ಅಭಿವೃದ್ದಿಯ ಪಥದಲ್ಲಿ ಈ ದೇಶ ಮುನ್ನಡೆದಿದೆಯೋ ಇಲ್ಲವೋ ಆದರೆ ದೋಚುವವರಿಗೂ, ದೋಚುವವರನ್ನು ಸಮರ್ಥಿಸುವವರಿಗೂ, ಅದನ್ನು ಸುಮ್ಮನೆ ಕುಳಿತು ನೋಡುವವರಿಗೂ ಈ ದೇಶದಲ್ಲ್ಲಿಕೊರತೆ ಇಲ್ಲ. 1947ರ ಸ್ವಾತಂತ್ರ್ಯ ದಿನದ ನಂತರ ಹಲವಾರು ಮಂದಿ ಹಲವಾರು ರೀತಿಯಲ್ಲಿ ಈ ಭವ್ಯ ಭಾರತವನ್ನು ದೋಚಿದ್ದಾರೆ, ಅದು ಬಹಳವಾಗಿ ಚರ್ಚಿಸಲ್ಪಟ್ಟ ಬೋಪೋರ್ಶ್, ಸ್ಪೆಕ್ಟ್ರಂ, 2ಜೀ, ಸತ್ಯಂ, ಶವಪೆಟ್ಟಿಗೆ ಹಗರಣ ಮಾತ್ರವೆಂದಲ್ಲ, ಇವೆಲ್ಲಾ ರಾಜಕೀಯವಾಗಿ ನಮ್ಮ ಮುಂದೆ ಬಂದ ಕೆಲವು ಹಗರಣಗಳು ಅಷ್ಟೇ, ಆದರೆ ಇದಕ್ಕಿಂತಲೂ ಘೋರವಾದ ಹಗರಣಗಳು ಈ ದೇಶದಲ್ಲಿ ನಡೆದಿದೆಯಾದರೂ ಅದು ಈ ಜಗತ್ತಿನ ಮುಂದೆ ಅರ್ಪಿತವಾಗಿಲ್ಲ, ಅವು ಕಾಲ ಬುಡದಲ್ಲಿ ಮರೆಯಾಗಿ ಹೋಗಿದೆ, ಕೆಲವೊಮ್ಮೆ ದೊಡ್ಡ ದೊಡ್ಡ ಹಗರಣಗಳನ್ನು ಮುಚ್ಚಲೆಂದೇ ಬಹಳ ವ್ಯವಸ್ಥಿತವಾಗಿ ಸಣ್ಣ ಪುಟ್ಟ ಹಗರಣಗಳನ್ನು ತೋರಿಸಲಾಗಿದೆ ಎನ್ನುವುದು ವಾಸ್ತವ.

ಹಗರಣಗಳಿಗೆ ಬಹಳ ಕುಖ್ಯಾ ತಿ ಹೊಂದಿರುವಲ್ಲಿ ಮುಖ್ಯ ಪಾತ್ರ ವಹಿಸಿರುವುದು ಕಾಂಗ್ರೆಸ್ಸ್, ಏಕೆಂದರೆ ಹಲವು ದಶಕಗಳಿಂದ ಈ ದೇಶವನ್ನು ತನ್ನ ತೆಕ್ಕೆಯಲ್ಲಿ ಇಟ್ಟು ಆಳಿರುವುದು ಕಾಂಗ್ರೆಸ್ಸ್. ಈ ದೇಶವನ್ನು ಆಳಿದ್ದು ಮಾತ್ರವಲ್ಲ ಯಾವೆಲ್ಲ ರೀತಿಯಲ್ಲಿ ದೇಶವನ್ನು ಲೂಟಲು ಸಾಧ್ಯವೋ ಆ ಎಲ್ಲ ರೀತಿಯಲ್ಲಿ ಲೂಟಿ ಮಾಡಿ ಆಗಿದೆ, ಮಾತ್ರವಲ್ಲ ಬಹಳಷ್ಟು ಧುರೀಣರು ಹಗರಣಗಳ ಹೆಸರಿನಲ್ಲಿ ಜೈಲು ಸೇರಿದ್ದೂ ಇದೆ, ಹೊರಗಡೆ ಬಂದು ತಿರುಗಾಡಿದ್ದು ಇದೆ, ಬೇರೆ ಪಕ್ಷಗಳ ನಾಯಕರ ಹೆಸರುಗಳು ಕೂಡಾ ಆಗಾಗ್ಗೆ ಕೇಳಿ ಬಂದಿದೆ. ನಾಯಕರೆಲ್ಲ ಸೇರಿ ಲೂಟಿ ಮಾಡಿದ ಕಾರಣದಿಂದ ಬಡ ವರ್ಗಗಳು ಭಾರತ ದೇಶದಲ್ಲಿ ಇನ್ನು ಕೂಡಾ ಬಡವರಾಗಿಯೇ ಉಳಿದಿರುವುದು.
ಹಲವು ಭಾರಿ ವಿದೇಶಿ ವ್ಯಾಪಾರದ ಒಪ್ಪಂದಕ್ಕೆ ಒತ್ತು ನೀಡುವ ಕಾಂಗ್ರೆಸ್ಸ್ ಸರಕಾರದ ನಡೆಯನ್ನು ಬಲವಾಗಿ ವಿರೋಧಿಸಿದವರಿದ್ದಾರೆ, ವಿಪರ್ಯಾಸವೇನೆಂದರೆ ವಿರೋಧಿಸುತಿದ್ದವರೇ ತಾವು ಏತಕ್ಕೆ ವಿರೋಧಿಸುತ್ತಿದ್ದೆವು ಎನ್ನುವುದನ್ನೇ ಮರೆತಿದ್ದಾರೆ ಮತ್ತು ಸಧ್ಯಕ್ಕಂತೂ ನಾವು ಚಿಲ್ಲರೆಯನ್ನು ಮಾತ್ರ ಒಂದು ಕಾಲದಲ್ಲಿ ವಿರೋಧಿಸಿದ್ದೆವು ಅದು ನೋಟಿನ ರೂಪದಲ್ಲಾದರೆ ದೇಶಕ್ಕೆ ಮಾರಕವಲ್ಲ ಎಂಬ ಮೊಂಡುವಾದದೊಂದಿಗೆ ಯಾವುದೇ ತೊಂದರೆಯಿಲ್ಲ ಎಂದು ದಾರಿ ಬದಲಿಸಿದ್ದಾರೆ. ದೇಶದ ಅಭಿವೃದ್ದಿಗಿಂತ ತಮ್ಮ ವಾದ, ಪ್ರತಿವಾದಗಳಿಗೆ ಹೆಚ್ಚು ಒತ್ತು ನೀಡಿ ಕಾಲ ಕಳೆದಾಗ ದ್ವೇಷ ರಾಜಕಾರಣದಲ್ಲಿ ಬಲಿಯಾಗುವುದು ಮಾತ್ರ ದೇಶದ ಕಟ್ಟ ಕಡೆಯ ನಾಗರಿಕ.
ಹಲವು ದಶಕಗಳ ಕಾಂಗ್ರೆಸ್ ಸರಕಾರ ನುಚ್ಚು ನೂರಾಗಿದೆ, ನಾಯಕತ್ವದ ಕೊರತೆಯಿಂದ, ಕಾರ್ಯಕರ್ತರ ಮತ್ತು ನಾಯಕರ ಸಂವಹನದ ಕೊರತೆಯಿಂದ ಹೇಳ ಹೆಸರಿಲ್ಲದಂತೆ ದೈತ್ಯ ಪಕ್ಷವೊಂದು ಅವಸಾನದತ್ತ ಸಾಗಿ ಎದ್ದು ನಿಲ್ಲಲು ಪರಿಶ್ರಮ ಪಡುತ್ತಿದೆ, ಈ ನಾಶ ಜನ ಶಕ್ತಿಯ ವಿರುದ್ದ ನಡೆಸಿದ ಒಳ ಒಪ್ಪಂದಗಳ ಕಾರಣದಿಂದ ಸಂಭವಿಸಿದುದಾಗಿದೆ. ನಾಶವಾಗುದಕ್ಕಿಂತ ಮುಂಚೆ ಎಚ್ಚೆತ್ತಿದ್ದಿದ್ದರೆ ಬೇರೆಯವರಿಗೆ ಜಾಗವಿರುತ್ತಿರಲಿಲ, ತಾವೇ ದಶಕಗಳ ವೀರರು ಎನ್ನುವ ದುರಹಂಕಾರ ಇವತ್ತು ಕಾಂಗ್ರೆಸ್ಸನ್ನು ಅಳಿವಿನತ್ತ ಸಾಗಿಸಿದೆ. ಕಾಂಗ್ರೆಸ್ಸ್ ಯಾರದೋ ಅಲೆಯಿಂದ ಅವಸಾನವಾಯಿತು ಎನ್ನುವುದಕ್ಕಿಂತ ಮಿಗಿಲಾಗಿ ಅದು ಕಾಂಗ್ರೆಸ್ ತಾನೇ ಮಾಡಿಕೊಂಡ ಕೊಲೆ ಎನ್ನಬಹುದಾಗಿದೆ.ಅಂತೂ ದೇಶದ ಜನತೆ ಬದಲಾವಣೆ ಬಯಸಿ ಕಾಂಗ್ರೆಸ್ಸನ್ನು
, ಅಂದರೆ 60 ವರ್ಷಗಳಿಂದ ದೋಚಿದ ಲೂಟಿಕೋರರನ್ನು ಓದ್ದೋಡಿಸಿದೆ, ಜನರು ಮಾಡಿದ ಬದಲಾವಣೆ ದೇಶದ ಸಾರ್ವಭೌಮತೆಗೆ ಕುತ್ತಾಗಲಿದೆಯೋ ಎನ್ನುವ ಆತಂಕ ಎದುರಾಗಿತ್ತು, ಆದರೆ ಹೊಸ ಸರಕಾರದ ಕೆಲವು ನಡೆ ಸಾರ್ವಭೌಮತೆಯ ಧಕ್ಕೆಗಿಂತಲೂ ಭೀಕರವಾದ ಹಾದಿಯಲ್ಲಿ ಸಾಗುತ್ತಿದೆ ಎನ್ನುವುದು ಸ್ಪಷ್ಟವಾಗುತ್ತಿದೆ. ಕಾಂಗ್ರೆಸ್ಸಿನ ಹಲವು ನಡೆಯನ್ನು ವಿರೋಧಿಸಿದವರು ಅದೇ ಹಾದಿಯಲ್ಲಿ ನಡೆಯಲು ಆರಂಭಿಸಿದ್ದಾರೆ, ಆರಂಭವೇ ದೇಶಕ್ಕೆ ಮಾರಕವಾಗುವ ಹೆಜ್ಜೆಗಳಾಗಿದೆ. ಕಾಂಗ್ರೆಸ್ಸಿನವರು ತಮ್ಮೊಳಗೆ ಲೂಟಿ ಮಾಡಿ ದೇಶವನ್ನು ಲೂಟಿ ಮಾಡಿದರು, ಆದರೆ ಈಗಿನ ಸರಕಾರ ಕಾಲ ಕಾಲಕ್ಕೂ ವಿದೇಶಿಗಳು ನಮ್ಮನ್ನು ಶಾಸನಬದ್ದವಾಗಿ ಲೂಟಿ ಮಾಡುವ ಪರಿಸ್ಥಿತಿ ತಂದೊದಗಿಸುತ್ತಿದೆ, ವಿದೇಶಿಗಳ ಕೈಗೆ ನಮನ್ನು ಪಣವಾಗಿ ಇಡಲು ಹೊರಟಿದೆ.
ಮಾಧ್ಯಮ ಕ್ಷೇತ್ರದಲ್ಲಿ ಶೇಕಡಾ ನೂರರಷ್ಟು ಬಂಡವಾಳ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಶೇಕಡಾ ನೂರರಷ್ಟು ಪಾಲು ನೀಡಿ ದೇಶದ ಅಖಂಡತೆಯನ್ನು ಗುಲಾಮಗಿರಿಗೆ ತಳ್ಳುವ ಪ್ರಯತ್ನ ನಡೆಯುತ್ತಿದೆ, ಈ ದೇಶ ತನ್ನಲ್ಲಿ ಎಲ್ಲವನ್ನು ತುಂಬಿಕೊಂಡಿದ್ದರು ಎಲ್ಲಕ್ಕೂ ಕೈ ಚಾಚುವ ಪರಿಸ್ಥಿತಿ ಮುಂದೊಂದು ದಿನ ಕಾದಿದೆ. ಧರ್ಮದಲ್ಲಿ ಅಧರ್ಮಿಗಳು ಸಹಜ ಆದರೆ ಧರ್ಮ ಕಾರ್ಪೋರೆಟರ್ ಗಳ ಸೊತ್ತಾಗಿ ಬಳಸಲ್ಪಡುತ್ತಿರುವುದು ವಿಪರ್ಯಾಸ. ಕಾರ್ಪೋರೆಟರ್ ಗಳು ಧರ್ಮಾಧಾರಿತ ರಾಜಕಾರಣ ನಡೆಸಿ ದೇಶವನ್ನು ಮಾರುವ ತಮ್ಮ ಉದ್ದೇಶದಲ್ಲಿ ಸಫಳರಾಗುತ್ತಿದ್ದಾರೆ, ಸರಕಾರಗಳು ದೇಶವನ್ನು ಅಭಿವೃದ್ದಿ ಮಾಡುವ ನೆಪದಲ್ಲಿ ದೇಶವನ್ನು ಅರಿವಿದ್ದು ಮಾರಲು ಹೊರಟಿದೆ, ಕಾಂಗ್ರೆಸ್ಸ್ ಈಗಾಗಲೇ ಅರ್ಧ ದೇಶವನ್ನು ಮಾರಿದ್ದು ಅದೇ ನಡೆಯನ್ನು ಮುಂದುವರೆಸಿ ಸಂಪೂರ್ಣ ದೇಶವನ್ನು ಮಾರಿಬಿಡುವ ಚಿಂತನೆ ಈಗಿನ ಸರಕಾರಕ್ಕೆ ಇದ್ದಂತಿದೆ, ಕಾಂಗ್ರೆಸ್ಸಿನವರಿಗೆ ದ್ವನಿ ಎತ್ತುವ ನೈತಿಕತೆ ಇಲ್ಲದೆ ಬಾಯಿ ಕಟ್ಟಿ ಹಾಕಿದಂತಾಗಿದೆ.
ಹೀಗೆ ದೇಶದ ಅಬಿವೃದ್ದಿಯ ನೆಪದಲ್ಲಿ ಪ್ರತಿಯೊಂದಕ್ಕೂ ವಿದೇಶಗಳೊಂದಿಗೆ ಒಪ್ಪಂದ ಮಾಡಿದರೆ ಅದು ಕಾರ್ಪೋರೆಟರ್ ಕಂಪನಿಗಳ ಜೊತೆ ಮಾಡುವ ಒಳ ಒಪ್ಪಂದ ಆಗಬಹುದೇ ಹೊರತು ಈ ದೇಶದ ಸಾಮಾನ್ಯ ಜನತೆಯ ಒಳಿತಿಗಲ್ಲ. ಕಾಂಗ್ರೆಸ್ಸ್ ಹೇಗೋ ಜನತೆಗೆ ತಿಳಿಯದೆ ಹಲವು ಒಳ ಒಪ್ಪಂದಗಳಿಗೆ ಸಹಿ ಹಾಕಿ ದೇಶಿಯ ಸರಕುಗಳಿಂದ ನಮ್ಮನ್ನು ದೂರ ಮಾಡಿದೆ, ಮನೆ ಮಕ್ಕಳಿಗೂ ಕೂಡ ವಿದೇಶಿ ವಸ್ತುಗಳ ವ್ಯಾಮೋಹ ಮೊಡಿಸಿದೆ, ಇನ್ನು ಸಂಪೂರ್ಣವಾಗಿ ಚಿಲ್ಲರೆ ಮಟ್ಟದಲ್ಲಿ ಮಾತ್ರವಲ್ಲದೆ ಬೃಹತ್ ಮಟ್ಟದಲ್ಲಿ ಒಂದೊಂದೇ ಒಪ್ಪಂದ ಮಾಡಿ ಕಡೆಗೆ ನಮಗೆ ಅರಿವಿಲ್ಲದಂತೆಯೇ ನಾವು ವಿದೇಶಿಗಳಿಗೆ ಚಿಲ್ಲರೆಯಾಗಿ ಹೋಗುವುದರಲ್ಲಿ ಅನುಮಾನವಿಲ್ಲ. ಕಾರ್ಪೋರೆಟರ್ ಕಂಪನಿಗಳ ಉತ್ಸಾಹ ನೋಡುವಾಗ ನಾವು ಅಕ್ಕಿ, ಗೋಧಿ ಗಳಿಗೆ ಇತಿಶ್ರಿ ಹಾಕಿ ಮುಂದೊಂದು ದಿನ ಮ್ಯಾಗಿ, ನೂಡಲ್ಸ್ ನಂತಹ ವಿದೇಶಿ ಲಘು ಪದಾರ್ಥಗಳಿಗೆ ಒಗ್ಗಿಕೊಂಡು ವಿದೇಶಿಗಳಂತೆ ಎರೆಹುಲುವಿನಂತಹ ವಸ್ತುಗಳಿಗೆ ಮಾರುಹೋಗಬೇಕಾಗುತ್ತದೆ.
ಸಧ್ಯಕ್ಕೆ ಕೆಲವು ನಡೆ ಒಳಿತಿನಂತೆ ಕಂಡರೂ ಸಮರ್ಥವಾಗಿ ನಡೆಯಬೇಕಾದ ಭಾರತಕ್ಕೆ ಅದು ಯಾವತ್ತಿಗೂ ಮಾರಕವೇ ಸರಿ, ಮುಂದೊಂದು ದಿನ ಭಾರತ ವಿದೇಶಿ ಮಯವಾಗುತ್ತದೆ. ಕಾಂಗ್ರೆಸ್ ಹೇಗೂ ಯುದ್ದ ಸಾಮಾಗ್ರಿಗಳನ್ನು ವಿದೇಶಿಮಯವಾಗಿಸಿದೆ ನೂತನ ಸರಕಾರ ಅದನ್ನು ಉಪಯೋಗಿಸುವ ಸೈನಿಕರನ್ನು ಕೂಡ ವಿದೇಶಗಳಿಂದಲೇ ತರಿಸುವಂತಹ ಉತ್ಸುಕತೆಯಲ್ಲಿದೆ, ಟಿವಿಯಲ್ಲಿ ಬರುವ ವಾರ್ತಾವಾಚಕರು ಕೂಡ ಬಿಬಿಸಿ ಯಲ್ಲಿ ಬರುವ ವಿದೇಶಿಗಳಂತೆ ಇರಬೇಕಾಗಬಹುದು, ನಮ್ಮವರು ಯಾವುದಾದರು ಲೋಕಲ್ ವಾರ್ತೆಗಳನ್ನು ಓದಿಕೊಂಡು ಕಾಲಕಳೆಯಬೇಕಾದೀತು, ಸರಕಾರದ ಪ್ರತಿಯೊಂದು ನಡೆಯಲ್ಲಿಯೂ ದೇಶದ ಅಭಿವೃದ್ದಿ ಮಾತ್ರವಲ್ಲ ಸೈದ್ದಾಂತಿಕ ಭೌಗೊಳಿಕ ವಿಚಾರಗಳ ಬಗ್ಗೆಯೂ ಎಚ್ಚರವಿರಲಿ.ಅಭಿವೃದ್ದಿ ಅನ್ನೋದು ಈ ದೇಶದ ಸಾಮಾನ್ಯನಿಗೆ ತಲುಪಲಿ, ಕಾರ್ಪೋರೆಟರ್ ಧೀರರಾದ ಅಂಬಾನಿ, ಅದಾನಿಗಳ ಕಂಪನಿಗಳಿಗೆ ಮಾತ್ರ ಸೀಮಿತವಾಗದಿರಲಿ, ಕಾಂಗ್ರೆಸ್ಸ್ ಮಾಡಿದ ತಪ್ಪನ್ನು ಮತ್ತೊಮ್ಮೆ ಹೊಸ ಸರಕಾರ ಮಾಡದಿರಲಿ, ಕಾಂಗ್ರೆಸ್ಸ್ ಒಳಗೊಳಗೇ ದೋಚಿದಂತೆ ಬಿ ಜೆಪಿ ನೇತ್ರತ್ವದ ಏನ್. ಡಿ. ಏ ಸರಕಾರ ವಿದೇಶಗಳಿಗೆ ಮನ್ನಣೆ ನೀಡಿ ಕಾರ್ಪೋರೆಟರ್ ಕಂಪನಿಗಳ ಮೂಲಕ ದೇಶವನ್ನು ಲೂಟುವ ಕೆಲಸಕ್ಕೆ ಕೈ ಹಾಕದಿರಲಿ. ಅಭಿವೃದ್ದಿಯ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಮೋದಿಯವರು ದೇಶದ ಸಾಮಾನ್ಯ ಜನತೆಯ ಅಭಿವೃದ್ದಿಯ ಬಗ್ಗೆ ಗಮನ ಹರಿಸಿ ಘೋಸಿಸಿದಂತೆ ನಿಜವಾದ ಅಭಿವೃದ್ದಿಯ ಹರಿಕಾರರಾಗಲಿ ಆ ಮೂಲಕ ಕಾಂಗ್ರೆಸ್ ಮಾಡಿದ ತಪ್ಪನ್ನು ಪುನರಾವರ್ತಿಸದಿರಲಿ.

1 comment:
ಹಿಂದಿನ ಸರಕಾರದ ಅನೀತಿಗಳು ಹಾಗೂ ಹೊಸ ಸರಕಾರವೂ ಅದಕ್ಕೇ ಹೊಂದಿಕೊಂಡು ಹೋಗುವಂತಹ ನೀತಿಗಳನ್ನು ಅನುಸರಿಸಿರುವ ಬಗ್ಗೆ ಲೇಖಕರು ಮಾಡಿದಂತಂಹ ವಿಮರ್ಷೆ ತುಂಬಾ ಚೆನ್ನಾಗಿದೆ. ಈ ಮೂಲಕ ದೇಶದ ನಾಗರಿಕರಿಗೆ ಯಾವುದೇ ಸರಕಾರ ಅಸ್ತಿತ್ವಕ್ಕೆ ಬರಲಿ ಅದರ ನೈಜ ಉದ್ದೇಶ ಏನು ಎಂಬ ವಿಚಾರವನ್ನು ಉತ್ತಮ ರೀತಿಯಲ್ಲಿ ಅತ್ಯಂತ ಚುಟುಕಾಗಿ ವಿವರಿಸಲಾಗಿದೆ.
ಆದರೆ ಇಂದು ಆಗುತ್ತಿರುವುದು ಏನು? ಧರ್ಮ ಹಾಗೂ ಸಂಸ್ಕ್ರತಿಯ ನೆಪದಲ್ಲಿ ಬೇರೆ ಬೇರೆ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜನರನ್ನು ಮರಳುಗೊಳಿಸುವ ಪ್ರಯತ್ನ ನಿರಂತರವಾಗಿ ಸಾಗುತ್ತಿದೆ. ಈ ಮೂಲಕ ಹಿಂಬಾಗಿಲಿನಿಂದ ಕಾರ್ಪೋರೇಟ್ ಧಣಿಗಳಿಗೆ ಚಿನ್ನದ ಹಾಸನ್ನು ಹಾಕಿ ಆಮಂತ್ರಿಸಿ ತನ್ನ ಕೆಲವೇ ಇಂಚುಗಳ ಹೊಟ್ಟೆಯನ್ನು ಭರಿಸುವುದೇ ಇವರ ಉದ್ದೇಶ. ಆಸೆ ಆಕಾಂಕ್ಷೆಗಳಿಂದ ತುಂಬಿ ತುಳುಕುತ್ತಿರುವ ಈ ಹೊಟ್ಟೆ ಅದೆಷ್ಟು ಉದ್ದಗಲಕ್ಕೆ ಚಾಚಿ ಹೋಗಿದೆಯೆಂದರೆ ಅದಕ್ಕೆ ಕೊನೆಯೇ ಇಲ್ಲದಂತಾಗಿದೆ. ಈ ನಡುವೆ ನೈಜತೆಯನ್ನು ತಿಳಿಯದೆ ಬಡ ನಾಗರಿಕ ವಿಲವಿಲ ಒದ್ದಾಡುತ್ತಿದ್ದಾನೆ.
ನೈಜತೆಯನ್ನು ಜನರಿಗೆ ತೋರಿಸಿಕೊಡುವಂತಹ ಲೇಖನಗಳು ತಮ್ಮಿಂದ ನಿರಂತರವಾಗಿ ಹರಿದು ಬರುತ್ತಿರಲಿ.
Post a Comment