದರೂ ಅದನ್ನು ತನಗೆ ಬೇಕಾದ ಶೈಲಿಗೆ ಮಾರ್ಪಾಡಿಸಿಕೊಂಡು ಪರ್ದಾದ ನೈಜತೆಗೆ ಧಕ್ಕೆ ಉಂಟಾಗಿದೆ. 

ಇಲ್ಲಿ ಮುಖ್ಯವಾಗಿ ಇಸ್ಲಾಮಿನ ಪರ್ದಾ ವ್ಯವಸ್ಥೆ ಮತ್ತು ಅದರ ಸಂಕೇತವಾಗಿರುವ ಬುರ್ಕಾದ ಬಗ್ಗೆ ಸಂದೇಹಗಳಿವೆ, ಪರ್ದಾವು ಮಹಿಳೆಯು ತನ್ನ ಅಂಗಾಂಗಗಳನ್ನು ಅನ್ಯ ಪುರುಷನಿಗೆ ತೋರಿಸದಂತೆ ಇರಲು ಇರುವ ಇಸ್ಲಾಮಿ ವ್ಯವಸ್ಥೆ, ಅದನ್ನು ಪೂರ್ತಿಗೊಳಿಸಲು ಬುರ್ಖಾವು ಬಳಸಲ್ಪಡುತ್ತಿದೆ. ಬುರ್ಖಾವು ಹಲವು ರೀತಿಯಲ್ಲಿ ಜಾರಿಯಲ್ಲಿದೆ ಅದು ಕಪ್ಪು ಬಣ್ಣದಲ್ಲಿಯೂ, ಬಿಳಿ ಬಣ್ಣದಲ್ಲಿಯೂ, ಕೆಲವು ಕಡೆ ನೀಲಿ ಬಣ್ಣದಲ್ಲಿ ಚಾಲ್ತಿಯಲ್ಲಿದೆ. ತನ್ನ ದೇಹವನ್ನು ಮರೆಮಾಚಿ ದೇವಭಯದೊಂದಿಗೆ ತೊಡುವ ಬುರ್ಖಾ ಇಸ್ಲಾಮಿನ ಪರ್ದಾವಾಗುತ್ತದೆಯೇ ಹೊರತು ಸಾದಾ ಬಟ್ಟೆಗಿಂತಲೂ ಅಸಹ್ಯವಾಗಿ ಕಾಣುವ ಇಂದಿನ ಫ್ಯಾಶನ್ ಬುರ್ಖಾ ಇಸ್ಲಾಮಿನ ಪರ್ದಾವಾಗಳು ಸಾಧ್ಯವಿಲ್ಲ, ಮನಸ್ಸು ಮತ್ತು ದೇಹವನ್ನು ಪರ ಪುರುಷರಿಂದ ರಕ್ಷಿಸಿಕೊಳ್ಳಬೇಕಾಗಿದ್ದ ಪರ್ದಾ ವ್ಯವಸ್ಥೆ ವಾಸ್ತವಿಕ ಕಲ್ಪನೆಗಳನ್ನೇ ಮರೆತು ಫ್ಯಾಶನ್ ನ ಭಾಗವಾಗಿರುವುದು ವಿಪರ್ಯಾಸ.

ಕೆಲವು ಶೋಕಿ ಮಹಿಳಾ ಶಿರೋಮಣಿಗಳಿಂದ ಸಮುದಾಯದ ಸುಸಂಸ್ಕ್ರತ ಮಹಿಳೆಯರು ಕೂಡ ಅಪಹಾಸ್ಯಕ್ಕೊಳಗಾಗಿದ್ದಾರೆ, ಹಾಗೆ ನೋಡಿದರೆ ಇಸ್ಲಾಮಿನ ಪರ್ದಾದ ಪರಿಕಲ್ಪನೆ ಮಹಿಳಾ ಸ್ವಾತಂತ್ರ್ಯಕ್ಕೆ ಅಡ್ಡಿಯಾದ ವಿಚಾರವಲ್ಲ, ಬದಲಾಗಿ ಅದು ಮಹಿಳೆಗೆ ಗೌರವ ನೀಡುವ ವ್ಯವಸ್ಥೆ, ಅಲ್ಲಿ ಮಹಿಳಾ ಗೌರವವನ್ನು ಎತ್ತಿ ಹಿಡಿಯಲಾಗುತ್ತದೆ, ಅದಕ್ಕೊಂದು ಗಾಂಭೀರ್ಯವಿದೆ, ಅನ್ಯ ಪುರುಷನಿಂದ ಸೌಂದರ್ಯವನ್ನು ಅವಿತಿಟ್ಟುಕೊಳ್ಳಬೇಕಾದ ಪರಿಕಲ್ಪನೆಗೆ ಪರ್ದಾ ಅರ್ಥ ನೀಡಿದೆ.

ಇಂದು ಮಹಿಳೆಯರು ತುಂಬಾ ಖರ್ಚು ಮಾಡುವ ಹಲವು ವಸ್ತುಗಳಲ್ಲಿ ಬುರ್ಖಾವು ಒಂದು! ಇಸ್ಲಾಮಿನ ಸಿದ್ದಾಂತವನ್ನು ಸ್ಪಷ್ಟವಾಗಿ ತೋರಿಸಿಕೊಡಬೇಕಾಗಿದ್ದ ಪರ್ದಾ ವ್ಯವಸ್ಥೆ ಫ್ಯಾಷನ್ ಜಗತ್ತಿಗೆ ಮಾರುಹೋಗಿ ಇಸ್ಲಾಮಿನ ಸಿದ್ದಾಂತಗಳನ್ನು ಕಡೆಗಣಿಸಿದೆ, ಬುರ್ಖಾದಲ್ಲಿಯೇ ಅಸಹ್ಯ ಫ್ಯಾಷನ್ ನ ಸಂಸ್ಕ್ರತಿಯನ್ನು ಬೆಳೆಸಿ ಪರ್ದಾದ ಮಹತ್ವನ್ನು ಹಲವು ಮಹಿಳೆಯರು ಮರೆತಿದ್ದಾರೆ. ಬೆನ್ನಿಗೊಂದು ಶೈಲಿ, ಕೈಗೊಂದು ಶೈಲಿ, ಕಾಲಿಗೊಂದು ಶೈಲಿ ಎಂದು ತನಗಿಷ್ಟ ಬಂದ ರೀತಿಯಲ್ಲಿ ಅಸಹ್ಯ ಡಿಸೈನರ್ ಬುರ್ಖಾ ವನ್ನು ದರಿಸಿ ಪರ್ದಾ ವ್ಯವಸ್ತೆಯ ಬುರ್ಖಾ ಎಷ್ಟು ಗೌರವಪೂರ್ಣವಾಗಿತ್ತೆಂಬುದನ್ನೇ ಮರೆತಿದ್ದಾರೆ, ಆಕರ್ಷಕನಾದ ಗಂಡು ಎಂಬ ವ್ಯಕ್ತಿ ಬುರ್ಖಾದ ಒಳಗೆ ಅವಿತಿಟ್ಟ ಹೆಣ್ಣಿಗಾಗಿ ಮಾರುಹೋಗಿ ಸಂಸ್ಕೃತಿಯನ್ನು ಕಲಿಸಿಕೊಡಬೇಕಾಗಿದ್ದ ಬುರ್ಖಾ ಅನಾಚಾರದ ಕೆಲಸಗಳಿಗೆ ಸಹಾಯವಾಗುವಂತಿದೆ.

ಬುರ್ಖಾವನ್ನು ನಿಷೇಧಿಸಬೇಕು ಎಂದು ಊಳಿಡುವವರಿದ್ದಾರೆ. ಆದರೆ ನಿಷೇಧಿಸಬೇಕಾದದ್ದು ಬುರ್ಖಾವನ್ನಲ್ಲ ಬದಲಾಗಿ ಒಂದು ಸುಂದರವಾದ ಇಸ್ಲಾಮಿ ಪರಿಕಲ್ಪನೆಯನ್ನು ಅಸಂಸ್ಕ್ರತಿಯನ್ನಾಗಿಸುವ ಮಹಿಳೆಯರನ್ನು, ಅವಳ ಅಸಂಸ್ಕ್ರತಿಯ ನಡೆಯನ್ನು, ಅದನ್ನು ಸಮರ್ಥಿಸುವ ಮತ್ತು ಅದಕ್ಕೆ ಪ್ರೋತ್ಸಾಹ ನೀಡುವ ಪುರುಷನನ್ನು, ಫ್ಯಾಶನ್ ನ ಹೆಸರಿನಲ್ಲಿ ಮರೆಯಾಗಿರುವುದು ಮಾತ್ರ ಇಸ್ಲಾಮಿನ ನೈಜತೆಯ ಪರ್ದಾ ವ್ಯವಸ್ಥೆ ಅನ್ನುವುದನ್ನು ಸತ್ಯ. ಫ್ಯಾಷನ್ ಸಂಸ್ಕೃತಿಗೆ ಮಾರು ಹೋದ ಕೆಲವು ಮಹಿಳೆಯರಿಂದಾಗಿ ಸಮುದಾಯದ ಸಜ್ಜನ ಮಹಿಳೆಯರಿಗೂ ಕೆಟ್ಟ ಹೆಸರು ಬಂದಿದೆ, ಫ್ಯಾಶನ್ ದಾರಿ ಬುರ್ಕಾ ವ್ಯವಸ್ಥೆಯೊಂದು ಇಸ್ಲಾಮಿನ ಪರ್ದಾ ವ್ಯವಸ್ಥೆಯನ್ನೇ ಪ್ರಶ್ನಿಸುವ ಹಂತಕ್ಕೆ ತಲುಪಿಸಿದೆ, ಸೃಷ್ಟಿಕರ್ತನ ನೆನಪಿನಲ್ಲಿ ಬದುಕುವವರಿಗೆ ಇಸ್ಲಾಮಿನ ನೈಜಾರ್ಥದ ಪರ್ಧಾ ಧಾರಿಗಳು ಆಗಳು ಸಾಧ್ಯ. 

ಬುರ್ಖಾವನ್ನು ಕೇವಲ ಬುರ್ಖಾ ಎಂದು ತಿಳಿಯುವುದಕ್ಕಿಂತ ಅದನ್ನು ತಮ್ಮ ಮಾನ ರಕ್ಷಣೆಯ ಸಾಧನವೆಂದು ಮಹಿಳೆಯರು ಗೌರವಿಸಬೇಕು, ಆಗ ಮಾತ್ರ ಬುರ್ಖಾ ಇಸ್ಲಾಮಿನ ನೈಜ ಅರ್ಥದ ಪರ್ದಾ ಆಗಲು ಸಾಧ್ಯ, ಫ್ಯಾಶನ್ ನಿಂದ ಸ್ವಲ್ಪ ಹಿಂದೆ ಸರಿದು ಬುರ್ಖಾ ಇಸ್ಲಾಮಿ ಸಂಸ್ಕೃತಿಯ ಪರ್ದಾವಾಗಲಿ, ಅದನ್ನು ಧರಿಸುವ ಮಹಿಳೆಯರೇ ಅದರ ಮಹತ್ವವನ್ನು ಸಾಬೀತುಪಡಿಸಲಿ, ತಮ್ಮ ನಡೆಯಿಂದಾಗಿ ಪರ್ದಾ ಮತ್ತು ಬುರ್ಖಾದ ವ್ಯತ್ಯಾಸ ತಿಳಿಯದ ವಿರೋಧಿಗಳು ನಿಷೇಧಿಸಲು ಹೇಳುವ ಮಟ್ಟಕ್ಕೆ ಮುಂದುವರಿದಿದ್ದಾರೆ ಎನ್ನುವುದನ್ನು ಫ್ಯಾಶನ್ ಸಂಸ್ಕೃತಿಗೆ ಮಾರು ಹೋಗಿರುವ ಮುಸ್ಲಿಂ ಮಹಿಳೆಯರು ಅರ್ಥ ಮಾಡಿಕೊಳ್ಳಲಿ,


ಬುರ್ಖಾ ಸೌಂದರ್ಯವನ್ನು ರಕ್ಷಿಸುವ ಸಾಧನವಾಗಲಿ, ಅದು ದಾರಿಹೋಕರಿಗೆ ತಮ್ಮನು ದುರುಗುಟ್ಟಿ ನೋಡುವ ಸಾಧನವಾಗದಿರಲಿ, ಕಸ ಗುಡಿಸಲು ಮಹಾನಗರ ಪಾಲಿಕೆಯಯಲ್ಲಿ ಸಂಬಳಕ್ಕೆ ಕೆಲಸಗಾರರು ಇದ್ದಾರೆ ಎನ್ನುವುದನ್ನು ಫ್ಯಾಶನ್ ಸಂಸ್ಕೃತಿಯ ಮಹಿಳೆಯರು ಅರ್ಥ ಮಾಡಿಕೊಳ್ಳಲಿ..! ಆ ಮೂಲಕ ಇಸ್ಲಾಮಿನ ನೈಜ ಅನುಯಾಯಿಯಾಗಿ ಪರ್ದಾ ದಾರಿಯಾಗಲಿ. ಇಸ್ಲಾಮಿನಲ್ಲಿ ಪರ್ದಾ ವ್ಯವಸ್ಥೆ ಮಹಿಳೆಯರ ರಕ್ಷಣೆಗೆ ಅಸ್ತ್ರ ಎಂದು ಜಗತ್ತು ಅರಿಯಲಿ, ಪರ್ದಾದ ಅನುಸರಣೆಯ ಬುರ್ಖಾದ ಅಗತ್ಯತೆಯ ಬಗ್ಗೆ ಅದನ್ನು ತೊಡುವ ಮಹಿಳೆಯರೇ ಸಮಾಜದಲ್ಲಿ ಅರಿವು ಮೂಡಿಸಲಿ, ಮುಸ್ಲಿಂ ಮಹಿಳೆಯರಿಗೆ ಬುರ್ಖಾ ಧರಿಸುವುದು ಅವರಿಗೆ ಬಂಧನದ ಗೂಡಲ್ಲ ಅದು ಅವರ ಮಾನ ರಕ್ಷಣೆಯ ಸೊತ್ತು ಎನ್ನುವುದನ್ನು ಸಭ್ಯತೆಯ ಬುರ್ಖಾ ಧರಿಸುವ ಮೂಲಕ ಪರ್ದಾಕ್ಕೊಂದು ಅರ್ಥ ನೀಡಿ ಫ್ಯಾಶನ್ ಮಹಿಳೆಯರು ವಿರೋಧಿಗಳಿಗೆ ತೋರಿಸಿ ಕೊಡುವಲ್ಲಿ ಮುಖ್ಯ ಪಾತ್ರ ವಹಿಸಲಿ.

Wednesday, June 11, 2014

ಮಾತಿನಂತೆ ನಡೆಯದ ನಾಯಕರು! ಅನುಸರಿಸದ ಅನುಯಾಯಿಗಳು! ದಾರಿ ತಪ್ಪಿದ ಸಮುದಾಯ!! (ಲೇಖನ)


ಕಿವಿ ಕೇಳದ ವ್ಯಕ್ತಿಯೊಬ್ಬನ ಮುಂದೆ ವಾಚಕನೊಬ್ಬ ಗಂಟೆ ಗಟ್ಟಲೆ ಬೊಬ್ಬಿಟ್ಟರೆ ಅದು ವಾಚಕನ ಗಂಟಲು ನೋವಿಗೆ ಕಾರಣವಾಗಬಹುದೇ ಹೊರತು ಸಮಾಜದ ವ್ಯಕ್ತಿಯೊಬ್ಬನ ಬದಲಾವಣೆಗೆ ಪರಿಹಾರವಲ್ಲ, ಧರ್ಮದ ಆಳ ಅರಿತುರುವವನೊಬ್ಬ ತನ್ನದೇ ನಡೆಯಲ್ಲಿ ಸಾಗಿದರೆ ಅದು ಸ್ವಹಿತವಾಗಬಹುದೇ ಹೊರತು ಸಮುದಾಯದ ಉನ್ನತಿಯಲ್ಲ, ನಾಯಕನ ನಡೆ ಹೀಗಾದರೆ ಅದು ಕಿವಿ ಕೇಳದ ವ್ಯಕ್ತಿಗೂ ಧರ್ಮದ ಪಕ್ವತೆಯುಲ್ಲ ವ್ಯಕ್ತಿಗೂ ವ್ಯತ್ಯಾಸವಿಲ್ಲದಂತಾಗಬಹುದು. ಸಾಮಾನ್ಯನೊಬ್ಬ ನಾಯಕನ ನಡೆಯನ್ನು ಪ್ರಶ್ನಿಸಲು ಆರಂಬಿಸಿದರೆ ನಾಯಕರ ದಾರಿ ಕಷ್ಟವಾಗಬಹುದು.


ಸಮುದಾಯ ತನ್ನಲ್ಲಿರುವ ಒಡಕುಗಳ ಫಲವಾಗಿ ಬಿನ್ನವಾಯಿತು ಎನುವುದಕ್ಕಿಂತ ನಾಯಕರು ಬೆಳೆಸಿಕೊಂಡ ಎಕಾಧಿಪತ್ಯ ಗುಣಗಳು ಸಮುದಾಯಕ್ಕೆ ಹೆಚ್ಚು ಮಾರಕವಾಯಿತು ಎಂದರೆ ತಪ್ಪಾಗದು. ನಾಯಕರು ತನ್ನ ಬೆಂಬಲಿಗರ ಸಹಕಾರದೊಂದಿಗೆ ಸಮುದಾಯದ ಹಿತಕ್ಕಾಗಿ ಕೆಲಸ ಮಾಡುವುದಕ್ಕೆ ಹೊರತಾಗಿ ತಮ್ಮ ಲಾಭಗಳಿಗಾಗಿ ಬೆಂಬಲಿಗರನ್ನು ಬಳಸಿಕೊಂಡಾಗ ಪ್ರಶ್ನಿಸಿದವರಲ್ಲಿ ಕೆಲವರು ನಾಯಕರಾದರು, ಈ ಮುಂಚೆ ನಾಯಕರಾಗಿದ್ದವರು ನಾಯಕತ್ವದ ನಡೆ ಬದಲಿಸಿಕೊಂಡರು ಇದು ಸಮುದಾಯಕ್ಕೆ ಬಲು ದೊಡ್ಡ ಹೊಡೆತವಾಯಿತು.

ಸಮುದಾಯದ ಮುಂದೆ ನಾಯಕನೊಬ್ಬ ದುಂದು ವೆಚ್ಚ ಮಾಡಬೇಡಿ, ವರದಕ್ಷಿಣೆ ತೆಗೆದುಕೊಳ್ಳಬೇಡಿ ಎಂದಾಗ ಸಮುದಾಯ ಅವನನ್ನು ಒಪ್ಪಿಕೊಂಡಿತು ಮತ್ತು ಅವನದೇ ದಾರಿಯಲ್ಲಿ ನಡೆಯಿತು, ನಾಯಕನ ನಡೆಯನ್ನು ಕೊಂಡಾಡಿ ಜೈಕಾರ ಕೂಡಾ ಕೂಗಿತು, ಆದರೆ ನಾಯಕನು ಯಾವುದನ್ನು ಮಾಡಬೇಡಿ ಎಂದು ಘೋಷಿಸಿದನೋ ಅದೇ ನಡೆಯನ್ನು ತನ್ನದಾಗಿಸಿಕೊಂದಾಗ ಅನುಯಾಯಿಯು ಮತ್ತದೇ ದಾರಿಯಲ್ಲಿ ನಡೆಯತೊಡಗಿದ ಮತ್ತು ಈ ನಡೆಯನ್ನು ವಿರೋಧಿಸಿ ಹಲವರು ಆತನ ವಿರುದ್ದ ತಿರುಗಿ ಬಿದ್ದರು, ಅಂತಹ ನಾಯಕರು ಹೇಳ ಹೆಸರಿಲ್ಲದಂತೆ ಸಮುದಾಯದಿಂದ ಕಣ್ಮರೆಯಾಗಿದ್ದಾರೆ ಮತ್ತು ಕೆಲವರು ಹಲವು ಏಳು ಬೀಳುಗಳನ್ನು ಕಂಡಿದ್ದಾರೆ.

ಅನಿಷ್ಟ ರಾಜಕಾರಣ ಪದ್ದತಿಯನ್ನು ನೀವು ಕಾಣಬಹುದು ಅಲ್ಲಿ ಜನಪ್ರತಿನಿಧಿಯೊಬ್ಬ ಜನರ ಪರವಾಗಿ ಎಂಬಂತೆ ಘೋಷಣೆ  ಮಾಡುತ್ತ ಸರಕಾರೀ ಶಾಲೆಗಳನ್ನು ಅಭಿವೃದ್ದಿ ಮಾಡಬೇಕು, ಅದು ನೆಲೆ ನಿಲ್ಲಬೇಕು, ಅಲ್ಲಿ ಉತ್ತಮ ವ್ಯವಸ್ಥೆಯಾಗಳು ನಿರಂತರ ಪರಿಶ್ರಮ ಪಡುತ್ತೇನೆ ಎಂದು ಸಾರ್ವಜನಿಕವಾಗಿ ಒದರುತ್ತಾನೆ, ಆದರೆ ತನ್ನ ಮಕ್ಕಳನ್ನು ಮಾತ್ರ ದುಬಾರಿ ವೆಚ್ಚದ ಖಾಸಗಿ ಶಾಲೆಗಳಲ್ಲದೆ ಅವನೇ ಉದ್ದಾರ ಮಾಡಬೇಕೆಂದಿರುವ ಸರಕಾರೀ ಶಾಲೆಗೆ ಕಳುಹಿಸುವುದಿಲ್ಲ! ಇದು ಯಾವ ರೀತಿಯ ನ್ಯಾಯವಾಗಬಹುದು ಮತ್ತು ಅವನು ಯಾವ ರೀತಿಯಲ್ಲಿ ನಾಯಕನಾಗಲು ಅರ್ಹ ಎನ್ನುವುದು ಮುಖ್ಯ ಪ್ರಶ್ನೆ, ಅದಕ್ಕಾಗಿಯೇ ಮಧ್ಯಮ ವರ್ಗದ ಜನತೆ ತಮ್ಮ ಮಕ್ಕಳನ್ನು ಸರಕಾರೀ ಶಾಲೆಗಳಿಗೆ ಕಳುಹಿಸಲು ಮನಸ್ಸು ಮಾಡದಿರುವುದು. ಇತ್ತೀಚಿಗೆ  ಅಧಿಕಾರಿಯೊಬ್ಬರು ತನ್ನ ಮಕ್ಕಳನ್ನು ಸಾಮಾನ್ಯ ಸರಕಾರೀ ಶಾಲೆಗೆ ಸೇರಿಸಿ ಅಚ್ಚರಿ ಮೂಡಿಸಿದ್ದರು, ಇದು ಅಚ್ಚರಿ ಎನ್ನುವುದಕ್ಕಿಂತಲೂ ನಾಯಕರ ಇಂತಹ ನಡೆ ಖಂಡಿತ ಸಮಾಜ ಪರಿವರ್ತನೆಗೆ ಮಾರ್ಗ ಸೂಚಿಯಾಗಳು ಸಾಧ್ಯ, ನುಡಿದಂತೆ ನಡೆಯುವವನು ಮಾತ್ರ ನಾಯಕನಾಗಲು ಸಾದ್ಯ, ಆದರೆ ಕಾಲಘಟ್ಟದಲ್ಲಿ ತ್ಯಾಗ ಸಾಮಾನ್ಯರಿಗೆ ಮಾತ್ರ,  ತ್ಯಾಗದ ಕೊರತೆ ಕಂಡುಬರುವುದು ನಾಯಕರು ಎನಿಸಿಕೊಂಡವರಲ್ಲಿ.


ನಮ್ಮ ನಾಯಕರು ಕೂಡಾ ರಾಜಕಾರಣಿಗಳ ತತ್ವವನ್ನೇ ಮೈಗೂಡಿಸಿಕೊಂಡಿದ್ದಾರೆ, ಹಲವು ನಾಯಕರು ವರದಕ್ಷಿಣೆ ಮತ್ತು ದುಂದು ವೆಚ್ಚದಲ್ಲಿ ಕಾಲ ಕಳೆಯತೊಡಗಿದ್ದಾರೆ. ವರದಕ್ಷಿಣೆಯ ವಿರುದ್ದ ಮಾತನಾಡಿದ ನಾಯಕ ಯಾರಿಗೂ ತಿಳಿಯದ ಹಾಗೆ ವರದಕ್ಷಿಣೆ ಪಡೆಯುತ್ತಾನೆ, ದುಂದು ವೆಚ್ಚ ಮಾಡಬೇಡಿ ಎನ್ನುವ ನಾಯಕರು ದುಬಾರಿ ವೆಚ್ಚದ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿದರೆ ಅವರು ಹೆಚ್ಚು ಬುದ್ದಿವಂತರಾಗುತ್ತಾರೆ ಎನ್ನುವ ಮೂರ್ಖ ಕನಸು ಕಾಣುತ್ತಾರೆ, ದೇವಾನುಗ್ರಹದಿಂದ ಸಾವಿರಾರು ವ್ಯಕ್ತಿಗಳ ಭವಿಷ್ಯ ರೂಪಿಸಿದ ತನಗೆ ತನ್ನ ಮಗು ಸಾಮಾನ್ಯ ಶಾಲೆಗೆ ಹೋದರು ಭವಿಷ್ಯ ರೂಪಿಸಲು ತನ್ನಿಂದ ಸಾಧ್ಯ ಎನ್ನುವುದನ್ನು ನಾಯಕರು ಎನಿಸಿಕೊಂಡವರು ಅರಿತುಕೊಳ್ಳಬೇಕು ಇಲ್ಲವಾದಲ್ಲಿ ಸಾಮಾನ್ಯರಿಗೆ ನೀಡುವ ನೀತಿ ಬೋಧನೆಗಳನ್ನು ನಿಲ್ಲಿಸಬೇಕು, ನಾಯಕರು ಸಾಮಾನ್ಯರಿಗೆ ಭೋದಿಸಿ ಅದನ್ನು ಪಾಲಿಸುವವರು ಆದಾಗ ಮಾತ್ರ ನಾಯಕರಾಗಲು ಸಾಧ್ಯ.


ತನ್ನನ್ನು ನಾಯಕನಾಗಿ ಗುರುತಿಸಿ ಬೆಳೆಸಿದ್ದು ಸಮುದಾಯ, ಅದಕ್ಕಾಗಿ ಸಮುದಾಯಕ್ಕೋಸ್ಕರ ಜೀವ ಪಣವಿಡಬೇಕೆ ಹೊರತು ಐಶಾರಾಮಿ ಜೀವನಕ್ಕೆ ಮಾರುಹೋಗಿ ಸಾಮುದಾಯಿಕ ಕೆಲಸಕ್ಕೆ ಹಿನ್ನಡೆಯಾಗಳು ಕಾರಣವಾಗಬಾರದು. ತಮ್ಮ ಜೀವನವನ್ನೇ ಬರಿದಾಗಿಸಿ ಜೀವನ ಮುಗಿಸಿ ಹೋದ ಅದೆಷ್ಟೋ ನಾಯಕರಿದ್ದಾರೆ ಆದರೆ ಇಂದು ಗಲ್ಲಿ ಗಲ್ಲಿಗೊಬ್ಬ ನಾಯಕನಾಗಿ ದಾರಿ ತಪ್ಪಿದ ನಾಯಕರೇ ಹೆಚ್ಚು. ಸಾಮಾನ್ಯನ ಜೊತೆ ಮಾತನಾಡುವವನು, ಅವನ ಜೊತೆ ಬೆರೆಯುವವನು ನಾಯಕ, ನಾಯಕನೆಂದರೆ ಹೆಮ್ಮೆಯಿಂದ ನಡೆಯಬೇಕಾದವನಲ್ಲ. ನಾಯಕರು ಅಹಂಕಾರದ ನಡೆ ನಡೆಯುತ್ತಿರುವುದಕ್ಕೆ ಇಂದು ಸಮುದಾಯ ಕೆಟ್ಟು ಹೋಗಿರುವುದು, ಅದಕ್ಕಾಗಿಯೇ ನಾಯಕರು ಆಡಿದ ಆವೇಶದ ಭಾಷಣವನ್ನು ಕೂಡ ನಮ್ಮ ಜನ ಅರ್ದ ಘಂಟೆಯಲ್ಲೇ ಮರೆಯುತ್ತಿರುವುದು ಮತ್ತು ಭಾಷಣಗಳು ಭಾಷಣಗಳಾಗಿಯೇ ಉಳಿಯುತ್ತಿರುವುದು,

ದಾರಿ ತಪ್ಪಿದ ನಾಯಕರಿಂದಲೇ ಇನ್ನು ಕೂಡ ಸಮುದಾಯದಲ್ಲಿ ವರದಕ್ಷಿಣೆಯ ಪಿಡುಗು, ದುಂದು ವೆಚ್ಚದ ಆಡಂಬರ ಜೀವಂತಿಕೆಯಾಗಿ ಉಳಿದಿರುವುದು, ನಾಯಕ ಹೆಸರಿಗೆ ನಾಯಕನಾಗಿದ್ದಾನೆಯೇ ಹೊರತು ಅವನ ಬಾಯಿಯಲ್ಲಿ ಅರಬ್ ದೇಶದ ಚರಿತ್ರೆಯನ್ನೇ ಬದಲಾಯಿಸಿದ್ದ ಪ್ರವಾದಿಯ ಚರಿತ್ರೆಯ ನೆನೆನಪುಗಳಿದೆಯೇ ಹೊರತು, ದಿನ ನಿತ್ಯ ನಡೆಯುವ ವಿದ್ಯಾಮಾನಗಳ ಅರಿವನ್ನು ಪಡೆದು ಚೀಟಿಗೆ ಸಿಮೀತವಾದ ವಾಚನವಾಗಿದೆಯೇ ಹೊರತು ಅದನ್ನು ಪಾಲಿಸುವ ವಿಶಾಲ ಮನಸ್ಸು ಇಂದಿನ ನಾಯಕರಿಗಿಲ್ಲ, ಚರಿತ್ರೆಯ ಘಟನೆಗಳು ರಕ್ತ ಕಣದಲ್ಲಿ ಆಳವಾಗಿ ಲೀನವಾಗಿದೆಯೇ ಹೊರತು ಅದು ಹೃದಯವನ್ನು ತಲುಪಲು ಸಾಧ್ಯವಾಗದೆ ಇರೋದು ಸಮುದಾಯದ ನಾಯಕರ ದುರಂತ.


ಒಟ್ಟಿನಲ್ಲಿ ಸಮುದಾಯ ಭಿನ್ನವಾಗಿರೋದು ಸತ್ಯ, ಶತ್ರುಗಳು ಅದನ್ನು ಬಳಸಿಕೊಂಡಿರುವುದು ಕೂಡಾ ಅಷ್ಟೇ ಸತ್ಯ, ನಾವು ಸಂಘಟಿತರಾಗದೆ ಸಂಘಟನೆಗಳಾಗಿರುವುದು ಕೂಡಾ ಅಷ್ಟೇ ಸತ್ಯ, ಆದರೆ ಇಲ್ಲಿ ನಾಯಕರನ್ನು ಅನುಸರಿಸುವವರಿಗೆ ಖಂಡಿತಾ ಕೊರತೆ ಇಲ್ಲ, ಆದರೆ ನಾಯಕತ್ವವೇ ಇಲ್ಲಿ ಪ್ರಶ್ನಿಸಲ್ಪಡುವಂತದ್ದು ಅನ್ನುವುದು ನಿಜ! ವಾಸ್ತವಿಕತೆ  ಇಲ್ಲಿ ಎಲ್ಲರೂ ನಾಯಕರಾಗಿದ್ದಾರೆ ಮತ್ತು ತಮ್ಮ ಜೀವನದ ದಾರಿ ಕಂಡು ಕೊಂಡಿದ್ದಾರೆ, ಸಾಮನ್ಯ ಸಾಮಾನ್ಯನಾಗಿ ಉಳಿದು ಭಿನ್ನಬಿಪ್ರಾಯಗಳು ಹಾಗೆಯೇ ಉಳಿದಿವೆ, ಕಚ್ಚಾಟಗಳು ಪದೇ ಪದೇ ಪ್ರದರ್ಶನವಾಗುತ್ತಿದೆ, ನಾಯಕತ್ವ ಹೆಚ್ಚಿದಂತೆ ಸಮಸ್ಯೆಗಳು ಹೆಚ್ಚಾಗುತ್ತಿದೆ ಹೊರತು ಪರಿಹಾರ ಸಿಗುತ್ತಿಲ್ಲ, ನಾಯಕರು ನಾಯಕತ್ವದ ದಾರಿಯನ್ನು ಅರಿತು ನಡೆಯಲಿ,  ಸರಿಯಾದ ದಾರಿಯಲ್ಲಿ ನಡೆಯುತ್ತಾ ಸಮುದಾಯವನ್ನು ಸರಿ ದಾರಿಗೆ ತರಲು ತಮ್ಮ ನಡೆ ಮುಖ್ಯ ಪಾತ್ರ ಎಂದು ಅರಿಯಲಿ, ಉನ್ನತಿಯ ಪರಿಕಲ್ಪನೆ ಮಾತಿನಲ್ಲಿ ಮಾತ್ರವಲ್ಲ ನಡೆಯಲ್ಲೂ ಇರಲಿ, ತಪ್ಪಿ ಹೋದ ನಾಯಕರ ಮಧ್ಯೆ ಪ್ರಖರತೆಯ ನಾಯಕರು ಮರೆಯಾಗದಿರಲಿ . 

Tuesday, June 10, 2014

ಇಲ್ಲವಾದ ಡಾಂಬಾರು (ಚುಟುಕ)



ಮೊದಲ ಮಳೆಗೆ ಇಲ್ಲವಾದ ಡಾಂಬಾರು! 
ರಸ್ತೆ ತುಂಬಾ ಹೊಂಡಗಳ ಕಾರುಬಾರು!

ನಾವು ಆರಿಸಿದ ಎಂ.ಎಲ್.ಎ, ಎಮ್.ಪಿ ಗಳು ಯಾರು? 
ಹಿಡಿದು ತಂದು ತೋರಿಸಿ ಹೊಂಡಗಳ ದರ್ಬಾರು!! 

Monday, June 9, 2014

ಕಾಸಿ (ಚುಟುಕ)

ಮಂಗಿಲಾವತ್ತೋ ಪಾವತ್ತೊ ಪೆಣ್ನ್!
ಇಡೊನಾಯಿತ್ತ್ ಅವ್ ಲ್ದೊ ಮೇಲ್ ಮಣ್ಣ್!

ವರದಕ್ಷಿಣೆ ಪಾವತ್ತಂಗಲೊ ಪಾಲ್ಗ್ ಮಿನ್ನ್! 
ಕಾಸಿ ಕೆಕ್ರವ್ ನುಗು ಚೆರ್ಪುಲ್ ಇಡೊನ್ ಇನ್ನ್! 

ಬುಂತ್ ಅನ್ಯ ಸಮುದಾಯತ್ತವುಂಡೊ ಕಣ್ನ್!
ನಿ ಇನ್ನುಂ ಬೇಂಗ್ರವ್ಂಡೊ ಮಂಗಿಲತ್ತ್ಲ್ ತಿಣ್ನ್!     

Saturday, June 7, 2014

ವೇದಾಂತದ ನಾಯಕ (ಚುಟುಕ)


ನಾನೂ ನಾಯಕ ನೀನೂ ನಾಯಕ!
ಸಮಯ ಸಿಕ್ಕಾಗ ಸಮಯ ಸಾಧಕ!

ವೇದಿಕೆ ಹತ್ತಿದಾಗ ವೇದಾಂತದ ಪಾಲಕ!
ನಿಜ ಜೀವನದಲ್ಲಿ ಆಡಂಬರದ ಗ್ರಾಹಕ!

ಗಲ್ಲಿ ಗಲ್ಲಿಯಲ್ಲಿ ನಾಯಕರ ಸ್ಮಾರಕ!
ನೈಜ ನಾಯಕನಾದರೆ ಅದು ಸಾರ್ಥಕ!

ತಾನು ಹೇಳಿದ್ದನ್ನು ಪಾಲಿಸದ ಅಸಹಾಯಕ!
ಈ ನಾಯಕರ ನಡೆ ಸಮುದಾಯಕ್ಕೆ ಮಾರಕ!




Friday, June 6, 2014

ನೈಜತೆಯ ನುಡಿ (ಚುಟುಕ)


ಮಾಶಾ ಅಲ್ಲಾಹ್! ಇನ್ಶಾ ಅಲ್ಲಾಹ್!  ಸದಾ ಬಾಯಿಯಲ್ಲಿ 
ಮತ್ಸರ! ಅಹಂಕಾರ!  ಒಳ ಮನಸ್ಸಿನಲ್ಲಿ 

ಮಾಶಾ ಅಲ್ಲಾಹ್! ಇನ್ಶಾಅಲ್ಲಾಹ್! ನೈಜವಾದರೆ ಸ್ವರ್ಗದಲ್ಲಿ 
ಮತ್ಸರ! ಅಹಂಕಾರ! ಹೆಚ್ಚಾದರೆ ನರಕದಲ್ಲಿ 

ಮಾಶಾ ಅಲ್ಲಾಹ್! ಇನ್ಶಾ ಅಲ್ಲಾಹ್! ದೊಡ್ಡಸ್ತಿಕೆಯ ಆಸ್ತಿ ಇಲ್ಲಿ 
ಮತ್ಸರ! ಅಹಂಕಾರ! ಕೊನೆಯಾಗುವುದು ರಕ್ತ ಚೆಲ್ಲಿ 

ಮಾಶಾ ಅಲ್ಲಾಹ್! ಇನ್ಶಾ ಅಲ್ಲಾಹ್! ತಂದು ಬಿಡುವುದು ಸ್ವರ್ಗದಲ್ಲಿ 
ಮತ್ಸರ! ಅಹಂಕಾರ! ಕೊನೆಯಾಗಲಿ ನರಕಾಗ್ನಿಯ ನೆನಪಿನಲ್ಲಿ





ವರದಕ್ಷಿಣೆಯ ಕೋಟು - ಕಣ್ಣೀರಿನ ಏಟು (ಚುಟುಕ)


ವರದಕ್ಷಿಣೆ ಕೇಳಿದವನಿಗೆ ಬೀಳಲಿ ಚಪ್ಪಲಿ ಏಟು!!
ಕಣ್ಣೀರಿನ ದುಡ್ಡಿನಿಂದ ಕಿರಾತಕನಿಗೊಂದು ಕೋಟು!

ಹೆಣ್ಣಿನ ಮನೆಯವರ ದುಡ್ಡಿನಿಂದ ನಾಮರ್ದನಿಗೊಂದು ಮದುವೆ!!
ಕಣ್ಣೀರಿನ ಬಿರಿಯಾನಿ, ಕೋಳಿ ಫ್ರೈ ತಿಂದವರು ವರದಕ್ಷಿಣೆ ಪರವೆ!

ನಮಗೆ ವರದಕ್ಷಿಣೆ ಬೇಡ, ನಮ್ಮ ಮಗಳಿಗಿಷ್ಟು ಹಾಕಿದ್ದೇವೆಂಬ ಚುಚ್ಚು ಮಾತು!!
ದೇವಾನುಗ್ರಹ ಸಲ್ಲದ ಸಂಬಂಧಗಳು ವಿರಹದೊಂದಿಗೆ ಬಲು ಬೇಗ ತೂತು! 

ವರದಕ್ಷಿಣೆ ಕೊಡದಿದ್ದರೆ ಬಡ ಹೆಣ್ಣುಮಗಳು ಯಾವತ್ತಿಗೂ ಮನೆಯಲ್ಲಿಯೆ!!
ವರದಕ್ಷಿಣೆ ಬೇಡ ಎಂದವರ ಆಟ ಹೆಚ್ಚಾಗಿ ನಡೆಯುವುದು ತೆರೆ ಮರೆಯಲ್ಲಿಯೆ!!

ಗಂಡನಾಗು ನೀನು! ವಧುದಕ್ಷಿಣೆ ಕೊಟ್ಟು, ವರದಕ್ಷಿಣೆ ವಿರೋಧಿಯಾಗಿ!!
ಯುವಕರೇ ಇಸ್ಲಾಮಿನ ಪಾಲಕರಾಗಿ ಹೆಣ್ಣೆಂಬ ಜೀವಕ್ಕೆ ಆಸರೆಯಾಗಿ!  


Wednesday, June 4, 2014

ಅವರು "ಅರವತ್ತು ವರ್ಷಗಳಲ್ಲಿ" ದೋಚಿದ್ದನ್ನು ಇವರು "ಅರವತ್ತು ತಿಂಗಳಲ್ಲಿ" ದೋಚದೆ ದೇಶ ಮುನ್ನಡೆಯಲಿ (ಲೇಖನ)






ಅಭಿವೃದ್ದಿಯ ಪಥದಲ್ಲಿ ಈ ದೇಶ ಮುನ್ನಡೆದಿದೆಯೋ ಇಲ್ಲವೋ ಆದರೆ ದೋಚುವವರಿಗೂ, ದೋಚುವವರನ್ನು ಸಮರ್ಥಿಸುವವರಿಗೂ, ಅದನ್ನು ಸುಮ್ಮನೆ ಕುಳಿತು ನೋಡುವವರಿಗೂ ಈ ದೇಶದಲ್ಲ್ಲಿಕೊರತೆ ಇಲ್ಲ. 1947ರ ಸ್ವಾತಂತ್ರ್ಯ ದಿನದ ನಂತರ ಹಲವಾರು ಮಂದಿ ಹಲವಾರು ರೀತಿಯಲ್ಲಿ ಈ ಭವ್ಯ ಭಾರತವನ್ನು ದೋಚಿದ್ದಾರೆ, ಅದು ಬಹಳವಾಗಿ ಚರ್ಚಿಸಲ್ಪಟ್ಟ ಬೋಪೋರ್ಶ್, ಸ್ಪೆಕ್ಟ್ರಂ, 2ಜೀ, ಸತ್ಯಂ, ಶವಪೆಟ್ಟಿಗೆ ಹಗರಣ ಮಾತ್ರವೆಂದಲ್ಲ, ಇವೆಲ್ಲಾ ರಾಜಕೀಯವಾಗಿ ನಮ್ಮ ಮುಂದೆ ಬಂದ ಕೆಲವು ಹಗರಣಗಳು ಅಷ್ಟೇ, ಆದರೆ ಇದಕ್ಕಿಂತಲೂ ಘೋರವಾದ ಹಗರಣಗಳು ಈ ದೇಶದಲ್ಲಿ ನಡೆದಿದೆಯಾದರೂ ಅದು ಈ ಜಗತ್ತಿನ ಮುಂದೆ ಅರ್ಪಿತವಾಗಿಲ್ಲ, ಅವು ಕಾಲ ಬುಡದಲ್ಲಿ ಮರೆಯಾಗಿ ಹೋಗಿದೆ, ಕೆಲವೊಮ್ಮೆ ದೊಡ್ಡ ದೊಡ್ಡ ಹಗರಣಗಳನ್ನು ಮುಚ್ಚಲೆಂದೇ ಬಹಳ ವ್ಯವಸ್ಥಿತವಾಗಿ ಸಣ್ಣ ಪುಟ್ಟ ಹಗರಣಗಳನ್ನು ತೋರಿಸಲಾಗಿದೆ ಎನ್ನುವುದು ವಾಸ್ತವ.


ಹಗರಣಗಳಿಗೆ ಬಹಳ ಕುಖ್ಯಾ ತಿ ಹೊಂದಿರುವಲ್ಲಿ ಮುಖ್ಯ ಪಾತ್ರ ವಹಿಸಿರುವುದು ಕಾಂಗ್ರೆಸ್ಸ್, ಏಕೆಂದರೆ ಹಲವು ದಶಕಗಳಿಂದ ಈ ದೇಶವನ್ನು ತನ್ನ ತೆಕ್ಕೆಯಲ್ಲಿ ಇಟ್ಟು ಆಳಿರುವುದು ಕಾಂಗ್ರೆಸ್ಸ್. ಈ ದೇಶವನ್ನು ಆಳಿದ್ದು ಮಾತ್ರವಲ್ಲ ಯಾವೆಲ್ಲ ರೀತಿಯಲ್ಲಿ ದೇಶವನ್ನು ಲೂಟಲು ಸಾಧ್ಯವೋ ಆ ಎಲ್ಲ ರೀತಿಯಲ್ಲಿ ಲೂಟಿ ಮಾಡಿ ಆಗಿದೆ, ಮಾತ್ರವಲ್ಲ ಬಹಳಷ್ಟು ಧುರೀಣರು ಹಗರಣಗಳ ಹೆಸರಿನಲ್ಲಿ ಜೈಲು ಸೇರಿದ್ದೂ ಇದೆ, ಹೊರಗಡೆ ಬಂದು ತಿರುಗಾಡಿದ್ದು ಇದೆ, ಬೇರೆ ಪಕ್ಷಗಳ ನಾಯಕರ ಹೆಸರುಗಳು ಕೂಡಾ ಆಗಾಗ್ಗೆ ಕೇಳಿ ಬಂದಿದೆ. ನಾಯಕರೆಲ್ಲ ಸೇರಿ ಲೂಟಿ ಮಾಡಿದ ಕಾರಣದಿಂದ ಬಡ ವರ್ಗಗಳು ಭಾರತ ದೇಶದಲ್ಲಿ ಇನ್ನು ಕೂಡಾ ಬಡವರಾಗಿಯೇ ಉಳಿದಿರುವುದು.

ಹಲವು ಭಾರಿ ವಿದೇಶಿ ವ್ಯಾಪಾರದ ಒಪ್ಪಂದಕ್ಕೆ ಒತ್ತು ನೀಡುವ ಕಾಂಗ್ರೆಸ್ಸ್ ಸರಕಾರದ ನಡೆಯನ್ನು ಬಲವಾಗಿ ವಿರೋಧಿಸಿದವರಿದ್ದಾರೆ, ವಿಪರ್ಯಾಸವೇನೆಂದರೆ ವಿರೋಧಿಸುತಿದ್ದವರೇ ತಾವು ಏತಕ್ಕೆ ವಿರೋಧಿಸುತ್ತಿದ್ದೆವು ಎನ್ನುವುದನ್ನೇ ಮರೆತಿದ್ದಾರೆ ಮತ್ತು ಸಧ್ಯಕ್ಕಂತೂ ನಾವು ಚಿಲ್ಲರೆಯನ್ನು ಮಾತ್ರ ಒಂದು ಕಾಲದಲ್ಲಿ ವಿರೋಧಿಸಿದ್ದೆವು ಅದು ನೋಟಿನ ರೂಪದಲ್ಲಾದರೆ ದೇಶಕ್ಕೆ ಮಾರಕವಲ್ಲ ಎಂಬ ಮೊಂಡುವಾದದೊಂದಿಗೆ ಯಾವುದೇ ತೊಂದರೆಯಿಲ್ಲ ಎಂದು ದಾರಿ ಬದಲಿಸಿದ್ದಾರೆ. ದೇಶದ ಅಭಿವೃದ್ದಿಗಿಂತ ತಮ್ಮ ವಾದ, ಪ್ರತಿವಾದಗಳಿಗೆ ಹೆಚ್ಚು ಒತ್ತು ನೀಡಿ ಕಾಲ ಕಳೆದಾಗ ದ್ವೇಷ ರಾಜಕಾರಣದಲ್ಲಿ ಬಲಿಯಾಗುವುದು ಮಾತ್ರ ದೇಶದ ಕಟ್ಟ ಕಡೆಯ ನಾಗರಿಕ.

ಹಲವು ದಶಕಗಳ ಕಾಂಗ್ರೆಸ್ ಸರಕಾರ ನುಚ್ಚು ನೂರಾಗಿದೆ, ನಾಯಕತ್ವದ ಕೊರತೆಯಿಂದ, ಕಾರ್ಯಕರ್ತರ ಮತ್ತು ನಾಯಕರ ಸಂವಹನದ ಕೊರತೆಯಿಂದ ಹೇಳ ಹೆಸರಿಲ್ಲದಂತೆ ದೈತ್ಯ ಪಕ್ಷವೊಂದು ಅವಸಾನದತ್ತ ಸಾಗಿ ಎದ್ದು ನಿಲ್ಲಲು ಪರಿಶ್ರಮ ಪಡುತ್ತಿದೆ, ಈ ನಾಶ ಜನ ಶಕ್ತಿಯ ವಿರುದ್ದ ನಡೆಸಿದ ಒಳ ಒಪ್ಪಂದಗಳ ಕಾರಣದಿಂದ ಸಂಭವಿಸಿದುದಾಗಿದೆ. ನಾಶವಾಗುದಕ್ಕಿಂತ ಮುಂಚೆ ಎಚ್ಚೆತ್ತಿದ್ದಿದ್ದರೆ ಬೇರೆಯವರಿಗೆ ಜಾಗವಿರುತ್ತಿರಲಿಲ, ತಾವೇ ದಶಕಗಳ ವೀರರು ಎನ್ನುವ ದುರಹಂಕಾರ ಇವತ್ತು ಕಾಂಗ್ರೆಸ್ಸನ್ನು ಅಳಿವಿನತ್ತ ಸಾಗಿಸಿದೆ. ಕಾಂಗ್ರೆಸ್ಸ್ ಯಾರದೋ ಅಲೆಯಿಂದ ಅವಸಾನವಾಯಿತು ಎನ್ನುವುದಕ್ಕಿಂತ ಮಿಗಿಲಾಗಿ ಅದು ಕಾಂಗ್ರೆಸ್  ತಾನೇ ಮಾಡಿಕೊಂಡ ಕೊಲೆ ಎನ್ನಬಹುದಾಗಿದೆ.

                                                                         ಅಂತೂ ದೇಶದ ಜನತೆ ಬದಲಾವಣೆ ಬಯಸಿ ಕಾಂಗ್ರೆಸ್ಸನ್ನು, ಅಂದರೆ 60 ವರ್ಷಗಳಿಂದ ದೋಚಿದ ಲೂಟಿಕೋರರನ್ನು ಓದ್ದೋಡಿಸಿದೆ, ಜನರು ಮಾಡಿದ ಬದಲಾವಣೆ ದೇಶದ ಸಾರ್ವಭೌಮತೆಗೆ ಕುತ್ತಾಗಲಿದೆಯೋ ಎನ್ನುವ ಆತಂಕ ಎದುರಾಗಿತ್ತು, ಆದರೆ ಹೊಸ ಸರಕಾರದ ಕೆಲವು ನಡೆ ಸಾರ್ವಭೌಮತೆಯ ಧಕ್ಕೆಗಿಂತಲೂ ಭೀಕರವಾದ ಹಾದಿಯಲ್ಲಿ ಸಾಗುತ್ತಿದೆ ಎನ್ನುವುದು ಸ್ಪಷ್ಟವಾಗುತ್ತಿದೆ. ಕಾಂಗ್ರೆಸ್ಸಿನ ಹಲವು ನಡೆಯನ್ನು ವಿರೋಧಿಸಿದವರು ಅದೇ ಹಾದಿಯಲ್ಲಿ ನಡೆಯಲು ಆರಂಭಿಸಿದ್ದಾರೆ, ಆರಂಭವೇ ದೇಶಕ್ಕೆ ಮಾರಕವಾಗುವ ಹೆಜ್ಜೆಗಳಾಗಿದೆ. ಕಾಂಗ್ರೆಸ್ಸಿನವರು ತಮ್ಮೊಳಗೆ ಲೂಟಿ ಮಾಡಿ ದೇಶವನ್ನು ಲೂಟಿ ಮಾಡಿದರು, ಆದರೆ ಈಗಿನ ಸರಕಾರ ಕಾಲ ಕಾಲಕ್ಕೂ ವಿದೇಶಿಗಳು ನಮ್ಮನ್ನು ಶಾಸನಬದ್ದವಾಗಿ ಲೂಟಿ ಮಾಡುವ ಪರಿಸ್ಥಿತಿ ತಂದೊದಗಿಸುತ್ತಿದೆ, ವಿದೇಶಿಗಳ ಕೈಗೆ ನಮನ್ನು ಪಣವಾಗಿ ಇಡಲು ಹೊರಟಿದೆ.

ಮಾಧ್ಯಮ ಕ್ಷೇತ್ರದಲ್ಲಿ ಶೇಕಡಾ ನೂರರಷ್ಟು ಬಂಡವಾಳ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಶೇಕಡಾ ನೂರರಷ್ಟು ಪಾಲು ನೀಡಿ ದೇಶದ ಅಖಂಡತೆಯನ್ನು ಗುಲಾಮಗಿರಿಗೆ ತಳ್ಳುವ ಪ್ರಯತ್ನ ನಡೆಯುತ್ತಿದೆ, ಈ ದೇಶ ತನ್ನಲ್ಲಿ ಎಲ್ಲವನ್ನು ತುಂಬಿಕೊಂಡಿದ್ದರು ಎಲ್ಲಕ್ಕೂ ಕೈ ಚಾಚುವ ಪರಿಸ್ಥಿತಿ ಮುಂದೊಂದು ದಿನ ಕಾದಿದೆ. ಧರ್ಮದಲ್ಲಿ ಅಧರ್ಮಿಗಳು ಸಹಜ ಆದರೆ ಧರ್ಮ ಕಾರ್ಪೋರೆಟರ್ ಗಳ ಸೊತ್ತಾಗಿ ಬಳಸಲ್ಪಡುತ್ತಿರುವುದು ವಿಪರ್ಯಾಸ. ಕಾರ್ಪೋರೆಟರ್ ಗಳು ಧರ್ಮಾಧಾರಿತ ರಾಜಕಾರಣ ನಡೆಸಿ ದೇಶವನ್ನು ಮಾರುವ ತಮ್ಮ ಉದ್ದೇಶದಲ್ಲಿ ಸಫಳರಾಗುತ್ತಿದ್ದಾರೆ, ಸರಕಾರಗಳು ದೇಶವನ್ನು ಅಭಿವೃದ್ದಿ ಮಾಡುವ ನೆಪದಲ್ಲಿ ದೇಶವನ್ನು ಅರಿವಿದ್ದು ಮಾರಲು ಹೊರಟಿದೆ, ಕಾಂಗ್ರೆಸ್ಸ್ ಈಗಾಗಲೇ ಅರ್ಧ ದೇಶವನ್ನು ಮಾರಿದ್ದು ಅದೇ ನಡೆಯನ್ನು ಮುಂದುವರೆಸಿ ಸಂಪೂರ್ಣ ದೇಶವನ್ನು ಮಾರಿಬಿಡುವ ಚಿಂತನೆ ಈಗಿನ ಸರಕಾರಕ್ಕೆ ಇದ್ದಂತಿದೆ, ಕಾಂಗ್ರೆಸ್ಸಿನವರಿಗೆ ದ್ವನಿ ಎತ್ತುವ ನೈತಿಕತೆ ಇಲ್ಲದೆ ಬಾಯಿ ಕಟ್ಟಿ ಹಾಕಿದಂತಾಗಿದೆ.

ಹೀಗೆ ದೇಶದ ಅಬಿವೃದ್ದಿಯ ನೆಪದಲ್ಲಿ ಪ್ರತಿಯೊಂದಕ್ಕೂ ವಿದೇಶಗಳೊಂದಿಗೆ ಒಪ್ಪಂದ ಮಾಡಿದರೆ ಅದು ಕಾರ್ಪೋರೆಟರ್ ಕಂಪನಿಗಳ ಜೊತೆ ಮಾಡುವ ಒಳ ಒಪ್ಪಂದ ಆಗಬಹುದೇ ಹೊರತು ಈ ದೇಶದ ಸಾಮಾನ್ಯ ಜನತೆಯ ಒಳಿತಿಗಲ್ಲ.   ಕಾಂಗ್ರೆಸ್ಸ್ ಹೇಗೋ ಜನತೆಗೆ ತಿಳಿಯದೆ ಹಲವು ಒಳ ಒಪ್ಪಂದಗಳಿಗೆ ಸಹಿ ಹಾಕಿ ದೇಶಿಯ ಸರಕುಗಳಿಂದ ನಮ್ಮನ್ನು ದೂರ ಮಾಡಿದೆ, ಮನೆ ಮಕ್ಕಳಿಗೂ ಕೂಡ ವಿದೇಶಿ ವಸ್ತುಗಳ ವ್ಯಾಮೋಹ ಮೊಡಿಸಿದೆ, ಇನ್ನು ಸಂಪೂರ್ಣವಾಗಿ ಚಿಲ್ಲರೆ ಮಟ್ಟದಲ್ಲಿ ಮಾತ್ರವಲ್ಲದೆ ಬೃಹತ್ ಮಟ್ಟದಲ್ಲಿ ಒಂದೊಂದೇ ಒಪ್ಪಂದ ಮಾಡಿ ಕಡೆಗೆ ನಮಗೆ ಅರಿವಿಲ್ಲದಂತೆಯೇ ನಾವು ವಿದೇಶಿಗಳಿಗೆ ಚಿಲ್ಲರೆಯಾಗಿ ಹೋಗುವುದರಲ್ಲಿ ಅನುಮಾನವಿಲ್ಲ. ಕಾರ್ಪೋರೆಟರ್ ಕಂಪನಿಗಳ ಉತ್ಸಾಹ ನೋಡುವಾಗ ನಾವು ಅಕ್ಕಿ, ಗೋಧಿ ಗಳಿಗೆ ಇತಿಶ್ರಿ ಹಾಕಿ ಮುಂದೊಂದು ದಿನ ಮ್ಯಾಗಿ, ನೂಡಲ್ಸ್ ನಂತಹ ವಿದೇಶಿ ಲಘು ಪದಾರ್ಥಗಳಿಗೆ ಒಗ್ಗಿಕೊಂಡು ವಿದೇಶಿಗಳಂತೆ ಎರೆಹುಲುವಿನಂತಹ ವಸ್ತುಗಳಿಗೆ ಮಾರುಹೋಗಬೇಕಾಗುತ್ತದೆ.  

ಸಧ್ಯಕ್ಕೆ ಕೆಲವು ನಡೆ ಒಳಿತಿನಂತೆ ಕಂಡರೂ ಸಮರ್ಥವಾಗಿ ನಡೆಯಬೇಕಾದ ಭಾರತಕ್ಕೆ ಅದು ಯಾವತ್ತಿಗೂ ಮಾರಕವೇ ಸರಿ, ಮುಂದೊಂದು ದಿನ ಭಾರತ ವಿದೇಶಿ ಮಯವಾಗುತ್ತದೆ. ಕಾಂಗ್ರೆಸ್ ಹೇಗೂ ಯುದ್ದ ಸಾಮಾಗ್ರಿಗಳನ್ನು ವಿದೇಶಿಮಯವಾಗಿಸಿದೆ ನೂತನ ಸರಕಾರ ಅದನ್ನು ಉಪಯೋಗಿಸುವ ಸೈನಿಕರನ್ನು ಕೂಡ ವಿದೇಶಗಳಿಂದಲೇ ತರಿಸುವಂತಹ ಉತ್ಸುಕತೆಯಲ್ಲಿದೆ, ಟಿವಿಯಲ್ಲಿ ಬರುವ ವಾರ್ತಾವಾಚಕರು ಕೂಡ ಬಿಬಿಸಿ ಯಲ್ಲಿ ಬರುವ ವಿದೇಶಿಗಳಂತೆ ಇರಬೇಕಾಗಬಹುದು, ನಮ್ಮವರು ಯಾವುದಾದರು ಲೋಕಲ್ ವಾರ್ತೆಗಳನ್ನು ಓದಿಕೊಂಡು ಕಾಲಕಳೆಯಬೇಕಾದೀತು, ಸರಕಾರದ ಪ್ರತಿಯೊಂದು ನಡೆಯಲ್ಲಿಯೂ ದೇಶದ ಅಭಿವೃದ್ದಿ ಮಾತ್ರವಲ್ಲ ಸೈದ್ದಾಂತಿಕ ಭೌಗೊಳಿಕ ವಿಚಾರಗಳ ಬಗ್ಗೆಯೂ ಎಚ್ಚರವಿರಲಿ.

ಅಭಿವೃದ್ದಿ ಅನ್ನೋದು ಈ ದೇಶದ ಸಾಮಾನ್ಯನಿಗೆ ತಲುಪಲಿ, ಕಾರ್ಪೋರೆಟರ್ ಧೀರರಾದ ಅಂಬಾನಿ, ಅದಾನಿಗಳ ಕಂಪನಿಗಳಿಗೆ ಮಾತ್ರ ಸೀಮಿತವಾಗದಿರಲಿ, ಕಾಂಗ್ರೆಸ್ಸ್ ಮಾಡಿದ ತಪ್ಪನ್ನು ಮತ್ತೊಮ್ಮೆ ಹೊಸ ಸರಕಾರ ಮಾಡದಿರಲಿ, ಕಾಂಗ್ರೆಸ್ಸ್ ಒಳಗೊಳಗೇ ದೋಚಿದಂತೆ ಬಿ ಜೆಪಿ ನೇತ್ರತ್ವದ ಏನ್. ಡಿ. ಏ ಸರಕಾರ ವಿದೇಶಗಳಿಗೆ ಮನ್ನಣೆ ನೀಡಿ ಕಾರ್ಪೋರೆಟರ್ ಕಂಪನಿಗಳ ಮೂಲಕ ದೇಶವನ್ನು ಲೂಟುವ ಕೆಲಸಕ್ಕೆ ಕೈ ಹಾಕದಿರಲಿ. ಅಭಿವೃದ್ದಿಯ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಮೋದಿಯವರು ದೇಶದ ಸಾಮಾನ್ಯ ಜನತೆಯ ಅಭಿವೃದ್ದಿಯ ಬಗ್ಗೆ ಗಮನ ಹರಿಸಿ ಘೋಸಿಸಿದಂತೆ ನಿಜವಾದ ಅಭಿವೃದ್ದಿಯ ಹರಿಕಾರರಾಗಲಿ ಆ ಮೂಲಕ ಕಾಂಗ್ರೆಸ್ ಮಾಡಿದ ತಪ್ಪನ್ನು ಪುನರಾವರ್ತಿಸದಿರಲಿ. 



Monday, June 2, 2014

ಸ್ವ ಹಿತದ ಅಧರ್ಮ (ಚುಟುಕ)

ಮಾನವ ವಿಶ್ವಾಸಿಗಳೇ ಎಲ್ಲೆಡೆ ತುಂಬುತ್ತಿದ್ದಂತೆ!
 ದೇವ ವಿಶ್ವಾಸಿಗಳು ಇತ್ತ ಕಣ್ಮರೆಯಾಗುತ್ತಿದ್ದಾರೆ. 

ಸ್ವ ಹಿತಕ್ಕಾಗಿ ದೇವನನ್ನೇ ಪಣವಾಗಿ ಇಟ್ಟವರಿದ್ದಾರೆ!  
ನಾನೇ ಸ್ವರ್ಗವಾಸಿ ಎಂಬ ಅಹಂಕಾರಿಗಳೂ ನಮ್ಮಲ್ಲಿದ್ದಾರೆ,


 ದೇವನೊಬ್ಬನೇ ಎನ್ನುವವರ ಮಧ್ಯೆ ಸದಾ ಗಲಿಬಿಲಿ!
ನಮ್ಮ ಗಲಿಬಿಲಿಯೇ ಇಲ್ಲಿ ಕೆಲವರಿಗೆ ಬಳುವಳಿ. 

ದೇವ ಪ್ರೀತಿ ಮಾನವತೆಯಾಗಿ, ಮನುಷ್ಯತ್ವವಾಗಿ ಸ್ವಂತಕ್ಕಲ್ಲ!
ಒಂದಾಗಿ ಎನ್ನುವಾಗ ದೂರ ಓಡಿ ಮರೆಯಾಗುವುದಕ್ಕಲ್ಲ.

ನಾನು ನೀವು ಸ್ವಾರ್ಥಿಯಾದರೆ ಧರ್ಮವೆಲ್ಲಿ? 
ಒಮ್ಮೆ ತಿರುಗಿ ನೋಡಿ ತುಂಬಿಲ್ಲವೇ ಅಧರ್ಮವಿಲ್ಲಿ?