Sunday, August 31, 2014

ಶಾಂತಿ ಎಂಬ ಪ್ರತೀಕಾರದ ಯೋಚನೆ ಯುವಕರಲ್ಲಿ ಬೆಳೆದು ಬರಲಿ


ಕತ್ತಿ ಲಾಂಗು ಹಿಡಿದು ಹೋರಾಡಿ ದೇವನ ಬಳಿ ಸಂಪ್ರೀತಿ ಗಳಿಸಬಹುದೆಂದು ಅಡ್ಡ ದಾರಿ ಹಿಡಿದು ಅದನ್ನೇ ದೇವ ಸಂಪ್ರೀತಿ ಎಂದು ತಿಳಿದರೆ ಅದು ತಿಳಿದವನ ತಪ್ಪೇ ಹೊರತು ಧರ್ಮದ ಆಶಯವಲ್ಲ, ಧರ್ಮವನ್ನು ಸರಿಯಾಗಿ ಅರಿತವನಿಗೆ ಕತ್ತಿ ಲಾಂಗು ಇಲ್ಲದೆಯೇ ತನ್ನ ಧರ್ಮದ ಉಳಿವಿಗೆ ಪ್ರಸಕ್ತ ಕಾಲದಲ್ಲಿ ಹೋರಾಡಬಹುದು. ಕಾಲಘಟ್ಟದಲ್ಲಿ ಜಿಹಾದಿನ ನಿಜ ಅರ್ಥವನ್ನು ಜಗತ್ತಿಗೆ ಪರಿಚಯಿಸಬೇಕಾಗಿದೆ, ಭಾರತದಂತಹ ಪ್ರಜಾಪ್ರಬುತ್ವ ದೇಶದಲ್ಲಿ ಸಮರ್ಥ ಧರ್ಮ ಹೋರಾಟಗಾರರ ಅಗತ್ಯವಿದೆ, ಧರ್ಮದ ಉಳಿವಿಗೆ ಅಧರ್ಮದ ದಾರಿ ಹಿಡಿದವನು ಧರ್ಮೀಯ ಆಗಲಾರ ಮತ್ತು ದೇವನ ಬಳಿ ಯಾವ ಸ್ತಾನವನ್ನು ಗಿಟ್ಟಿಸಿಕೊಳ್ಳಲಾರ. ಸ್ವಂತ ವಿಚಾರಗಳಿಗೆ ಧರ್ಮದ ಚಹರೆಯನ್ನು ಬಳಸಿ ಹೊಟ್ಟೆ ಹೊರೆಯುವ ವ್ಯಕ್ತಿತ್ವಗಳಿಂದ ಯುವಕರು ದೂರವಿರಬೇಕಾಗಿದೆ, ಶಾಂತಿ ಅರಿತ ಒಂದು ಯುವ ಪಡೆ ಹಲವು ಮನಸ್ಸುಗಳನ್ನು ಗೆಲ್ಲಬಹುದಾಗಿದೆ, ಪ್ರತೀಕಾರವೂ ಕೂಡಾ ಒಡೆದ ಮನಸ್ಸನ್ನು ಗೆಲ್ಲುವ ಶಾಂತಿ ಮಂತ್ರವಾಗಿರಬೇಕು, ಶಾಂತಿ ಎಂಬ ಮಂತ್ರವನ್ನು ಲಾಂಗು ಕತ್ತಿ ಆಗಿ ಬಳಸಿಕೊಂಡಾಗ ಶಾಂತಿ ಪ್ರಖರತೆಯನ್ನು ಪಡೆದುಕೊಳ್ಳುತ್ತದೆ ಮತ್ತು ಕತ್ತಿ ಲಾಂಗುಗಳಿಗೆ ಕೆಲಸವಿಲ್ಲವಾಗುವುದು ಖಂಡಿತ. ಶಾಂತಿಯ ನೆಲೆಯಲ್ಲಿ ಇಸ್ಲಾಮಿ ನಡೆಯಲ್ಲಿ ಯುವಕರ ಆಲೋಚನೆಗಳು ಹೆಚ್ಚು ಹೆಚ್ಚುಬೆಳೆದು ಬರಲಿ.  

Friday, August 22, 2014

ಕಳೆದುಕೊಳ್ಳುವ ದಿನಗಳಲ್ಲಿ (ಲೇಖನ)



ಅತಿ ಹಚ್ಚಿ ಲಾಭ ಗಳಿಸುವ ಉದ್ದೇಶಕ್ಕಾಗಿಯೇ ಕೆಲವು ಸೀಸನ್ ವ್ಯಾಪಾರಗಳಿರುತ್ತದೆ, ಅದೇ ರೀತಿ ನಮ್ಮ ದೇಶದಲ್ಲಿ ಭಾಷಣಕಾರರ ಹೊಸ ಸರಕಾರ ಅಧಿಕಾರಕ್ಕೆ ಬರುತ್ತದೆ ಎನ್ನುವಾಗ ಹಲವರು ತಾತ್ಕಾಲಿಕ ಹೊಸ ವ್ಯಾಪಾರವನ್ನು ನಡೆಸಿ ಲಾಭ ಗಳಿಸುವ ಚಿಂತನೆ ನಡೆಸುತಿದ್ದರು, ಹಲವರು ಹಲವು ರೀತಿಯ ವ್ಯಾಪಾರದಲ್ಲಿ ತೊಡಗಿಕೊಂಡರು, ತರ ತರದ ಸಿಹಿ ತಿಂಡಿ ತಯಾರಿಸುವ ವ್ಯಾಪಾರದ ಐಡಿಯಾದಿಂದ ಹಿಡಿದು ಪಟಾಕಿ ವ್ಯಾಪಾರದವರೆಗೆ ತಮ್ಮದೇ ರೀತಿಯಲ್ಲಿ ಯೋಚಿಸತೊಡಗಿದರು ಆದರೆ ಇದರ ನಡುವೆ ಭಾಷಣ ಸ್ವಲ್ಪ ಹೆಚ್ಚಾಗಿಯೇ ತಲೆಗೆ ಹಚ್ಚಿಕೊಂಡ ವ್ಯಾಪಾರಿಯೊಬ್ಬ ಗೋಣಿ ಚೀಲ ತಯಾರಿಸುವ ಯೋಚನೆ ಮಾಡಿದ!

ಭಾಷಣಕಾರರ ಹೊಸ ಸರಕಾರ ಅಧಿಕಾರಕ್ಕೆ ಬರುವುದಕ್ಕೂ ಈ ಗೋಣಿ ಚೀಲ ವ್ಯಾಪಾರಕ್ಕೂ ಏನು ಸಂಬಂದ? ಭಾಷಣವನ್ನು ಆಳವಾಗಿ ನಂಬಿದ್ದ ವ್ಯಾಪಾರಿಯೊಬ್ಬ ಸಂಬಂದ ಕಲ್ಪಿಸಿಕೊಂಡಿದ್ದ ಮತ್ತು ಬಲು ಜೋರಾಗಿಯೇ ತನ್ನ ಹೊಸ ವ್ಯಾಪಾರಕ್ಕೆ ಕೈ ಹಾಕಿದ್ದ,  ಭಾಷಣಕಾರರು ಅಲ್ಲಲ್ಲಿ ಆಗಾಗ್ಗೆ ಕಿರುಚಾಡುತಿದ್ದ ವಿಷಯಗಳ ಮೇಲೆ ಹಲವರು ತಮ್ಮ ವ್ಯಾಪಾರ ಆರಂಬಿಸಿದ್ದರು ಆದರೆ ಗೋಣಿ ಚೀಲ ತಯಾರಿಸಲು ಹೊರಟ ವ್ಯಾಪಾರಿಗೆ ಸ್ವಿಸ್ ಬ್ಯಾಂಕಿನ ಕಥೆ ಪದೇ ಪದೇ ಕೇಳುತಿತ್ತು, ಹೊಸ ಸರಕಾರ ಸ್ಥಾಪಿಸಲು ಹೋರಾಟ ವಕ್ತಾರರು ಆಗಾಗ್ಗೆ ನಾವು ಸ್ವಿಸ್ ಬ್ಯಾಂಕಿನಿಂದ ದುಡ್ಡು ತರುತ್ತೇವೆ ಎಂದು ಬೊಬ್ಬಿಡುತ್ತಿದ್ದ ಮತ್ತು ಗಂಟೆ ಗಟ್ಟಲೆ ಕೊರೆಯುತ್ತಿದ್ದ ವಿಚಾರ ಇವನಲ್ಲಿ ಹೊಸ ವ್ಯಾಪಾರದ ಲಾಭದ ಆಶಾಭಾವನೆ ಮೂಡಿಸಿತ್ತು. ಆದಷ್ಟು ಬೇಗ ಭಾರತಕ್ಕೆ ತರುತ್ತೇವೆ ಎಂದು ಹೇಳಿದಾಗ ಈತನ ವ್ಯಾಪಾರಿ ಮನಸ್ಸು ಜಾಗೃತವಾಗಿತ್ತು!

ಈ ಬಿಸಿನೆಸ್ ಐಡಿಯ ಹೊಳೆಯಲು ಕಾರಣ ಸುಲಭದಲ್ಲಿ ಲಾಭ ಗಳಿಸುವ ಯೋಚನೆ ಮತ್ತು ಅದಕ್ಕಿಂತ ಹೆಚ್ಚಾಗಿ ಕೇಳಿದ ಭಾಷಣದ ಬಗ್ಗೆ ಆತನಿಗಿದ್ದ ನಂಬಿಕೆ, ಸ್ವಿಸ್ ಬ್ಯಾಂಕಿನಿದ ತರಬೇಕಾಗಿರುವುದು ಕೋಟಿ ಗಟ್ಟಲೆ ದುಡ್ಡು ಅದನ್ನು ಹಾಗೆಯೇ ತರಲಾಗದು ಹೇಗಿದ್ದರೂ ಗೋಣಿ ಚೀಲದಲ್ಲಿ ತುಂಬಿ ತರಬೇಕು ಮತ್ತು ಆ ದುಡ್ಡಿನಲ್ಲಿ ಇಡೀ ದೇಶದ ವ್ಯವಸ್ಥೆಯನ್ನೇ ಬದಲಾಯಿಸಲು ಸಾದ್ಯ ಎಂದು ಪದೇ ಪದೇ ಕೇಳಿ ತಿಳಿದುಕೊಂಡಿದ್ದ ಮತ್ತು ಅದರ ಫಲವಾಗಿ ಅಲ್ಲಿರುವ ದುಡ್ಡಿನ ರಾಶಿಯ ಬಗ್ಗೆ ಅರಿತುಕೊಂಡಿದ್ದ ಅ ದುಡ್ಡಿನಿಂದ ಇಲ್ಲಿನ ಬಡತನ, ಹಸಿವಿನ ಸಮಸ್ಯೆ ಮುಕ್ತವಾಗುತ್ತದೆ ಮತ್ತು ಅದು ಭಾರತಕ್ಕೆ ತಕ್ಷಣವೇ ಬರುತ್ತದೆ ಎಂದು ನಂಬಿ ಪೆದ್ದು ಆದುದರಲ್ಲಿ ಇತನೂ ಒಬ್ಬ.

ಕೋಟಿ ಗಟ್ಟಲೆ ದುಡ್ಡು ತರುವಾಗ ಅದನ್ನು ಸುಮ್ಮನೆ ತರಲಾಗುಗುವುದಿಲ್ಲ ಆದ್ದರಿಂದ ಅತ್ಯುನ್ನತ ಶೈಲಿಯ ಗೋಣಿ ಚೀಲಗಳನ್ನು ತಯಾರಿಸಿ ಕೊಡುವ ಬಗ್ಗೆ ಚಿಂತಿಸಿ ಅದನ್ನು ತಯಾರಿಸಿಟ್ಟಿದ್ದ, ವ್ಯಾಪಾರಿ ಗೋಣಿ ಚೀಲಗಳನ್ನು ತಯಾರಿಸಿಟ್ಟು ವ್ಯಾಪಾರಕ್ಕಾಗಿ ಕಾಯುತಿದ್ದಾಗ ಸಾಮಾನ್ಯ ರಾಜಕಾರಣಿಯಂತೆ ಉದ್ದುದ್ದ ಭಾಷಣ ಮಾಡಿದ ವ್ಯಕ್ತಿಗಳ ಉನ್ನತಿಯ ನಾಯಕನೊಬ್ಬ ವ್ಯಾಪಾರಿ ತಲೆ ಮೇಲೆ ಕೈ ಇಡುವಂತೆ ಮಾಡಿದ್ದ, ಸ್ವಿಸ್  ಬ್ಯಾಂಕಿನಿಂದ ರಾಶಿ ರಾಶಿ ದುಡ್ಡನ್ನು ಗೋಣಿ ಚೀಲದಲ್ಲೊ  ಅಥವಾ ಇನ್ಯಾವುದರಲ್ಲೋ ತುಂಬಿಸುವುದು ಬಿಡಿ ಅಲ್ಲಿ ಭಾರತೀಯರ ಖಾತೆಯೇ ಇಲ್ಲ ಎಂದು ತಲೆ ಗಿರ್ರನೆ ತಿರುಗುವಂತೆ ಬಹಳ ನಯವಾಗಿ ವಿವರಿಸಿದ್ದರು ಈತ ನಂಬಿದ್ದ ಭಾಷಣಕಾರ.

ಸದ್ಯಕ್ಕಂತೂ ವೋಟು ಹಾಕಿದ ಮತದಾರನನ್ನು ಬದಲಾವಣೆಯ ಭಾಷಣ ಬಾಯಿ ಮುಚ್ಚಿ ಹಾಕಿಸಿದೆ ಆದರೆ ಈ ಗೋಣಿ ಚೀಲ ತಯಾರಿಸಿದವನು ವೇದಿಕೆಯ ಮೇಲೆ ಹತ್ತಿ ಇವನ ಗೋಣಿ ಚೀಲ ವ್ಯಾಪಾರಕ್ಕೆ ಉತ್ತೇಜನ ನೀಡಿದವರನ್ನು ಸಮಯ ಸಿಕ್ಕರೆ ಅದೇ ಗೋಣಿ ಚೀಲದೊಳಗೆ ತುರುಕಿಸಿ ಒಂದು ನಾಲ್ಕು ಬಾರಿಸಬೇಕು ಎಂದು ಹುಡುಕಾಡುತಿದ್ದಾನೆ, ಭಾಷಣ ಭಾಷಣವಾಗಿ ಉಳಿಯುವ ಹಂತದಲ್ಲಿ ವ್ಯಾಪಾರಿಯೊಬ್ಬ ಶಪಿಸುತ್ತಾ ನಡೆದಾಡುತಿದ್ದಾನೆ, ಭಾರವಾದ ಹೆಜ್ಜೆಗಳನ್ನಿಡುತ್ತಿದ್ದಾನೆ. ಗೋಣಿ ಚೀಲ ವ್ಯಾಪಾರಿ ಭಾಷಣ ಕೇಳಿ ಅದನ್ನು ನಂಬಿ ಸ್ವತಹ ಕೆಟ್ಟಿದ್ದಾನೆ ಅದರ ನಡುವೆ ಇನ್ನು ಹಲವರು ಭಾಷಣವನ್ನು ಕೇಳುತ್ತಾ ಚಪ್ಪಾಳೆ ತಟ್ಟಿ ಮುಂದೊಂದು ದಿನ ವ್ಯಾಪಾರಿಯ ಹಾಗೆ ಎಲ್ಲವನ್ನು ಕಳೆದುಕೊಳ್ಳುವ ದಿನಗಳಿಗಾಗಿ ಕಾಯುತಿದ್ದಾರೆ.


Monday, August 11, 2014

ಕಟುಕ ಮನಸ್ಸು (ಚುಟುಕ)



ಅವನು ಜರೆದಾಗ ಇವನ ಉತ್ತರ,
ಇವನು ಉತ್ತರಿಸಿದಾಗ ಅವನು ತತ್ತರ. 

ಸ್ವಾರ್ಥಿಗಳ ಮಧ್ಯೆ ಕಾದಾಟದ ಕದನ,
ಒಂದಾಷಯದ ಜನರೆಲ್ಲಾ ಅಲ್ಲಲ್ಲಿ ವಿರಸ. 

ಲಯ ತಪ್ಪಿದ, ತಪ್ಪಿಸಿದ ಜನರ ನಡುವೆ,
ವೈಷಮ್ಯ ದ್ವೇಷಗಳೆಂಬ ಮಹಾ ಕಣಿವೆ. 

ಕಣ್ಣೀರೊರೆಸಲು ಅಡ್ಡಗಾಲಾಯಿತು ನಮ್ಮ ಸ್ವಾರ್ಥ,
ಅಹಂಕಾರ ತೊರೆಯದ ನಮ್ಮ ಮನಸ್ಸೆಷ್ಟು ಕಟುಕ

Wednesday, August 6, 2014

ಸಮಸ್ಯೆಗಳನ್ನು ಸೃಸ್ಟಿಸುವ ಕೊಳವೆ ಬಾವಿ ದುರಂತ (ಲೇಖನ)



ಮಗುವೊಂದು ಕೊಳವೆ ಬಾವಿಗೆ ಬಿದ್ದು ಅದು ಬಲು ದೊಡ್ಡ ದುರಂತವಾಗೋದು ಸಹಜ, ಅಲ್ಲಿ ಕೆಲವು ಮಾನವ ನಿರ್ಮಿತ ಉಪಕರಣಗಳ ರಿಹರ್ಸಲ್ ನಡೆಯುವುದು ಕೂಡಾ ಇತ್ತೀಚೀಗೆ ತೀರಾ ಸಾಮಾನ್ಯ, ಹಲವು ಉಪಕರಣಗಳಿಂದ ಆಳವಾದ ಗುಂಡಿ ತೊಡಲು ಸಹಕಾರಿ ಆಗಿದೆಯಾದರೂ ಕೊಳವೆ ಬಾವಿ ದುರಂತಕ್ಕೆಂದೇ ತಯಾರಿಸಿದ ಉಪಕರಣಗಳು ಕೈ ಕೊಟ್ಟು ಹಲವು ಜೀವಗಳು ಬಲಿಯಾಗಿದೆ ಎನ್ನುವುದು ಗಮನಿಸಬೇಕಾದ ವಿಚಾರ. ಮುನ್ನೆಚ್ಚರಿಕೆ ಇಲ್ಲದ ಸಲುವಾಗಿ ಆಗಾಗ್ಗೆ ಕೊಳವೆ ಬಾವಿ ದುರಂತಗಳು ಅಲ್ಲಲ್ಲಿ ನಡೆಯುತ್ತಿದೆ! ಬಿದ್ದ ನಂತರ ರಾತ್ರಿ ಹಗಲು ಎನ್ನದೆ ಅದರ ಹಿಂದೆ ಶ್ರಮ ವಹಿಸಿ ಮಕ್ಕಳನ್ನು ಬಲಿಮಾಡುವುದಕ್ಕಿಂತ ಕಠಿಣ ಕಾನೂನು ತಂದರೆ ಹಲವು ಪೋಷಕರ ಕಣ್ಣುಗಳಲ್ಲಿ ಕಣ್ಣೀರು ತರಿಸುವುದನ್ನು ನಿಲ್ಲಿಸಬಹುದು, ಬಿದ್ದ ಮೇಲೆ ಹಲವು ಲಕ್ಷ ರೂಪಾಯಿಗಳನ್ನು ಜಿಲ್ಲಾಡಳಿತ ವ್ಯಯಿಸುವುದನ್ನು ನಿಲ್ಲಿಸಬಹುದು.
ಸದ್ಯಕ್ಕೆ ತಿಮ್ಮಣ್ಣ ಅವರ  ತಂದೆ ಹನುಮಂತ ಅವರು ಒಂದು ಹೊಸ ಸಮಸ್ಯೆಯನ್ನು ಎತ್ತಿ ಹಿಡಿದಿದ್ದಾರೆ, ಕೊಳವೆ ಬಾವಿ ದುರಂತದ ನಂತರ ತನ್ನ ಮಗನ್ನನ್ನು ಕಳೆದುಕೊಳ್ಳುವ ಭೀತಿಯೊಂದಿಗೆ ತನ್ನ ಹೊಲ ನಾಶವಾಗಿ ತಾನು ಮಾಡಿದ ಸಾಲ ತೀರಿಸಲಾರೆ ಎನ್ನುವ ಗೋಜಿನಲ್ಲಿದ್ದಾರೆ, ಏನಿದ್ದರೂ ಇದು ಅವರ ನಿಜ ಸಮಸ್ಯೆಯು ಹೌದು ಎಲ್ಲ ರಿಹರ್ಸಲ್ ಗಳು ನಡೆದು ಕಾರ್ಯಾಚಾರಣೆ ಕೊನೆಗಂಡ ನಂತರ ಅತ್ತ ಕಡೆ ತಿರುಗಿ ನೋಡುವವರು ಯಾರೂ ಇಲ್ಲ ಆ ಮೇಲೆ ಅವರ ಪಾಡು ಕೇಳುವವರು ಯಾರೂ ಇಲ್ಲ, ಹೌದು ತಿಮ್ಮಣ್ಣ ಅವರು ಹೇಳುವುದು ಕೂಡಾ ಇದನ್ನೇ ಒಂದು ಮಗು ಕೊಳವೆ ಬಾವಿಯ ಆಳದಲ್ಲಿ ಸಿಲುಕಿರುವ ಸಮಯದಲ್ಲಿ ತನ್ನ ಇನ್ನಿಬ್ಬರು ಮಕ್ಕಳ ಭವಿಷ್ಯಕ್ಕಾಗಿ ಕಾರ್ಯಾಚರಣೆ ನಿಲ್ಲಿಸಿ ಎಂದು ಅಂಗಲಾಚುತಿದ್ದಾರೆ, ಮಗು ಕೊಳವೆ ಬಾವಿಗೆ ಬಿದ್ದದ್ದು ದುರಂತವಾದರೆ ಅವರ ಈ ಪೇಚಾಟ ಅದಕ್ಕಿಂತಲೂ ದೊಡ್ಡ ದುರಂತ ಅನ್ನುವುದು ಖೇದಕರ, ಸರಕಾರ ಆದಷ್ಟು ಬೇಗ ತೆರೆದ ಎಲ್ಲ ಕೊಳವೆ ಬಾವಿಯನ್ನು ಮುಚ್ಚಿಸಲು ಕ್ರಮ ಕೈಗೊಳ್ಳಲಿ ಆ ಮೂಲಕ ಇನ್ನಾದರೂ ಕೂಡಾ ಮಗುವನ್ನು ಕಳೆದುಕೊಳ್ಳುವ ಭೀತಿಯೊಂದಿಗೆ ಭವಿಷ್ಯವನ್ನು ಕಳೆದುಕೊಳ್ಳುವ ಭೀತಿ ಯಾರಿಗೂ ಬಾರದಿರಲಿ.

Sunday, August 3, 2014

ಫೇಕುಗಳಿಗೆ ದಾರಿಯಾಗುತ್ತಿರುವ ನಮ್ಮ ಕುತರ್ಕಗಳು (ಲೇಖನ)






ಅಸಮಾಧಾನ ಗೊಂಡವರನ್ನು ಸಮಾಧಾನ ಪಡಿಸುವಲ್ಲಿ ಕಾಲ ಕಳೆಯುವ ನಾವುಗಳು ಕಾರಣಗಳಿಲ್ಲದೆ ಕೆಲವು ಬಾರಿ ನೈತಿಕ ಪೋಲಿಸ್ ಗಿರಿಗೆ ಬಲಿಯಾಗುತಿದ್ದೇವೆ, ಆಯುಧಗಳೊಂದಿಗೆ ಬದುಕು ಕಟ್ಟಿಕೊಳ್ಳಬೇಕು ಎಂಬ ಧ್ಯೇಯದೊಂದಿಗೆ ಮನಸ್ಸಿನಲ್ಲಿ ಗುಮ್ಮವನ್ನಿಟ್ಟು ಆ ದಾರಿಯಲ್ಲಿ ಸಾಗುತ್ತಿದ್ದ ಒಂದು ಯುವ ಪಡೆ ಕಾನೂನಿನ ಕಣ್ಣಿಗೆ ಬಿದ್ದು ಜೈಲು ಕಂಬಿ ಎನಿಸಿದ್ದಲ್ಲದೆ  ಹಲವು ಅಮಾಯಕರು ಜೈಲಿನ ಕಂಬಿಗಳ ಹಿಂದೆ ಬಂದಿಯಾಗುವ ವ್ಯವಸ್ಥೆ ರೂಪಿತವಾಗಿದೆ, ಕ್ರಾಸ್ ರೂಟಿನಲ್ಲಿ ದೇವನ ಬಲಿ ವಿಜಯ
 ಸಾಧಿಸಬಹುದೆಂದು ಹಾತೊರೆಯುವವರು ಅಲ್ಲಲ್ಲಿ ಬೆಳೆದು ಬರುತಿದ್ದಾರೆ.

ಹಲವು ಸಾಮಾಜಿಕ ಧಾರ್ಮಿಕ ಚಟುವಟಿಕೆಗಳನ್ನು ನಿರಂತರ ನಡೆಸಿ ಸಂಘಟಿಸಲು ಪ್ರಯತ್ನಿಸಿ ನಾವೊಂದು ಸೋತು ಹೋದ ಸಮುದಾಯವಾಗಿದ್ದೇವೆ, ಒಂದಾಗಬೇಕು ಎಂದು ಸೇರಿದವರಲ್ಲಿ ಹೆಚ್ಚಿನವರು ಬೇರೆ ಬೇರೆಯಾಗಿದ್ದಾರೆ, ತರ್ಕಗಳು ನಡೆದಿದ್ದರೆ ಅದು ಸಮಾಜದ, ಸಮುದಾಯದ ಬದಲಾವಣೆಗೆ ಫಲಪ್ರದ ಕಾರಣವಾಗುತ್ತಿತ್ತು, ಆದರೆ ನಡೆದಿರುವ ಕುತರ್ಕಗಳ ಫಲವಾಗಿ ವ್ಯವಸ್ಥೆ ಚಿನ್ನಬಿನ್ನವಾಗಿ ವ್ಯವಸ್ಥೆಯನ್ನು ಸರಿಪಡಿಸದ ದಾರಿಯತ್ತ ಸಾಗಿದ್ದೇವೆ, ಒಂದು ದುರವಸ್ಥೆಯ ಎಲ್ಲಾ ಲಕ್ಷಣಗಳನ್ನು ಮೈಗೂಡಿಸಿಕೊಂಡಿದ್ದೇವೆ.
ಆಡಂಬರ ಬೇಡ ಎಂದವರಂತು ತೆರೆಮರೆಯಲ್ಲಿ ಆಡಂಬರದ ಜೊತೆ ಒಗ್ಗೂಡಿ ತಲೆಮರೆಸಿಕೊಂಡು ಓಡಾಡುವ ಪರಿಸ್ಥಿತಿ ಇದೆ, ತಮ್ಮ ಅಭಿಪ್ರಾಯಗಳನ್ನು ಮೆಚ್ಚದಿದ್ದಾಗ ತಾವೇ ಒಂದು ಅಭಿಪ್ರಾಯವಾಗಿ ಬೆಳೆಯುವ ನಡೆ ಸಮುದಾಯಕ್ಕೆ ಮಾರಕವಾಗಿದೆ, ಇದೆಲ್ಲದಕ್ಕಿಂತ ಬದಲಾವಣೆಯ ದಾರಿ ಇನ್ನು ಕೂಡಾ ತೆರೆದೇ ಇದೆ ಎನ್ನುವುದನ್ನು ಮರೆಯಬಾರದು.

ಜಗತ್ತಿಗೆ ಜೀವನದ ಒಂದು ಪರಿಪೂರ್ಣ ವ್ಯವಸ್ಥೆಯನ್ನು ತೋರಿಸಿ ದೇವಮಾರ್ಗದಲ್ಲಿ ಜೀವುಸುವಂತೆ ಬದಲಾವಣೆಯ ಪರಿಕಲ್ಪನೆಯ ವ್ಯವಸ್ಥೆಯಲ್ಲಿ ಜಗತ್ತನ್ನೇ ಶೇಕ್ ಮಾಡಿದ್ದ ಇಸ್ಲಾಮಿನಲ್ಲಿ ಕೆಲವು ನಾಮಧಾರಿಗಳು ಫೇಕುಗಳಾಗಿ ಪರಿವರ್ತನೆಯಾಗಿದ್ದಾರೆ, ಅಲ್ಲಲ್ಲಿ ಫೇಕುಗಳು ತುಂಬಿ ಹೋಗಿದ್ದಾರೆ, ನಮ್ಮವರಲ್ಲಿ ಫೇಕುಗಳು ತುಂಬಿ ಹೋಗಿ ಸಚ್ಚಾರಿತ್ರ್ಯ ಪರಿಕಲ್ಪನೆ ಸ್ವಾರ್ಥಕ್ಕೆ ಬಲಿಯಾಗುತ್ತಿದೆ, ಫೇಕುಗಳನ್ನು ಬೆಂಬಲಿಸಿ ನಾವು ಇನ್ನಷ್ಟು ಫೇಕುಗಳು ಬೆಳೆದು ಬರಲು ದಾರಿಯಾಗಿದ್ದೇವೆ, ನಮ್ಮ ತರ್ಕ ಮತ್ತು ಕುತರ್ಕಗಳು ಒಂದು ಸುಂದರ ಇಸ್ಲಾಮಿ ಕಲ್ಪನೆಯನ್ನು ಬಲಿಪಸು ಮಾಡಿರುವುದು ವಿಪರ್ಯಾಸ.