ರೋಗಿಯ ಕಡೆಯವ : ಹಲೋ..
ಸಾಮಾಜಿಕ ಕಾರ್ಯಕರ್ತ : ಹಲೋ, ಯಾರು?
ರೋಗಿಯ ಕಡೆಯವ : ಇದು ನೀವು ರಕ್ತ ಕೊಡುವವರಲ್ವಾ?
ಸಾಮಾಜಿಕ ಕಾರ್ಯಕರ್ತ : ಏನು?
ರೋಗಿಯ ಕಡೆಯವ : ನಿಮ್ಮಲ್ಲಿ ರಕ್ತ ಸಿಗುತ್ತದಾ?
ಸಾಮಾಜಿಕ ಕಾರ್ಯಕರ್ತ : ಹಾ ರಕ್ತವಾ?
ರೋಗಿಯ ಕಡೆಯವ : ಹೌದು! ರಕ್ತ ಬೇಕಿತ್ತು
ಸಾಮಾಜಿಕ ಕಾರ್ಯಕರ್ತ : ಯಾರಿಗೆ?
ರೋಗಿಯ ಕಡೆಯವ : ನನ್ನ ತಾಯಿಗೆ!
ಸಾಮಾಜಿಕ ಕಾರ್ಯಕರ್ತ : ಏನಾಗಿದೆ?
ರೋಗಿಯ ಕಡೆಯವ : ನಿಶ್ಯಕ್ತಿ ಆಗಿದೆ, ಒಂದು ಬಾಟಲಿ ರಕ್ತ ಬೇಕೆಂದಿದ್ದಾರೆ ಡಾಕ್ಟರ್!
ಸಾಮಾಜಿಕ ಕಾರ್ಯಕರ್ತ : ಒಂದು ಬಾಟಲಿಯಾ!!?
ರೋಗಿಯ ಕಡೆಯವ : ಹೌದು, ಹಾಗೆ ತಮಗೆ ಫೋನಾಯಿಸಿದೆ!
ಸಾಮಾಜಿಕ ಕಾರ್ಯಕರ್ತ : ಯಾವ ಬ್ಲಡ್ ಗ್ರೂಪ್
ರೋಗಿಯ ಕಡೆಯವ : ಓ ಪೋಸಿಟಿವ್!
ಸಾಮಾಜಿಕ ಕಾರ್ಯಕರ್ತ : ತಮ್ಮ ಬಂದು ಬಳಗದ ಬಳಿ ಯಾರಲ್ಲೂ ಆ ಗ್ರೂಪಿನ ರಕ್ತ ಇಲ್ಲವೇ?
ರೋಗಿಯ ಕಡೆಯವ : ವಿಚಾರಿಸಿಲ್ಲ!
ಸಾಮಾಜಿಕ ಕಾರ್ಯಕರ್ತ : ತಮ್ಮದು ಯಾವುದು?
ರೋಗಿಯ ಕಡೆಯವ : ನನ್ನದು ಓ ಪೋಸಿಟಿವ್!!
ಸಾಮಾಜಿಕ ಕಾರ್ಯಕರ್ತ : ಮತ್ತೆ ಚಿಂತೆ ಯಾಕೆ ತಮಗೆ ಕೊಡಬಹುದಲ್ಲವೇ?
ರೋಗಿಯ ಕಡೆಯವ : ಅಲ್ಲಾ ನನಗೆ ಭಯವಾಗುತ್ತದೆ! ನಿಮ್ಮ ಬಳಿ ಸ್ಟಾಕ್ ಇದೆಯಲ್ವಾ!!
ಸಾಮಾಜಿಕ ಕಾರ್ಯಕರ್ತ : ಯಾವಾಗಲಾದರು ಕೊಟ್ಟಿದ್ದೀರ?
ರೋಗಿಯ ಕಡೆಯವ : ಇಲ್ಲ!
ಸಾಮಾಜಿಕ ಕಾರ್ಯಕರ್ತ : ನಿಮ್ಮ ತಾಯಿಗೆ ನೀವೇ ಕೊಟ್ಟರೆ ಒಳ್ಳೆಯದಲ್ಲವೇ?
ರೋಗಿಯ ಕಡೆಯವ : ನಿಮಗೆ ಕೊಡಲಿಕ್ಕೆ ಆಗುತ್ತಾ ಇಲ್ವಾ ಹೇಳಿ!
ಸಾಮಾಜಿಕ ಕಾರ್ಯಕರ್ತ : ಕೊಡುವ ಪ್ರಶ್ನೆ ಅಲ್ಲಾ ಸಾರ್! ಒಂದೇ ಬಾಟಲಿ ರಕ್ತ ಬೇಕಾಗಿರೋದು, ಅದೂ ಅಲ್ಲದೆ ನಿಮ್ಮ ಬಳಿಯೇ ಆ ಬ್ಲಡ್ ಗ್ರೂಪ್ ಇದೆ, ಎಂದೆ ಅಷ್ಟೇ!
ರೋಗಿಯ ಕಡೆಯವ : ನನಗೆ ನಿಮ್ಮ ಪಾಠ ಬೇಡ ನೀವು ಅಷ್ಟು ಕಲೆಕ್ಟ್ ಮಾಡಿದ್ದೀವಿ, ಇಷ್ಟು ಕಲೆಕ್ಟ್ ಮಾಡಿದ್ದೀವಿ ಅಂತೀರಲ್ಲ! ನನಗೆ ಒಂದು ಬಾಟಲಿ ಕೊಡಲಿಕ್ಕೆ ಅಗುದಿಲ್ವಾ ನಿಮಗೆ?
ಸಾಮಾಜಿಕ ಕಾರ್ಯಕರ್ತ : ನಾನು ಮೊದಲೇ ಹೇಳಿದ್ದೇನೆ, ಕೊಡುವ ಪ್ರಶ್ನೆ ಅಲ್ಲ! ಸರಿ ತಾಯಿಗೆ ರಕ್ತ ಕೊಡಲಾಗದ ಮಗ ನೀವೆಂದಾದಲ್ಲಿ ಬನ್ನಿ, ಒಂದಲ್ಲ ಹತ್ತು ಬಾಟಲಿ ಕೊಡುತ್ತೇನೆ, ಅಭ್ಯಂತರವಿಲ್ಲ!
ರೋಗಿಯ ಕಡೆಯವ : ಸರಿ ಬರುತ್ತೇನೆ!!! ಫ್ರೀಯಾಗಿ ಸಿಗುತ್ತೆ ಎಂದು ಹೇಳಿದರೆ! ಕೆಲವರು ತಮ್ಮ ಬಳಿ ಹೆಚ್ಚುವರಿ ಹೃದಯ ಇದೆಯಾ ಎಂದು ಕೇಳಿ, ಕೊಂಡು ಹೋಗಿ ಮನೆಯಲ್ಲಿ ಇಟ್ಟುಕೊಂಡರೆ ಆಶ್ಚರ್ಯ ಪಡಬೇಕಾಗಿಲ್ಲ!! ನಮ್ಮ ಜನ ಹಾಗೇನೆ ಅವರನ್ನು ಬದಲಿಸಿದಷ್ಟು ಅವರು ಬದಲಾಗಿದ್ದಾರೆ, ತಾಯಿಗೆ ರಕ್ತ ಕೊಡಲು ಹಿಂಜರಿಯುವ ಮಗ ಇದ್ದಾನೆ ಎಂಬುವುದು ಕಲ್ಪನೆಯಲ್ಲ ವಾಸ್ತವ! ನಮ್ಮ ದೇಶದಲ್ಲಿ ಹಲವು ಸಂಘ ಸಂಸ್ಥೆಗಳು ಬಹಳಷ್ಟು ಪರಿಶ್ರಮದಿಂದ ರಕ್ತವನ್ನು ಕಲೆಕ್ಟ್ ಮಾಡಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನೆರವಾಗಲು ಪ್ರಯತ್ನಿಸುತ್ತಿದೆ, ಇದರ ಹಿಂದೆ ಪರಿಶ್ರಮ ಪಟ್ಟ ಎಲ್ಲರನ್ನು ನೆನಪಿಸಿಕೊಲ್ಲಬೇಕಾಗಿದೆ. ಹಲವು ಬಾರಿ ಹತ್ತಾರು ಬಾಟಲಿ ರಕ್ತಕ್ಕಾಗಿ, ಅದೂ ಕೂಡ ತುಂಬಾ ಕಡಿಮೆಯಾಗಿ ಇರುವ ಕೆಲವು ಬ್ಲಡ್ ಗ್ರೂಪ್ ಗಳಿಗಾಗಿ ಹಲವು ದಿನ ಹುಡುಕಾಡಿದರೂ ಸಿಗದ ಸಂದರ್ಭ ಇರುತ್ತದೆ, ಅಂತಹ ಸಂದರ್ಭದಲ್ಲಿ ಇಂತಹ ಸಂಘ ಸಂಸ್ಥೆಗಳು ದಾಸ್ತಾನಿಟ್ಟ ರಕ್ತ ನೆರವಿಗೆ ಬರುತ್ತದೆ.

ತುರ್ತು ಸಂದರ್ಭದಲ್ಲಿ ಸಂಘ ಸಂಸ್ಥೆಗಳು ಕೂಡಾ ತಮ್ಮ ಶಕ್ತಿಗೆ ಅನುಸಾರವಾಗಿ ರಕ್ತವನ್ನು ಹೊಂದಿಸಲು ಪ್ರಯತ್ನಿಸುತ್ತದೆ. ನಮ್ಮಲ್ಲಿ ರಕ್ತ ದಾನ ಮಾಡುವವರಿಗಿಂತ ರಕ್ತಾ ಇದೆಯಾ ಎಂದು ಫೋನಾಯಿಸುವವರು ಜಾಸ್ತಿ! ಅದು ಕೂಡಾ ಒಮ್ಮೆಯೂ ರಕ್ತ ನೀಡುವ ಗೋಜಿಗೆ ಹೋಗದವರು ಮತ್ತು ತಮ್ಮವರಿಗಾಗಿಯು ರಕ್ತ ನೀಡಲು ಮುಂದೆ ಬರದವರು. ಅಷ್ಟು ಸುಲಭದಲ್ಲಿ ರಕ್ತ ಸಿಗುತ್ತಿದ್ದಲ್ಲಿ ಸಂಘ ಸಂಸ್ಥೆಗಳು ಇಷ್ಟೆಲ್ಲಾ ಕಷ್ಟ ಪಟ್ಟು ರಕ್ತದ ಮಹತ್ವದ ಬಗ್ಗೆ ಅರಿವು ಮೂಡಿಸಿ ದಾನಿಗಳಿಂದ ರಕ್ತ ಪಡೆಯುವ ಅಗತ್ಯ ವಿರಲಿಲ್ಲ. ಸಂಘ ಸಂಸ್ಥೆಗಳ ಬಳಿ ರಕ್ತ ಇರಬಹುದು, ಆದರೆ ಅದು ಸಣ್ಣ ಪುಟ್ಟ ವಿಚಾರಗಳಿಗೆ, ತಾವೇ ನೀಡಲು ಸಾಧ್ಯ ಇರುವವವರಿಗೆ ನೆರವಾಗಳಲ್ಲ.
ಎಲ್ಲಾ ಸಮಸ್ಯೆಗಳಿಗೆ ನೀಡಲು ಸಾದ್ಯವಾಗಿರುವಷ್ಟು ರಕ್ತದ ದಾಸ್ತಾನು ಯಾವ ಸಂಘ ಸಂಸ್ಥೆಯ ಬಳಿಯೂ ಇಲ್ಲ, ತುರ್ತು ಸಂದರ್ಭಗಳಿಗೆ ಒದಗಿಸಲು ಸಾದ್ಯವಾಗುವಷ್ಟೇ ರಕ್ತ ಇರುತ್ತದೆ, ಬೇಡಿಕೆ ಹೆಚ್ಚಾಗಿದೆ ಆದರೆ ಬೇಡಿಕಯಂತೆ ರಕ್ತ ಪೂರೈಸಲು ಸಾಧ್ಯವಾಗುತ್ತಿಲ್ಲ, ದಾನಿಗಳ ಕೊರತೆಯಿದೆ, ಹಲವು ರಕ್ತದಾನ ಶಿಬಿರಗಳು ಬಿಕೋ ಎಂದಿದ್ದು ಇದೆ! ಇಲ್ಲಿ ಅರ್ಥ ಮಾಡಿಕೊಳ್ಳಬೇಕಾದ ವಿಚಾರ, ಇಂತಹ ರಕ್ತ ಇಷ್ಟು ಬೇಕು ಎಂದು ಡಾಕ್ಟರ ತಿಳಿಸಿದಾಗ ನಾವು ಮೊದಲು ನಮ್ಮ ರಕ್ತ ಹೊಂದುತ್ತದೆಯೇ ಎಂದು ನೋಡಬೇಕು, ಇಲ್ಲವೆಂದಾದಲ್ಲಿ ನಮ್ಮ ಬಂದು ಬಳಗದ ಬಳಿ ಮತ್ತು ಸ್ನೇಹಿತರ ಬಳಿ ವಿಚಾರಿಸಬೇಕು ಹಾಗೂ ಅಗತ್ಯವಿದ್ದಲ್ಲ್ಲಿ ಸಂಘ ಸಂಸ್ಥೆಗಳಿಗೆ ಮೊರೆ ಹೋಗಬೇಕು, ಹೀಗಾದಲ್ಲಿ ಮಾತ್ರವೇ ಸಂಘ ಸಂಸ್ಥೆಗಳ ರಕ್ತ ತುರ್ತು ಸಂದರ್ಭಗಳಿಗೆ ನೆರವಾಗಲು ಸಾಧ್ಯ, ಅದನ್ನು ಬಿಟ್ಟು ಅವರ ಬಳಿ ಸ್ಟಾಕ್ ಇದೆ, ಕೇಳುವ ಕೊಡುತ್ತಾರೆ ಎಂದು ಯೋಚಿಸಿದರೆ ಅದು ಯಾವ ಅರ್ಥದಲ್ಲಿ ಸರೀ ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕು. ನಾವುಗಳೇ ನಮ್ಮವರಿಗೆ ನೆರವಾದರೆ ರಕ್ತ ಎನ್ನುವ ಅಮೂಲ್ಯ ವಸ್ತು ಮಾಫಿಯಾವಾಗುವುದನ್ನು ಕೂಡ ಕಡಿಮೆಗೊಳಿಸಬಹುದು.
ಅಗತ್ಯ ಬಿದ್ದಾಗ ರಕ್ತಕ್ಕಾಗಿ ಖಂಡಿತಾ ಸಂಘ ಸಂಸ್ಥೆಗಳ ನೆರವು ಯಾಚಿಸಬೇಕು, ಅದು ಅಷ್ಟೊಂದು ಪ್ರಮಾಣದಲ್ಲಿ ರಕ್ತ ಬೇಕಾದಾಗ ಮತ್ತು ಬೇಕಾದ ಗ್ರೂಪಿನ ರಕ್ತ ಸಿಗದೇ ಇರುವ ಸಂದರ್ಭವಾಗಿರಬೇಕು, ತುರ್ತು ಸಂದರ್ಭಗಳಿಗೆ ಒದಗುವ ಸಲುವಾಗಿಯೇ ನಾವು ರಕ್ತದಾನ ಮಾಡುತ್ತಿರಬೇಕು, ಕನಿಷ್ಠ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದಾದರೂ ಗರಿಷ್ಟ ಆರು ತಿಂಗಳಿಗೊಮ್ಮೆಯಾದರೂ ರಕ್ತವನ್ನು ದಾನವಾಗಿ ನೀಡುವ ಪರಿಪಾಟವಿಟ್ಟುಕೊಲ್ಲಬೇಕು, ಹೀಗಾದಲ್ಲಿ ಅದು ಹೆಚ್ಚೆಚ್ಚು ತುರ್ತು ಸಂದರ್ಭಗಳಲ್ಲಿ ಬಳಕೆಯಾಗಲು ಸಾದ್ಯ. ಈಗ ಹಲವು ಸಂಸ್ಥೆಗಳು ರಕ್ತವನ್ನು ಶಿಬಿರಗಳ ಮೂಲಕ ಕಲೆಕ್ಟ್ ಮಾಡುತ್ತಿವೆಯಾದರು ಅದನ್ನು ವರ್ಷ ಪೂರ್ತಿ ವಿತರಿಸಲು ಮತ್ತು ತುರ್ತು ಚಿಕಿತ್ಸೆಗೆ ಬಳಕೆಯಾಗಲು ಬಹಳಷ್ಟು ಜಾಗರೂಕತೆಯಿಂದ ರೋಗಿಗಳಿಗೆ ನೀಡುತ್ತಿದೆ.

ಬೇಕಾದಷ್ಟು ರಕ್ತ ದಾನಿಗಳು ಸಿಗುತ್ತಿಲ್ಲ, ಆದರೆ ಬೇಡಿಕೆ ಜಾಸ್ತೀ ಇದೆ, ಹಾಗಾಗಿ ಹೆಚ್ಚು ರಕ್ತದಾನಕ್ಕೆ ಪ್ರೋತ್ಸಾಹ ನೀಡಬೇಕು, ಯುವಕರು ಈ ನಿಟ್ಟಿನಲ್ಲಿ ಮುಂದೆ ಬರಬೇಕಾಗಿದೆ, ಈಗೀಗ ಮಹಿಳೆಯರೂ ಕೂಡ ಬಹಳಷ್ಟು ಉತ್ಸುಕತೆಯಿಂದ ರಕ್ತ ನೀಡಲು ಮುಂದಾಗುತಿದ್ದರೆ, ಎಲ್ಲರೂ ಈ ನಿಟ್ಟಿನಲ್ಲಿ ರಕ್ತ ದಾನ ಶಿಬಿರಗಳನ್ನು ಏರ್ಪಡಿಸುವ ಸಂಘ ಸಂಸ್ಥೆಗಳೊಂದಿಗೆ ಕೈ ಜೋಡಿಸಬೇಕು, ಇತ್ತೀಚೆಗೆ ಮಂಗಳೂರಿನ ಮದುವೆ ಕಾರ್ಯಕ್ರಮವೊಂದರಲ್ಲಿ ರಕ್ತದಾನ ಶಿಬಿರ ಏರ್ಪಡಿಸುವ ಮೊಲಕ ವಿಶಿಷ್ಟ ರೀತಿಯಲ್ಲಿ ರಕ್ತವನ್ನು ಸಂಗ್ರಹಿಸುವ ಯೋಜನೆಗೆ ಚಾಲನೆ ನೀಡಲಾಗಿದೆ, ತುರ್ತು ಪರಿಸ್ಥಿತಿಯಲ್ಲಿ ಬೇಕಾಗುವ ರಕ್ತವನ್ನು ಸಂಗ್ರಹಿಸುವ ಅದಕ್ಕಾಗಿ ಜನರಲ್ಲಿ ಅರಿವು ಮೂಡಿಸುವಲ್ಲಿ ವಿವಿಧ ಸಂಘ ಸಂಸ್ಥೆಗಳು ವಿವಿದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿ, ಎಲ್ಲರೂ ರಕ್ತದಾನಿಗಳಾಗೋಣ, ಸಾಯುತ್ತಿರುವ ಜೀವಗಳಿಗೆ ಆಸರೆಯಾಗೋಣ .

1 comment:
ಇಷ್ಟ ಆಯಿತು ನನಗೆ...
Post a Comment