Friday, July 25, 2014

ಪ್ರತಿರೋಧವಿಲ್ಲದ ಭೂಮಿಯಾಗದಿರಲಿ ಭಾರತ!! (ಲೇಖನ)




ಕನಸುಗಳು ಅತಿಯಾದರೆ ಏನಾಗಬಹುದು ಎನ್ನುವುದಕ್ಕೆ ನಮ್ಮ ಮುಂದೆ ಹಲವರು ಉದಾಹರಣೆಯಾಗಿ ಸದ್ಯಕ್ಕೆ ಸಪ್ಪಗಾಗಿದ್ದಾರೆ, ಎರಡೇ ತಿಂಗಳಲ್ಲಿ ಭಾರತದ ವ್ಯವಸ್ಥೆಯನ್ನೇ ಬದಲಾಯಿಸುತ್ತೇವೆ ಎಂದು ನಂಬಿದ್ದವರಿಗೆ ಅದು ಆಗುವ ಕೆಲಸ ಅಲ್ಲ ಎಂದು ತುಂಬಾ ಲೇಟಾಗಿ ಒಪ್ಪಿಕೊಳ್ಳುತ್ತಿದ್ದಾರೆ, ಬುದ್ದಿ ಇರುವ ಪ್ರತಿಯೊಬ್ಬನಿಗೂ ಕೂಡಾ ಈ ವಿಚಾರ ಮುಂಚೆಯೇ ತಿಳಿದಿತ್ತು ಆದರೆ ಬುದ್ದಿ ಇಲ್ಲದಂತೆ ವರ್ತಿಸಿದ ಕೆಲವರಿಗೆ ಸ್ವಲ್ಪ ಸ್ವಲ್ಪಾನೆ ಬುದ್ದಿ ಬೆಳೆಯುತ್ತಿದೆ.

 ಈಗೀನ ಸರಕಾರದ ಬದಲಾವಣೆಯನ್ನು ನಂಬಿ ಕುಳಿತಿದ್ದವರು ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ, ಅವರು ಬರಲಿ ಎಲ್ಲವೂ ಬದಲಾಗುತ್ತೆ ಮತ್ತು ಅದು ಬೇಗನೆ ಬದಲಾಗುತೆ ಎನ್ನುವವರು ಎರಡೇ ತಿಂಗಳಲ್ಲಿ ರಾಗ ಬದಲಾಯಿಸುತ್ತಿದ್ದಾರೆ, ಮೊದಿಯವರ ಸರಕಾರ! ನಂಬಿದ್ದವರಿಗೆ ಆಘಾತದ ಮೇಲೆ ಆಘಾತ ನೀಡುತ್ತಿದೆ, ಇಲ್ಲಿ ಪ್ರಶ್ನೆ ನಮ್ಮ ಮೋದಿಯವರು ಪ್ರಧಾನಿ ಆದ ನಂತರ ಏನು ಬದಲಾಯಿಸಿದ್ದಾರೆ? ಸರಕಾರ ಬದಲಾಗಿದೆ ಅಷ್ಟೇ ನನ್ನ ಮತ್ತು ನಿಮ್ಮ ಸಮಸ್ಯೆಯಲ್ಲ! ಅದು ಮತ್ತಷ್ಟು ಬಿಗಡಾಯಿಸಿದೆ.
  
ಎರಡೇ ತಿಂಗಳಲ್ಲಿ ಕೆಲವರಿಗೆ ಮೋದಿ ಸರಕಾರದ ಮೇಲೆ ಇದ್ದ ನಿರೀಕ್ಷೆಗಳು ಹುಸಿಯಾಗತೊಡಗಿದೆ, ಏರಿಕೆಯ ಮೇಲೆ ಹೇರಿಕೆಯಾಗಿ ಬೆಲೆಗಳು ಗಗನೆಕ್ಕೆರುತ್ತಿದೆ, ಸ್ವಿಸ್ ಬ್ಯಾಂಕ್ ನ ನೋಟಿನ ಕಂತೆಗಳ ಗೋಣಿ ಚೀಲಗಳ ಕನಸು ಕಾಣುತ್ತಿದ್ದವರಿಗೆ  ಆ ಬ್ಯಾಂಕಿನಲ್ಲಿ ಭಾರತದ ಅಕೌಂಟ್ ಗಳೇ ಇಲ್ಲ ಎಂದು ಹೇಳಿ ಬೆಚ್ಚಿ ಬೀಳಿಸಿ ಕನಸುಗಳಿಗೆ ಲಗಾಮು ಹಾಕಿದ್ದಾರೆ, ಇಲ್ಲಿ ಗೋಣಿ ಹಿಡಿದುಕೊಂಡು ಸ್ವಿಸ್ ಬ್ಯಾಂಕಿನ ಹಣ ಹಂಚಲು ಸಿದ್ದರಾಗಿದ್ದವರು ಆ ಗೋಣಿ ಚೀಲಗಳನ್ನು ಮುಖಕ್ಕೆ ಹಾಕಿಕೊಂಡು ತಿರುಗಾಡುವ ಪರಿಸ್ಥಿತಿಯಲ್ಲಿದ್ದಾರೆ, ಮದ್ಯಮ ವರ್ಗದವರು ಹಾಯಾಗಿ ನಿದ್ದೆ ಮಾಡುತ್ತಾ ಚಲಿಸುತಿದ್ದ ರೈಲಿಗೆ ನಮ್ಮವರೇ ಆದ ನಗುಮುಖದ ರೈಲ್ವೆ ಮಂತ್ರಿ ಕಲ್ಲು ಹಾಕಿ ಇನ್ನೆಂದು ನಗದಂತೆ ಮಾಡಿದ್ದಾರೆ, ಪೆಟ್ರೋಲ್ ಡೀಸೆಲ್ ಬೆಲೆ ಆಗಾಗ ಏರಿಕೆಯಾಗುತ್ತಿದೆ ಮತ್ತು ಏರುತ್ತಲಿದೆ, ಹೀಗಾಗಿ ಈ ಎಲ್ಲ ಬೆಳವಣಿಗೆಗಳು ಹಿಂದಿನ ಸರಕಾರದ ಕೆಲಸಗಳಿಗೆ ವಿರೋಧ ವ್ಯಕ್ತಪಡಿಸುತ್ತಿದ್ದವರ ಕೈ ಕಾಲು ಕಟ್ಟಿ ಹಾಕಿದಂತೆ ಚಡಪಡಿಸುತ್ತಿದ್ದಾರೆ ಮತ್ತು ಸರಕಾರ ನಡೆಸುವುದು ಅಷ್ಟು ಸುಲಭವಲ್ಲ ಎಂದು ತಮ್ಮಲ್ಲಿಯೇ ಮಾತನಾಡಿಕೊಳ್ಳುತ್ತಿದ್ದಾರೆ.

 ತಡವಾಗಿಯಾದರೂ ದೇಶ ನಡೆಸುವ ಸತ್ಯದ ಕಷ್ಟ ಮತ್ತು ಮತ್ತು ಅದಕ್ಕೆ ಬೇಕಾಗುವ ಸಮಯದ ಅಂತರ ಅರಿವಾಗುತ್ತಿದೆ, ಹಾಳೆಯಲ್ಲಿ ಬರೆದು ಕೊಟ್ಟ ಭಾಷಣವನ್ನು ಓದಿದಷ್ಟು ಸುಲಭವಲ್ಲ ದೇಶವನ್ನು ನಡೆಸುವುದು ಎಂದು ಸಾಬೀತಾಗುತ್ತಿದೆ, ಅಮಿತ್ ಷಾ ರ ಪರ ವಾದಿಸಿದ್ದ ವಕೀಲರೊಬ್ಬರನ್ನು ನ್ಯಾಯ ಮೊರ್ತಿಯಾಗಿ ಘೋಷಿಸಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಮಾಡಬೇಕಾದ ಕೆಲಸಕ್ಕೆ ಚಾಲನೆ ನೀಡಲಾಗಿದೆ, ಅಲ್ಲಲ್ಲಿ ರಾಜ್ಯಪಾಲರ ಎತ್ತಂಗಡಿ ಕೂಡ ಆರಂಬವಾಗಿದೆ, ಮಂಡಿಸಿದ ಬಜೆಟ್ ದೇಶದ ಹೊಸ ಸರಕಾರ ಕಾರ್ಪೋರೇಟರ್ ವ್ಯಕ್ತಿಗಳಿಗೆ ಬಲ ತಂದು ಕೊಟ್ಟಿದೆ, ಈ ಸರಕಾರ ದೇಶಕ್ಕೆ ಮಾರಕ ಎಂದು ಬಣ್ಣಿಸಲಾಗಿತ್ತು ಆದರೆ ಸಧ್ಯದ ನಡೆ ಮುಂದಿನ ದಿನಗಳ ಭೀಕರತೆಯನ್ನು ಎತ್ತಿ ತೋರಿಸುತ್ತಿದೆ, ನಾವು ಕಾರ್ಪೊರೇಟರ್ ಗಳ ಪರ ಎನ್ನುವುದನ್ನು ಅಲ್ಲಲ್ಲಿ ಒತ್ತಿ ಹೇಳಲಾಗುತ್ತಿದೆ, ರೈಲು ಮಂತ್ರಿಯವರು ಬಿಟ್ಟ ರೈಲುಗಳಲ್ಲಿ ತವರು ನಾಡಿಗೆ ರೇಲು ಬಿಟ್ಟು ಸಂತೋಷ ಪಡಿಸಿದ್ದಾರೆ.


ಆದರೆ  ಇದೆಲ್ಲದಕ್ಕಿಂತ ಹೆಚ್ಚಿನದಾಗಿ ನಾವೊಂದು ಅಂಶವನ್ನು ಮರೆತುಬಿಟ್ಟಿದ್ದೇವೆ, ಇವರ ರೇಲುಗಳನ್ನು ಕೇಳಿಕೊಂಡು ನಾವು ವಾಸ್ತವಾವನ್ನು ಮರೆತಿದ್ದೇವೆ, ಇಲ್ಲಿ ಒಂದು ಹೋರಾಟದ ವ್ಯವಸ್ಥೆ ಬಲವಾಗಿ ಕ್ಷೀಣಿಸಿದೆ, ಟೀಕಿಸಬೇಕಾದ ವಿಚಾರಗಳಿಗೂ ಇಲ್ಲಿ ಟೀಕೆಗಳು ವ್ಯಕ್ತವಾಗುತ್ತಿಲ್ಲ, ಸರಕಾರದ ವಿರುದ್ದ, ಅದರ ನಡೆಯ ವಿರುದ್ದದ, ಧೋರಣೆಯ ವಿರುದ್ದ ಹೋರಾಟಗಾರರು ಎನಿಸಿಕೊಂಡವರು ಮಾತನಾಡುತ್ತಿಲ್ಲ, ಹೋರಾಟಗಳು ತಣ್ಣಗಾಗಿವೆ, ಈ ಹೋರಾಟಗಳು ಮೆಜಾರಿಟಿ ಇರುವ ಸರಕಾರದ ಮುಂದೆ ಲಾಭವಿಲ್ಲದ ಕೆಲಸವಾಗಬಹುದು ಎನ್ನುವ ಚಿಂತನೆಯಾಗಿರಬಹುದು, ಮೋದಿಯವರ ಸರಕಾರದ ಮೇಲಿರುವ ಕೋಪದಿಂದ ಯಾವುದು ಬೇಡ ಎಂದು ಹೇಳಿ ಚಿಂತಕರು, ಪ್ರಗತಿಪರರು, ಹೋರಾಟಗಾರರು ಸುಮ್ಮನೆ ಕುಳಿತು ಕೊಂಡ ದ್ದಾಗಿರಬಹುದು ಆದರೆ ಈ ನಡೆ ನಮ್ಮನ್ನು ನಾವೇ ಕಾರ್ಪೋರೇಟರುಗಳಿಗೆ ಮಾರಿಕೊಳ್ಳುವ ನಡೆ.

 ನಾವೊಂದು ಮಾತು ಮರೆಯಬಾರದು ಈ ನಮ್ಮ ಮೌನದ ನಡೆ ಈ ದೇಶದ ಮುಂದಿನ ಪೀಳಿಗೆಗೆ ಮಾರಕ, ಹೀಗೆಯೇ ಸುಮ್ಮನೆ ಕುಳಿತರೆ ಹೋರಾಟಗಳ ಈ  ಭಾರತ ಭೂಮಿ ಕೆಲವೇ ವರುಷಗಳಲ್ಲಿ ಎಲ್ಲವನ್ನು ತನ್ನ ಮೇಲೆ ಹೇರಿಸಲ್ಪಡುವ ಭೂಮಿಯಾಗಬಹುದು, ಹೋರಾಟಗಳು ಇಲ್ಲಿ ಮರೇಚಿಕೆಯಾಗದಿರಲಿ, ಯಾವುದು ಸರಿ ಎಂದು ಕಾಣಿಸುವುದಿಲ್ಲವೋ ಅದನ್ನು ಪ್ರತಿರೋಧಿಸಲೇಬೇಕು, ಯಾವುದು ಸರಿಯೋ ಅದನ್ನು ಒಪ್ಪಿಕೊಂಡು ಸರಕಾರಕ್ಕೆ ಸಾಥ್ ನೀಡಬೇಕು, ಆದರೆ ಹಾಗೆ ಸಂಭವಿಸದು. ಹೋರಾಟಗಳು ಕ್ಷೀಣಿಸಿದರೆ ಈ ಭೂಮಿ ಕಾರ್ಪೋರಟರ್ ಗಳ ಕೈ ಪಾಲಾಗಬಹುದು, ಏನು ಪ್ರಶ್ನಿಸದ ನಮ್ಮ ನಡೆ ಮುಂದಿನ ತಲೆಮಾರಿಗೆ ನಿದ್ದೆಯಿಲ್ಲದ ದಿನಗಳಾಗಬಹುದು. ಎಚ್ಚರವಿರಲಿ!!

Tuesday, July 15, 2014

ಮಾನವೀಯತೆ ಮರೆತ ಎಲ್ಲ ಮಾಧ್ಯಮಗಳಿಗೆ ಧಿಕ್ಕಾರ..

ಹಲವು ಕಟ್ಟಳೆಗಳನ್ನಿಟ್ಟು ನಾಸರ್ ಮದನಿಯವರನ್ನು ನ್ಯಾಯಾಲಯ ನ್ಯಾಯಬದ್ದವಾಗಿ ಜಾಮೀನು ನೀಡಿ ಬಿಡುಗಡೆಗೊಳಿಸಿದೆ!! ದುರಾದೃಷ್ಟವಸಾತ್ ಕೆಲವು ಬ್ಲಾ ಬ್ಲಾ ನ್ಯೂಸ್ ಚಾನೆಲ್ ಗಳು ಅದೆನೋ ಮಹಾಪಾಪ ಎಂದೆನಿಸುವಂತೆ ವರ್ತಿಸುತ್ತಿದೆ ಮತ್ತು ಗಂಟೆ ಗಟ್ಟಲೆ ಅದರ ಬಗ್ಗೆ ಚರ್ಚಿಸಿ ಯಾರಿಗೂ ತಿಳಿಯದ ವಿಚಾರಗಳು ತಮಗೆ ಮಾತ್ರ ತಿಳಿದಿವೆ ಎಂದು ಬಿಂಬಿಸಿ "ಟಿ ಆರ್ ಪಿ" ಹೆಚ್ಚಿಸಿ ಕೊಲ್ಲುವ ಮಹದಾಸೆಯಲ್ಲಿದೆ, ಇದರ ಮದ್ಯೆ ಇಸ್ರೇಲಿನ ನೀಚ ಬುದ್ದಿಯನ್ನು ಮರೆತಿದೆ, ಮುದ್ದು ಮಕ್ಕಳು ಅಮಾನುಷವಾಗಿ ಕೊಲ್ಲಲ್ಪಡುವ ದೃಶ್ಯಗಳು ಇವರ ಕಣ್ಣಿಗೆ ಬೀಳಲೇ ಇಲ್ಲ, ಅದು ತಪ್ಪು ಎಂದೆನಿಸಲೇ ಇಲ್ಲ. ಇರಾಕ್ ನಲ್ಲಿ ನಡೆಯುತ್ತಿರುವ ರಕ್ತಪಾತ ತಪ್ಪು ಎಂದು ತಿಳಿದ ಇವರಿಗೆ ಗಾಝಾದಲ್ಲಿ ಕ್ರೂರಿಗಳಾದ ಇಸ್ರೇಲಿಗಳು ಹರಿಸಿದ ರಕ್ತ ಮಾನವ ರಕ್ತ ಎಂದು ಭಾಸವಾಗಳಿಲ್ಲ,ಉಹಾಪೋಹಗಳನ್ನು ವೈಭವೀಕರಿಸುವ ಇಸ್ರೇಲಿ ಚೇಳಾಗಳಿವರು. ಇವರಿಗೆಲ್ಲ ಜನರಿಗೆ ಸತ್ಯ ತಲುಪಿಸುವ ಹಂಬಲವಿಲ್ಲ, ಕೆಲವರು ಹಾಕುವ ಬಿಸ್ಕತ್ತು ಗಳನ್ನು ಹೆಕ್ಕಿ, ಸಾಧ್ಯವಾಗದಿದ್ದಲ್ಲಿ ನೆಕ್ಕಿ ತಿನ್ನುವ ಕೊಟದವರು ಎನ್ನುವ ಮಟ್ಟಿಗೆ ಪತ್ರಿಕಾ ಧರ್ಮವನ್ನು ಮರೆತು ಬಿಟ್ಟಿದ್ದಾರೆ.
ಬಿಸ್ಕತ್ತು ಹಾಕಿದವರಿಗೆ ವಿಶ್ವಾಸ ತೊರಿಸುವ ಭರಾಟೆಯಲ್ಲಿ ಮಾನವೀಯತೆ ಮರೆತ ಎಲ್ಲ ಮಾಧ್ಯಮಗಳಿಗೆ ಧಿಕ್ಕಾರ.

Saturday, July 12, 2014

ಮರೆಯಾಗಿ ಮತ್ತೆ ಮತ್ತೆ ನೆನಪಾಗುವ ಗಾಝ (ಲೇಖನ)



ಕಣ್ಣೆದುರಿಗೆ ನಮ್ಮ ಆತ್ಮೀಯನೊಬ್ಬ ಮರಣ ಹೊಂದಿ ನಂತರ ಆತನನ್ನು ಗೋರಿಯಲ್ಲಿ ಮಲಗಿಸಿದ ಮೇಲೆ ಭಿನ್ನ ಭಿನ್ನವಾಗಿ ಮರುಕಪಡುವರವರು ನಾವುಗಳು, ಹೀಗಿರುವಾಗ ಮನುಷ್ಯತ್ವದ ಅರಿವಿಲ್ಲದವನೊಬ್ಬ ನಮ್ಮ ಬಳಿ ಬಂದು ನೀವು ಕಾಲಿಡದ ಒಂದು ದೇಶದ ಮೇಲೆ ಬೀಳುವ ಬಾಂಬುಗಳಿಗೆ ನೀವೇಕೆ ಮರುಕಪಡುತ್ತೀರಿ ಎಂದು ಕೇಳಿದರೆ ನಮಗೆ ಉತ್ತರ ನೀಡಲು ಸಾಧ್ಯವೇ? ನಮ್ಮ ಮಸೀದಿಯಲ್ಲಿ ನಮ್ಮವನಿಗೆ ಹೊಡೆಸುವವರು ನಾವುಗಳು, ನಮ್ಮದೇ ಕಾರ್ಯಕ್ರಮಗಳನ್ನು ಬಲವಂತದಿಂದ ನಿಲ್ಲಿಸುವವರು ನಾವುಗಳು, ನಮ್ಮದೇ ಪತ್ರಿಕೆಗಳಿಗೆ ಬೆಂಕಿ ಹಾಕುವವರು ನಾವುಗಳು, ಅದೆಷ್ಟೋ ಕಾಲ ನಮ್ಮವರ ಬಳಿಯೇ ತಲೆ ಎತ್ತಿ ಮಾತನಾಡಲಾಗದಷ್ಟು ಅಗಾಧವಾದ ಕೊಪವಿಟ್ಟುಕೊಂಡವರು ನಾವುಗಳು, ನಮ್ಮ ನೆರೆ ಹೊರೆಯವರನ್ನೇ ನಮ್ಮದಾಗಿಸಿಕೂಲ್ಲದ ನಾವುಗಳು ಗಾಝಾದ ಮೇಲೆ ಬಿದ್ದ ಬಾಂಬುಗಳ ಬಗ್ಗೆ ಮರುಕಪಡುವಾಗ ಯಾರಾದರು ಅಣಕಿಸಿದರೆ
ಉತ್ತರ ನೀಡಲು ನಾವು ಸಮರ್ಥರೆ?  ನಮ್ಮೊಳಗೇ ನ್ಯಾಯ ನೀಡಲು ಸಾಧ್ಯವಾಗದ ನಮಗೆ ಅಮಾಯಕರು ಬಲಿಯಾಗುತ್ತಿರುವ ಪ್ಯಾಲೆಸ್ತೀನಿನ ಪರ ದ್ವನಿ ಎತ್ತಲು ಸಾಧ್ಯವೇ?  ಒಂದು ವೇಳೆ ದ್ವನಿ ಎತ್ತಿದಲ್ಲಿ ನಮ್ಮ ದ್ವನಿ ಎತ್ತುವ ಶೈಲಿ ಹೇಗಿರಬಹುದು? ಅಲ್ಲಿ ಗಝಾಕ್ಕಿಂತ ನಾವು ನಾವು ಎನ್ನುವ ಪ್ರತಿಷ್ಟೆಯ ಪರಾಕಾಷ್ಟೇ ಹೆಚ್ಚಿರಲಿಕ್ಕಿಲ್ಲವೇ?


ಗಾಝಾದ ಮೇಲೆ ಇಸ್ರೇಲ್ ದಾಳಿ ಮಾಡುತ್ತಿರುವುದು ಇಂದು ಹೊಸದೇನಲ್ಲ, ಮಾಧ್ಯಮಗಳು ಸತ್ಯವನ್ನು ಬಚ್ಚಿಟ್ಟದ್ದು ಕೂಡಾ ಹೊಸತಲ್ಲ, ಪ್ಯಾಲೆಸ್ತೀನಿಯರ ಮೇಲೆ ನಿರಂತರ ದಾಳಿ ನಡೆಯುತ್ತಲೇ ಇದೆ! ಅಮಾಯಕ ಮಕ್ಕಳು, ಮಹಿಳೆಯರು ಮುಗ್ದ ಯುವಕರು, ತಂದೆಯಂದಿರು ಅಲ್ಲಿ ಕ್ರೂರವಾಗಿ ಬಲಿಯಾಗುತ್ತಲೇ ಇದ್ದಾರೆ. ಒಂದೆರಡು ನೈಜ ಚಿತ್ರಗಳು ಹರಿದಾಡಿದಾಗ ನಾವು ಕೂಡ ಅದನ್ನು ಹರಿದಾಡಿಸಿ ಗಾಝಾ ಎಂದು ಬೋಬ್ಬಿಡುತ್ತೇವೆ ಆದರೆ ಒಂದೆರಡು ದಿನಗಳಲ್ಲಿ ನಾವು ಗಾಝಾವನ್ನು ಮರೆತು ಬಿಡುತ್ತೇವೆ! ಯಾಕೆಂದರೆ ಅಷ್ಟೊತ್ತಿಗೆ ನಾವು ನಾವುಗಳಾಗಿ ಬಿಡುತ್ತೇವೆ ಮತ್ತು ಗಾಝಾ ಅಲ್ಲಿ ಮರೆಯಾಗುತ್ತದೆ, ಗಾಝಾದ ಮಕ್ಕಳ ನೋವುಗಳಿಗೆ ಪರಿಹಾರ ಸಿಕ್ಕಿರುವುದಿಲ್ಲ, ಎಲ್ಲರೂ ಗಾಝಾದ ಹೆಸರಿನಲ್ಲಿ ತಮ್ಮ ತಮ್ಮ ಬಾವುಟಗಳಿಗೆ ಕೆಲಸ ಕೊಡುವ ಹಂತಕ್ಕೆ ತಲುಪಿ ತಮ್ಮ ಬೇಳೆ  ಬೇಯಿಸಿ ಕೊಳ್ಳುತ್ತಾರೆ.

ಮುಸ್ಲಿಂ ರಾಷ್ಟ್ರಗಳು ಎಷ್ಟು ಗಂಭೀರವಾಗಿ ಪ್ಯಾಲೆಸ್ತೀನಿನ ಮುದ್ದು ಮಕ್ಕಳ ಬಗ್ಗೆ ಯೋಚಿಸಿದೆ ಎನ್ನುವುದು ಬಲು ದೊಡ್ಡ ಪ್ರಶ್ನೆ, ಪ್ಯಾಲೆಸ್ತೀನಿಗರ ನೋವನ್ನು ಅರಬ್ ದೇಶಗಳು ಎಷ್ಟು ಅರ್ಥ ಮಾಡಿದೆ? ಹಲವು ಅರಬ್ ದೇಶಗಳು ಕಣ್ಣೊರೆಸಲು ಪರಿಹಾರ ನಿದಿಯನ್ನು ಬಿಡುಗಡೆ ಮಾಡುತ್ತದೆ ಇದು ಪ್ಯಾಲೆಸ್ತೀನಿನ ಸಮಸ್ಯೆಗೆ ಪರಿಹಾರವೇ? ಮುಗ್ದ ಅಮಾಯಕರ ಬಳಿ ಇದರಿಂದ ನಿಲ್ಲುತ್ತದೆಯೇ? ಇನ್ನು ಕೆಲವು ದಿನಗಳಲ್ಲಿ ದೊಡ್ದಣ್ಣಗಳು ಪೋಸು ನೀಡಿ ಸಂಧಾನದ ನಾಟಕ ನಡೆಯುತ್ತದೆ ಅಲ್ಲಿಗೆ ಒಂದಿಷ್ಟು ಭೀಕರತೆ ಕಡಿಮೆಯಾಗುತ್ತದೆ ಮತ್ತೆ ಅವರು ಬದುಕು ಕಟ್ಟಿಕೊಂಡು ನೋವುಗಳನ್ನು ಮರೆಯುವ ಹೊತ್ತಿಗೆ ಇಸ್ರೇಲಿ ರಾಕೆಟುಗಳು ಮತ್ತೆ ಗಾಝಾದ ನೆಲವನ್ನು ತಲುಪಿರುತ್ತದೆ, ನಿರಂತರವಾಗಿ ಇದು ಹೀಗೆಯೇ ನಡೆದುಕೊಂಡು ಬಂದಿದೆ, ಇದು ಜಗತ್ತಿನ ಕಣ್ಣಿಗೆ ಮಣ್ಣೆರೆಚುವ ತಂತ್ರ ಅಷ್ಟೇ.


ಕ್ರೂರಿಗಳಾದ ಇಸ್ರೇಲಿಗರು ಕ್ರೂರತೆಯನ್ನೇ ಬಯಸುತ್ತಾರೆ, ಅವರು ಸಂತೋಷ ಪಟ್ಟುಕೊಂಡು ಗಾಝೀಗಳನ್ನು ಕೊಲ್ಲುತ್ತಾರೆ ಮತ್ತು ಭಾರತದಂತಹ ದೇಶಗಳನ್ನು ಇದನ್ನು ಖಂಡಿಸುತ್ತವೆ ಮತ್ತು ಕೆಲವರಿಗೆ ಗಾಝಾ ತಮ್ಮ ಪ್ರದರ್ಶನ ಹೆಚ್ಚಿಸಿಕೊಳ್ಳುವ ಸ್ವತ್ತಾಗುತ್ತದೆ, ಇನ್ನು ಕೆಲವರಿಗೆ ಗಾಝಾದ ಹೆಸರಿನಲ್ಲಿ ದುಡ್ಡು ಮಾಡಿಕೊಳ್ಳುವ ಉತ್ಸಾಹ, ಸತ್ಯದೊಂದಿಗೆ ಅಸತ್ಯವನ್ನು ಬೆರೆಯಿಸಿ ಮಾನವೀಯ ಮೌಲ್ಯಗಳಿರುವವರ ಜೇಬಿಗೆ ಕತ್ತರಿ ಹಾಕಿ ಗಾಝಾವನ್ನು ಸ್ವಂತಿಕೆಗೆ ಬಳಸಿಕೊಳ್ಳುತ್ತಾರೆ, ಹೀಗೆ ಬಳಸಿಕೊಳ್ಳುವವರು ಗಾಝಾದಲ್ಲಿ ಬಲಿಯಾದ ಮುಗ್ದ ಮಕ್ಕಳನ್ನು, ತಂದೆಯಂದಿರನ್ನು, ಯುವಕರನ್ನು, ವಿಧವೆಯರಾದ ಮಹಿಳೆಯರನ್ನು ಮರೆಯದಿರಲಿ.

ನಮ್ಮವರು ಮರಣ ಹೊಂದಿದಾಗ ನಮಗೆ ವೇದನೆ ಆಗುವುದಾದರೆ ಗಾಝಾದ ಮುಗ್ದ ಮಕ್ಕಳು ಕ್ರೂರವಾಗಿ ಬಲಿಯಾಗುವಾಗ ಕೂಡಾ ಅ ನೋವು ನಮಗಾಗಲಿ, ಆಸ್ಪತ್ರೆಯಲ್ಲಿ ನರಲಾಡುವ ನಮ್ಮ ಸ್ನೇಹಿತನ್ನನ್ನು ನೋಡುವಾಗ ನಮಗಾಗುವ ನೋವು ಪ್ಯಾಲೆಸ್ತೀನಿನ ಮನುಷ್ಯ ಮಕ್ಕಳು ಆಸ್ಪತ್ರೆ ಸೇರಿ ನರಲಾಡುವಾಗ ಅದೇ ಅನುಕಂಪ ಅವರ ಮೇಲೆ ಕೂಡಾ ಬರಲಿ,ಇದು ಮನುಷ್ಯತ್ವಕ್ಕೆ ಸಂಬಂಧಿಸಿದ ವಿಚಾರ, ನೋವು ಅರ್ಥವಾಗುವ ಪ್ರತಿಯೊಬ್ಬನಿಗೂ ನೋವಾಗಬೇಕಾದ ವಿಚಾರ,  ಜಗತ್ತಿನಾದ್ಯಂತ  ಈ  ಕ್ರೌರ್ಯದ ವಿರುದ್ದ  ಪ್ರಶ್ನಿಸುವ ಹೋರಾಟಗಳು ನಡೆಯಲಿ, ನಮ್ಮ ಭಾರತದಲ್ಲೂ ದೇಶದ ಕಾನೂನಿನ ಚೌಕಟ್ಟಿನೊಳಗೆ ನೋವನ್ನು ಅರ್ಥ ಮಾಡಿಕೊಂಡ ಪ್ರತಿಯೊಬ್ಬರೂ ಪ್ಯಾಲೆಸ್ತೀನಿಗರ ಪರವಾಗಿ ಒಂದಾಗಿ ದ್ವನಿಯೆತ್ತಲಿ, ವಾಸ್ತವಿಕತೆಯ ಚಿತ್ರಣ ಜನರಿಗೆ ಅನಾವರಣವಾಗಲಿ.



ಪ್ಯಾಲೆಸ್ತೀನಿಗರ ಪರವಾಗಿ ಜಗತ್ತು ಬೆಂಬಲವಾಗಿ ನಿಲ್ಲಲಿ, ಅಕ್ರಮಿಗಲು ಸದಾ ಅಕ್ರಮಿಸಲ್ಪಡುವುದಿಲ್ಲ, ದ್ವನಿಯೆತ್ತುವವರು ಜೊತೆ ಸೇರಿದಾಗ ಆಕ್ರಮಣ ನಿಲ್ಲುತ್ತದೆ ಈ ಮಾತನ್ನು ಒಗ್ಗಟ್ಟಾಗಿ ಎಲ್ಲರು ಜಗತ್ತಿಗೆ ತೋರಿಸಲಿ, ನಮ್ಮದೇ ಕಾರ್ಯಕ್ರಮಗಳನ್ನು ನಿಲ್ಲಿಸುವ ನಾವುಗಳು ಅವರಿಗಾಗಿ ಒಂದಾಗೋಣ ಆ ದೇಶದ ಮಕ್ಕಳು ಶಾಂತಿಯುತವಾಗಿ ಜೀವಿಸುವಲ್ಲಿ ನಮ್ಮ ಪ್ರಯತ್ನ ಕೂಡಾ ಇರಲಿ, ದುಡ್ಡು ಸಂಪಾದಿಸುವದಕ್ಕಾಗಿ, ಬಾವುಟಗಳನ್ನು ಪ್ರದರ್ಸಿಸುವುದಕ್ಕಾಗಿ ಹೆಸರಾಗಿ ಬಲಿಯಾದ ಕೂಟದಲ್ಲಿ ಗಾಝಾ ಸೇರದಿರಲಿ. 

Friday, July 11, 2014

ಗಾಝ (ಕವನ)


ರಕ್ತ ಸಿಕ್ತ ಭೂಮಿ ಗಾಝ 
ಹೋರಾಟದ ಸೆಳೆಯಿರುವ ತೋಟ 
ಇಸ್ರೇಲಿ ಪಡೆಗಳ ಅಟ್ಟಹಾಸ 
ಮುದ್ದು ಕಂದಮ್ಮಗಳ ಬಲಿಯಾಟ.!

ಕೈ ಕಾಲು ಕಳೆದುಕೊಂಡವರ ಆಕ್ರಂದನ 
ತಂದೆಯೆದುರಿಗೆ ತಲೆಯಿಲ್ಲದೆ ಪ್ರಾಣಬಿಟ್ಟ ಮಗು 
ಮಗನ ಮಡಿಲಲ್ಲಿ ನಗುತ್ತಲೇ ಮರಣ ಹೊಂದಿದ ತಾಯಿ 
ಇಸ್ರೇಲಿ ರಾಕೆಟ್ ಮಾಡಿದ ಹಿಂಸೆ ಭಯಾನಕ ಚಿತ್ರ ಹಿಂಸೆ 

ಪ್ಯಾಲೆಸ್ತೀನ್ ಹೋರಾಟ ಇಂದು ನಿನ್ನೆಯದಲ್ಲ..  
ಪುಟ್ಬಾಲಿನ ಹಿಂದೆ ಜಗತ್ತು ಬಿದ್ದು ಬಿಟ್ಟಿದೆಯಲ್ಲ, 
ಅರಬ್ ರಾಷ್ಟ್ರಗಳು ಮೌನವಾಗಿದೆಯಲ್ಲ
ಮಾನವೀಯತೆ ಮರೇಚಿಕೆಯಾಗಿದೆಯಲ್ಲ.. 

ಅರಬ್ ದೇಶಗಳ ಪರಿಹಾರದಾಟ, 
ದುಷ್ಟ ದೇಶಗಳ ರಾಕೆಟಿನ ಕೂಟ. 
ಪ್ಯಾಲಸ್ತೀನಿನ ಮಕ್ಕಳ ಮೇಲೆ ರಕ್ತದಾಟ, 
ದೇವನ ವಿದಿಯತ್ತ ಜಗತ್ತಿನ ನೋಟ. 


Tuesday, July 8, 2014

ಬಹುಪತ್ನಿತ್ವ (ಚುಟುಕ)

ಸಿಕ್ಕವನೊಬ್ಬ ಹೇಳಿದ,
ನಾಲ್ಕು ಮದುವೆ ನಮ್ಮ ಆದರ್ಶ!!
ಜರೆಯುವವನೊಬ್ಬ ಕೇಳಿದ, 
ಬೇಕಾಬಿಟ್ಟಿ ಹೆರುವುದಾ ನಿಮ್ಮ ಆದರ್ಶ!?

ಬಹುಪತ್ನಿತ್ವ ಇಸ್ಲಾಮಿ ಆಶಯ;
ಎಲ್ಲಾ ಪತ್ನಿಯರಿಗೆ ನ್ಯಾಯ ನೀಡಲು ಸಾಧ್ಯವಾಗುವವನಿಗೆ!!
ಜಗತ್ತು ಹೇಳುತ್ತಿದೆ,
ಸಿಕ್ಕ ಸಿಕ್ಕವರಿಗೆ ಇಂದು ಅದು ಮಾತ್ರ ಆದರ್ಶ!!

ನ್ಯಾಯದ ಅತ್ಯುತ್ತಮ ಪಾಲಕರಾಗಿ,
ಇಸ್ಲಾಮಿ ಆಶಯದ ಬಹುಪತ್ನಿತ್ವದ ಮಹತ್ವ ಅರಿಯಿರಿ!!
ಅವಕಾಶವಿದೆಯೆಂದು ಬಹುಪತ್ನಿ ವಲ್ಲಭನಾಗಿ,
ನೀತಿ ಪಾಲಿಸದೆ ಧರ್ಮದ ಸಿದ್ದಾಂತಗಳಿಗೆ ಮಾರಕವಾಗದಿರಿ!! 


Saturday, July 5, 2014

ಪಡೆದವನೂ ಕೊಡುವವನಾಗಲಿ!!


ಕೊಡುವವರು ಕೊಡುತ್ತಿದ್ದಾರೆ.ಪಡೆಯುವವರು ಪಡೆಯುತ್ತಿದ್ದಾರೆ..!ಕೊಡುವವರಿಗೆ ಕೊಟ್ಟು ಮುಗಿಸಿ ಪುಣ್ಯಗಳಿಸಿದ ಸಂತೋಷ! ಪಡೆಯುವವರಿಗೆ ಮತ್ತಷ್ಟು ಪಡೆಯುವ ಬಗ್ಗೆ ಆಲೋಚನೆ! ಕೊಡು-ತೆಗೆಯುವುದು ಇಂದು ಇಷ್ಟಕ್ಕೆ ಸೀಮಿತವಾಗಿದೆ..! ಪಡೆಯಲು ಅರ್ಹವಾದ ಒಂದು ವರ್ಗ ಅತ್ತ ಪಡೆಯಲೂ ಇಲ್ಲ, ಇತ್ತ ಕೊಡುವ ಸ್ಥಿತಿಯೂ ಅವರಿಗೆ ಒದಗಲಿಲ್ಲ! ಇಲ್ಲಿ ಕೊಡುವವರು ಧಾರಾಳವಾಗಿ ಇದ್ದಾರೆ, ಆದರೆ ತೆಗೆಯುವವರ ಸಂಖೆಯಲ್ಲೇನು ಕಡಿಮೆ ಆಗಿಲ್ಲ! ಹೀಗೆ ಬಡವರನ್ನು ಮೇಲಕ್ಕೆತ್ತುವ ಬಗ್ಗೆ ಆಲೋಚಿಸದೆ ಅಲ್ಪ ಸ್ವಲ್ಪ ಭಿನ್ನ ಭಿನ್ನವಾಗಿ ಕೊಡುತ್ತಿದ್ದರೆ ಇನ್ನು ಸಾವಿರ ವರ್ಷ ಕಳೆದರು ತೆಗೆಯುವವರು ಹಾಗೆಯೇ ಇರುತ್ತಾರೆ, ಅವರಲ್ಲೇನು ಬದಲಾವಣೆ ಆಗುವುದಿಲ್ಲ! ಕೊಡುವವರು ಪಡೆಯುವವರನ್ನು ಕೊಡುವವರಾಗಿ ಮಾರ್ಪಾಡಿಸುವ ರೀತಿಯಲ್ಲಿ ಒಳ್ಳೆಯ ತೀರ್ಮಾನಗಳೊಂದಿಗೆ ಕೊಡಬೇಕು, ಪಡೆಯವವರನ್ನು ಒಂದು ಹಂತಕ್ಕೆ ಬದಲಾಯಿಸಬೇಕು ಎನ್ನುವ ದೂರಾಲೋಚನೆ ಇರಬೇಕು. ಕೊಟ್ಟೆ ಎಂದು ಹೇಳುವುದಕ್ಕೆ ಮಾತ್ರ ಸೀಮತವಾಗಿಸುವ ಕೊಡುವಿಕೆಯಲ್ಲಿ ಸಮಾಜವು ಪರಿವರ್ತನೆಯಾಗದು ದೇವನ ಬಳಿಯೂ ತೋರಿಕೆಗಾಗಿ ಮಾಡಿದ ಕೆಲಸಕ್ಕೆ ಫಲವೂ ಸಿಗದು. ಸಮಾಜದ ನಿರ್ಗತಿಕರನ್ನು ಮೇಲಕ್ಕೆತ್ತಿ ಮತ್ತೆಂದಿಗೂ ಪಡೆಯದಿರುವ ಪರಿಸ್ಥಿತಿಗೆ ಬದಲಾಯಿಸುವ ಭಾವನೆ ಬೆಳೆದು ಬರಬೇಕು. ಒಂದು ಒಳ್ಳೆಯ ವ್ಯವಸ್ಥಿತ ರೀತಿಯಲ್ಲಿ ಕೊಡಲ್ಪಡುವುದು ವಿತರಣೆಯಾಗಬೇಕು, ಆಗ ಸಮಾಜದ ಕೆಲವರನ್ನಾದರೂ ಮೇಲಕ್ಕೆತ್ತಲು ಸಾಧ್ಯ ಮತ್ತ್ತು ಅದು ಕೊಟ್ಟದ್ದರಲ್ಲಿಯೂ ಸಾರ್ಥಕತೆಯ ಭಾವವನ್ನು ತರುವುದರಲ್ಲಿ ಸಂಶಯವಿಲ್ಲ.

Thursday, July 3, 2014

ಸ್ವಾಭಿಮಾನಿ! (ಚುಟುಕ)

ಹಸಿದಾಗ ನಾ ಭಿಕ್ಷೆ ಬೇಡಲಾರೆ!
ಕಣ್ಣೀರನ್ನು ನನ್ನಲ್ಲಿ ಬಚ್ಚಿಡುವವನಾದೆ!
ಸಾಲ ತೆರಲಾಗದೆ ಮನೆ ಅಡವಿಡುವವನಾದೆ!
ನನ್ನ ಕಷ್ಟವನ್ನು ಯಾರಲ್ಲೂ ಹಂಚಿಕೊಲ್ಲದವನಾದೆ!!

ನಾನು ಯಾರೂ ಇಲ್ಲದವನಲ್ಲ!

ಬಂದುಗಳು! ಸ್ನೇಹಿತರು!
ಇರುವರು ನನ್ನ ಸುತ್ತಮುತ್ತಲೆಲ್ಲ!
ಆದರೆ ನಾನೊಬ್ಬ ಸ್ವಾಭಿಮಾನಿ!
ಮಧ್ಯಮ ವರ್ಗದವ!
ಎಲ್ಲ ಇದ್ದು ಎನೂ ಇಲ್ಲದ ಅತಿ ಬಡವ!!!