Wednesday, June 11, 2014

ಮಾತಿನಂತೆ ನಡೆಯದ ನಾಯಕರು! ಅನುಸರಿಸದ ಅನುಯಾಯಿಗಳು! ದಾರಿ ತಪ್ಪಿದ ಸಮುದಾಯ!! (ಲೇಖನ)


ಕಿವಿ ಕೇಳದ ವ್ಯಕ್ತಿಯೊಬ್ಬನ ಮುಂದೆ ವಾಚಕನೊಬ್ಬ ಗಂಟೆ ಗಟ್ಟಲೆ ಬೊಬ್ಬಿಟ್ಟರೆ ಅದು ವಾಚಕನ ಗಂಟಲು ನೋವಿಗೆ ಕಾರಣವಾಗಬಹುದೇ ಹೊರತು ಸಮಾಜದ ವ್ಯಕ್ತಿಯೊಬ್ಬನ ಬದಲಾವಣೆಗೆ ಪರಿಹಾರವಲ್ಲ, ಧರ್ಮದ ಆಳ ಅರಿತುರುವವನೊಬ್ಬ ತನ್ನದೇ ನಡೆಯಲ್ಲಿ ಸಾಗಿದರೆ ಅದು ಸ್ವಹಿತವಾಗಬಹುದೇ ಹೊರತು ಸಮುದಾಯದ ಉನ್ನತಿಯಲ್ಲ, ನಾಯಕನ ನಡೆ ಹೀಗಾದರೆ ಅದು ಕಿವಿ ಕೇಳದ ವ್ಯಕ್ತಿಗೂ ಧರ್ಮದ ಪಕ್ವತೆಯುಲ್ಲ ವ್ಯಕ್ತಿಗೂ ವ್ಯತ್ಯಾಸವಿಲ್ಲದಂತಾಗಬಹುದು. ಸಾಮಾನ್ಯನೊಬ್ಬ ನಾಯಕನ ನಡೆಯನ್ನು ಪ್ರಶ್ನಿಸಲು ಆರಂಬಿಸಿದರೆ ನಾಯಕರ ದಾರಿ ಕಷ್ಟವಾಗಬಹುದು.


ಸಮುದಾಯ ತನ್ನಲ್ಲಿರುವ ಒಡಕುಗಳ ಫಲವಾಗಿ ಬಿನ್ನವಾಯಿತು ಎನುವುದಕ್ಕಿಂತ ನಾಯಕರು ಬೆಳೆಸಿಕೊಂಡ ಎಕಾಧಿಪತ್ಯ ಗುಣಗಳು ಸಮುದಾಯಕ್ಕೆ ಹೆಚ್ಚು ಮಾರಕವಾಯಿತು ಎಂದರೆ ತಪ್ಪಾಗದು. ನಾಯಕರು ತನ್ನ ಬೆಂಬಲಿಗರ ಸಹಕಾರದೊಂದಿಗೆ ಸಮುದಾಯದ ಹಿತಕ್ಕಾಗಿ ಕೆಲಸ ಮಾಡುವುದಕ್ಕೆ ಹೊರತಾಗಿ ತಮ್ಮ ಲಾಭಗಳಿಗಾಗಿ ಬೆಂಬಲಿಗರನ್ನು ಬಳಸಿಕೊಂಡಾಗ ಪ್ರಶ್ನಿಸಿದವರಲ್ಲಿ ಕೆಲವರು ನಾಯಕರಾದರು, ಈ ಮುಂಚೆ ನಾಯಕರಾಗಿದ್ದವರು ನಾಯಕತ್ವದ ನಡೆ ಬದಲಿಸಿಕೊಂಡರು ಇದು ಸಮುದಾಯಕ್ಕೆ ಬಲು ದೊಡ್ಡ ಹೊಡೆತವಾಯಿತು.

ಸಮುದಾಯದ ಮುಂದೆ ನಾಯಕನೊಬ್ಬ ದುಂದು ವೆಚ್ಚ ಮಾಡಬೇಡಿ, ವರದಕ್ಷಿಣೆ ತೆಗೆದುಕೊಳ್ಳಬೇಡಿ ಎಂದಾಗ ಸಮುದಾಯ ಅವನನ್ನು ಒಪ್ಪಿಕೊಂಡಿತು ಮತ್ತು ಅವನದೇ ದಾರಿಯಲ್ಲಿ ನಡೆಯಿತು, ನಾಯಕನ ನಡೆಯನ್ನು ಕೊಂಡಾಡಿ ಜೈಕಾರ ಕೂಡಾ ಕೂಗಿತು, ಆದರೆ ನಾಯಕನು ಯಾವುದನ್ನು ಮಾಡಬೇಡಿ ಎಂದು ಘೋಷಿಸಿದನೋ ಅದೇ ನಡೆಯನ್ನು ತನ್ನದಾಗಿಸಿಕೊಂದಾಗ ಅನುಯಾಯಿಯು ಮತ್ತದೇ ದಾರಿಯಲ್ಲಿ ನಡೆಯತೊಡಗಿದ ಮತ್ತು ಈ ನಡೆಯನ್ನು ವಿರೋಧಿಸಿ ಹಲವರು ಆತನ ವಿರುದ್ದ ತಿರುಗಿ ಬಿದ್ದರು, ಅಂತಹ ನಾಯಕರು ಹೇಳ ಹೆಸರಿಲ್ಲದಂತೆ ಸಮುದಾಯದಿಂದ ಕಣ್ಮರೆಯಾಗಿದ್ದಾರೆ ಮತ್ತು ಕೆಲವರು ಹಲವು ಏಳು ಬೀಳುಗಳನ್ನು ಕಂಡಿದ್ದಾರೆ.

ಅನಿಷ್ಟ ರಾಜಕಾರಣ ಪದ್ದತಿಯನ್ನು ನೀವು ಕಾಣಬಹುದು ಅಲ್ಲಿ ಜನಪ್ರತಿನಿಧಿಯೊಬ್ಬ ಜನರ ಪರವಾಗಿ ಎಂಬಂತೆ ಘೋಷಣೆ  ಮಾಡುತ್ತ ಸರಕಾರೀ ಶಾಲೆಗಳನ್ನು ಅಭಿವೃದ್ದಿ ಮಾಡಬೇಕು, ಅದು ನೆಲೆ ನಿಲ್ಲಬೇಕು, ಅಲ್ಲಿ ಉತ್ತಮ ವ್ಯವಸ್ಥೆಯಾಗಳು ನಿರಂತರ ಪರಿಶ್ರಮ ಪಡುತ್ತೇನೆ ಎಂದು ಸಾರ್ವಜನಿಕವಾಗಿ ಒದರುತ್ತಾನೆ, ಆದರೆ ತನ್ನ ಮಕ್ಕಳನ್ನು ಮಾತ್ರ ದುಬಾರಿ ವೆಚ್ಚದ ಖಾಸಗಿ ಶಾಲೆಗಳಲ್ಲದೆ ಅವನೇ ಉದ್ದಾರ ಮಾಡಬೇಕೆಂದಿರುವ ಸರಕಾರೀ ಶಾಲೆಗೆ ಕಳುಹಿಸುವುದಿಲ್ಲ! ಇದು ಯಾವ ರೀತಿಯ ನ್ಯಾಯವಾಗಬಹುದು ಮತ್ತು ಅವನು ಯಾವ ರೀತಿಯಲ್ಲಿ ನಾಯಕನಾಗಲು ಅರ್ಹ ಎನ್ನುವುದು ಮುಖ್ಯ ಪ್ರಶ್ನೆ, ಅದಕ್ಕಾಗಿಯೇ ಮಧ್ಯಮ ವರ್ಗದ ಜನತೆ ತಮ್ಮ ಮಕ್ಕಳನ್ನು ಸರಕಾರೀ ಶಾಲೆಗಳಿಗೆ ಕಳುಹಿಸಲು ಮನಸ್ಸು ಮಾಡದಿರುವುದು. ಇತ್ತೀಚಿಗೆ  ಅಧಿಕಾರಿಯೊಬ್ಬರು ತನ್ನ ಮಕ್ಕಳನ್ನು ಸಾಮಾನ್ಯ ಸರಕಾರೀ ಶಾಲೆಗೆ ಸೇರಿಸಿ ಅಚ್ಚರಿ ಮೂಡಿಸಿದ್ದರು, ಇದು ಅಚ್ಚರಿ ಎನ್ನುವುದಕ್ಕಿಂತಲೂ ನಾಯಕರ ಇಂತಹ ನಡೆ ಖಂಡಿತ ಸಮಾಜ ಪರಿವರ್ತನೆಗೆ ಮಾರ್ಗ ಸೂಚಿಯಾಗಳು ಸಾಧ್ಯ, ನುಡಿದಂತೆ ನಡೆಯುವವನು ಮಾತ್ರ ನಾಯಕನಾಗಲು ಸಾದ್ಯ, ಆದರೆ ಕಾಲಘಟ್ಟದಲ್ಲಿ ತ್ಯಾಗ ಸಾಮಾನ್ಯರಿಗೆ ಮಾತ್ರ,  ತ್ಯಾಗದ ಕೊರತೆ ಕಂಡುಬರುವುದು ನಾಯಕರು ಎನಿಸಿಕೊಂಡವರಲ್ಲಿ.


ನಮ್ಮ ನಾಯಕರು ಕೂಡಾ ರಾಜಕಾರಣಿಗಳ ತತ್ವವನ್ನೇ ಮೈಗೂಡಿಸಿಕೊಂಡಿದ್ದಾರೆ, ಹಲವು ನಾಯಕರು ವರದಕ್ಷಿಣೆ ಮತ್ತು ದುಂದು ವೆಚ್ಚದಲ್ಲಿ ಕಾಲ ಕಳೆಯತೊಡಗಿದ್ದಾರೆ. ವರದಕ್ಷಿಣೆಯ ವಿರುದ್ದ ಮಾತನಾಡಿದ ನಾಯಕ ಯಾರಿಗೂ ತಿಳಿಯದ ಹಾಗೆ ವರದಕ್ಷಿಣೆ ಪಡೆಯುತ್ತಾನೆ, ದುಂದು ವೆಚ್ಚ ಮಾಡಬೇಡಿ ಎನ್ನುವ ನಾಯಕರು ದುಬಾರಿ ವೆಚ್ಚದ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿದರೆ ಅವರು ಹೆಚ್ಚು ಬುದ್ದಿವಂತರಾಗುತ್ತಾರೆ ಎನ್ನುವ ಮೂರ್ಖ ಕನಸು ಕಾಣುತ್ತಾರೆ, ದೇವಾನುಗ್ರಹದಿಂದ ಸಾವಿರಾರು ವ್ಯಕ್ತಿಗಳ ಭವಿಷ್ಯ ರೂಪಿಸಿದ ತನಗೆ ತನ್ನ ಮಗು ಸಾಮಾನ್ಯ ಶಾಲೆಗೆ ಹೋದರು ಭವಿಷ್ಯ ರೂಪಿಸಲು ತನ್ನಿಂದ ಸಾಧ್ಯ ಎನ್ನುವುದನ್ನು ನಾಯಕರು ಎನಿಸಿಕೊಂಡವರು ಅರಿತುಕೊಳ್ಳಬೇಕು ಇಲ್ಲವಾದಲ್ಲಿ ಸಾಮಾನ್ಯರಿಗೆ ನೀಡುವ ನೀತಿ ಬೋಧನೆಗಳನ್ನು ನಿಲ್ಲಿಸಬೇಕು, ನಾಯಕರು ಸಾಮಾನ್ಯರಿಗೆ ಭೋದಿಸಿ ಅದನ್ನು ಪಾಲಿಸುವವರು ಆದಾಗ ಮಾತ್ರ ನಾಯಕರಾಗಲು ಸಾಧ್ಯ.


ತನ್ನನ್ನು ನಾಯಕನಾಗಿ ಗುರುತಿಸಿ ಬೆಳೆಸಿದ್ದು ಸಮುದಾಯ, ಅದಕ್ಕಾಗಿ ಸಮುದಾಯಕ್ಕೋಸ್ಕರ ಜೀವ ಪಣವಿಡಬೇಕೆ ಹೊರತು ಐಶಾರಾಮಿ ಜೀವನಕ್ಕೆ ಮಾರುಹೋಗಿ ಸಾಮುದಾಯಿಕ ಕೆಲಸಕ್ಕೆ ಹಿನ್ನಡೆಯಾಗಳು ಕಾರಣವಾಗಬಾರದು. ತಮ್ಮ ಜೀವನವನ್ನೇ ಬರಿದಾಗಿಸಿ ಜೀವನ ಮುಗಿಸಿ ಹೋದ ಅದೆಷ್ಟೋ ನಾಯಕರಿದ್ದಾರೆ ಆದರೆ ಇಂದು ಗಲ್ಲಿ ಗಲ್ಲಿಗೊಬ್ಬ ನಾಯಕನಾಗಿ ದಾರಿ ತಪ್ಪಿದ ನಾಯಕರೇ ಹೆಚ್ಚು. ಸಾಮಾನ್ಯನ ಜೊತೆ ಮಾತನಾಡುವವನು, ಅವನ ಜೊತೆ ಬೆರೆಯುವವನು ನಾಯಕ, ನಾಯಕನೆಂದರೆ ಹೆಮ್ಮೆಯಿಂದ ನಡೆಯಬೇಕಾದವನಲ್ಲ. ನಾಯಕರು ಅಹಂಕಾರದ ನಡೆ ನಡೆಯುತ್ತಿರುವುದಕ್ಕೆ ಇಂದು ಸಮುದಾಯ ಕೆಟ್ಟು ಹೋಗಿರುವುದು, ಅದಕ್ಕಾಗಿಯೇ ನಾಯಕರು ಆಡಿದ ಆವೇಶದ ಭಾಷಣವನ್ನು ಕೂಡ ನಮ್ಮ ಜನ ಅರ್ದ ಘಂಟೆಯಲ್ಲೇ ಮರೆಯುತ್ತಿರುವುದು ಮತ್ತು ಭಾಷಣಗಳು ಭಾಷಣಗಳಾಗಿಯೇ ಉಳಿಯುತ್ತಿರುವುದು,

ದಾರಿ ತಪ್ಪಿದ ನಾಯಕರಿಂದಲೇ ಇನ್ನು ಕೂಡ ಸಮುದಾಯದಲ್ಲಿ ವರದಕ್ಷಿಣೆಯ ಪಿಡುಗು, ದುಂದು ವೆಚ್ಚದ ಆಡಂಬರ ಜೀವಂತಿಕೆಯಾಗಿ ಉಳಿದಿರುವುದು, ನಾಯಕ ಹೆಸರಿಗೆ ನಾಯಕನಾಗಿದ್ದಾನೆಯೇ ಹೊರತು ಅವನ ಬಾಯಿಯಲ್ಲಿ ಅರಬ್ ದೇಶದ ಚರಿತ್ರೆಯನ್ನೇ ಬದಲಾಯಿಸಿದ್ದ ಪ್ರವಾದಿಯ ಚರಿತ್ರೆಯ ನೆನೆನಪುಗಳಿದೆಯೇ ಹೊರತು, ದಿನ ನಿತ್ಯ ನಡೆಯುವ ವಿದ್ಯಾಮಾನಗಳ ಅರಿವನ್ನು ಪಡೆದು ಚೀಟಿಗೆ ಸಿಮೀತವಾದ ವಾಚನವಾಗಿದೆಯೇ ಹೊರತು ಅದನ್ನು ಪಾಲಿಸುವ ವಿಶಾಲ ಮನಸ್ಸು ಇಂದಿನ ನಾಯಕರಿಗಿಲ್ಲ, ಚರಿತ್ರೆಯ ಘಟನೆಗಳು ರಕ್ತ ಕಣದಲ್ಲಿ ಆಳವಾಗಿ ಲೀನವಾಗಿದೆಯೇ ಹೊರತು ಅದು ಹೃದಯವನ್ನು ತಲುಪಲು ಸಾಧ್ಯವಾಗದೆ ಇರೋದು ಸಮುದಾಯದ ನಾಯಕರ ದುರಂತ.


ಒಟ್ಟಿನಲ್ಲಿ ಸಮುದಾಯ ಭಿನ್ನವಾಗಿರೋದು ಸತ್ಯ, ಶತ್ರುಗಳು ಅದನ್ನು ಬಳಸಿಕೊಂಡಿರುವುದು ಕೂಡಾ ಅಷ್ಟೇ ಸತ್ಯ, ನಾವು ಸಂಘಟಿತರಾಗದೆ ಸಂಘಟನೆಗಳಾಗಿರುವುದು ಕೂಡಾ ಅಷ್ಟೇ ಸತ್ಯ, ಆದರೆ ಇಲ್ಲಿ ನಾಯಕರನ್ನು ಅನುಸರಿಸುವವರಿಗೆ ಖಂಡಿತಾ ಕೊರತೆ ಇಲ್ಲ, ಆದರೆ ನಾಯಕತ್ವವೇ ಇಲ್ಲಿ ಪ್ರಶ್ನಿಸಲ್ಪಡುವಂತದ್ದು ಅನ್ನುವುದು ನಿಜ! ವಾಸ್ತವಿಕತೆ  ಇಲ್ಲಿ ಎಲ್ಲರೂ ನಾಯಕರಾಗಿದ್ದಾರೆ ಮತ್ತು ತಮ್ಮ ಜೀವನದ ದಾರಿ ಕಂಡು ಕೊಂಡಿದ್ದಾರೆ, ಸಾಮನ್ಯ ಸಾಮಾನ್ಯನಾಗಿ ಉಳಿದು ಭಿನ್ನಬಿಪ್ರಾಯಗಳು ಹಾಗೆಯೇ ಉಳಿದಿವೆ, ಕಚ್ಚಾಟಗಳು ಪದೇ ಪದೇ ಪ್ರದರ್ಶನವಾಗುತ್ತಿದೆ, ನಾಯಕತ್ವ ಹೆಚ್ಚಿದಂತೆ ಸಮಸ್ಯೆಗಳು ಹೆಚ್ಚಾಗುತ್ತಿದೆ ಹೊರತು ಪರಿಹಾರ ಸಿಗುತ್ತಿಲ್ಲ, ನಾಯಕರು ನಾಯಕತ್ವದ ದಾರಿಯನ್ನು ಅರಿತು ನಡೆಯಲಿ,  ಸರಿಯಾದ ದಾರಿಯಲ್ಲಿ ನಡೆಯುತ್ತಾ ಸಮುದಾಯವನ್ನು ಸರಿ ದಾರಿಗೆ ತರಲು ತಮ್ಮ ನಡೆ ಮುಖ್ಯ ಪಾತ್ರ ಎಂದು ಅರಿಯಲಿ, ಉನ್ನತಿಯ ಪರಿಕಲ್ಪನೆ ಮಾತಿನಲ್ಲಿ ಮಾತ್ರವಲ್ಲ ನಡೆಯಲ್ಲೂ ಇರಲಿ, ತಪ್ಪಿ ಹೋದ ನಾಯಕರ ಮಧ್ಯೆ ಪ್ರಖರತೆಯ ನಾಯಕರು ಮರೆಯಾಗದಿರಲಿ . 

No comments: