Friday, May 23, 2014

ಇದು ನನ್ನ ಪ್ರಶ್ನೆ ಅಲ್ಲ ಎಂದವರೇ ಪ್ರಶ್ನೆಯಾದರೆ? (ಲೇಖನ)



 ದೂರದ ದೆಹಲಿಯಲ್ಲಿ ಪರಿಚಯವಿಲ್ಲದ ಹುಡುಗಿಯ ಮೇಲೆ ಅತ್ಯಾಚಾರ ನಡೆದಾಗ ದೇಶದೆಲ್ಲೆಡೆ ಪ್ರತಿಭಟನೆ ನಡೆಯುತ್ತದೆ, ಇನ್ನೆಲ್ಲೋ ನಕಲಿ ಏನ್ ಕೌಂಟರ್ ಗಳು ನಡೆದಾಗ ಕೂಡಾ ಅಕ್ರೋಶ ಭುಗಿಲೇಳುತ್ತದೆ, ಕೇವಲ ಹುಡುಗಿಯ ಅತ್ಯಾಚಾರದ ವಿಷಯದಲ್ಲಿ, ನಕಲಿ ಏನ್ ಕೌಂಟರ್ ಗಳ ವಿಚಾರದಲ್ಲಿ ಮಾತ್ರ ಎಂದಲ್ಲ ಇದಕ್ಕಿಂತಲೂ ಬಿನ್ನ ಪ್ರಕರಣಗಳು, ವಿದ್ಯಮಾನಗಳು ನಡೆದಾಗ ಕೂಡ ಪ್ರಕರಣದ ಗಂಭೀರತೆಗೆ ಅನುಗುಣವಾಗಿ ಅನ್ಯಾಯದ ವಿರುದ್ದ ಪ್ರಗತಿಪರರು, ಚಿಂತಕರು, ಹೋರಾಟಗಾರರು ಎನಿಸಿಕೊಂಡವರು ಬೀದಿಗಿಲಿಯುತ್ತಾರೆ. ಸಾವಿರಾರು ಜನರನ್ನು ಸೇರಿಸಿಕೊಂಡು, ನೂರಾರು ಜನರೊಂದಿಗೆ ಮತ್ತು ಬೆರಳೆಣಿಕೆ ಮಂದಿ ಇದ್ದಾಗಳು ಸಹ ಅವರದೇ ಶೈಲಿಯಲ್ಲಿ ವಿಭಿನ್ನವಾಗಿ ಪ್ರತಿಭಟಿಸಿ ಹಲವರು ಜೈಲಿನ ಕಂಬಿ ಎಣಿಸಿದ್ದಾರೆ. ಲಾಟಿಯೇಟು, ಬಂದನ, ಬಿಡುಗಡೆ ನಿರಂತರವಾಗಿ ನಡೆಯುತ್ತಿರುತ್ತದೆ. ಒಟ್ಟಾರೆಯಾಗಿ ಹೋರಾಟಗಾರರು ಅನ್ಯಾಯದ ವಿರುದ್ದ ಸೆಟೆದು ನಿಲ್ಲುವಲ್ಲಿ, ದ್ವನಿ ಎತ್ತುವಲ್ಲಿ ನಿರಂತರ ರಂಗದಲ್ಲಿದ್ದಾರೆ.

ಆದರೆ ಇಲ್ಲಿ ಮಾತು ಹೋರಾಟಗಾರರ ಬಗ್ಗೆಯೋ ಅವರ ಜೊತೆಗೂಡಿದವರ ಬಗ್ಗೆಯೋ ಅಲ್ಲ, ಬದಲಾಗಿ ಮರ್ದಿತರ, ಶೋಷಿತರ, ವಂಚಿತರ, ಅಸಹಾಯಕರ ಪರವಾಗಿ ಹೋರಾಡುವ ಹೋರಾಟಗಾರರು ಮತ್ತು ಹೋರಾಟಗಳನ್ನು ಸದಾ ದೂರದಲ್ಲಿ ನಿಂತು ಇವರಿಗೇನು ಹುಚ್ಚೆ? ತಲೆ ಸರಿ ಇಲ್ಲವೇ? ಮಾಡಲು ಬೇರೆ ಕೆಲಸ ಇಲ್ಲವೇ? ಯಾರಿಗೋ! ಆದ ಅನ್ಯಾಯದ ಬಗ್ಗೆ ಇವರೇಕೆ ಪ್ರತಿಭಟಿಸುತ್ತಾರೆ? ಇನ್ನು ಕೆಲವರು ಹೋರಾಡುವವರ ಜೊತೆ ಏಕೆ ಸೇರುತ್ತಾರೆ? ಎಂದು ಗಹ ಗಹಿಸಿ ನಗುವ ಒಂದು ದೊಡ್ಡ ವರ್ಗವೇ ನಮ್ಮ ನಡುವೆ ಇದೆ. ಹೀಗೆ ಹೇಳುವವರ ವಾದ ಏನೆಂದರೆ ಎಲ್ಲೋ ದೊರದ ರಾಜ್ಯದಲ್ಲಿ ನಡೆದ ಘಟನೆ ಅಥವಾ ನಮ್ಮದೇ ರಾಜ್ಯದ ಜಿಲ್ಲೆಯಲ್ಲಿ ನಡೆದ ಘಟನೆಗೆ ಇವರೇಕೆ ಪ್ರತಿಭಟಿಸಬೇಕು ಅಷ್ಟಕ್ಕೂ ಇವರ ಮನೆಯಲ್ಲಿ ನಡದಿಲ್ಲವಲ್ಲ, ಇವರಿಗೇಕೆ ಚಿಂತೆ ಎಂದು ತಾತ್ಸಾರ ಭಾವ ನಮ್ಮವರಿಗೆ ಅಧಿಕ.



 ಆದರೆ ದುರಂತವೇನೆಂದರೆ ಈ ರೀತಿ ದೂರದಲ್ಲಿ ನಿಂತು ನಮ್ಮ ಮನೆಯಲ್ಲಿ ನಡೆದಿಲ್ಲವಲ್ಲ್ಲಎಂದು ಹೇಳಿದ ಹೆಚ್ಚು ಮಂದಿಯ ಮನೆಯಲ್ಲಿ ಹಲವು ಅವಾಂತರಗಳು ನಡೆದಿವೆ, ಪಕ್ಕದ ಮನೆಯಲ್ಲಿ ಕಳ್ಳತನ ನಡೆದಾಗ ತಲೆಕೆಡಿಸಿಕೊಳ್ಳದವನ ಮನೆಯಲ್ಲಿಯೇ ಕಳ್ಳತನ ನಡೆದಿದೆ, ಎಲ್ಲೋ ದೂರದ ಊರಿನಲ್ಲಿ ನಡೆಯುತ್ತಿದ್ದ ಅನ್ಯಾಯದ ವಿಲಕ್ಷಣ ಘಟನೆಗಳು ನಮ್ಮ ಮನೆಬಾಗಿಲಿಗೂ ಬಂದು ತಲುಪಿದೆ, ಕೊನೆಗೆ ಹೋರಾಟವನ್ನೇ ತಾತ್ಸಾರ ಭಾವದಿಂದ ಕಾಣುತಿದ್ದವರ ಪರವಾಗಿ ದ್ವನಿ ಎತ್ತಿದ್ದು, ಹೋರಾಡಿದ್ದೂ ಇದೆ ತಲೆ ಸರಿ ಇಲ್ಲದ ಮತ್ತು ಕೆಲಸ ಇಲ್ಲ ಎಂದು ತಿಳಿದುಕೊಂಡಿದ್ದ ಹೋರಾಟಗಾರರು. ಒಟ್ಟಿನಲ್ಲಿ ಇಲ್ಲಿ ಅನೇಕ ಬಾರಿ ಅನ್ಯಾಯಕ್ಕೆ ಒಳಗಾದವರು, ಬಲಿಯಾದವರಲ್ಲಿ ಅಮಾಯಕರೇ ಹೆಚ್ಚು ಎನ್ನುವುದನ್ನು ಮರೆಯುವಂತಿಲ್ಲ.


ಸಮಾಜದಲ್ಲಿ ಹಲವು ಅನ್ಯಾಯದ ಪ್ರಶ್ನೆಗಳು ಮೂಡಿದಾಗ ಅದರ ವಿರುದ್ದ  ಹೋರಾಡಿದ ಅನೇಕ ಹೋರಾಟಗಾರರ ಹೋರಾಟವನ್ನು ಮಣಿಸುವ ಉದ್ದೇಸದಿಂದಲೇ ಹಲವು ರೀತಿಯಲ್ಲಿ ಅವರನ್ನು ದಮನಿಸುವ ಪ್ರಯತ್ನ ನಡೆದಿದೆ ಮತ್ತು ಹಲವರು ಕೊಲೆಗೀಡಾಗಿದ್ದಾರೆ ಕೂಡ. ಆದರೆ ಇವರೇಕೆ ಪ್ರಶ್ನಿಸಿಸುತ್ತಾರೆ, ಹೋರಾಡುತ್ತಾರೆ ಎಂದು ಹೇಳಿದವರು ಕೂಡ ಅತಿ ಹೆಚ್ಚು ಸಂಖ್ಯೆಯಲ್ಲಿ ಪ್ರಶ್ನೆಯಾಗಿ ಇಹಲೋಕ ತ್ಯಜಿಸಿದ್ದಾರೆ ಎನ್ನುವುದನ್ನು ಮರೆಯಬಾರದು. ಈ ವ್ಯವಸ್ಥೆ ಅಮಾಯಕರನ್ನು ಬಲಿ ತೆಗೆದುಕೊಂಡ ಉದಾಹರಣೆಗಳು ಅನೇಕ ಇವೆ, ಆ ಸಮಯದಲ್ಲಿ  ಪ್ರಶ್ನೆಗೆ ಉತ್ತರ ಹುಡುಕಲು ಪ್ರಯತ್ನಿಸಿದವರು ಇದೇ ಹೋರಾಟಗಾರರು. ಅಮಾಯಕರಾಗಿದ್ದುಕೊಂಡು ಅನ್ಯಾಯಕ್ಕೊಳಗಾದ ವರ್ಗವು ಕೂಡಾ ಹೋರಾಟಕ್ಕಿಳಿದ ಉದಾಹರಣೆಗಳು ಬಹಳಷ್ಟಿವೆ. 
 
ಪ್ರಜಾಪ್ರಭುತ್ವ ದೇಶದಲ್ಲಿ ಅನ್ಯಾಯಕ್ಕೆ ರೋಸಿ ಹೋಗಿ  ಕೈಯಲ್ಲಿ ಬಂದೂಕು ಹಿಡಿದು, ಕೋವಿಯನ್ನು ಎತ್ತಿ, ಬಾಂಬು ಹಿಡಿಯುವ ಮೂಲಕ ಮಾಡುವ ಹೋರಾಟಕ್ಕಿಂತ ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಯಲ್ಲಿ ಮಾಡುವ ನ್ಯಾಯಬದ್ದ  ಹೋರಾಟ ಹೆಚ್ಚು ಬಳಶಾಲಿ ಎನ್ನುವುದನ್ನು ಮರೆಯುವಂತಿಲ್ಲ, ಖಂಡಿತ ನ್ಯಾಯ ನಿರಾಕರಿಸಲ್ಪಟ್ಟ ಪ್ರತಿಯೊಬ್ಬನಿಗೂ ಇಲ್ಲಿ ಸಾಥ್ ನೀಡಿದ್ದು ಕಾನುನುಬದ್ದ ಹೋರಾಟಗಳು, ತೆರೆ ಮರೆಯ ಆಟ ಇಲ್ಲಿನ ಕಾನೂನು ವ್ಯವಸ್ಥೆ ಅವರನ್ನು ಕಂಬಿ ಎನಿಸುವಂತೆ ಮಾಡಿ ಈ ದೇಶದ ಕಾನೂನು ವ್ಯವಸ್ಥೆಯ ಸುಭದ್ರತೆಯನ್ನು ಎತ್ತಿ ಹಿಡಿದಿದೆ. ನ್ಯಾಯಬದ್ದ ಹೋರಾಟಗಳಿಗೆ ಈ ದೇಶದಲ್ಲಿ ಗೆಲುವು ಸಿಕ್ಕಿದೆ.

ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟಿರುವ ಪ್ರತಿಯೊಬ್ಬನು ನ್ಯಾಯದ ಪರವಾಗಿ ನಡೆಯುವ ಹೋರಾಟಗಳಲ್ಲಿ ಪಾಲ್ಗೊಳ್ಳಬೇಕು, ಅಂತಹ ಹೋರಾಟಗಳಿಗೆ ಸಾಥ್ ನೀಡಬೇಕು, ಇದು ನಮ್ಮ  ಪ್ರಶ್ನೆಯಲ್ಲ ಎಂದು ನಿರಾಕರಿಸಿ ಮನೆಯಲ್ಲಿ ಕುಳಿತರೆ ಬೇರೆಯವರು ಯಾವ ರೀತಿ ಪ್ರಶ್ನೆಯಾಗಿದ್ದರೋ ಅದೇ ರೀತಿ ನಾವು ಕೂಡ ಪ್ರಶ್ನೆಯಾಗುತ್ತೇವೆ ಎನ್ನುವುದನ್ನು ಮರೆಯಬಾರದು, ನ್ಯಾಯ ಬದ್ದವಾದ ಎಲ್ಲ ಹೋರಾಟಗಳ ಮುಂಚೂನಿಯಲ್ಲಿ ನಾವಿರಬೇಕು ಆ ಮೂಲಕ ಅನ್ಯಾಯಕ್ಕೊಳಗಾದವರಿಗೆ ಆತ್ಮವಿಶ್ವಾಸ ಮೂಡಿಸಬೇಕು.

ಇನ್ನಷ್ಟು ಜನರು ಪ್ರಶ್ನೆಯಾಗುವುದನ್ನು ತಪ್ಪಿಸಬೇಕು, ಇದು ನನ್ನ ಪ್ರಶ್ನೆಯಲ್ಲ ಎಂದು ಸುಮ್ಮನೆ ಕುಳಿತುಕೊಲ್ಲುವುದಕ್ಕಿಂತ ನ್ಯಾಯಬದ್ದ ಹೋರಾಟಗಳಿಗೆ ಕೂಡ ಸ್ವಲ್ಪ ಸಮಯ ಮೀಸಲಿರಿಸಬೇಕು. ನಾಳೆ ನಾವು ಎನೂ ಪ್ರಶ್ನಿಸದೆ ಪ್ರಶ್ನೆಯಾಗುವುದಕ್ಕಿಂತ ಮರ್ದಿತರ ಪರವಾಗಿ ಪ್ರಶ್ನಿಸಿದ ಸಲುವಾಗಿ ಪ್ರಶ್ನೆಯಾಗಲು ಸಿದ್ದರಾಗಬೇಕು, ನ್ಯಾಯ ಬದ್ದ ಹೋರಾಟಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವ ಮಟ್ಟಕ್ಕೆ ನಮ್ಮನ್ನು ನಾವು ಬದಲಾಯಿಸಿಕೊಳ್ಳಬೇಕು.

No comments: