Thursday, April 3, 2014

ಬದಲಾವಣೆಯ ಭಾಷಣ ಕೇಳಿ ಕನಸಿನಲ್ಲಿ ಕಂಡ ಗುಜರಾತ್ (ಲೇಖನ)









ನರೇಂದ್ರ ಮೋದಿಯ ಬದಲಾವಣೆಯ ಹಾದಿಯಲ್ಲಿ ಗುಜರಾತ್ ಎಂಬ ಭಾಷಣ ಕೇಳಿದ ಮೇಲೆ ಗಟ್ಟಿಯಾಗಿ ನಿದ್ರೆಕೆಲವೇ ಕ್ಷಣದಲ್ಲಿ ಮನಸ್ಸು ಕಲ್ಪನೆಯ ಲೋಕದಲ್ಲಿ ಪ್ರಹರಿಸತೊಡಗಿದಂತೆ ಪ್ರತಿಜ್ವಲಿಸುತ್ತಿರುವ ಗುಜರಾತ್ ಕಣ್ಣೆದುರಿಗೆ ಬಂತು, ಗುಜರಾತನ್ನು ಪ್ರವೇಸಿಸಿದಂತೆ ಹಾಲಿವುಡ್ ಚಿತ್ರದಲ್ಲಿ ಮಾತ್ರವೇ ಕಾಣಲು ಸಾಧ್ಯವಾಗಿರುವ ಅಮೇರಿಕಕ್ಕಿಂತಲೂ ಮುಂದುವರಿದ ರಾಜ್ಯದ ಪರಿಚಯವಾಗತೊಡಗಿತು, ವಿಚಿತ್ರ ಎಂದರೆ ನಮ್ಮ ಊರಿನ ಹಾಗೆ ಹದಗೆಟ್ಟ ರಸ್ತೆ ಅಲ್ಲಿರಲಿಲ್ಲ, ಸಣ್ಣ ವಾಹನಗಳು ಮತ್ತು ಘನ ವಾಹನಗಳು ಹೋಗಲು ಬೇರೆ ಬೇರೆ ಚಥುಷ್ಪಥಗಳು ಇರುವ ಈ ದೇಶದ ಆ ರಾಜ್ಯದಲ್ಲಿ ಮಾತ್ರ ಬೈಕ್ ಹೋಗಲು, ಸೈಕಲ್ ಹೋಗಲು ಕೂಡಾ ಬೇರೆಯೇ ಪಥದ ವ್ಯವಸ್ಥೆಯಿತ್ತು, ನಿಜವಾದ ಅಭಿವ್ರದ್ದಿಯೆಂದರೆ ಇದು.!!

ತಿನ್ನಲು ಗತಿ ಇಲ್ಲದ, ಬಟ್ಟೆ ತೊಡಲು ಸಾಧ್ಯವಿಲ್ಲದ ಬಡವರು ಎನ್ನುವವರು ಆ ರಾಜ್ಯದ ಮೂಲೆ ಮೂಲೆಯಲ್ಲೂ ಕಾಣಲಿಲ್ಲ, ಕನಸಿನುದ್ದಕ್ಕೂ ಅವರ ಪರಿಚಯ ಆಗಲೇ ಇಲ್ಲ. ಇನ್ನೂ ಅಚ್ಚರಿಯ ಸಂಗತಿ ಎಂದರೆ ಮಾವಿನ ಮರದಲ್ಲಿ ಬಾಳೆಹಣ್ಣು, ಅಡಿಕೆ, ಈರುಳ್ಳಿ, ದ್ರಾಕ್ಷೆ  ಬೆಳೆಯಲು ಸಾಧ್ಯವಾಗಿರುವುದು ಆ ದೇಶದ ಅಭಿವೃದ್ದಿಗೆ ಹಿಡಿದ ಕೈಗನ್ನಡಿ, ಒಂದು ಕ್ಷಣ ನಂಬಲಾಗಲಿಲ್ಲ, ಆದರೆ  ಅಭಿವೃದ್ದಿಯನ್ನು ಒಪ್ಪಿಕೊಳ್ಳಲೇಬೇಕು, ಇದನ್ನು ನೋಡಿದ ಮೇಲೆ ಬದಲಾವಣೆಯ ಭಾಷಣಕ್ಕೊಂದು ಅರ್ಥವಿದೆ ಎನ್ನಿಸಿತು. 



ಅಭಿವೃದ್ದಿಯ ಪರಿಚಯವಾಗಿದ್ದರಿಂದ ಇನ್ನು ಹೆಚ್ಚು ನೋಡಬೇಕೆಂದೆನಿಸಲಿಲ್ಲ ಆದರೆ ಸಂಪೂರ್ಣವಾಗಿ ನೋಡದೆ ಬಂದರೆ ಇಷ್ಟು ಕಷ್ಟ ಪಟ್ಟು ಮಾಡಿದ ಅಭಿವೃದ್ದಿಗೆ ಬೆಲೆ ನೀಡದ ಹಾಗೆ ಆಗಬಹುದೆಂದು ಮುಂದುವರೆಯಿತು ಕನಸಿನ ಪಯಣ.. ಬಾಪ್ ರೆ! ಎಂದು ಹೇಳುವ ಹಾಗೆ ಪ್ರತಿಯೊಂದು ಹಳ್ಳಿಯಲ್ಲೂ ಕೂಡಾ ವ್ಯವಸ್ಥಿತವಾಗಿ ಹೆಲಿಪ್ಯಾಡ್ ವ್ಯವಸ್ಥೆ ಇತ್ತು ಏಕೆಂದರೆ ಸಾಮಾನ್ಯ ವ್ಯಕ್ತಿಯೂ ಕೂಡಾ ಹೆಲಿಕಾಪ್ಟರ್ ನಲ್ಲೇ ಸುತ್ತುವುದು ಆ ರಾಜ್ಯದ ಬದಲಾವಣೆಯ ಲಕ್ಷಣ. ನಮ್ಮ ಊರಿನ ಹಾಗೆ ಅಲ್ಲಿಯ ಸಣ್ಣ ಹಳ್ಳಿಯಲ್ಲಿ ಕೂಡಾ ಪವರ್ ಕಟ್ ಅನ್ನುವುದು ಇಲ್ಲವೇ ಇಲ್ಲ, ಆ ರಾಜ್ಯದವರಿಗೆ ಕರೆಂಟ್ ಹೋಗುವುದು ಅಂದರೆ ಏನು ಅಂತ ಗೊತ್ತೇ ಇಲ್ಲ, ಜನತೆಯ ಬಳಿ ಮಾತನಾಡಿದಾಗ ತಿಳಿಯಿತು ಅವರಿಗೆ ಅವರ ಮನೆಗಳ ಲೈಟಿನ, ಏಸಿಯ ಸ್ವಿಚ್ ಆಫ್ ಮಾಡಿದ ನೆನಪೇ ಇಲ್ಲ, ಇದೇ ನಾನು ಮತ್ತು ನೀವು ಸದಾ ಕೇಳುತ್ತಿರುವ ಬದಲಾವಣೆ.


ಅಭಿವೃದ್ದಿಯ ಫಲವಾಗಿ ಆ ರಾಜ್ಯದ ಸಮುದ್ರದ ನೀರು ಕೂಡ ಸಿಹಿಯಾಗಿತ್ತು, ನೋಡಿ ಕಲಿಯಬೇಕು, ಬದಲಾವಣೆಯಲ್ಲಿ ಅಮೇರಿಕಾವನ್ನು ಕೂಡಾ ಗುಜರಾತ್ ಮೀರಿದೆ. ಇನ್ನು ಮಳೆಯ ಬಗ್ಗೆ ಕೇಳಬೇಡಿ ಅದು ಆ ರಾಜ್ಯದ ಚುಕ್ಕಾಣಿ ಹಿಡಿದವರು ಬೇಕು ಎಂದಾಗ ಬರುತ್ತದೆ, ಬೇಡ ಎಂದಾಗ ಹೊರಟು ಹೋಗುತ್ತದೆ, ಆ ಮಟ್ಟಕ್ಕೆ ತಲುಪಿದೆ ಆ ರಾಜ್ಯದ ಅಭಿವೃದ್ದಿ, ಅಲ್ಲಿಯ ಜನರೆಲ್ಲಾ ಹಾಯಾಗಿ ಇದ್ದಾರೆ, ಅವರಿಗೆ ಯಾವ ಕಷ್ಟವೂ ಇಲ್ಲ, ಸಮಸ್ಯೆಯೂ ಇಲ್ಲ, ನೋವು ಕೂಡಾ ಇಲ್ಲ, ಅವರಿಗಿನ್ನೂ ಅಲ್ಲಿ ಸರ್ಕಾರವನ್ನು ಬದಲಿಸುವ ಮನಸ್ಸಿಲ್ಲ ಅದರ ಅಗತ್ಯವೂ ಆ ಜನತೆಗಿಲ್ಲ ಯಾಕೆಂದರೆ ಹತ್ತು ವರ್ಷಗಳಿಂದ ಆಳಿದವರು ಆ  ರಾಜ್ಯವನ್ನು ಅಸ್ಟೊಂದು ಬದಲಾಯಿಸಿ ಹಾಕಿದ್ದಾರೆ, ಆ ರಾಜ್ಯದಲ್ಲಿ ಗಂಡು ಮಕ್ಕಳು ಕೂಡ ಇತ್ತೀಚಿಗೆ ಹೆರಳು ಆರಂಭಿಸಿದ್ದಾರೆ, ಇಷ್ಟು ಬದಲಾವಣೆ ಆಗಿರುವಾಗ ಇನ್ನು ಬೇರೆಯವರ ಅಗತ್ಯ ಯಾಕೆ ಆ ಜನರಿಗೆ.

ಇನ್ನೂ ಒಂದು ವಿಷಯ ಆ ರಾಜ್ಯದಲ್ಲಿ ಕಂಡಿತು, ಪ್ರತಿ ಜಿಲ್ಲೆಯನ್ನು ಕನೆಕ್ಟ್ ಮಾಡಲು ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಎಕ್ಷ್ ಪ್ರೆಸ್ ಫ್ಲೈ ಓವರ್ ಗಳನ್ನು ನಿರ್ಮಿಸಲಾಗಿದೆ,ಅದು ಒಂದು ಜಿಲ್ಲೆಯಿಂದ ಹೊರಟರೆ ತಲುಪುವುದು ಇನ್ನೊಂದು ಜಿಲ್ಲೆಗೆ ಮತ್ತು ಇತ್ತೀಚಿಗೆ ಅದು ಜಗತ್ತಿನ ಅತ್ತ್ಯಂತ ಉದ್ದದ ಫ್ಲೈ ಓವರ್ ಎಂದು ಹೆಸರು ಪಡೆದಿದೆ ಎಂದು ಸ್ಥಳೀಯರಿಂದ ಗೊತ್ತಾಯಿತು, ನೋಡಿ ಇದು ಬದಲಾವಣೆ ಕೇವಲ ಭಾಷಣಕ್ಕೆ ಸೀಮಿತವಲ್ಲ .

ಮುಗ್ದ ಜನರ ಮಾರಣ ಹೋಮ, ಕೊಲೆ, ಸುಲಿಗೆ, ದರೋಡೆ, ಅಕ್ರಮಗಳು ಆ ರಾಜ್ಯದಲ್ಲಿ ನಡೆಯುವುದೇ ಇಲ್ಲ , ಮತ್ತ್ತುಅಲ್ಲಿನ ಪೊಲೀಸ್ ಸ್ಟೇಷನ್ ಗಳಲ್ಲಿ ಯಾವ ಕೇಸ್ ಕೂಡ
ದಾಕಲಾಗುತ್ತಿಲ್ಲ ಮತ್ತು ಅಭಿವೃದ್ದಿಯ ಮಟ್ಟ ಎಲ್ಲಿಗೆ ತಲುಪಿದೆಯೆಂದರೆ ಅಲ್ಲಿದ್ದ ಎಲ್ಲ ಪೊಲೀಸ್ ಸ್ಟೇಷನ್ ಗಳನ್ನು ಮುಚ್ಚಲಾಗಿದೆ, ಕೇಸ್ ಬರುವುದಿಲ್ಲ ಎಂದ ಮೇಲೆ ಪೊಲೀಸ್ ಸ್ಟೇಷನ್ ಆದರೂ ಯಾಕೆ ಬೇಕು ಅಲ್ಲವೇ? ಭ್ರಷ್ಟಾಚಾರ ನಿಗ್ರಹ ದಳ, ಲೋಕಾಯುಕ್ತ ವ್ಯವಸ್ಥೆ, ಕೋರ್ಟ್ ಇವೆಲ್ಲವನ್ನೂ ಮುಚ್ಚಲಾಗಿದೆ ಈ ಸಂಸ್ತೆಗಳಿಗೂ ಆ ರಾಜ್ಯದಲ್ಲಿ ಕೆಲಸವೇ ಇಲ್ಲ, ಏಕೆಂದರೆ ಅಲ್ಲಿ ಎಲ್ಲವೂ ಸರಿಯಾಗಿದೆ.

ಮೆಟ್ರೋ, ಮೊನೊ ರೈಲುಗಳು ಅಲ್ಲಿಯ ಪ್ರತಿಯೊಂದು ಕೇರಿಗಳಲ್ಲೂ ಇದೆ, ಬಡವರು ಅನ್ನುವವರು ಅಲ್ಲಿ ಇಲವೇ ಇಲ್ಲ, ಮಹಿಳಾ ಶೋಷಣೆ ನಡೆದ ಉದಾಹರಣೆಗಳೇ ಇಲ್ಲ, ನೋಡಿ ಕಲಿಯಿರಿ ಇದು ನಿಜವಾದ ಅಭಿವೃದ್ದಿ, ಇತ್ತೀಚಿಗೆ ಅಲ್ಲಿನ ಅಭಿವೃದ್ದಿ ಕಂಡು ಪ್ರಾಣಿಗಳು ಕೂಡಾ ಮನುಷ್ಯನಿಗೆ ತಂಟೆ ಮಾಡುವುದು ಬಿಟ್ಟು ಬಿಟ್ಟಿದೆಯಂತೆ, ಮೊಬೈಲ್, ಲ್ಯಾಪ್ಟಾಪ್ ಇಲ್ಲದ ಮನೆಗಳೇ ಅಲ್ಲಿ ಇಲ್ಲ, ಅಲ್ಲಿಯ ಜನ "ಫೋರ್ ಜೀ" ಯನ್ನು ಬಳಸುವುದನ್ನು ಬಿಟ್ಟುಬಿಟ್ಟಿದ್ದಾರೆ ಈಗ ಅಲ್ಲಿ ಸಾಮಾನ್ಯ ಜನತೆ ಕೂಡ "ಫವ್ಯೂ ಜೀ" ಬಳಸುವುದರಲ್ಲಿ ನಿರತರಾಗಿದ್ದಾರೆ. ಐದು ಅಂತಸ್ತಿಗಿಂತ ಕಡಿಮೆ ಇರುವ ಮನೆಗಳು ಆ ರಾಜ್ಯದ ಯಾವ ಜಿಲ್ಲೆಯಲ್ಲೂ ಇಲ್ಲ, ಒಟ್ಟಲ್ಲಿ ಅ ರಾಜ್ಯ ಎಲ್ಲ ವಿಷಯದಲ್ಲೂ ಸುಭೀಕ್ಷಿತವಾಗಿದೆ.
 

ಹೀಗೆ ಮುಂದೆ ಸಾಗಿದಾಗ ಅಲ್ಲಿಯ ಮರುಭೂಮಿಯ ಚಿತ್ರಣ ಕಂಡು ದಂಗಾಗಬೇಕಾಯಿತು, ಆ ಮರುಭೂಮಿಯಲ್ಲಿ ಅಭಿವೃದ್ದಿಯ ಫಲವಾಗಿ ಅಲ್ಲಿ ಭತ್ತ, ಗೋಧಿ, ಕಬ್ಬು ಬೆಳೆದಿದ್ದರು, ಇನ್ನಸ್ಟು ಮುಂದೆ ಸಾಗಲು ಅಡಿಯಿಟ್ಟಾಗ ಮೆಲ್ಲನೆ ಎಷ್ಟು ಮಲಗ್ತಿಯ ಏಳು ಎಂದ ಹಾಗೆ ಅಯಿತು....ಛೇ ಗುಜರಾತಿನ ಸಂಪೂರ್ಣ ಬದಲಾವಣೆಯ ಚಿತ್ರಣ ಕಾಣಲಿಕ್ಕೆ ಸಾಧ್ಯವಾಗದೆ ಹೋಯಿತು....ಇನ್ನೇನಿದ್ದರೂ ಮೋದಿಯ ಭಾಷಣದಲ್ಲಿ ಮಾತ್ರ ಬದಲಾವಣೆಯಯನ್ನು ಕಾಣಬೇಕು ಅಸ್ಟೇ.

No comments: