Thursday, May 29, 2014

ಮೋದಿಯವರ ಅಭಿವೃದ್ದಿಯ ಆಶಯಕ್ಕೆ ಅಡ್ಡಗಾಲಾಗುತ್ತಿರುವ ಹಿಂದುತ್ವವಾದಿಗಳ ಕಲ್ಲು (ಲೇಖನ)



ಪ್ರಜಾಪ್ರಭುತ್ವ ದೇಶದ ಹದಿನೈದನೆ ಪ್ರಧಾನಮಂತ್ರಿಯಾಗಿ ಭಾರತ ದೇಶಕ್ಕೆ ನರೇಂದ್ರ ಮೋದಿಯವರು  ಪಾದಾರ್ಪನೆಗೈದಿದ್ದಾರೆ, ಅವರ ಪ್ರಮಾಣವಚನ ಸಮಾರಂಭ ಹಲವು ಅಚ್ಚರಿಯ ಬೆಳವಣಿಗೆಗೆ ಕಾರಣವಾಗಿದೆ, ಸಾರ್ಕ್ ದೇಶಗಳ ಹಲವು ಮುಖಂಡ ದಿಗ್ಗಜರುಗಳು ಭಾರತದ ನೆಲಕ್ಕೆ ಕಾಲಿಟ್ಟಿದ್ದಾರೆ, ಶತ್ರು ದೇಶವೆಂದೇ ಪರಿಗಣಿಸಲ್ಪಟ್ಟಿರುವ  ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಪ್ ಕೂಡಾ ಭಾರತಕೆ ಭೇಟಿ ನೀಡಿದ್ದಾರೆ, ಅವರು ಭಾರತಕ್ಕೆ ಕಾಲಿಟ್ಟು ಭಾರತ ದೇಶದ ಮಣ್ಣನ್ನು ಅಪವಿತ್ರ ಮಾಡಿದಿರಲಿ ಎಂದು ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಲು ಪರಿಶ್ರಮ ಪಟ್ಟವರೇ ಅಪಸ್ವರ ಎತ್ತಿದರೂ, ಅದೆಲ್ಲವನ್ನು ಮೆಟ್ಟಿ ನಿಂತು ನರೇಂದ್ರ ಮೋದಿಯವರು ಬದಲಾವಣೆಯ ಬೆಳವಣಿಗೆಯತ್ತ ದಾಪುಗಾಲಿಟ್ಟಿದ್ದಾರೆ.


ಅಫ್ಗಾನಿಸ್ಥಾನ, ಶ್ರೀಲಂಕ, ಬಾಂಗ್ಲಾದೇಶ, ಮಾಲ್ಡಿವ್ಸ್, ನೇಪಾಳ, ಭೂತಾನ್ ನಾಯಕರ ಜೊತೆ ಹಲವು ಮಹತ್ವದ ಮಾತುಕತೆಗಳು ನಡೆದಿವೆ, ಮಾರಿಷಸ್ ಪ್ರಧಾನಿ ಕೂಡ ಸಾಥ್ ನೀಡಿದ್ದಾರೆ. ಮುಖ್ಯವಾಗಿ ಪಾಕಿಸ್ತಾನದ ಪ್ರಧಾನಿಯ ಜೊತೆ ಉತ್ತಮ ಸೌಹಾರ್ದಯುತ ಪ್ರಸ್ತಾಪಗಳು ನಡೆದಿವೆ. ನವಾಜ್ ಷರೀಪ್ ಮತ್ತು ನರೇಂದ್ರ ಮೋದಿಯವರು ಬಹಳ ಆತ್ಮೀಯವಾಗಿ ಕೈ ಕುಳುಕಿಕೊಂಡಿದ್ದಾರೆ, ಇದು ಎರಡು ದೇಶಗಳ ನಡುವೆ ಉತ್ತಮ ಸಂಬಂದ ಮೂಡಿಸುವ ನಡೆಯಾಗಲಿ ಎನ್ನುವುದು ಎಲ್ಲರ ಅಭಿಪ್ರಾಯ. ಪದಗ್ರಹಣ ಸಮಾರಂಭದಲ್ಲಿ ಕಂಡು ಬಂದ ದೃಶ್ಯಗಳು ಕಣ್ತುಂಬಿಕೊಳ್ಳುವಂತೆ ಮಾಡಿದೆ, ವೈರಿಗಳಂತೆ ಕಾದಾಡುತಿದ್ದವರು ಪರಸ್ಪರ ಸ್ನೇಹಮಯವಾಗಿ ವರ್ತಿಸಿದ್ದಾರೆ, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ನಡೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಎತ್ತಿ ಹಿಡಿಡಿದೆ, ದೇವೇಗೌಡರು ಸೇರಿ ಹಲವು ಅಗ್ರಗಣ್ಯ ನಾಯಕರು ಪದಗ್ರಹಣ ಸಮಾರಂಭಕ್ಕೆ ಸಾಥ್ ನೀಡಿದ್ದಾರೆ, ಅಡ್ವಾನಿಯವರು ಖುದ್ದಾಗಿ ಎಲ್ಲ ಅತಿಥಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡದ್ದು ಕೂಡ ಒಳ್ಳೆಯ ಬೆಳವಣಿಗೆ, ಏನೇ ವೈಷಮ್ಯಗಳಿದ್ದರು ನಾಯಕರ ಈ ನಡೆ  ಪ್ರಜಾಪ್ರಭುತ್ವ ವ್ಯವಸ್ಥೆಗೆ ನೀಡಿದ ಗೌರವವೇ ಸರಿ.



ನರೇಂದ್ರ ಮೋದಿಯವರ ನಡೆ ಅವರ ಗೆಲುವಿಗಾಗಿ ಪರಿಶ್ರಮ ಪಟ್ಟವರಿಗೆ ಇಷ್ಟವಾದಂತೆ ಕಾಣುತ್ತಿಲ್ಲ ಅವರ ಇತ್ತೀಚೆಗಿನ  ಬದಲಾವಣೆಯ ಹಾದಿ ಕಾರ್ಯಕರ್ತರ ನಡುವೆಯೇ ಅಪಸ್ವರದ ಮಾತಾಗುತ್ತಿದೆ, ನರೇಂದ್ರ ಮೋದಿಯವರು ಹಿಂದುತ್ವನ್ನು ಮರೆತಿದ್ದಾರೆ ಎಂದು ಹೇಳುವ ಮಟ್ಟಿಗೆ ಮೋದಿಯವರ ನಡೆ ಸಾಗಿದೆ ಎಂದು ಪಿಸುಗುಡುತ್ತಿದ್ದಾರೆ, ಅವರು ಅಭಿವೃದ್ದಿಯ ಕಡೆಗೆ ಹೆಚ್ಚು ಗಮನ ಕೊಡುತಿದ್ದಾರೆ ಇದು ನಿಜವಾಗಿಯೂ ಉತ್ತಮ ಬೆಳವಣಿಗೆ, ಭಯದ ಕರಿನೆರಳಿನಲ್ಲಿ ಬದುಕಬೇಕಾಗಬಹುದೋ ಎಂದು ತಿಳಿದಿದ್ದ ಅಲ್ಪಸಂಖ್ಯಾತರು ಕೂಡಾ ನಿಟ್ಟುಸಿರು ಬಿಟ್ಟವರಂತೆ ಕಂಡರೂ ಸಂಪೂರ್ಣವಾಗಿ ಇದು ಹೀಗೆಯೇ ಇರಬಹುದು ಎಂದು ಒಪ್ಪಿಕೊಳ್ಳಲು ತಯಾರಾಗಿಲ್ಲ ಮತ್ತು ಅದಕ್ಕೆ ಕಾಲವೇ ಉತ್ತರಿಸುತ್ತದೆ ಎನ್ನುವಾಗಲೇ ಆರ್ಟಿಕಲ್ 370ಯ ಬಗ್ಗೆ ಚರ್ಚೆ ಆರಂಭವಾಗಿದೆ. ನರೇಂದ್ರ ಮೋದಿಯವರ ಕೆಲವು ನಡೆ ಅಲ್ಪಸಂಖ್ಯಾತರಲ್ಲಿ ಬಹಳ ಆಶಾವಾದ ಮೂಡಿಸಿದೆ ಅದು ಹೀಗೆ ಮುಂದುವರೆಯಲಿ ಎನ್ನುವುದು ಹಾರೈಕೆ.


ನರೇಂದ್ರ ಮೋದಿಯವರು ಬದಲಾವಣೆಯ ದಾರಿಯಲ್ಲಿ ಸಾಗುವ ಪ್ರಥಮ ಹಂತವಾಗಿ ಪದಗ್ರಹಣ ನಡೆಯುತ್ತಿರುವಾಗ ಆ ಕ್ಷಣಗಳನ್ನು ಕಣ್ತುಂಬಿಕೊಳ್ಳುತ್ತಿರುವಾಗ ಯಾವುದು ನಡೆಯಬಾರದು ಎಂದು ದೇಶದ ಜನತೆ ಅಶಿಸಿತ್ತೋ ಅದು ನಡೆದಿದೆ. ಬಿಜಾಪುರದಲ್ಲಿ ವಿಜಯ ಘೋಷ ಮೆರವಣಿಗೆಯ ವೇಳೆ ಹಿಂದುತ್ವವಾದಿಗಳ ಕಲ್ಲು ಅಲ್ಪಸಂಖ್ಯಾತರ ಮೇಲೆ ಬಿದ್ದಿದೆ, ಹಿಂದುತ್ವವಾದಿಗಳು ಮತ್ತು ಅಲ್ಪಸಂಖ್ಯಾತರು ಹೊಡೆದಾಡಿಕೊಂದಿದ್ದಾರೆ. ಕೊಮುಗಲಭೆಗೆ ಹೆಸರಾಗದ ಉತ್ತರ ಕರ್ನಾಟಕದಲ್ಲಿ ಉಹಿಸದ ಘಟನೆ ನಡೆದು ಹೋಗಿದೆ, ಈ ಘಟನೆ ರಾಜ್ಯದ ಜನತೆಗೆ ಮೋದಿ ಬಂದಿದ್ದಾರೆ ಎಂದು ನೆನಪಿಸುವಂತೆ ಹಿಂದುತ್ವವಾದಿಗಳು ನಡೆದುಕೊಂಡಿದ್ದಾರೆ. ಮೋದಿಯವರು ಅದೆಷ್ಟೇ ಅಭಿವೃದ್ದಿಯ ಮಾತನ್ನಾಡಿದರು ಅದನ್ನು ಒಪ್ಪಿಕೊಳ್ಳಲು ಅವರ ಅನುಯಾಯಿಗಳು, ಅವರು ನಡೆದುಕೊಂಡು ಬಂದ ದಾರಿ ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲು ಸಾದ್ಯವಿಲ್ಲ ಎನ್ನುವುದನ್ನು ಮರೆಯುವಂತಿಲ್ಲ, ಮೋದಿಯವರು ಎಷ್ಟೇ ಅವರ ನಡೆಯನ್ನು ಬದಲಾಯಿಸುವಂತೆ ಕಂಡರೂ ಅವರ ಆಶಯವನ್ನು ಉಳಿಸಿಕೊಳ್ಳಲು ಅವರ ಅನುಯಾಯಿಗಳು ಇಷ್ಟಪಡುತ್ತಿಲ್ಲ ಎಂದು ತೋರಿಸುವಂತಹ ಹೆಜ್ಜೆ ಕಂಡು ಬರುತ್ತಿದೆ. 

ನರೇಂದ್ರ ಮೋದಿಯವರು ಬಹಳ ಆತ್ಮೀಯವಾಗಿ ನವಾಜ್ ಷರೀಫರ ಕೈ ಕುಳುಕಿದಂತೆ ಅನ್ಯೋನತೆಯಿಂದ ಕೈ ಕುಳುಕಲು  ಹಿಂದುತ್ವವಾದಿಗಳು ತಯಾರಿಲ್ಲ, ಬಿಜಾಪುರದ ಘಟನೆ ಮತ್ತೊಮ್ಮೆ ಹಿಂದುತ್ವವಾದವನ್ನು ಎತ್ತಿ ತೋರಿಸಿದೆ, ಸೌಹಾರ್ದತೆಗೆ ಭಂಗವಾಗಿದೆ, ಬಿಜಾಪುರದ ಜನ ಮೋದಿಯವರು ಅಧಿಕಾರ ಸ್ವೀಕರಿಸಿದ ದಿನ ಭಯದ ನೆರಳಿನಲ್ಲಿ ರಾತ್ರಿ ಕಳೆದಿದ್ದಾರೆ. ಹಿಂದುತ್ವಾದಿಗಳ ಕಲ್ಲು ಅಲ್ಪಸಂಖ್ಯಾತರನ್ನು ನಾಟಿದೆ, ಪ್ರತಿಯಾಗಿ ಅಲ್ಪಸಂಖ್ಯಾತ ವರ್ಗದಿಂದ ತಿರುಗೇಟು ಬಿದ್ದಿದೆ, ಇಬ್ಬರೂ ಪರಸ್ಪರ ವೈರಿಗಳಂತೆ ಹೊಡೆದಾಡಿಕೊಂಡಿದ್ದಾರೆ, ಅಲ್ಲಿ ದೂಡ್ಡ ದೊಂಬಿಯೇ ನಡೆದಿದೆ. ರಾಜ್ಯದಲ್ಲಿ ಕಾಂಗ್ರೆಸ್ಸ್ ಸರಕಾರವಿದ್ದರು ಇದಕ್ಕೆ ನೇರವಾಗಿ ಹಿಂದುತ್ವವಾದಿಗಳ ನಡೆಯೇ ಕಾರಣವಾಗುತ್ತದೆ ಎಂದು ಊಹಿಸಬಹುದು. ನೇರ ಹೊಣೆಯಾಗಿಸಿ ಬಸವನಗೌಡ ಯತ್ನಾಳ್ ಪಾಟೀಲರ ಬಂಧನ ಆಗಿದೆ. ಇನ್ನು ಇಂತಹ ಘಟನೆಗಳು ಮುಂದುವರೆಯದೆ ಸೌಹಾರ್ದಯುತ ವಾತಾವರಣ ಸೃಸ್ಟಿಯಾಗುವಲ್ಲಿ ಎಲ್ಲರು ಪ್ರಯತ್ನಿಸಲಿ. 

 ನರೇಂದ್ರ ಮೋದಿಯವರ ನಡೆ ಅಲ್ಪಸಂಖ್ಯಾತರಿಗೆ ಚೈತನ್ಯ ಮೂಡಿಸಿದ ಹಾಗೆ ಕಾಣುತ್ತಿದೆ, ಅದು ಹಾಗೆಯೇ ಮುಂದುವರೆಯಲಿ, ಅವರು ದೇಶದ ಪ್ರಧಾನಿಯಾಗಿ ದೇಶವನ್ನು ಅಬಿವೃದ್ದಿಯತ್ತ ಮುಂದೆ ಕೊಂಡು ಹೋಗಲಿ, ಹಿಂದುತ್ವವಾದಿಗಳು, ಮತಾಂದಿಗಳು ಕಲ್ಲುಗಳನ್ನು ಬದಿಗಿಟ್ಟು ದೇಶದ ಅಬಿವೃದ್ದಿಗೆ ಸಹಕಾರ ನೀಡಲಿ, ಪರಸ್ಪರ ಸ್ನೇಹಿತರಾಗಿ ಜೀವಿಸಲಿ. ನರೇಂದ್ರ ಮೋದಿಯವಯರಂತೆ ಆತ್ಮೀಯವಾಗಿ ಕೈ ಕುಳುಕಿಕೊಳ್ಳಲು ಪ್ರಯತ್ನಿಸೋಣ, ಒಡೆದ ಮನಸ್ಸುಗಳು ಒಂದಾಗಲಿ, ಮೋದಿಯವರು ಅಲ್ಪಸಂಖ್ಯಾತರು ಇಟ್ಟುಕೊಂಡಿರುವ ಆಶಾಭಾವನೆಯನ್ನು ಉಳಿಸಿಕೊಳ್ಳಲಿ, ಪಾಕಿಸ್ತಾನ ಮತ್ತು ಭಾರತದ ನಡುವೆ ಇರುವ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಿ, ಬಾಂಗ್ಲ ವಲಸಿಗರ ಸಮಸ್ಯೆಗೆ ಸರಿಯಾದ ವೈಜ್ನಾನಿಕ  ಪರಿಹಾರ ಕಂಡು ಹುಡುಕಲಿ, ಅಲ್ಪಸಂಖ್ಯಾತರು ಇಟ್ಟುಕೊಂಡಿರುವ ಭಯದ ನೆರಳು ಇಲ್ಲವಾಗಿ ನರೇಂದ್ರ ಮೋದಿಯವರ ಹೆಜ್ಜೆ ಭಯದ ವಾತಾವರಣ ಇಲ್ಲದ್ದನ್ನು ಸಾಬೀತುಪಡಿಸಲಿ,  ಅಲ್ಪಸಂಖ್ಯಾತರ ನಂಬಿಕೆ ನಿಜವಾಗಲಿ, ಹಿಂದುತ್ವವಾದಿಗಳು ಕೊಡ ದೇಶವನ್ನು ಅಭಿವೃದ್ದಿಯತ್ತ ಮುನ್ನಡೆಸುವಲ್ಲಿ ನರೇಂದ್ರ ಮೋದಿಯವರಿಗೆ ಸಾಥ್ ನೀಡಲಿ, ಪ್ರಧಾನಿಯಯವರ ಸರಿಯಾದ ನಡೆಯನ್ನು ಎಲ್ಲರೂ ಒಪ್ಪಿಕೊಂಡು ಪ್ರಜಾಪ್ರಭುತ್ವ  ವ್ಯವಸ್ಥೆ ಮೇಲೈಸಲಿ.  

Saturday, May 24, 2014

ಒಗ್ಗಟ್ಟಿಗೆ ಜಯಕಾರ (ಚುಟುಕ)



ನ್ಯಾಯ! ಎಲ್ಲಿದೆ ನ್ಯಾಯ 
ಯಾರ ಬಳಿ ಇದೆ ನ್ಯಾಯ 
 ನೋಡಿ ಎಲ್ಲೆಲ್ಲೂ ಅನ್ಯಾಯ 
ನಮ್ಮ ಕಚ್ಚಾಟಕ್ಕೀ ಅನ್ಯಾಯ 

ಹೋರಾಟಗಳಿಗೆ ಬೇಕಾಗಿದೆ ಸಹಕಾರ 
ಒಗ್ಗಟ್ಟಿನ ಮಂತ್ರವೊಂದೇ ಪರಿಹಾರ 
ವಂಚಿಸುತ್ತಿದೆ ನಮ್ಮನ್ನು ಸರಕಾರ 
ನ್ಯಾಯದ ಹೋರಾಟಕ್ಕೆ ಜಯಕಾರ 

ಎದೆಗುಂದದಿರಿ ಕಾನೂನು ಇಲ್ಲಿದೆ 
ನಂಬಿಕೆಯಿಂದ ಮುನ್ನಡೆಯೋಣ ನಿಲ್ಲದೆ 
ಒಗ್ಗಟ್ಟಿನಲ್ಲಿ ಖಂಡಿತಾ ಬಲವಿದೆ 
ನಾಡು ನಡೆಯಲಿ ರಕ್ತ ಹರಿಯದೆ

Friday, May 23, 2014

ಇದು ನನ್ನ ಪ್ರಶ್ನೆ ಅಲ್ಲ ಎಂದವರೇ ಪ್ರಶ್ನೆಯಾದರೆ? (ಲೇಖನ)



 ದೂರದ ದೆಹಲಿಯಲ್ಲಿ ಪರಿಚಯವಿಲ್ಲದ ಹುಡುಗಿಯ ಮೇಲೆ ಅತ್ಯಾಚಾರ ನಡೆದಾಗ ದೇಶದೆಲ್ಲೆಡೆ ಪ್ರತಿಭಟನೆ ನಡೆಯುತ್ತದೆ, ಇನ್ನೆಲ್ಲೋ ನಕಲಿ ಏನ್ ಕೌಂಟರ್ ಗಳು ನಡೆದಾಗ ಕೂಡಾ ಅಕ್ರೋಶ ಭುಗಿಲೇಳುತ್ತದೆ, ಕೇವಲ ಹುಡುಗಿಯ ಅತ್ಯಾಚಾರದ ವಿಷಯದಲ್ಲಿ, ನಕಲಿ ಏನ್ ಕೌಂಟರ್ ಗಳ ವಿಚಾರದಲ್ಲಿ ಮಾತ್ರ ಎಂದಲ್ಲ ಇದಕ್ಕಿಂತಲೂ ಬಿನ್ನ ಪ್ರಕರಣಗಳು, ವಿದ್ಯಮಾನಗಳು ನಡೆದಾಗ ಕೂಡ ಪ್ರಕರಣದ ಗಂಭೀರತೆಗೆ ಅನುಗುಣವಾಗಿ ಅನ್ಯಾಯದ ವಿರುದ್ದ ಪ್ರಗತಿಪರರು, ಚಿಂತಕರು, ಹೋರಾಟಗಾರರು ಎನಿಸಿಕೊಂಡವರು ಬೀದಿಗಿಲಿಯುತ್ತಾರೆ. ಸಾವಿರಾರು ಜನರನ್ನು ಸೇರಿಸಿಕೊಂಡು, ನೂರಾರು ಜನರೊಂದಿಗೆ ಮತ್ತು ಬೆರಳೆಣಿಕೆ ಮಂದಿ ಇದ್ದಾಗಳು ಸಹ ಅವರದೇ ಶೈಲಿಯಲ್ಲಿ ವಿಭಿನ್ನವಾಗಿ ಪ್ರತಿಭಟಿಸಿ ಹಲವರು ಜೈಲಿನ ಕಂಬಿ ಎಣಿಸಿದ್ದಾರೆ. ಲಾಟಿಯೇಟು, ಬಂದನ, ಬಿಡುಗಡೆ ನಿರಂತರವಾಗಿ ನಡೆಯುತ್ತಿರುತ್ತದೆ. ಒಟ್ಟಾರೆಯಾಗಿ ಹೋರಾಟಗಾರರು ಅನ್ಯಾಯದ ವಿರುದ್ದ ಸೆಟೆದು ನಿಲ್ಲುವಲ್ಲಿ, ದ್ವನಿ ಎತ್ತುವಲ್ಲಿ ನಿರಂತರ ರಂಗದಲ್ಲಿದ್ದಾರೆ.

ಆದರೆ ಇಲ್ಲಿ ಮಾತು ಹೋರಾಟಗಾರರ ಬಗ್ಗೆಯೋ ಅವರ ಜೊತೆಗೂಡಿದವರ ಬಗ್ಗೆಯೋ ಅಲ್ಲ, ಬದಲಾಗಿ ಮರ್ದಿತರ, ಶೋಷಿತರ, ವಂಚಿತರ, ಅಸಹಾಯಕರ ಪರವಾಗಿ ಹೋರಾಡುವ ಹೋರಾಟಗಾರರು ಮತ್ತು ಹೋರಾಟಗಳನ್ನು ಸದಾ ದೂರದಲ್ಲಿ ನಿಂತು ಇವರಿಗೇನು ಹುಚ್ಚೆ? ತಲೆ ಸರಿ ಇಲ್ಲವೇ? ಮಾಡಲು ಬೇರೆ ಕೆಲಸ ಇಲ್ಲವೇ? ಯಾರಿಗೋ! ಆದ ಅನ್ಯಾಯದ ಬಗ್ಗೆ ಇವರೇಕೆ ಪ್ರತಿಭಟಿಸುತ್ತಾರೆ? ಇನ್ನು ಕೆಲವರು ಹೋರಾಡುವವರ ಜೊತೆ ಏಕೆ ಸೇರುತ್ತಾರೆ? ಎಂದು ಗಹ ಗಹಿಸಿ ನಗುವ ಒಂದು ದೊಡ್ಡ ವರ್ಗವೇ ನಮ್ಮ ನಡುವೆ ಇದೆ. ಹೀಗೆ ಹೇಳುವವರ ವಾದ ಏನೆಂದರೆ ಎಲ್ಲೋ ದೊರದ ರಾಜ್ಯದಲ್ಲಿ ನಡೆದ ಘಟನೆ ಅಥವಾ ನಮ್ಮದೇ ರಾಜ್ಯದ ಜಿಲ್ಲೆಯಲ್ಲಿ ನಡೆದ ಘಟನೆಗೆ ಇವರೇಕೆ ಪ್ರತಿಭಟಿಸಬೇಕು ಅಷ್ಟಕ್ಕೂ ಇವರ ಮನೆಯಲ್ಲಿ ನಡದಿಲ್ಲವಲ್ಲ, ಇವರಿಗೇಕೆ ಚಿಂತೆ ಎಂದು ತಾತ್ಸಾರ ಭಾವ ನಮ್ಮವರಿಗೆ ಅಧಿಕ.



 ಆದರೆ ದುರಂತವೇನೆಂದರೆ ಈ ರೀತಿ ದೂರದಲ್ಲಿ ನಿಂತು ನಮ್ಮ ಮನೆಯಲ್ಲಿ ನಡೆದಿಲ್ಲವಲ್ಲ್ಲಎಂದು ಹೇಳಿದ ಹೆಚ್ಚು ಮಂದಿಯ ಮನೆಯಲ್ಲಿ ಹಲವು ಅವಾಂತರಗಳು ನಡೆದಿವೆ, ಪಕ್ಕದ ಮನೆಯಲ್ಲಿ ಕಳ್ಳತನ ನಡೆದಾಗ ತಲೆಕೆಡಿಸಿಕೊಳ್ಳದವನ ಮನೆಯಲ್ಲಿಯೇ ಕಳ್ಳತನ ನಡೆದಿದೆ, ಎಲ್ಲೋ ದೂರದ ಊರಿನಲ್ಲಿ ನಡೆಯುತ್ತಿದ್ದ ಅನ್ಯಾಯದ ವಿಲಕ್ಷಣ ಘಟನೆಗಳು ನಮ್ಮ ಮನೆಬಾಗಿಲಿಗೂ ಬಂದು ತಲುಪಿದೆ, ಕೊನೆಗೆ ಹೋರಾಟವನ್ನೇ ತಾತ್ಸಾರ ಭಾವದಿಂದ ಕಾಣುತಿದ್ದವರ ಪರವಾಗಿ ದ್ವನಿ ಎತ್ತಿದ್ದು, ಹೋರಾಡಿದ್ದೂ ಇದೆ ತಲೆ ಸರಿ ಇಲ್ಲದ ಮತ್ತು ಕೆಲಸ ಇಲ್ಲ ಎಂದು ತಿಳಿದುಕೊಂಡಿದ್ದ ಹೋರಾಟಗಾರರು. ಒಟ್ಟಿನಲ್ಲಿ ಇಲ್ಲಿ ಅನೇಕ ಬಾರಿ ಅನ್ಯಾಯಕ್ಕೆ ಒಳಗಾದವರು, ಬಲಿಯಾದವರಲ್ಲಿ ಅಮಾಯಕರೇ ಹೆಚ್ಚು ಎನ್ನುವುದನ್ನು ಮರೆಯುವಂತಿಲ್ಲ.


ಸಮಾಜದಲ್ಲಿ ಹಲವು ಅನ್ಯಾಯದ ಪ್ರಶ್ನೆಗಳು ಮೂಡಿದಾಗ ಅದರ ವಿರುದ್ದ  ಹೋರಾಡಿದ ಅನೇಕ ಹೋರಾಟಗಾರರ ಹೋರಾಟವನ್ನು ಮಣಿಸುವ ಉದ್ದೇಸದಿಂದಲೇ ಹಲವು ರೀತಿಯಲ್ಲಿ ಅವರನ್ನು ದಮನಿಸುವ ಪ್ರಯತ್ನ ನಡೆದಿದೆ ಮತ್ತು ಹಲವರು ಕೊಲೆಗೀಡಾಗಿದ್ದಾರೆ ಕೂಡ. ಆದರೆ ಇವರೇಕೆ ಪ್ರಶ್ನಿಸಿಸುತ್ತಾರೆ, ಹೋರಾಡುತ್ತಾರೆ ಎಂದು ಹೇಳಿದವರು ಕೂಡ ಅತಿ ಹೆಚ್ಚು ಸಂಖ್ಯೆಯಲ್ಲಿ ಪ್ರಶ್ನೆಯಾಗಿ ಇಹಲೋಕ ತ್ಯಜಿಸಿದ್ದಾರೆ ಎನ್ನುವುದನ್ನು ಮರೆಯಬಾರದು. ಈ ವ್ಯವಸ್ಥೆ ಅಮಾಯಕರನ್ನು ಬಲಿ ತೆಗೆದುಕೊಂಡ ಉದಾಹರಣೆಗಳು ಅನೇಕ ಇವೆ, ಆ ಸಮಯದಲ್ಲಿ  ಪ್ರಶ್ನೆಗೆ ಉತ್ತರ ಹುಡುಕಲು ಪ್ರಯತ್ನಿಸಿದವರು ಇದೇ ಹೋರಾಟಗಾರರು. ಅಮಾಯಕರಾಗಿದ್ದುಕೊಂಡು ಅನ್ಯಾಯಕ್ಕೊಳಗಾದ ವರ್ಗವು ಕೂಡಾ ಹೋರಾಟಕ್ಕಿಳಿದ ಉದಾಹರಣೆಗಳು ಬಹಳಷ್ಟಿವೆ. 
 
ಪ್ರಜಾಪ್ರಭುತ್ವ ದೇಶದಲ್ಲಿ ಅನ್ಯಾಯಕ್ಕೆ ರೋಸಿ ಹೋಗಿ  ಕೈಯಲ್ಲಿ ಬಂದೂಕು ಹಿಡಿದು, ಕೋವಿಯನ್ನು ಎತ್ತಿ, ಬಾಂಬು ಹಿಡಿಯುವ ಮೂಲಕ ಮಾಡುವ ಹೋರಾಟಕ್ಕಿಂತ ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಯಲ್ಲಿ ಮಾಡುವ ನ್ಯಾಯಬದ್ದ  ಹೋರಾಟ ಹೆಚ್ಚು ಬಳಶಾಲಿ ಎನ್ನುವುದನ್ನು ಮರೆಯುವಂತಿಲ್ಲ, ಖಂಡಿತ ನ್ಯಾಯ ನಿರಾಕರಿಸಲ್ಪಟ್ಟ ಪ್ರತಿಯೊಬ್ಬನಿಗೂ ಇಲ್ಲಿ ಸಾಥ್ ನೀಡಿದ್ದು ಕಾನುನುಬದ್ದ ಹೋರಾಟಗಳು, ತೆರೆ ಮರೆಯ ಆಟ ಇಲ್ಲಿನ ಕಾನೂನು ವ್ಯವಸ್ಥೆ ಅವರನ್ನು ಕಂಬಿ ಎನಿಸುವಂತೆ ಮಾಡಿ ಈ ದೇಶದ ಕಾನೂನು ವ್ಯವಸ್ಥೆಯ ಸುಭದ್ರತೆಯನ್ನು ಎತ್ತಿ ಹಿಡಿದಿದೆ. ನ್ಯಾಯಬದ್ದ ಹೋರಾಟಗಳಿಗೆ ಈ ದೇಶದಲ್ಲಿ ಗೆಲುವು ಸಿಕ್ಕಿದೆ.

ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟಿರುವ ಪ್ರತಿಯೊಬ್ಬನು ನ್ಯಾಯದ ಪರವಾಗಿ ನಡೆಯುವ ಹೋರಾಟಗಳಲ್ಲಿ ಪಾಲ್ಗೊಳ್ಳಬೇಕು, ಅಂತಹ ಹೋರಾಟಗಳಿಗೆ ಸಾಥ್ ನೀಡಬೇಕು, ಇದು ನಮ್ಮ  ಪ್ರಶ್ನೆಯಲ್ಲ ಎಂದು ನಿರಾಕರಿಸಿ ಮನೆಯಲ್ಲಿ ಕುಳಿತರೆ ಬೇರೆಯವರು ಯಾವ ರೀತಿ ಪ್ರಶ್ನೆಯಾಗಿದ್ದರೋ ಅದೇ ರೀತಿ ನಾವು ಕೂಡ ಪ್ರಶ್ನೆಯಾಗುತ್ತೇವೆ ಎನ್ನುವುದನ್ನು ಮರೆಯಬಾರದು, ನ್ಯಾಯ ಬದ್ದವಾದ ಎಲ್ಲ ಹೋರಾಟಗಳ ಮುಂಚೂನಿಯಲ್ಲಿ ನಾವಿರಬೇಕು ಆ ಮೂಲಕ ಅನ್ಯಾಯಕ್ಕೊಳಗಾದವರಿಗೆ ಆತ್ಮವಿಶ್ವಾಸ ಮೂಡಿಸಬೇಕು.

ಇನ್ನಷ್ಟು ಜನರು ಪ್ರಶ್ನೆಯಾಗುವುದನ್ನು ತಪ್ಪಿಸಬೇಕು, ಇದು ನನ್ನ ಪ್ರಶ್ನೆಯಲ್ಲ ಎಂದು ಸುಮ್ಮನೆ ಕುಳಿತುಕೊಲ್ಲುವುದಕ್ಕಿಂತ ನ್ಯಾಯಬದ್ದ ಹೋರಾಟಗಳಿಗೆ ಕೂಡ ಸ್ವಲ್ಪ ಸಮಯ ಮೀಸಲಿರಿಸಬೇಕು. ನಾಳೆ ನಾವು ಎನೂ ಪ್ರಶ್ನಿಸದೆ ಪ್ರಶ್ನೆಯಾಗುವುದಕ್ಕಿಂತ ಮರ್ದಿತರ ಪರವಾಗಿ ಪ್ರಶ್ನಿಸಿದ ಸಲುವಾಗಿ ಪ್ರಶ್ನೆಯಾಗಲು ಸಿದ್ದರಾಗಬೇಕು, ನ್ಯಾಯ ಬದ್ದ ಹೋರಾಟಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವ ಮಟ್ಟಕ್ಕೆ ನಮ್ಮನ್ನು ನಾವು ಬದಲಾಯಿಸಿಕೊಳ್ಳಬೇಕು.

Friday, May 9, 2014

ಓ ಮಳೆಯೇ! ಬಾರಯ್ಯ, ವರದಿ ಬಂದಿದೆ! (ಚುಟುಕ)


ಧೋ! ಎಂದು ಜೋರಾಗಿ ಮಳೆ ಬಂತು ಇಳೆಯತ್ತ,
ಬಹು ಬೇಗ ಬಂದ ಮಳೆಗೆ ಕಂಗಾಲಾದ ರೈತನಿತ್ತ.   

ಗಾಳಿಯ ರಭಸಕ್ಕೆ ಮರ ಉರುಳಿತು, ಪ್ರಾಣವು ಹೋಯಿತು,
ಕರೆಂಟು ಚೆಲ್ಲಾಟವಾಡಿದರೂ! ಪ್ರಾಣ ತೆಗೆಯುವವರೆಗೆ ಇತ್ತು. 

ಎಲ್ಲಿ! ಎಷ್ಟು ಪ್ರಾಣ ಹೋಯಿತೆಂದು ಸರಕಾರ ಲೆಕ್ಕ ಮಾಡುತಿತ್ತು,
ಲೆಕ್ಕದ ನಡುವೆ ಅಮಾಯಕ ಜೀವಗಳು ಬಲಿಯಾಗುತ್ತಲೇ ಇತ್ತು. 

24 ಘಂಟೆ ಸುರಿದ ಮಳೆಯನ್ನು ಜನತೆ ಅಚ್ಚರಿಯಿಂದ ನೋಡುತ್ತಿತ್ತು,
48 ಘಂಟೆ ಭಾರೀ ಮಳೆಯಿದೆಯೆಂದು ಹವಾಮಾನ ವರದಿ ಬಂತು. 

ವರದಿ ಓದಿದ ಬಳಿಕ ಜೋರಾಗಿ ಬರುವನೆಂಬ ಮಳೆರಾಯನೆತ್ತ ಓಡಿದನೋ ಅರಿವಿಲ್ಲ!
ಯಾಕೋ ಬೇಸರ! ಹವಾಮಾನ ಇಲಾಖೆಯ ವರದಿಗೆ ಮಳೆ ಸ್ಪಂದಿಸುವುದೇ ಇಲ್ಲ.  

ದೇವಾನುಗ್ರಹ (ಚುಟುಕ)




ಹೋರಾಡಿದರು ಅವರು ಮುಸ್ಲಿಮರಾಗಿ 
ಕೊಲ್ಲಲಾಯಿತು ಅವರನ್ನು ಅನ್ಯಾಯವಾಗಿ

ಜನರ ಹಿಂಡು ಬಂದಿತು ಅವರ ಪರವಾಗಿ
ನೀರು ಹರಿಯಿತು ಎಲ್ಲೆಡೆ ಕಣ್ಣೀರ ಧಾರೆಯಾಗಿ

ಕಳೆಯುತಿದೆ ನಮ್ಮ ಜೀವನ ವ್ಯರ್ಥವಾಗಿ 
ಹೋರಾಡೋಣ ಸ್ರಸ್ಟಿಸಿದ ಅಲ್ಲಾಹನ ಅನುಗ್ರಹಕ್ಕಾಗಿ

Monday, May 5, 2014

ಅರಾಜಕತೆಯ ಮೌನ (ಚುಟುಕ)


ಅಸಮಾನತೆ,ಅರಾಜಕತೆಯ ಲೋಕದಲ್ಲಿ, 
ನ್ಯಾಯ, ನೀತಿ ವಂಚಕರ ಕೈಯಲ್ಲಿ.  

ಕಳ್ಳರು, ಪುಂಡ ಪೋಕರಿಗಳು ಬೀದಿಯಲ್ಲಿ, 
ಅಮಾಯಕ ಯುವಕರು ಹಲವು ಜೈಲಿನಲ್ಲಿ.  

ಯೋಜನೆ, ಸವಲತ್ತು ಬಜೆಟ್ ಪುಟದಲ್ಲಿ, 
ನ್ಯಾಯ ದೇವತೆ ಕಣ್ಣು ಮುಚ್ಚಿ ಕಗ್ಗತ್ತಲಲ್ಲಿ.  

ಕಂಡು ಕಾಣದಂತಿರುವ ಜನರು ದೇಶದಲ್ಲಿ,  
ನಮ್ಮೀ ಮೌನವೇ ಅರಾಜಕತೆಗೆ ಕಾರಣವಿಲ್ಲಿ. 

Saturday, May 3, 2014

ಮನುಷ್ಯ ಮರೆಯದಿರು ಮನುಷ್ಯತ್ವ! (ಚುಟುಕ)


ಪ್ರಾಣಿಯನ್ನು ಕೊಂದರು ಕೊಂದರು ಎಂದು ಹೇಳಿ ನೀನು ಸುತ್ತತೊಡಗಿದೆ,
ಕೊಂದರು ಕೊಂದರು ಎಂದು ಹೇಳಿ ಕೊಂದದ್ದನ್ನುನ್ನು ನೀನೆ ತಿಂದು ಬಂದೆ. 

ಪ್ರಾಣಿಯ ಹೆಸರಿನಲ್ಲಿ ನರ ಸತ್ತವನಾಗಿ ಮನುಷ್ಯನನ್ನೇ ನೀನು ಕೊಲ್ಲತೊಡಗಿದೆ,
ಸ್ವಂತ ಹಿತಕ್ಕಾಗಿ ಮನುಷ್ಯ ಜೀವದೊಡನೆ ಚೆಲ್ಲಾಟವಾಡಿ ದೇಶಕ್ಕೆ ಕುತ್ತು ತಂದೆ. 

ಆ ಕಡೆ ಸಾಕಲಾಗದೆ ಕೊಲ್ಲುವವನಿಗೆ ಮಾರಿದವನು ನೀನೆ, 
ಅವನು ಕೊಂದದ್ದನ್ನು ತಿಂದು ಮೆಲ್ಲಗೆ ಸಾಗಿದವನು ನೀನೆ. 

ಪ್ರಾಣಿಯ ಹೆಸರಿನಲ್ಲಿ ನೀನು ಮನುಷ್ಯತ್ವ ಕಳೆದು ದೇಶ ಒಡೆಯಬೇಡ,
ನೀ ಮಾರಬೇಡ! ಕೊಲ್ಲುವವನಿಗೆ ಕೊಡಬೇಡ! ತಿನ್ನುವನನು ತಿನ್ನಲಾರ! 

ಕಟ್ಟಲು ನಿನಗೆ  ಇಷ್ಟವಿದ್ದರೆ  ಕಷ್ಟ ಪಟ್ಟು ಸುಂದರ ದೇಶ ಕಟ್ಟು,  
ಹಗ್ಗ ಹಿಡಿದು ಬರುವವನನ್ನು ನಿನ್ನ ಅಟ್ಟಹಾಸಕ್ಕೆ ಬಲಿ ಮಾಡದಿರು. 

Thursday, May 1, 2014

ಖಾಸಗಿ ಆಸ್ಪತ್ರೆಗಳ ಹಣದಾಹದಿಂದ ಬಡ ರೋಗಿಗಳು ಸರಕಾರೀ ಯೋಜನೆಗಳ ಲಾಭದಿಂದ ವಂಚಿತರಾಗದಿರಲಿ (ಲೇಖನ)










ಸರಕಾರೀ ಆಸ್ಪತ್ರೆಗಳಲ್ಲಿ ಸರಿಯಾದ ವ್ಯವಸ್ಥೆಗಳು ಇದ್ದಿದ್ದಲ್ಲಿ ಬಡ ಜನರು ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡಿಯೂ ನೋಡುತ್ತಿರಲಿಲ್ಲ, ದೌರ್ಭಗ್ಯವಶಾತ್ ಸರಕಾರೀ ಆಸ್ಪತ್ರೆಗಳ ಬಗ್ಗೆ ನಮ್ಮ ಜನರಿಗೆ ನಂಬಿಕೆ ಕಡಿಮೆಯೇ ಬಿಡಿ. ಅದು ಸರಕಾರೀ ಆಸ್ಪತ್ರೆ ಎನ್ನುವ ಕೀಳರಿಮೆಯೂ ಅಥವಾ ಅಲ್ಲಿನ ವ್ಯವಸ್ಥೆಯ ಬಗ್ಗೆ ಭಯವೋ ತಿಳಿದಿಲ್ಲ, ಆ ನಿಟ್ಟಿನಲ್ಲಿ ಖಾಸಗಿ ಆಸ್ಪತ್ರೆಗಳತ್ತ ಸಾಗಿ ಬಂದ ಬಡ ರೋಗಿಗಳನ್ನು ಲೂಟಿ ಮಾಡುವುದು ಖಾಸಗಿ ಆಸ್ಪತ್ರೆಗಳು ತಮ್ಮ ನಿತ್ಯ ಕೆಲಸವನ್ನಾಗಿ ಮಾಡಿ ವ್ಯಾಪಾರ ಕೇಂದ್ರಗಳಾಗಿ ಮಾರ್ಪಟ್ಟಿರುವುದು ಶೋಚನೀಯ.

ಸರಕಾರ ಬಡವರ ಪರವಾಗಿ ಹಲವು ಜನಪ್ರೀಯ ಯೋಜನೆಗಳನ್ನು ತಂದಿದೆ ಮತ್ತು ಅದು ಬಂದಿದೆ ಎನ್ನುವುದರ ಹೊರತಾಗಿ ಆ ಸೌಲಭ್ಯಗಳಿಂದ ವಂಚಿತರಾಗಿ ಕೊನೆಗೆ ಬಿಲ್ಲು ಕಟ್ಟಲು ಕೂಡ ಪರದಾಡಿ ಹೆಣಗಾಡುವ ಸ್ಥಿತಿಯೇ ನಮ್ಮ ಬಡರೋಗಿಗಳಿಗೆ ಅಧಿಕ. ನಮಗೆ ಸಿಗಬೇಕಿದ್ದ ಯೋಜನೆಯ ಲಾಭ ಸಿಗದೇ ಹೋಯಿತು ಎನ್ನುವ ಮಾನಸಿಕ ಬೇಸರ ಬೇರೆ ಆ ರೋಗಿಗಳಲ್ಲಿ, ಸರಕಾರ ಬಡವರಿಗಾಗಿಯೇ "ವಾಜಪೇಯಿ ಅರೋಗ್ಯ ಶ್ರೀ", "ಸುರಕ್ಷ " ಯೋಜನೆ ಮತ್ತು ಮುಂತಾದ ಹಲವು ಯೋಜನೆಗಳನ್ನು ಜಾರಿ ಮಾಡಿದೆ ಇದರಿಂದ ಹಲವು ಬಡ ರೋಗಿಗಳಿಗೆ ಲಾಭವಾಗಿದೆ ಎನ್ನುವುದಕ್ಕಿಂತ ಆ ಲಾಭವನ್ನು ಪಡೆಯದೆ ನ್ಯಾಯ ವಂಚಿತರಾಗಿರುವವರೇ ಅಧಿಕ, ಒಂದು ವೇಳೆ ಪಡೆದಿದ್ದರೂ ಅವರು ಖಾಸಗಿ ಆಸ್ಪತ್ರೆಯ ಸಿಬ್ಬಂದಿಗಳ ಬೆಜವಾಬ್ದಾರಿಗಳಿಗೆ ಬಲಿಯಾಗಿ ಕೊನೆಗೆ ಯಾರದೂ ಮೂಲಕ ಕಸರತ್ತು ನಡೆಸಿ ತಮಗಾಗಿ ಇರುವ ಯೋಜನೆಯನ್ನು ಪಡೆದುಕೊಳ್ಳುವ ದುರವಸ್ಥೆ.

ಖಾಸಗಿ ಆಸ್ಪತ್ರೆಗಳಿಗೆ ಧಾಕಲಾಗುವ ರೋಗಿಗಳಿಗೆ ಸರಿಯಾದ ಮಾಹಿತಿ ಕೊಟ್ಟು ಅವರಿಗೆ ಸೂಚನೆ ನೀಡಬೇಕಾದ ಸಿಬ್ಬಂದಿಗಳು ಉದ್ದಟತನವನ್ನು ತೋರಿ ಸರಿಯಾದ ಮಾಹಿತಿ ನೀಡದೆ ಅವರಿಗೆ ಸಿಗಬೇಕಾದ ಯೋಜನೆಗಳಿಂದ ಅವರನ್ನು ವಂಚಿಸಿ ಅವರಿಗೆ ದಾರಿ ತಪ್ಪಿಸಿ ಕೊನೆಯಲ್ಲಿ ನಿಮ್ಮದೇ ತಪ್ಪು ಎಂದು ಬಿಂಬಿಸುವುದು ದಿನನಿತ್ಯ ನಡೆಯುತ್ತಿರುತ್ತದೆ, ಇಸ್ಟೇ ಅಲ್ಲದೆ ಯಾವ ರೀತಿಯಲ್ಲಿ ಬಡ ರೋಗಿಯಿಂದ ಕಸಿದುಕೊಳ್ಳಬಹುದು ಅನ್ನುವ ಬಗ್ಗೆ ಚಿಂತನೆ ನಡೆಸುವಂತೆ ಭಾಸವಾಗುತ್ತದೆ.  ಬಡ ರೋಗಿಗಳು ಮೊದಲೇ ಅವರ ರೋಗದ ಚಿಂತೆಯಲ್ಲಿ ಮತ್ತು ಅಸಹಾಯಕತೆಯಲ್ಲಿ ಇರುವಾಗ, ಸಿಬ್ಬಂದಿಗಳ ಕಾಟಕ್ಕೆ ಬೇರೆ ಬಲಿಯಾಗಬೇಕು. ಕೊನೆಗೆ ಅವರ ಪರವಾಗಿ ಯಾರಾದರು ಮಾತನಾಡಿದರೆ ಅವರ ವಿರುದ್ದವೇ ಗುಂಪಾಗಿ ತಿರುಗಿ ಬಿದ್ದು ಅವರಿಗೆ ಕೂಡ ತಾವೇ ಸರಿ ನಿಮ್ಮವರದೇ ತಪ್ಪು ಎಂದು ವಾದಿಸುತ್ತಾರೆ, ಕಡೆ ಪಕ್ಷ  ಬಡ ರೋಗಿಗಳಿಗೆ ಸಾಂತ್ವನ ನೀಡಬೇಕಾದವರೇ ಉದ್ದಟತನ ತೋರಿಸುವು ಎಷ್ಟು ಸರಿ?  ಸರಕಾರ ಕೂಡಾ ಖಾಸಗಿ ಆಸ್ಪತ್ರೆಗಳಿಗೆ ಬೇಕಾ ಬಿಟ್ಟಿ  ಪ್ರೋತ್ಸಾಹಿಸುವುದು ಬಡ ರೋಗಿಗಳು ನ್ಯಾಯ ವಂಚಿತರಾಗುತ್ತಿರಲು ಕಾರಣ.

ಆಸ್ಪತ್ರೆಯ ಆಡಳಿತ ವರ್ಗ, ಸಿಬ್ಬಂದಿಗಳು ಸರಿಯಾಗಿ ಸಹಕರಿಸುತಿದ್ದಿದ್ದರೆ ಬಡ ರೋಗಿಗಳು ಯೋಜನೆಯ ಲಾಭ ಪಡೆದು ಒಂದು ರೂಪಾಯಿ ಕೂಡ ಕಟ್ಟದೆ ಅವರ ಮನೆಗೆ ತಲುಪುಬಹುದು ಅಷ್ಟೊಂದು ಭ್ರಹತ್ ಮಟ್ಟದಲ್ಲಿದೆ ಸರಕಾರೀ ಯೋಜನೆಗಳು, ಆದರೆ ಎನೂ ಕಟ್ಟದೆ ಆಸ್ಪತ್ರೆಯಿಂದ ಹೊರಗೆ ಹೋಗಿ ಮನೆ ತಲುಪಿದವರು ಕಡಿಮೆಯೇ! ಬಡರೋಗಿಗಗಳನ್ನು ಒಂದಲ್ಲ ಒಂದು ರೀತಿಯಲ್ಲಿ ದಾರಿ ತಪ್ಪಿಸಿ ಅವರನ್ನು ವಂಚಿಸಲಾಗುತ್ತಿದೆ, ಕೊನೆಗೆ ಬಡವನೊಬ್ಬ ಮಾತನಾಡಿದರೆ ನಿಮಗೆ ಸಿಗುವ ಯೋಜನೆಯ ಲಾಭ ಸಿಗಬೇಕಾದರೆ ಬಾಕಿ ಇರುವ ಇಷ್ಟು ಮೊತ್ತ ಕಟ್ಟಿ ನಂತರವಸ್ಟೇ ನಿಮ್ಮ ಸರಕಾರೀ ಯೋಜನೆಯ ಅರ್ಜಿ ಮುಂದೆ ಹೋಗುತ್ತದೆ ಎನ್ನುವ ಉದ್ದಟತನದ ದುರ್ವರ್ಥನೆ ಬೇರೆ ಬಡ ರೋಗಿ ಸಹಿಸಬೇಕು.




ಸೌಜನ್ಯದ ಮಾತುಗಳಿಂದ ನಯವಾಗಿ ವರ್ತಿಸಿ ಸಮಾಧಾನದಿಂದ ರೋಗಿ ಮತ್ತು ಆತನ ಜೊತೆ ಇರುವವರಿಗೆ ಬಡ ರೋಗಿಗಳಿಗೆ ಸಿಗಬೇಕಾದ ಲಾಭವನ್ನು ಆದಸ್ಟು ಬೇಗ ಕೊಡಿಸುವಲ್ಲಿ ಸಹಕರಿಸಬೇಕಾದ ಆಡಳಿತ ವರ್ಗ ಮತ್ತು ಸಿಬ್ಬಂದಿಗಳು   ತಮ್ಮನ್ನು ಪ್ರಶ್ನಿಸಿದ್ದಾರೆ ಎನ್ನುವ ಒಂದೇ ಒಂದು ಕಾರಣಕ್ಕೆ ಅವರ ಮೇಲೆ ಹಾರಿಹಾಯುವುದು, ಬಡ ರೋಗಿಗಳ ಮುಗ್ದ ಮನಸ್ಸಿನ ಮೇಲೆ ಆಡುತ್ತಿರುವ ಚೆಲ್ಲಾಟ ಕಾಣಬಹುದು ಮತ್ತು ಪ್ರಶ್ನಿಸಿದವರಲ್ಲಿ ಅತ್ತಿತ್ತ ಅಲೆದಾಡಿದವರೇ ಹೆಚ್ಚು! ಇದೆಷ್ಟು ಸರಿ ? ಯಾರು ಇದಕ್ಕೆ ಹೊಣೆ? ಎನೂ ತಿಳಿಯದ ಬಡಪಾಯಿಯೊಬ್ಬ ಖಾಸಗಿ ಆಸ್ಪತ್ರೆಗಳ ನಿರ್ದೇಶನಕ್ಕೆ ತಲೆಯಾಡಿಸಿ ಅವರು ಹೇಳಿದಸ್ಟು ದುಡ್ಡನ್ನು ಸಾಲ ಮಾಡಿಯೋ, ಮನೆ ಮಾರಿಯೋ ಆಸ್ಪತ್ರೆಗೆ ಕಟ್ಟಿ ಸರಕಾರ ಮತ್ತು ಅದರ ಯೋಜನೆಗೆ ಶಾಪ ಹಾಕಿ ಮನೆಗೆ ಹೊರಟು ಹೋಗುತ್ತಾರೆ. ಬಡವನಿಗೆ ಲಾಭವಾಗಳು ಸಾಧ್ಯವಾಗದ ಸರಕಾರೀ ಯೋಜನೆಗಳು ಇದ್ದರೆಸ್ಟು! ಇಲ್ಲದಿದ್ದರೆಷ್ಟು!.

ಸರಕಾರ ಹಲವು ಉತ್ತಮ ಯೋಜನೆಗಳನ್ನು ಬಡ ಜನರಿಗೆ ಕೊಟ್ಟಿದೆ, ಆದರೆ ಅದು ಬಡವರಿಗೆ ಸರಿಯಾಗಿ ನ್ಯಾಯವಾದ ರೀತಿಯಲ್ಲಿ ತಲುಪಬೇಕಾದ ಅಗತ್ಯವಿದೆ, ಈ ಬಗ್ಗೆ ಸಾರ್ವಜನಿಕರಲ್ಲಿ ಕೂಡ ಮಾಹಿತಿಯ ಕೊರತೆಯಿದೆ ಮತ್ತು ಅದನ್ನು ಖಾಸಗಿ ಆಸ್ಪತ್ರೆಗಳು ದುರುಪಯೋಗಪಡಿಸುತ್ತಿವೆ. ಸಾರ್ವಜನಿಕರು ತಮ್ಮ ಹಕ್ಕುಗಳನ್ನು ಕೇಳಿ ಪಡೆಯುವ ರೀತಿಯಲ್ಲಿ ವ್ಯಾಪಕವಾದ ಅರಿವು ಮೂಡಿಸಬೇಕು, ಖಾಸಗಿ ಆಸ್ಪತ್ರೆಗಳು ಕೂಡ ವ್ಯವಸ್ತಿತವಾಗಿ ದುಡ್ಡು ದೋಚುವುದನ್ನು ನಿಲ್ಲಿಸಿ ಬಡ ರೋಗಿಗಳಿಗೆ ಅವರ ಯೋಜನೆಗಳು ಸುಲಭವಾಗಿ ತಲುಪುವ ಹಾಗೆ ಪ್ರಯತ್ನಿಸಬೇಕು ಅಸ್ಟು ಮಾತ್ರವಲ್ಲ ತಮ್ಮ ಉದ್ದಟತನದ, ಅತಿರೇಕದ ವರ್ತನೆಯನ್ನು ನಿಲ್ಲಿಸಬೇಕು, ಬಡ ರೋಗಿಗಳೊಂದಿಗೆ ಸ್ನೇಹ ಮಯವಾಗಿ ವರ್ತಿಸಬೇಕು ಅವರು ಧಾಕಲಾಗುವಾಗ ಅವರ ದಾರಿ ತಪ್ಪಿಸಿ, ಸರಿಯಾದ ಮಾಹಿತಿ ನೀಡದೆ ಅವರನ್ನು ವಂಚಿತರನ್ನಾಗಿ ಮಾಡಬಾರದು ಈ ಬಗ್ಗೆ ಸರಕಾರ ಮತ್ತು ಸಂಬಂದಪಟ್ಟವರು ಕೂಡ ಕಾಳಜಿ ವಹಿಸಬೇಕು, ಇದೆ ಬಡ ಜನರಿಂದ ಆರಿಸಿ ಬಂದು ಕುರ್ಚಿಯಲ್ಲಿ ಕುಳಿತುಕೊಂಡವರು ಕುರ್ಚಿಯಲ್ಲಿ ಕುಳಿತುಕೊಳ್ಳಲು ಕಾರಣವಾದ ಬಡ ಜನರ ಬಗ್ಗೆ ಇನ್ನಾದರೂ ಸರಿಯಾಗಿ ಕಾಳಜಿ ವಹಿಸಬೇಕು.

ಖಾಸಗಿ ಆಸ್ಪತ್ರೆಗಳಿಗೆ ಸರಕಾರಿ ಯೋಜನೆಯ ಬಗ್ಗೆ ಮಾಹಿತಿ ನೀಡಲು, ಮಾಹಿತಿ ಫಳಕಗಳನ್ನು ಹಾಕಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು, ಬಡರೋಗಿಗಳು ತಮ್ಮ ಸಮಸ್ಯೆ ಪರಿಹರಿಸಲು ಯಾರದೋ ಕೈ ಕಾಲು ಹಿಡಿಯುವ, ಯಾರಿಂದಲೋ ಫೋನಾಯಿಸುವ, ಆ ಮೂಲಕ ಹೆಣಗಾಡಿ ತಮಗೆ ಸಿಗಬೇಕಾಗಿರುವ ಯೋಜನೆಯನ್ನು ಪಡೆದುಕೊಳುವ ಪರಿಸ್ಥಿತಿ ನಿಲ್ಲಬೇಕು, ಅವರಿಗಾಗಿಯೇ ಸರಕಾರಗಳು ಯೋಜನೆಯನ್ನು ಸ್ರಸ್ಟಿಸಿರುವಾಗ ಅದರ ಲಾಭವನ್ನು ಕೂಡ ಅವರು ಬಹಳ ಸುಲಭವಾಗಿ ಪದೆದುಕೊಲ್ಲುವಂತಾಗಬೇಕು, ಬಡ ರೋಗಿಗಳು ಅಲೆದಾಡುವ ಗೋಳು ನಿಲ್ಲಬೇಕು, ಆ ರೀತಿಯಲ್ಲಿ ಸ್ಪಷ್ಟವಾದ ದಾರಿಯಲ್ಲಿ ನೇರಾ ನೇರಾ ಅವರಿಗೆ ಸರಕಾರೀ ಯೋಜನೆಗಳು ಲಭ್ಯವಾದಾಗ ಮಾತ್ರ ಸರಕಾರ ಪ್ರಕಟಿಸಿದ ಬಡವರ ಪರ ಯೋಜನೆಗಳು ನಿಜ ಅರ್ಥದಲ್ಲಿ ಬಡವರ ಪರ ಇರುವ ಯೋಜನೆಗಳಾಗಳು ಸಾಧ್ಯ, ಇಲ್ಲದಿದ್ದರೆ ಬಜೆಟ್ ಪ್ರತಿಗಳಲ್ಲೂ ಮತ್ತು  ಯೋಜನೆಯೊಂದು ಇದೆ ಎಂದು ಹೇಳುವುದಕ್ಕೆ ಮಾತ್ರ ಸಿಮಿತವಾಗಬಹುದು.