Friday, July 25, 2014

ಪ್ರತಿರೋಧವಿಲ್ಲದ ಭೂಮಿಯಾಗದಿರಲಿ ಭಾರತ!! (ಲೇಖನ)




ಕನಸುಗಳು ಅತಿಯಾದರೆ ಏನಾಗಬಹುದು ಎನ್ನುವುದಕ್ಕೆ ನಮ್ಮ ಮುಂದೆ ಹಲವರು ಉದಾಹರಣೆಯಾಗಿ ಸದ್ಯಕ್ಕೆ ಸಪ್ಪಗಾಗಿದ್ದಾರೆ, ಎರಡೇ ತಿಂಗಳಲ್ಲಿ ಭಾರತದ ವ್ಯವಸ್ಥೆಯನ್ನೇ ಬದಲಾಯಿಸುತ್ತೇವೆ ಎಂದು ನಂಬಿದ್ದವರಿಗೆ ಅದು ಆಗುವ ಕೆಲಸ ಅಲ್ಲ ಎಂದು ತುಂಬಾ ಲೇಟಾಗಿ ಒಪ್ಪಿಕೊಳ್ಳುತ್ತಿದ್ದಾರೆ, ಬುದ್ದಿ ಇರುವ ಪ್ರತಿಯೊಬ್ಬನಿಗೂ ಕೂಡಾ ಈ ವಿಚಾರ ಮುಂಚೆಯೇ ತಿಳಿದಿತ್ತು ಆದರೆ ಬುದ್ದಿ ಇಲ್ಲದಂತೆ ವರ್ತಿಸಿದ ಕೆಲವರಿಗೆ ಸ್ವಲ್ಪ ಸ್ವಲ್ಪಾನೆ ಬುದ್ದಿ ಬೆಳೆಯುತ್ತಿದೆ.

 ಈಗೀನ ಸರಕಾರದ ಬದಲಾವಣೆಯನ್ನು ನಂಬಿ ಕುಳಿತಿದ್ದವರು ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ, ಅವರು ಬರಲಿ ಎಲ್ಲವೂ ಬದಲಾಗುತ್ತೆ ಮತ್ತು ಅದು ಬೇಗನೆ ಬದಲಾಗುತೆ ಎನ್ನುವವರು ಎರಡೇ ತಿಂಗಳಲ್ಲಿ ರಾಗ ಬದಲಾಯಿಸುತ್ತಿದ್ದಾರೆ, ಮೊದಿಯವರ ಸರಕಾರ! ನಂಬಿದ್ದವರಿಗೆ ಆಘಾತದ ಮೇಲೆ ಆಘಾತ ನೀಡುತ್ತಿದೆ, ಇಲ್ಲಿ ಪ್ರಶ್ನೆ ನಮ್ಮ ಮೋದಿಯವರು ಪ್ರಧಾನಿ ಆದ ನಂತರ ಏನು ಬದಲಾಯಿಸಿದ್ದಾರೆ? ಸರಕಾರ ಬದಲಾಗಿದೆ ಅಷ್ಟೇ ನನ್ನ ಮತ್ತು ನಿಮ್ಮ ಸಮಸ್ಯೆಯಲ್ಲ! ಅದು ಮತ್ತಷ್ಟು ಬಿಗಡಾಯಿಸಿದೆ.
  
ಎರಡೇ ತಿಂಗಳಲ್ಲಿ ಕೆಲವರಿಗೆ ಮೋದಿ ಸರಕಾರದ ಮೇಲೆ ಇದ್ದ ನಿರೀಕ್ಷೆಗಳು ಹುಸಿಯಾಗತೊಡಗಿದೆ, ಏರಿಕೆಯ ಮೇಲೆ ಹೇರಿಕೆಯಾಗಿ ಬೆಲೆಗಳು ಗಗನೆಕ್ಕೆರುತ್ತಿದೆ, ಸ್ವಿಸ್ ಬ್ಯಾಂಕ್ ನ ನೋಟಿನ ಕಂತೆಗಳ ಗೋಣಿ ಚೀಲಗಳ ಕನಸು ಕಾಣುತ್ತಿದ್ದವರಿಗೆ  ಆ ಬ್ಯಾಂಕಿನಲ್ಲಿ ಭಾರತದ ಅಕೌಂಟ್ ಗಳೇ ಇಲ್ಲ ಎಂದು ಹೇಳಿ ಬೆಚ್ಚಿ ಬೀಳಿಸಿ ಕನಸುಗಳಿಗೆ ಲಗಾಮು ಹಾಕಿದ್ದಾರೆ, ಇಲ್ಲಿ ಗೋಣಿ ಹಿಡಿದುಕೊಂಡು ಸ್ವಿಸ್ ಬ್ಯಾಂಕಿನ ಹಣ ಹಂಚಲು ಸಿದ್ದರಾಗಿದ್ದವರು ಆ ಗೋಣಿ ಚೀಲಗಳನ್ನು ಮುಖಕ್ಕೆ ಹಾಕಿಕೊಂಡು ತಿರುಗಾಡುವ ಪರಿಸ್ಥಿತಿಯಲ್ಲಿದ್ದಾರೆ, ಮದ್ಯಮ ವರ್ಗದವರು ಹಾಯಾಗಿ ನಿದ್ದೆ ಮಾಡುತ್ತಾ ಚಲಿಸುತಿದ್ದ ರೈಲಿಗೆ ನಮ್ಮವರೇ ಆದ ನಗುಮುಖದ ರೈಲ್ವೆ ಮಂತ್ರಿ ಕಲ್ಲು ಹಾಕಿ ಇನ್ನೆಂದು ನಗದಂತೆ ಮಾಡಿದ್ದಾರೆ, ಪೆಟ್ರೋಲ್ ಡೀಸೆಲ್ ಬೆಲೆ ಆಗಾಗ ಏರಿಕೆಯಾಗುತ್ತಿದೆ ಮತ್ತು ಏರುತ್ತಲಿದೆ, ಹೀಗಾಗಿ ಈ ಎಲ್ಲ ಬೆಳವಣಿಗೆಗಳು ಹಿಂದಿನ ಸರಕಾರದ ಕೆಲಸಗಳಿಗೆ ವಿರೋಧ ವ್ಯಕ್ತಪಡಿಸುತ್ತಿದ್ದವರ ಕೈ ಕಾಲು ಕಟ್ಟಿ ಹಾಕಿದಂತೆ ಚಡಪಡಿಸುತ್ತಿದ್ದಾರೆ ಮತ್ತು ಸರಕಾರ ನಡೆಸುವುದು ಅಷ್ಟು ಸುಲಭವಲ್ಲ ಎಂದು ತಮ್ಮಲ್ಲಿಯೇ ಮಾತನಾಡಿಕೊಳ್ಳುತ್ತಿದ್ದಾರೆ.

 ತಡವಾಗಿಯಾದರೂ ದೇಶ ನಡೆಸುವ ಸತ್ಯದ ಕಷ್ಟ ಮತ್ತು ಮತ್ತು ಅದಕ್ಕೆ ಬೇಕಾಗುವ ಸಮಯದ ಅಂತರ ಅರಿವಾಗುತ್ತಿದೆ, ಹಾಳೆಯಲ್ಲಿ ಬರೆದು ಕೊಟ್ಟ ಭಾಷಣವನ್ನು ಓದಿದಷ್ಟು ಸುಲಭವಲ್ಲ ದೇಶವನ್ನು ನಡೆಸುವುದು ಎಂದು ಸಾಬೀತಾಗುತ್ತಿದೆ, ಅಮಿತ್ ಷಾ ರ ಪರ ವಾದಿಸಿದ್ದ ವಕೀಲರೊಬ್ಬರನ್ನು ನ್ಯಾಯ ಮೊರ್ತಿಯಾಗಿ ಘೋಷಿಸಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಮಾಡಬೇಕಾದ ಕೆಲಸಕ್ಕೆ ಚಾಲನೆ ನೀಡಲಾಗಿದೆ, ಅಲ್ಲಲ್ಲಿ ರಾಜ್ಯಪಾಲರ ಎತ್ತಂಗಡಿ ಕೂಡ ಆರಂಬವಾಗಿದೆ, ಮಂಡಿಸಿದ ಬಜೆಟ್ ದೇಶದ ಹೊಸ ಸರಕಾರ ಕಾರ್ಪೋರೇಟರ್ ವ್ಯಕ್ತಿಗಳಿಗೆ ಬಲ ತಂದು ಕೊಟ್ಟಿದೆ, ಈ ಸರಕಾರ ದೇಶಕ್ಕೆ ಮಾರಕ ಎಂದು ಬಣ್ಣಿಸಲಾಗಿತ್ತು ಆದರೆ ಸಧ್ಯದ ನಡೆ ಮುಂದಿನ ದಿನಗಳ ಭೀಕರತೆಯನ್ನು ಎತ್ತಿ ತೋರಿಸುತ್ತಿದೆ, ನಾವು ಕಾರ್ಪೊರೇಟರ್ ಗಳ ಪರ ಎನ್ನುವುದನ್ನು ಅಲ್ಲಲ್ಲಿ ಒತ್ತಿ ಹೇಳಲಾಗುತ್ತಿದೆ, ರೈಲು ಮಂತ್ರಿಯವರು ಬಿಟ್ಟ ರೈಲುಗಳಲ್ಲಿ ತವರು ನಾಡಿಗೆ ರೇಲು ಬಿಟ್ಟು ಸಂತೋಷ ಪಡಿಸಿದ್ದಾರೆ.


ಆದರೆ  ಇದೆಲ್ಲದಕ್ಕಿಂತ ಹೆಚ್ಚಿನದಾಗಿ ನಾವೊಂದು ಅಂಶವನ್ನು ಮರೆತುಬಿಟ್ಟಿದ್ದೇವೆ, ಇವರ ರೇಲುಗಳನ್ನು ಕೇಳಿಕೊಂಡು ನಾವು ವಾಸ್ತವಾವನ್ನು ಮರೆತಿದ್ದೇವೆ, ಇಲ್ಲಿ ಒಂದು ಹೋರಾಟದ ವ್ಯವಸ್ಥೆ ಬಲವಾಗಿ ಕ್ಷೀಣಿಸಿದೆ, ಟೀಕಿಸಬೇಕಾದ ವಿಚಾರಗಳಿಗೂ ಇಲ್ಲಿ ಟೀಕೆಗಳು ವ್ಯಕ್ತವಾಗುತ್ತಿಲ್ಲ, ಸರಕಾರದ ವಿರುದ್ದ, ಅದರ ನಡೆಯ ವಿರುದ್ದದ, ಧೋರಣೆಯ ವಿರುದ್ದ ಹೋರಾಟಗಾರರು ಎನಿಸಿಕೊಂಡವರು ಮಾತನಾಡುತ್ತಿಲ್ಲ, ಹೋರಾಟಗಳು ತಣ್ಣಗಾಗಿವೆ, ಈ ಹೋರಾಟಗಳು ಮೆಜಾರಿಟಿ ಇರುವ ಸರಕಾರದ ಮುಂದೆ ಲಾಭವಿಲ್ಲದ ಕೆಲಸವಾಗಬಹುದು ಎನ್ನುವ ಚಿಂತನೆಯಾಗಿರಬಹುದು, ಮೋದಿಯವರ ಸರಕಾರದ ಮೇಲಿರುವ ಕೋಪದಿಂದ ಯಾವುದು ಬೇಡ ಎಂದು ಹೇಳಿ ಚಿಂತಕರು, ಪ್ರಗತಿಪರರು, ಹೋರಾಟಗಾರರು ಸುಮ್ಮನೆ ಕುಳಿತು ಕೊಂಡ ದ್ದಾಗಿರಬಹುದು ಆದರೆ ಈ ನಡೆ ನಮ್ಮನ್ನು ನಾವೇ ಕಾರ್ಪೋರೇಟರುಗಳಿಗೆ ಮಾರಿಕೊಳ್ಳುವ ನಡೆ.

 ನಾವೊಂದು ಮಾತು ಮರೆಯಬಾರದು ಈ ನಮ್ಮ ಮೌನದ ನಡೆ ಈ ದೇಶದ ಮುಂದಿನ ಪೀಳಿಗೆಗೆ ಮಾರಕ, ಹೀಗೆಯೇ ಸುಮ್ಮನೆ ಕುಳಿತರೆ ಹೋರಾಟಗಳ ಈ  ಭಾರತ ಭೂಮಿ ಕೆಲವೇ ವರುಷಗಳಲ್ಲಿ ಎಲ್ಲವನ್ನು ತನ್ನ ಮೇಲೆ ಹೇರಿಸಲ್ಪಡುವ ಭೂಮಿಯಾಗಬಹುದು, ಹೋರಾಟಗಳು ಇಲ್ಲಿ ಮರೇಚಿಕೆಯಾಗದಿರಲಿ, ಯಾವುದು ಸರಿ ಎಂದು ಕಾಣಿಸುವುದಿಲ್ಲವೋ ಅದನ್ನು ಪ್ರತಿರೋಧಿಸಲೇಬೇಕು, ಯಾವುದು ಸರಿಯೋ ಅದನ್ನು ಒಪ್ಪಿಕೊಂಡು ಸರಕಾರಕ್ಕೆ ಸಾಥ್ ನೀಡಬೇಕು, ಆದರೆ ಹಾಗೆ ಸಂಭವಿಸದು. ಹೋರಾಟಗಳು ಕ್ಷೀಣಿಸಿದರೆ ಈ ಭೂಮಿ ಕಾರ್ಪೋರಟರ್ ಗಳ ಕೈ ಪಾಲಾಗಬಹುದು, ಏನು ಪ್ರಶ್ನಿಸದ ನಮ್ಮ ನಡೆ ಮುಂದಿನ ತಲೆಮಾರಿಗೆ ನಿದ್ದೆಯಿಲ್ಲದ ದಿನಗಳಾಗಬಹುದು. ಎಚ್ಚರವಿರಲಿ!!

No comments: