Thursday, November 20, 2014

ಪ್ರತಿಭಟನೆಯ ಎಡವಟ್ಟು!!! (ಲೇಖನ)


ಪಕ್ಕದ ಬೆಂಚಿನಲ್ಲಿ ಕುಳಿತ ಸಹಪಾಠಿಯೊಬ್ಬ ವಾಗ್ವಾದದ ಕಾರಣದಿಂದ ಪೆನ್ಸಿಲಿನಿಂದ ಚುಚ್ಚಿದರೆ ಅದನ್ನು ಪ್ರಿನ್ಸಿಪಾಲರ ಟೇಬಲಿಗೆ ಕಂಪ್ಲೆಂಟ್ ತಲುಪಿಸುವ ಮೂಲಕ ಆತನಿಗೆ ತಕ್ಕ ಪಾಟ ಕಲಿಸಿ ನ್ಯಾಯ ಪಡೆದುಕೊಳ್ಳಬಹುದು ಎಂದು ಕಾನೂನಿನ ಜ್ನಾನ ಬೆಳೆಸಿಕೊಂಡು ಬಂದವರು ನಾವು. ಸಮಾಜದ ಬದಲಾವಣೆಗೆ ಯಾವ ಪದಗಳಿಂದಲೂ ಅರ್ಥ ಕಲ್ಪಿಸಲು ಸಾಧ್ಯವಿಲ್ಲದ ಕೆಲವು ಸ್ವಘೋಷಿತ ಧರ್ಮ ರಕ್ಷಕರಿಗೆ ಸಜ್ಜನರು ಎನಿಸಿಕೊಂಡವರು ಅದೇ ರೀತಿ ಪ್ರತಿಭಟನೆ ವ್ಯಕ್ತಪಡಿಸಿ ಸಂಸ್ಕೃತಿಯ ಹರಣ ಮಾಡುವುದು ಎಷ್ಟು ಸರಿ? ನ್ಯಾಯ ವಾದವನ್ನು ತಿರಸ್ಕರಿಸಿದ ಪುಂಡರಿಗೆ ಸಂಸ್ಕೃತಿಯ ಹರಣ ಮಾಡಿ ನ್ಯಾಯ ವಾದವನ್ನು ಪಾಲಿಸಲು ಕರೆ ನೀಡುತ್ತೇವೆ ಎನ್ನುವುದು ಮೂರ್ಖತನವಲ್ಲವೇ? ಅನ್ಯಾಯ ವಾದವನ್ನೇ ತಮ್ಮ ಜೀವನದ ಮಹೋನ್ನತ ಗುರಿ ಎಂದು ತಿಳಿದಿರುವ ಅಷಾಡ ಭೂತಗಳಿಗೆ "ಕಿಸ್ ಡೇ" ತಮ್ಮ ಅನ್ಯಾಯದ ಪ್ರವೃತ್ತಿಯನ್ನು ನಿಲ್ಲಿಸಲು ಪ್ರೇರಣೆಯಾಗಬಹುದೇ? ಆಗಬಹುದು ಎನ್ನುವವರು ಚಿಂತಿಸಬೇಕಾಗಿದೆ.


ಅನೈತಿಕ ಪೋಲಿಸ್ ಗಿರಿಯನ್ನು ತಡೆಗಟ್ಟಲು "ಕಿಸ್ ಡೇ" ಒಂದು ಸಾಂಕೇತಿಕ ಪ್ರತಿಭಟನೆ ಎನ್ನಲಾಗುತ್ತಿದೆ, ಪ್ರತಿಭಟಿಸುವ ಉತ್ಸಾಹಕ್ಕೆ ದಿಟ್ಟತನ ಸರಿ ಎಂದೆನಿಸಿದರು ಹಾದಿಯಂತು ಸರಿಯಲ್ಲ. ಈ ಹಾದಿ ಯುವಜನತೆಯನ್ನು ಅಧಪತನಕ್ಕೆ ತಲುಪಿಸಿತ್ತದೆ, ಅಸಂಸ್ಕೃತಿಯ ಬಿಡಾಗಿ ಈ ನಾಡು ಮುಂದುವರೆಯಲು ಪ್ರೆರೇಪಣೆಯಾದ ವಸ್ತುವಾಗುತ್ತದೆ. ಕೊಚ್ಚಿಯಲ್ಲಿ ನಡೆದ "ಕಿಸ್ ಡೇ" "ಗೇ" ವಾದಕ್ಕೆ ಮುನ್ನುಡಿ ಇಟ್ಟಿದೆ, ಸಂಬಂಧ ಕೆಡಿಸುವ ಅಸಂಸ್ಕೃತಿಯ ಸ್ವಚ್ಚಂದ ಅನಾವರಣಕ್ಕೆ ನಾಂದಿ ಹಾಕಿದೆ. ಅನೈತಿಕತೆಯನ್ನು ನಿಲ್ಲಿಸುವ ದಾರಿ ಅನೈತಿಕತೆಯಾದರೆ ಅದು ಮತ್ತಷ್ಟು ಹೊಸ ಅನೈತಿಕತೆಗಳಿಗೆ ದಾರಿ ತೆರೆದು ಕೊಡುತ್ತದೆ.

ವೇಶ್ಯಾವಾಟಿಕೆಯನ್ನು, ಮೂಡನಂಬಿಕೆಗಳನ್ನು, ಅನಿಷ್ಟ ಪದ್ದತಿಗಳನ್ನು, ಮಾದಕದ್ರವ್ಯಗಳನ್ನು, ಅಶ್ಲೀಲ ಚಿತ್ರಗಳನ್ನು ವಿರೋಧಿಸಲು ಸಮಯವಿಲ್ಲದ ಹಣೆ ಪಟ್ಟಿ ದೇಶರಕ್ಷಕರು ಕೋಮುವಾದದ ಬಲವರ್ಧನೆಗೆ ಕೈ ಹಾಕಿ ಅನೈತಿಕ ಪೋಲಿಸ್ ಗಿರಿಯನ್ನು ಸಮರ್ಥಿಸುತ್ತಾರೆ, ಅದರಲ್ಲಿ ತಮ್ಮನ್ನು ತೊಡಗಿಸಿಕೊಂಡು ಧೀರರು ಎನ್ನುವ ಹೆಮ್ಮೆ ಬೇರೆ. ಪಬ್ ದಾಳಿ ಮಾಡಿದ್ದಾರೆ ಎಂದು ಪಬ್ ನಲ್ಲಿ ಮತ್ತಷ್ಟು ಕುಡಿದು ಕುಪ್ಪಳಿಸಿದರೆ ಸಮಸ್ಯೆ ಪರಿಹಾರ ಆಗದು, ಭಾರತೀಯತೆಯಲ್ಲಿ ಧಾರ್ಮಿಕತೆಗೆ ಬಹಳಷ್ಟು ಮಹತ್ವ ಇದೆ,
ಸುಸಂಸ್ಕೃತಯೆಯ ಗಟ್ಟಿ ಪಾಯದ ಮೇಲೆ ಭಾರತೀಯತೆ ಅಡಗಿದೆ, ವಿರೋಧಿಸುವ ನೆಪದಲ್ಲಿ ಹಿಡಿತ ತಪ್ಪಿದವುಗಳನ್ನು ಸಂಸ್ಕೃತಿಯ ರಕ್ಷಣೆ ಎನ್ನಲಾಗದು.

"ಕಿಸ್ ಡೇ" ಪರಿಚಯಸ್ಥರಿಗೆ, ಇಷ್ಟಪಟ್ಟವರಿಗೆ, ಪ್ರೇಮಿಗಳಿಗೆ ಕಿಸ್ ಕೊಟ್ಟು ನಡೆಯುವ ಪ್ರತಿಭಟನೆ ಎನ್ನುವ ವಾದ, ಈ ವಾದ ದುರ್ಬಳಕೆಗಳಿಗೆ ವೇದಿಕೆ!! ಕಾಮುಕರಿಗೆ! ಅಸ್ವಾದಿಸುವವರಿಗೆ! "ಗೇ" ಸಂಸ್ಕೃತಿಯನ್ನು ಬೆಳೆಸುವ, ಕುಟುಂಬ ಕಲಹಗಳನ್ನು ಸೃಷ್ಟಿಸುವ ಮಾದರಿ. ಪ್ರತಿಭಟಿಸುವ ನೆಪದಲ್ಲಿ ಕನೂನು ಮೂಲೆಗುಂಪಾಗುತ್ತಿದೆ.

"ಕಿಸ್ ಡೇ" ಮಾಡಿ ಪ್ರತಿಭಟಿಸುವಾಗ ಅಸಂಸ್ಕೃತಿಯ ದಾಸರು ದೇಶ ಒಡೆಯುವ ಕೆಲಸ ಮಾಡುತ್ತಾರೆ, ಅಶ್ಲೀಲ ಪ್ರತಿಭಟನೆಗಳು ದೇಶವನ್ನು ಒಡೆಯುತ್ತಲೇ ಸಾಗುತ್ತದೆ. ನಾಳೆ ಧರ್ಮ ರಕ್ಷಕರು ಎಂದು ಘೋಷಿಸಿ ಕೊಂಡವರು ಮತ್ತಷ್ಟು ಅಟ್ಟಾಡಿಸಿ ಹೊಡೆದಾಗ ಪ್ರತಿಬಟಿಸುವವರು ಮನೆಯ ಮಂಚವನ್ನು ರಸ್ತೆಯಲ್ಲಿಟ್ಟು ಮಧು ಮಿಲನ ಮಾಡಿ "ಮಧು ಸಿಂಚನ" ಡೇ ಆಚರಿಸಿದರೆ ಈ ದೇಶದ ಪರಿಸ್ಥಿತಿ ಹೇಗಾಗಬಹುದು?? ಊಹಿಸಲು ಕಷ್ಟ ಆದರೆ ಅದರ ಅಡಿಗಲ್ಲೇ ಚರ್ಚೆಯಲ್ಲಿರುವ "ಕಿಸ್ ಡೇ"...

Friday, November 14, 2014

ಗ್ಯಾಸ್ ಮತ್ತು ಪಡಿತರ ಚೀಟಿ ಗೋಳು



ಮಂಗಳೂರಿನ "ಡಾನ್ ಬಾಸ್ಕೋ" ಹಾಲಿನಲ್ಲಿ "ಪ್ರಜಾ ವಿಕಾಸ ಸೇವಾ ಟ್ರಸ್ಟ್" ಸಹಯೋಗದಲ್ಲಿ "ಗ್ಯಾಸ್ ಮತ್ತು ಪಡಿತರ ಬಳಕೆದಾರರ ವೇದಿಕೆ, ಕರ್ನಾಟಕ" ಜನರ ಸಮಸ್ಯೆಗಳಿಗೆ ಸ್ಪಂದಿಸಲು ಆಯೋಜಿಸಿದ "ಜನ ಸಂಪರ್ಕ ಸಭೆ" ನಡೆಯುತ್ತಿತ್ತು. ಮುಖ್ಯ ಚರ್ಚೆಯಾಗಿ ಗ್ಯಾಸ್ ಮತ್ತು ಪಡಿತರ ಚೀಟಿಯ ಬಗ್ಗೆ ದೂರು ಮತ್ತು ಸಮಸ್ಯೆಗಳ ಬಗ್ಗೆ ಸಂವಾದ ನಡೆಯುತ್ತಿತ್ತು. ಸಂವಾದದ ತುಂಬಾ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗುತ್ತಿತ್ತು! ಉಳ್ಳಾಲದ ಹಿರಿಯ ವಯಸ್ಸಿನ ವ್ಯಕ್ತಿಯೊಬ್ಬರು ನಾನು ಯಮದೂತನನ್ನು ಹಿಂದೆ ಕಳುಹಿಸುವಷ್ಟು ಶಕ್ತಿ ಹೊಂದಿದ್ದೇನೆ ಆದರೆ ಗ್ಯಾಸ್ ನವರಿಗೆ ಹೆದರಿಕೊಂದು ಬದುಬೇಕಾಗಿದೆ, ಅವರು ನಮ್ಮನ್ನು ಲೂಟಿ ಮಾಡುತಿದ್ದಾರೆ, 93ನೇ ವಯಸ್ಸಿನಲ್ಲಿ ಹೋರಾಟ ಬೇಡ ಅಂದುಕೊಂಡಿದ್ದೇನೆ, 90 ವಯಸ್ಸಿನ ನನ್ನ ಪತ್ನಿಗೆ ಸರಿಯಾಗಿ ಕಣ್ಣು ಕಾಣುವುದಿಲ್ಲ ನಮ್ಮನ್ನು ಪೀಡನೆಯಿಂದ ರಕ್ಷಿಸಿ ಎಂದು ಗದ್ಗದಿತವಾಗಿ ನುಡಿಯುವಾಗ ಯಮದೂತ ಗ್ಯಾಸ್ ಏಜೆನ್ಸಿಗಳ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಬಜ್ಪೆಯ ವ್ಯಕ್ತಿಯೊಬ್ಬರು ಪ್ರಶ್ನೆ ಹಾಕುತ್ತಾ ಕುವೈತ್ ಮತ್ತು ದೂರದ ದೇಶಗಳಿಗೆ ಸಂಪರ್ಕ ಕಲ್ಪಿಸುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇರುವ ಬಜಪೆಯ ಸಮೀಪದ 6 ಗ್ರಾಮಗಳ ನಾಗರೀಕರು, ಹಿರಿಯರು ಗ್ಯಾಸ್ ಪಡೆಯಲು ಅಲೆದಾಡುವಂತಾಗಿದೆ, ಹಿರಿಯ ನಾಗರಿಕರ ಸಮಸ್ಯೆ ಅರ್ಥಮಾಡಿಕೊಂಡು ಬಜಪೆಯಲ್ಲಿ ಗ್ಯಾಸ್ ಏಜೆನ್ಸಿಯನ್ನು ಸ್ಥಾಪಿಸಿ ಎಂದು ಅಧಿಕಾರಿಗಳಿಗೆ ಬಿಸಿ ಮುಟ್ಟುವಂತೆ ಮಾತನಾಡಿದರು. 

ಹಲವಾರು ಮಹಿಳೆಯರು ಸಮಸ್ಯೆಗಳ ಸರಮಾಲೆಯನ್ನೆ ಹೊತ್ತು ತಂದಿದ್ದರು, ಜನ ಸಂಪರ್ಕ ಸಭೆಯಲ್ಲಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕಾತರ ಎದ್ದು ಕಾಣುತಿತ್ತು. ಒಬ್ಬೊಬ್ಬರದು ವಿಭಿನ್ನ ಪ್ರಶ್ನೆ! ಅಧಿಕಾರಿಗಳ ಮುಖದಲ್ಲಿ ಬೆವರು ತರಿಸಿದಂತಹ ಪ್ರಶ್ನೆಗಳು! ಉತ್ತರ ಮಾತ್ರ ಬಹಳ ನಾಜೂಕು!! ಅದು ನಮ್ಮ ವ್ಯಾಪ್ತಿಯಲ್ಲ, ಪರಿಶೀಲನೆ ನಡೆಯುತ್ತಿದೆ, ಸ್ಪಂದಿಸುತ್ತೇವೆ ಎಂದು ಕಾಲ ಕಾಲದಿಂದ ಹೇಳಿಕೊಂಡು ಬಂದಂತಹ ಸಿದ್ದಪಡಿಸಿಟ್ಟ ಉತ್ತರ. ಸುರತ್ಕಲ್ ನ ಸಾಲಿಯಾನ್ ಗ್ಯಾಸ್ ಏಜೆನ್ಸಿಯ ಬಗ್ಗೆಯಂತೂ ಭಾರೀ ದೂರುಗಳಿದ್ದವು, ಆಗಾಗ್ಗೆ ಪಾಲಿಸದೆ ತುಕ್ಕು ಹಿಡಿದಿರುವ ಸುಪ್ರೀಂ ಕೋರ್ಟಿನ ಕೆಲವು ಆದೇಶಗಳ ಬಗ್ಗೆಯೂ ಚರ್ಚೆ ನಡೆಯುತಿತ್ತು. ಜಿಲ್ಲೆಯಲ್ಲಿ 55 ಶೇಕಡಾ ಬಿಪಿಎಲ್ ಕಾರ್ಡ್ ಗಳಿದ್ದರೂ ಅರ್ಹತೆ ಹೊಂದದ ಹಲವರು ಬಿಪಿಏಲ್ ಕಾರ್ಡ್ ಹೊಂದಿ ನಿಜವಾದ ಬಿಪ್ಎಲ್ ದಾರರು ಎಪಿಎಲ್ ಪಡಿತರ ಚೀಟಿ ಪಡೆಯುವಂತಾಗಿದೆ ಎನ್ನುವ ಮಾತನ್ನು ಸಭೆಯಲ್ಲಿ ಹಾಜರಿದ್ದ ವಿಧಾನ ಪರಿಷತ್ ಸದಸ್ಯರಾದ "ಐವನ್ ಡಿಸೋಜ" ಒಪ್ಪಿಕೊಂಡರು ಹಾಗು ಹಲವು ದೂರುಗಳಿಗೆ ಸ್ಪಂದಿಸಿದ ಅವರು ಸೋಮವಾರವೆ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಜನರಲ್ಲಿ ಹೇಳಿಕೊಂಡರು! ಈ ಹಿಂದೆ ಇಂತಹ ಹಲವು ಸೋಮವಾರಗಳ ವಾಗ್ದಾನಗಳಾಗಿವೆ ನಮ್ಮ ಸಮಸ್ಯೆ ಪರಿಹಾರವಾಗಿಲ್ಲ ಎಂದು ಗೊಣಗುಟ್ಟುವಂತೆ ಸಭೆಯಲ್ಲಿ ಸೇರಿದ ಜನರ ಮನೋಸ್ಥಿತಿ ಎದ್ದು ಕಾಣುತಿತ್ತು.  

ಗ್ಯಾಸ್ ಏಜೆನ್ಸಿಯವರು ಹೆಚ್ಚುವರಿ ಹಣ ವಸೂಲಿ ಮಾಡುವುದು, ತಿಂಗಳುಗಟ್ಟಲೆ ಗ್ಯಾಸ್ ಸಿಗದೇ ಇರುವುದು, ಫೋನ್ ಎತ್ತದೆ ಸತಾಯಿಸುವುದರ ಬಗ್ಗೆ ವಿಸ್ಕೃತ ಚರ್ಚೆ ನಡೆಯಿತು. ಎಲ್ಲದಕ್ಕಿಂತ ಮುಖ್ಯವಾಗಿ ಸಭೆಯಲ್ಲಿ ಒಂದು ವಿಶೇಷತೆ ಇತ್ತು! ಪ್ರಶ್ನಿಸಿದವರೆಲ್ಲ ಕನ್ನಡದಲ್ಲಿ ಪ್ರಶ್ನಿಸುವಾಗ ಉತ್ತರಿಸುವರು ಹಿಂದಿಯಲ್ಲಿ ಉತ್ತರಿಸುವ ಮತ್ತು ಅದನ್ನು ಭಾಷಾಂತರಿಸುವ ಸ್ಥಿತಿ ಒದಗಿತ್ತು, ಇದು ಜನರ ಮತ್ತು ಅಧಿಕಾರಿಗಳ ನಡುವೆ ಭಾಷಾ ಸಮಸ್ಯೆಯನ್ನು ಏರ್ಪಡಿಸಿತು. ಜನ ಸಂಪರ್ಕ ಸಭೆಯಲ್ಲಿ ಕನ್ನಡದ ಪ್ರಶ್ನೆಗಳಿಗೆ ಉತ್ತರಿಸಲಾಗದ ಅಧಿಕಾರಿಗಳು ನಮ್ಮ ಬಡ ಜನರು ಬರೆಯುವ ಕನ್ನಡದ ದೂರು ಪತ್ರಗಳಿಗೆ ಹೇಗೆ ಉತ್ತರಿಸಿಯಾರು? ಸಮಸ್ಯೆ ಪರಿಹಾರವಾಗುವುದಾದರೂ ಹೇಗೆ! ಎಷ್ಟು ಕನ್ನಡ ಬಲ್ಲ ಅಧಿಕಾರಿಗಳಿದ್ದಾರೆ ನಮ್ಮಲ್ಲಿ ಎನ್ನುವುದು ಕೂಡಾ ಪ್ರಶ್ನೆ. ಈ ಬಗ್ಗೆ ಅಕ್ರೂಶಿತರಾದ ಸಾರ್ವಜನಿಕರೊಬ್ಬರು ಅಚ್ಚ ಕನ್ನಡ ಮಾತನಾಡುವ ಸ್ವಚ್ಛ ಕನ್ನಡದ ಅಧಿಕಾರಿಗಳನ್ನು ನೇಮಿಸಿ ಗೋಳು ತಪ್ಪಿಸಿ ಎಂದು ಭಿನ್ನವಿಸಿಕೊಂಡರು. 

ಕೊನೆಯದಾಗಿ ಒಂದು ಮಾತು ಮುಂದೆ ಇಂತಹ ಜನಸಂಪರ್ಕ ಸಭೆಗಳಿಗೆ "ಜನ ಮತ್ತು ಜನಪ್ರತಿನಿದಿಗಳ ಸಭೆ" ಎಂದು ಹೆಸರಿಡಬೇಕು ಆಗ ಜನಪ್ರತಿನಿಧಿಗಳು ಎನಿಸಿಕೊಂಡವರು ಕಾರ್ಯಕ್ರಮ್ಮೆ ಬಂದು ಹೋಗಿದ್ದೇವೆ ಎಂದು ಹೇಳುವುದಕ್ಕೆ ಮಾತ್ರ ಸೀಮಿತರಾಗದೆ ಕಾರ್ಯಕ್ರಮದ ಭಾಗವಾಗಿ ಸ್ವತಹ ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರೆರಣೆಯಾಗಬಹುದು.  

Wednesday, November 12, 2014

ಸಂತಾನ ಹರಣದ ಮಾನವ ಹತ್ಯೆ (ಲೇಖನ)


ಸರಕಾರದ ಯೋಜನೆಗಳು ಫಲಾನುಭವಿಗಳನ್ನು ತಲುಪಿ ಅವರು ಅನುಭವಿಸುತ್ತಿರುವುದು ಬಹಳ ಕಡಿಮೆ, ಯೋಜನೆಗಳು ನಿಜವಾದ ಅನುಷ್ಟಾನವಾಗಿ ಭಾರತ ಅಬಿವೃದ್ದಿಯಾಗುವುದಕ್ಕಿಂತ ಕಪ್ಪು ಹಣದ ರೂಪದಲ್ಲಿ ಶೇಕರಣೆಗೊಂಡಿರುವುದು ಅಧಿಕ.  ಆರ್ಥಿಕ ಪರಿಸ್ಥಿತಿ ತಾಯಂದಿರಾಗಬೇಕಾದ ಹೆಣ್ಣುಮಕ್ಕಳನ್ನು ಅತಿಯಾಗಿ ಸಂತಾನ ಹರಣ ಶಸ್ತ್ರಚಿಕಿತ್ಸೆಗೊಳಗಾಗುವಂತೆ ಮಾಡಿ ತಾಯ್ತನವನ್ನೇ ಕಳೆದುಕೊಳ್ಳಲು ಉತ್ತೇಜನ ನೀಡುತ್ತದೆ, ಇತರ ಬೇರೆ ರೂಪಗಳನ್ನೂ ಹುಡುಕಾಡುತ್ತದೆ ಜನಸಂಖೆಯೇ ಭಾರತದ ಅಭಿವೃದ್ದಿಗೆ ತೊಡಕು ಎಂಬ ನೆಪ ಬೇರೆ ಇದೆ. ಛತ್ತಿಸಗಡದ ಬಿಲಾಸಪುರದಲ್ಲಿ ಸರಕಾರದ ಪ್ರಾಯೋಜತ್ವದಲ್ಲಿ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಏರ್ಪಡಿಸಲಾಗಿತ್ತು, ಶಸ್ತ್ರ ಚಿಕಿತ್ಸೆಯ ಬಳಿಕ ಹೆಚ್ಚಿನವರು ಅಸ್ವಸ್ಥಗೊಂಡರು, 13 ಮಹಿಳೆಯರು ತಮ್ಮ ಪ್ರಾಣ ಕಳೆದುಕೊಂಡರು ಮತ್ತು ಅದು ಇನ್ನಷ್ಟು ಹೆಚ್ಚುತ್ತಿದೆ ಕೂಡಾ, ಇಳಿ ವಯಸ್ಸಿನಲ್ಲೇ ತಾಯ್ತನವನ್ನು ಕಳೆದುಕೊಂಡು ಪ್ರಾಣ ಬಿಟ್ಟರು, ಇನ್ನು ಹಲವಾರು ಮಂದಿ ನರಳಾಡುತ್ತಿದ್ದಾರೆ. ಸರಕಾರಿ ವೈಧ್ಯಾಧಿಕಾರಿಗಳ ಅಲ್ಪತನದಿಂದಾಗಿ ಬಾಳಿ ಬದುಕಬೇಕಾದ ಮಹಿಳೆಯರು ಪ್ರಾಣ ಕಳೆದುಕೊಂಡಿದ್ದಾರೆ, ಹಗರಣಗಳ ಸರಮಾಲೆ ಇರುವ ದೇಶದಲ್ಲಿ ಮತ್ತೊಂದು ಬಲು ದೊಡ್ಡ ಹಗರಣ ಹಲವು ಮಹಿಳೆಯರನ್ನು ಸಾಮೂಹಿಕವಾಗಿ ಬಲಿತೆಗೆದುಕೊಂಡಿದೆ. 

ಸಂತಾನ ಹರಣ ಶಸ್ತ್ರ ಚಿಕಿತ್ಸೆ ಎಂಬುದೇ ದೇಶದಲ್ಲಿ ನಡೆಯುತ್ತಿರುವ ಬಲು ದೊಡ್ಡ ರಾಜಕೀಯ ಲಾಭಿ! ಇದರ ಹಿಂದೆ ಒಂದು ಸಮೂಹವನ್ನೇ ನಾಶ ಪಡಿಸುವ ಬಲು ದೊಡ್ಡ ಗುರಿ ಇದೆ. ಆದಿವಾಸಿಗಳ, ಅಲ್ಪಸಂಖ್ಯಾತರ ಮಾನಸಿಕ ಸ್ಥೈರ್ಯವನ್ನು ಜನಸಂಖೆ ಕಡಿಮೆಗೊಳಿಸುವ ಮೂಲಕ ಕುಗ್ಗಿಸುವ ಪ್ರಯತ್ನ, ಆದಿವಾಸಿಗಳನ್ನು ಅವರು ಬದುಕುತ್ತಿರುವ ಭೂಮಿಯಿಂದ ಕ್ರಮೇಣವಾಗಿ ಅವರ ವಿರೋಧವಿಲ್ಲದೆ ದೂರ ಮಾಡಿಸುವ ಬಲು ದೊಡ್ಡ ಸಂಚು, ವಿರೋಧಗಳನ್ನು ಸೃಷ್ಟಿ ಮಾಡಿ ಅವರು ಬಲಿಷ್ಟವಾಗುವುದನ್ನು ಅರಿತು ಒಳಗಿಂದಲೇ ಯೋಜನೆಗಳ ಮೂಲಕ ಅವರನ್ನು ನಂಬಿಸಿ ಅವರಿಂದಲೇ ಸಂತಾನವನ್ನು ಇಲ್ಲವಾಗಿಸುವ ಪಿತೂರಿ, ಆರ್ಥಿಕತೆ ಮತ್ತು ಜನಸಂಖ್ಯಾ ಸ್ಪೋಟ ಆದಕ್ಕೆ ನೀಡಿರುವ ಸುಳ್ಳಿನ ಕಂತೆ, ಸಂತಾನ ಹರಣ ಚಿಕತ್ಸೆ ಈ ದೇಶದಲ್ಲಿ ನಡೆಯುವ ಮಾರಕತೆಗೆ ಮುಂದಿನ ದಿನಗಳಲ್ಲಿ ನೀಡಬಹುದಾದ ಒಂದು ಶಕ್ತಿ!! ಛತ್ತಿಸಗಡದ ಮಹಿಳೆಯರ ಮರಣ ಒಂದಿಷ್ಟು ಸುದ್ದಿಯಾಯಿತು ಆದರೆ ಅದೆಷ್ಟೋ ಅರಿಯದ ಕಥೆಗಳ ಮೂಲಕ ಸಾವಿರಾರು ಜೀವಗಳು ಬಲಿಯಾದ ಕಥೆ ಹುದುಗಿ ಹೋಗಿದೆ. 

ಒಳಗಿಂದೊಳಗೆ ನಡೆಯುವ ಸಂತಾನ ಹರಣ ಚಿಕಿತ್ಸೆ ಈ ದೇಶದ ಅಲ್ಪಸಂಖ್ಯಾತರನ್ನೂ ಬಿಟ್ಟಿಲ್ಲ, ಹೇಳುವುದಕ್ಕೆ ಮಾತ್ರ ಇದು ಯೋಜನೆ ಒಳಗಿಂದ ಇದು ಸಮೂಹಗಳನ್ನು ಕುಗ್ಗಿಸುವ, ಬಲ ಕಡಿಮೆಗೊಳಿಸುವ ಸಂಚು, ಇಲ್ಲಿ ವೈದ್ಯರುಗಳು, ಶಸ್ತ್ರ ಚಿಕಿತ್ಸೆ ಏರ್ಪಡಿಸಿದ ಸರಕಾರ ಮತ್ತು ಹಿಂದಿರುವ ಕಾಣದ ಕೈಗಳ ಬಗ್ಗೆ ತನಿಖೆ ನಡೆಯಬೇಕಾಗಿದೆ ಆ ಮೂಲಕ ಜೀವತೆತ್ತ ಸಾವಿರಾರು ಸಂತಾನಹರಣಗೊಂಡ ಮುಗ್ದ ಜೀವಗಳಿಗೆ ನ್ಯಾಯ ಕೊಡಿಸಬೇಕಾಗಿದೆ. ಆರ್ಥಿಕ ಪರಿಸ್ಥಿತಿಗೆ ಹೆದರಿ ಮಕ್ಕಳಿಲ್ಲದ ಹಾಗೆ ಮಾಡಲು ಹೋಗಿ ತಾವೇ ಇಲ್ಲವಾಗಿ ಹೋದದ್ದು ಬಲು ದೊಡ್ಡ ದುರಂತ, ಕಣ್ಣೆದುರಿಗೆ ಕಂಡರೂ ಒಳಗೊಳಗೇ ಅಡಗಿಕೊಂಡು ಪಿತೂರಿ ನಡೆಸುವ ಕಾರ್ಪೋರೇಟರ್ ಕೈಗಳ ಕುತಂತ್ರ. "ನಿಮ್ಮ ಮಕ್ಕಳನ್ನು ಬಡತನದ ಭೀತಿಯಿಂದ ಕೊಲ್ಲಬೇಡಿರಿ ನಾವು ಅವರಿಗೂ ಆಹಾರ ನೀಡುವೆವು ನಿಮಗೂ ನೀಡುವೆವು ವಾಸ್ತವದಲ್ಲಿ ಅವರ ವಧೆಯು ಒಂದು ಘೋರ ಅಪರಾಧವಾಗಿದೆ" (ಕುರ್ ಆನ್ 17: 31) ಸೃಷ್ಟಿಕರ್ತ ಕಲ್ಪಿಸಿದ ಅಪರಾಧದ ಬಗೆಯ ಬೋಧನೆಗೆ ಆರ್ಥಿಕತೆ ಅಡ್ಡಿ ಬಂತು, ಬೇಕೆಂತಲೇ ಆರ್ಥಿಕತೆಯ ನೆಪವೊಡ್ಡಿ ದೇಶದ ಅಬಿವೃದ್ದಿಯ ಹಿನ್ನಲೆಗಾಗಿ ಎಂದು ಸಂತಾನ ಹರಣದ ಮಹತ್ವ ಜಾರಿಗೊಳಿಸಳಾಗುತ್ತಿದೆ, ಸಂತಾನ ಹರಣ ದೇಶದ ಅಬಿವೃದ್ದಿಗೆ ಮಾರ್ಗಸೂಚಿ ಎನ್ನುವುದು ಬಲು ದೊಡ್ಡ ಸುಳ್ಳು, ಅದು ರಾಜಕಾರಣಿಗಳ ಅಬಿವೃದ್ದಿ ಹಾಗು ಒಂದು ವರ್ಗ ಮತ್ತು ಸಮುದಾಯವನ್ನು ಈ ದೇಶದಲ್ಲಿ ನೇಪಥ್ಯಕ್ಕೆ ಸರಿಸಿಬಿಡಲು ನಡೆಸಿರುವ ಬಲು ದೊಡ್ಡ ಹುನ್ನಾರ, ಈ ಬಗ್ಗೆ ಎಚ್ಚರಿಕೆಯಿರಲಿ!! ಆರ್ಥಿಕತೆಯ ಭಯದಿಂದ ನಾವು ನಮ್ಮ ಮಕ್ಕಳನ್ನು ಕೊಂದು ಬುದ್ದಿವಂತರಾಗುವುದಕ್ಕಿಂತ ಕಂಡು ಕಾಣದ ಕೈಗಳ ಪಿತೂರಿಗೆ ಬುದ್ದಿಕಲಿಸಬೇಕಾಗಿರುವುದು ಕಾಲಗಟ್ಟದ ಅಗತ್ಯ.  

ನಿಮ್ಮನ್ನು ನಿರ್ಗತಿಕನಾಗಿ ಕಂಡು ಸ್ಥಿತಿವಂತನಾಗಿ ಮಾಡಲಿಲ್ಲವೇ!!!?


ನಾನು ಕಷ್ಟ ಪಟ್ಟು ಸಂಪಾದಿಸಿದ ದುಡ್ಡು! ನನ್ನ ಬುದ್ದಿಶಕ್ತಿಯಿಂದ ಕೂಡಿಟ್ಟ ದುಡ್ಡು!! ಅದರಲ್ಲಿ ಬಡವನ ಪಾಲು ಎಲ್ಲಿಂದ ಬಂತು? ಹೀಗೆ ಅಲೋಚಿಸುವ ಸ್ಥಿತಿವಂತರು ನಮ್ಮ ಮಧ್ಯೆ ಹೆಚ್ಚು ಹಾಗಾಗಿಯೇ ಕೆಲವು ಸೀಮಿತ ಶ್ರೀಮಂತರು ದುಂದುವೆಚ್ಚದಲ್ಲಿ ತೊಡಗಿರುವುದು, ಆಡಂಬರದ ಮದುವೆಗಳು ಕಾಣಸಿಗುವುದು, ಖರ್ಚು ಮಾಡಬಾರದು ಎಂದು ಯಾವ ಧರ್ಮದ ತತ್ವಾದರ್ಶಗಳು ಅಡ್ಡಿಯಾಗಿಲ್ಲ, ಅಡ್ಡಿಪಡಿಸದವರೂ ಇಲ್ಲ, ಒಂದು ಇತಿಮಿತಿಯೊಳಗೆ ಖರ್ಚು ಮಾಡಲು ಶ್ರೀಮಂತರಿಗೂ, ಬಡವರಿಗೂ, ಒಟ್ಟಲ್ಲಿ ಸರ್ವಜನರಿಗೂ ಸೃಷ್ಟಿಕರ್ತನು ಸಮ್ಮತಿಸಿರುತ್ತಾನೆ ಆದರೆ  ಎಲ್ಲೆಗಳನ್ನು ಮೀರಿ ಹೋಗಬಾರದು.

ಸೃಷ್ಟಿಸಿದ ಸೃಷ್ಟಿಕರ್ತನನ್ನೇ ಮೂರ್ಖ ಮಾಡಲು ಹೊರಟಿರುವ ಸಮಾಜ ಇದು, ಮಸೀದಿಯ ಒಳಗೆ ಸರಳವಾಗಿ ನಿಖಾ ಕಾರ್ಯಕ್ರಮ ಮುಗಿಸಿ ತದನಂತರ ಆಡಂಬರದ ಎಲ್ಲೆಗಳನ್ನೆಲ್ಲಾ ಮೀರಿ ಶೃಂಗಾರಗೊಂಡ ಬಣ್ಣ ಬಣ್ಣದ ಚಿತ್ತಾರಗಳ ನಡುವೆ ತಿನ್ನುವವನು ತಿಂದು ಮುಗಿಸಲು ಸಾಧ್ಯವಿಲ್ಲದಷ್ಟು ಇಟ್ಟು ಭಾರೀ ಮದುವೆ ಎಂದು ಪ್ರಚಾರ ಗಿಟ್ಟಿಸಿಕೊಳ್ಳುವ ತವಕ!!! ಇಂತಹ ಮನೋಸ್ಥಿತಿ ಉಲ್ಲ ಶ್ರೀಮಂತರಿಗೆ "ನಿಮ್ಮನ್ನು ನಿರ್ಗತಿಕನಾಗಿ ಕಂಡು ಸ್ಥಿತಿವಂತನಾಗಿ ಮಾಡಲಿಲ್ಲವೇ" (ಕುರ್ ಆನ್ - 93: 8) ಎನ್ನುವ ದೇವ ವಾಖ್ಯ ಮರೆತಂತಿದೆ! ಮರೆತವರಲ್ಲ ಸಂಪತ್ತು ಮರೆಸಿದೆ. ಒಂದು ಕಡೆ ಸರಳವಾಗಿ ನಿಖಾ ಆಗಿ ದೇವನನ್ನು ಮರುಳು ಮಾಡುವ ಸಂಚು ಇನ್ನೊಂದೆಡೆ ತನ್ನ ಆಡಂಬರದ ಮೂಲಕ ಸ್ವರ್ಗವನ್ನು ಖರೀದಿಸಿದ ನೆನಪು! ಇದಕ್ಕೆಲ್ಲಾ ಕೊನೆ ಇದೆ ಬಡ ನಿರ್ಗತಿಕನ ಕಣ್ಣೀರ ಶಾಪವೇ ಇದಕ್ಕೆಲ್ಲಾ ಕೊನೆ.

"ಸಿರಿವಂತನಾಗಿ ಮಾಡಲಿಲ್ಲವೇ" ಎಂದು ಎಚ್ಚರಿಸಿದ ಸೃಷ್ಟಿಕರ್ತನಿಗೆ ಸಂಪತ್ತಿನ ಮೋಹದ ಅಂಧಕಾರದಲ್ಲಿ ಬದುಕುತ್ತಿರಿವವನನ್ನು ನಿರ್ಗತಿಕನಾಗಿ ಮಾಡಲು ಅಹೋರಾತ್ರಿಗಳು ಬೇಕಾಗಿಲ್ಲ ಅವನ ಪರೀಕ್ಷೆ ನೆನಪಿರಲಿ. ದೇವನು ನಮ್ಮ ಮೇಲಿನ ಅನುಗ್ರಹಗಳು ಇಲ್ಲವಾಗಿಸುವುದಕ್ಕಿಂತ ಮೊದಲು ನಾವು ಎಚ್ಚೆತ್ತುಕೊಳ್ಳಬೇಕಾಗಿದೆ, ಖರ್ಚಿನಲ್ಲಿ ವಾಸ್ತವಿಕತೆಯ ನೆನಪಿರಲಿ ಅದು ಇನ್ನೊಬ್ಬನನ್ನು ಹಿಯಾಳಿಸುವ, ಹಿಮ್ಮೆಟ್ಟಿಸುವ ಅಥವಾ ಆಡಂಬರದಲ್ಲಿ ಪ್ರಥಮ ಸ್ಥಾನ ಪದೆದುಕೊಳ್ಳುವ ತೆವಳಾಗದಿರಲಿ, ನಾಳೆ ದೇವನ ಮುಂದೆ ನಿಳ್ಳುವಾಗ ನಿರ್ಗತಿಕರಾದ ಶ್ರೀಮಂತರಾಗಿ ನಿಲ್ಲದೆ ಪರೀಕ್ಷೆಯಲ್ಲಿ ಜಯಿಸಿದ ಶ್ರೀಮಂತರ ಪಟ್ಟಿಯಲ್ಲಿ ಸೇರಿಕೊಳ್ಳುವ ಪ್ರಯತ್ನಗಳಿರಲಿ.

Monday, November 10, 2014

"ಕಪ್ಪು ಹಣದ ಜಿಹಾದ್" (ಲೇಖನ)



ಅಬ್ದುಲ್ಲಾ! ಮಹಮ್ಮದ್! ಸ್ವಿಸ್ ಬ್ಯಾಂಕಿನಲ್ಲಿ ಸಾವಿರಾರು ಕೋಟಿ ಗೌಪ್ಯವಾಗಿ ಇಟ್ಟು ಅದೇನಾದರೂ 628 ಖದೀಮರ ಪಟ್ಟಿಯಲ್ಲಿ ಸೇರಿದ್ದಲ್ಲಿ ಕೆಲವು ಅತಿರೇಕಿ ದರ್ಮರಕ್ಷಕರು ಎಂದು ಭಾವಿಸಿಕೊಂಡವರು ಮಾಧ್ಯಮಗಳಲ್ಲಿ ಸುದ್ದಿಗೋಷ್ಠಿ ಏರ್ಪಡಿಸುತಿದ್ದರು, ಮಾಧ್ಯಮಗಳು ಅವುಗಳನ್ನು ವೈಭವೀಕರಿಸಿ ಕಥೆಗಳನ್ನು ಜನರ ಮುಂದಿಡುತ್ತಿದ್ದವು ಭಾರತದಲ್ಲಿ ಜಿಹಾದಿ ಸಂಘಟನೆಗಳನ್ನು ಬಲಪಡಿಸಲು ಇವರು ಸ್ವಿಸ್ ಬ್ಯಾಂಕಿನಲ್ಲಿ ಹಣವನ್ನು ಕೂಡಿಟ್ಟಿದ್ದಾರೆ ಮತ್ತು ಅದನ್ನು ಭಾರತದಲ್ಲಿ ನಡೆಯುವ ಹಲವು ಬಾಂಬ್ ದಾಳಿಗಳಿಗೆ ಮತ್ತು ದುಸ್ಕ್ರುತ್ಯಗಳಿಗೆ ಬಳಸಿಕೊಳುತ್ತಿದ್ದಾರೆ ಎಂದು ಬೊಬ್ಬಿಡುತ್ತಿದ್ದವು ತನ್ಮೂಲಕ "ಕಪ್ಪು ಹಣದ ಜಿಹಾದ್" ಎಂದು ಗಂಟಾಘೋಷವಾಗಿ ಘೋಷಿಸುತ್ತಿದ್ದರು.


ಮುಸ್ಲಿಮರು ಸ್ವಿಸ್ ಬ್ಯಾಂಕಿನಲ್ಲಿ ಹಣ ಕೂಡಿಟ್ಟಿರುವುದು ದೇಶಕ್ಕೆ ಮಾರಕ ಈ ಬಗ್ಗೆ ಗಂಬೀರ ಚಿಂತನೆಗಳು ನಡೆಯಬೇಕು, ಕಪ್ಪು ಹಣದ ಪಟ್ಟಿಯಲ್ಲಿ ಮುಸ್ಲಿಂ ಹೆಸರಿರುವವರನ್ನು ಭಯೋತ್ಪಾದಕರು ಎಂದು ಘೋಷಿಸಬೇಕು ಎಂದು ಪಟ್ಟು ಹಿಡಿದಿದ್ದರೆ ಆಶ್ಚರ್ಯಪಡಬೇಕಾಗಿರಲಿಲ್ಲ, ಅಷ್ಟಕ್ಕೂ ಮುಸ್ಲಿಮರ ಹೆಸರು ಕಪ್ಪು ಹಣದ ಪಟ್ಟಿಯಲ್ಲಿ ಇಲ್ಲದೇ ಇರಲು ಅದರದೇ ಆದ ಕಾರಣಗಳಿವೆ ಹೆಚ್ಚಿನವರು ಬ್ಯಾಂಕಿನಲ್ಲಿ ಹಣ ಕೊಳೆಯಲು ಬಿಡದೆ ಅದನ್ನು ಭಾರತದಲ್ಲೋ ಅಥವಾ ಬೇರೆಡೆಯಲ್ಲೋ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದು ಒಂದು ಕಾರಣವಾಗಿರಬಹುದು, ಆದರೆ ಮತಾಂದಿಗಳು ಕಪ್ಪು ಹಣದ ಪಟ್ಟಿಯಲ್ಲಿ ಮುಸ್ಲಿಮರ ಹೆಸರು ಕಾಣ ಸಿಗಬಹುದೇ ಎಂದು ಹುಡುಕಾಡುವ ಉತ್ಸಾಹದಲ್ಲಿದ್ದಾರೆ ಇಲ್ಲಿ ಕಪ್ಪು ಹಣಕ್ಕಿಂತಲೂ ಮುಸ್ಲಿಮರನ್ನು ಹೇಗೆಲ್ಲ ಜಿಹಾದಿಗಳು ಎಂದು ಘೊಷಿಸಬಹುದು ಎಂದು ಸಿಳುಕಿಸಲು ತವಕ ಪಡುವವರಿದ್ದಾರೆ.  

ತವಕಪಡುವವರು ಮುಸ್ಲಿಮರು ಭಾರತದ ವಿರುದ್ದ ಜಿಹಾದಿನಲ್ಲಿ ತೊಡಗಿಕೊಂಡಿದ್ದಾರೆ ಮತ್ತು ಮುಸ್ಲಿಮರನ್ನು ಆದಷ್ಟು ದೇಶದ್ರೋಹಿಗಳು ಎಂದು ಬಿಂಬಿಸಬೇಕು ಎಂದು ಯೋಚಿಸುತ್ತಾರೆ, ಮುಸ್ಲಿಮರನ್ನು ಹಂತ ಹಂತವಾಗಿ
ಜಿಹಾದಿಗಳು ಎಂದು ಘೋಷಿಸಿ ದೇಶದ ಜನರನ್ನು ಇಬ್ಬಾಗ ನಡೆಸುವ ಕೆಲಸ ಬಹಳ ವ್ಯವಸ್ಥಿತವಾಗಿ ನಡೆದುಕೊಂಡು ಬರುತ್ತಿದೆ ಮೊದಲು ಶಶ್ತ್ರಾಸ್ತದ ಮೂಲಕ ಜಿಹಾದ್ ನಡೆಸಲಾಗುತ್ತಿದೆ ಎಂದು ಘೋಷಿಸಿ ಪಿತೂರಿ ನಡೆಸಲಾಯಿತು, ತದನಂತರ ಲವ್ ಜಿಹಾದ್ ಎನ್ನುವ ಕಲ್ಪನೆಯನ್ನು ಹರಿಯಬಿಟ್ಟು ಒಂದು ಸಮುದಾಯವನ್ನು ಸಂಶಯದ ದೃಷ್ಟಿಯಿಂದ ನೋಡುವ ಪ್ರವೃತ್ತಿ ಬೆಳೆಸಲಾಯಿತು, ಮದರಸ ಭಯೋತ್ಪಾದನೆಯ ಬಗ್ಗೆಯೂ ಕಲಿಸಿಕೊಡಲಾಯಿತು ಇನ್ನು ಕಪ್ಪು ಹಣದ ಪಟ್ಟಿಯಲ್ಲಿ ಮುಸ್ಲಿಮರ ಹೆಸರು ಕಂಡರೆ ಅದನ್ನು ಜಿಹಾದ್ ನೊಂದಿಗೆ ಸಂಬಂದ ಕಲ್ಪಿಸುವಲ್ಲಿ ಮತಾಂದಿಗಳು ಹಿಂಜರಿಯುವರು ಎನ್ನುವಂತಿಲ್ಲ. 

ವಿಚಿತ್ರವಾದ ಹೇಳಿಕೆಗಳನ್ನು ತುದಿಗಾಳಲ್ಲಿ ನಿಂತು ಮತಾಂದಿಗಳು ಮಾಡುತ್ತಿರುವುದರ ಹಿಂದೆ ದೇಶ ಒಡೆಯುವ ಒಂದು ಜಾಲದ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ, ಒಟ್ಟಿನಲ್ಲಿ ಮುಸ್ಲಿಮರನ್ನು ದೇಶದ್ರೋಹಿಗಳು ಎಂದು ಬಿಂಬಿಸಬೇಕು ಆ ಮೂಲಕ ದೇಶದಲ್ಲಿ ವೈಮನಸ್ಸು ಹೆಚ್ಚಿಸಬೇಕು ಮತ್ತು ಅವರ ಆಶಯಗಳು ಸಲೀಸಾಗಿ ಸಾಗಬೇಕು ಎನ್ನುವುದು ಮಾತ್ರ ವಿಚಿದ್ರಕಾರಿಗಳ ಚಿಂತನೆ. ಸಂದರ್ಭ ಒದಗಿ ಬಂದರೆ ದೇಶಕ್ಕಾಗಿ ಪ್ರಾಣ ನೀಡುವುದು ದೇವ ಮಾರ್ಗದಲ್ಲಿ ಮಾಡುವ ಜಿಹಾದ್ ಎಂದು ತಿಳಿದು ಬದುಕುತ್ತಿರುವ ಒಂದು ಸಮುದಾಯವನ್ನು ದೇಶದ್ರೋಹಿಗಳನ್ನಾಗಿ ಬಿಂಬಿಸಿರುವುದು ವಿಪರ್ಯಾಸ, ಈ ದೇಶದಲ್ಲಿ 1857ರ ಸ್ವಾತಂತ್ರ್ಯ ಹೋರಾಟದ ಆರಂಭ ಕಾಲ ಅದರ ಇತಿಹಾಸ ಮತ್ತು ಮುಸ್ಲಿಮರ ಪಾತ್ರವನ್ನು ದೇಶ ಇಬ್ಬಾಗ ನಡೆಸಲು ಹೊರಟಿರುವ ದೇಶದ್ರೋಹಿಗಳು ಚೆನ್ನಾಗಿ ಅರಿತುಕೊಳ್ಳುವ ಮೂಲಕ ಮುಸ್ಲಿಮರ ದೇಶಪ್ರೇಮವನ್ನು ಚೆನ್ನಾಗಿ  ಅರ್ಥಮಾಡಿಕೊಳ್ಳಲಿ.....  

ಆತುರ!

ಹಾಸಿಗೆಯಲಿ
ವಿಶ್ರಾಂತಿ ಪಡೆಯುವ
ಕಾತರ
ಅದಕಾಗಿ ಸಂಪಾದಿಸಲು
ನಾನಾ ತರದ

ಮಣ್ಣಿನಾಳದಲಿ
ಬಿಳಿ ಹಾಸಿಗೆಯಲಿ
ಮಲಗುವಾಗ
ಕಾತುರ ಆತುರಗಳು
ಶಾಶ್ವತ ಪರಲೋಕ
ಜೀವನವ ಬರಿದಾಗಿಸದಿರಲಿ 

ಓಡಾಟ

ಕೆಲಸ ಮಾಡದೆ
ಬೊಜ್ಜು ಬೆಳೆಸಿದ
ಶ್ರೀಮಂತನೊಬ್ಬ
ಬೊಜ್ಜು ಕರಗಿಸಲು
ಓಡಾಟಕ್ಕಾಗಿ ಬೀದಿಗಿಳಿದ!

ಬೀದಿಗಿಳಿದು ಕಷ್ಟಪಟ್ಟು
ಕೂಲಿ ಮಾಡಿದ
ಕಡು ಬಡವನೊಬ್ಬ
ರಾತ್ರಿಯಲ್ಲೂ
ತನ್ನವರ
ಹೊಟ್ಟೆ ತುಂಬಿಸಲಾಗದಾಗ
ಮರುಕದಲಿ
ಅತ್ತಿತ್ತ  ಓಡಾಡಿದ. 

ದರ್ಪದಾರಿಯ ಕಡೆಯ ಮಾತು!!


ಕೊಡಲಿಲ್ಲ ಕೊಟ್ಟವನೂ ಅಲ್ಲ
ಕೂಡಿಟ್ಟವನು ಹೌದು,
ಕೊಡಲು ಪ್ರೋತ್ಸಾಹಿಸಿದವನಲ್ಲ
ಕೊಡಲು ಬಿಟ್ಟವನೂ ಅಲ್ಲ
ಕಣ್ಣೆದುರಿಗೆ ರೋಧನೆಯ
ಕಂಡವನು ಹೌದು. 

ಪಡೆದು ಮೇಲೆ ಬಂದವನು,
ಪಡೆಯಲು ಸುಳ್ಳು ಕಲಿತವನು,
ಸುಳ್ಳಿನಲ್ಲೇ ಬದುಕುತ್ತಿರುವವನು.

ಸಮಯ ಕಳೆತವನು
ದೇವನ ಮರೆತವನು
ಗೋರಿಗೆ ಹತ್ತಿರವಾಗುತ್ತಿರುವವನು
ದೇವ ಕೊಟ್ಟ ಮಾನಸಿಕ
ಖಿನ್ನತೆಗೆ ಬಲಿಯಾಗುತ್ತಿರುವವನು. 


ಕಥೆಗಾರ

ಸ್ವರ್ಗಕಾಗಿ ನಾ ಹಾತೊರೆದೆ 
ನರಕ ದಾರಿಯಲಿ ನಡೆದೆ.  

ಜನರ ಸೇರಿಸಿ 
ಸ್ವರ್ಗದ ಕಥೆ ಹೇಳಿದೆ 
ನಾ ಹೋಗಲಿರುವ 
ನರಕವ ಮರೆತೆ.  

ಸತ್ಯ, ನೀತಿ, ಅನುಸರಣೆ 
ಸ್ವರ್ಗಕೆಂದು ಜಗಕೆ ಸಾರಿದೆ 
ಬಡ್ಡಿ, ಅನ್ಯಾಯ, ಅಕ್ರಮಗಳಲಿ
ನನ್ನ ಬಲು ದೊಡ್ಡ ಪಾಲಿದೆ.  

ಪಾತ್ರಧಾರಿಗಳೆಲ್ಲ 
ಸ್ವರ್ಗದ ಕಡೆ ನಡೆದರು, 
ಕಥೆಗಾರ 
ನರಕದ ಕಡೆ ನಡೆಯುತಿರುವೆನು.  





ಹೆಸರು ಭಯೋತ್ಪಾದನೆಯ ಮೂಲವಾದಾಗ ! !!!


ಒಂದು ವ್ಯವಸ್ಥೆಯಲ್ಲಿ ಯಾರೋ ಮತಾಂದಿಗಳು ಮಾಡಿದ ತಪ್ಪಿಗಾಗಿ ಇಡೀ ಒಂದು ವರ್ಗವನ್ನೇ ತಪ್ಪಿತಸ್ಥರನ್ನಾಗಿ ನಿಲ್ಲಿಸುವ ಪ್ರಕ್ರೀಯೆ ನಡೆದುಕೊಂಡು ಬರುತ್ತದೆ ಮತ್ತು ಪ್ರಕ್ರೀಯೆ ಇಂದು ನಿಂಗೇಗೌಡ ಮತ್ತು ಶಿವಾನಂದರನ್ನು ಭಯೋತ್ಪಾದಕರು ಎಂದು ಗುರುತಿಸಲು ಸಾಧ್ಯವಾಗದೇ ಇರುವುದು. ಕೆಂಪೆಗೌಡ ವಿಮಾನ ನಿಲ್ದಾಣವನ್ನು ಬಾಂಬಿನ ಮೂಲಕ ಉಡಾಯಿಸುತ್ತೇವೆ ಎಂದು ಮುಸಲ್ಮಾನ ಹೆಸರಿರುವ ಯಾರಾದರೂ ಹೇಳಿರುತ್ತಿದ್ದರೆ ಇಷ್ಟೊತ್ತಿಗೆ ಅವರ ಹೆಸರುಗಳು ಟಿ ಆರ್ ಪಿ ಮಾಧ್ಯಮಗಳಲ್ಲಿ ವಿಜ್ರಂಬಿಸುತ್ತಿದ್ದವು! ಕೆಲ ಸಮಯದ ಹಿಂದೆ ಕಾಸರಗೋಡಿನ ಖಾದರ್ ಹೆಸರು ರಾರಾಜಿಸಿದ ಹಾಗೆ!.


ಆದರೆ ಹುಸಿ ಬಾಂಬು ಕರೆಗಾಗಿ ಬಂಧಿಸಲ್ಪಟ್ಟ ವ್ಯಕ್ತಿಗಳು ಬೆಂಗಳೂರಿನ ವಿಮಾನ ನಿಲ್ದಾಣ ಸ್ಪೋಟಿಸುತ್ತೇವೆ ಎಂದು ಹೇಳಿ ಬಂಧನಕ್ಕೊಳಗಾದಾಗ ಬೆಂಗಳೂರನ್ನು ಸ್ಪೋಟಿಸುತ್ತೇನೆ ಎಂದು ಹೇಳಿ ಮೈಸೂರಿನಲ್ಲಿ ಬಂಧನಕ್ಕೊಳಗಾದ ಪ್ರದೀಪನಂತೆ ಮಾನಸಿಕ ರೋಗಿಗಳು ಎಂದು ವಿಮರ್ಸಿಸಲ್ಪಡುವುದರಲ್ಲಿ ಆಶ್ಚರ್ಯಪಡಬೇಕಾಗಿಲ್ಲ ಯಾವ ಮಾಧ್ಯಮಗಳೂ ಅವರನ್ನು ಭಯೋತ್ಪಾದಕರು ಎಂದು ಬಿಂಬಿಸುತ್ತಿಲ್ಲ, ದೇಶದ ನಾಗರೀಕರನ್ನು ಯಾರೆಲ್ಲ ಭಯದ ವಾತಾವರಣದಲ್ಲಿ ಇಡಲು ಪ್ರಯತ್ನಿಸುತ್ತಾರೋ ಅವರೆಲ್ಲಾ ಭಯೋತ್ಪಾದಕರು ಅದು ಮುಸ್ಲಿಂ, ಹಿಂದು ಅಥವ ಇತರ ಯಾವ ಧರ್ಮದವನೇ ಆಗಿರಲಿ.

ಭಯೋತ್ಪಾದಕ ಎನ್ನುವ ಶಬ್ದ ಮುಸಲ್ಮಾನರಿಗೆ ಅಂಟಿಕೊಂಡಿರುವುದು ವಿಪರ್ಯಾಸ, ಮುಸಲ್ಮಾನರು ದೇಶವನ್ನು ಎಲ್ಲ ಕಾಲದಲ್ಲಿ ಅತಿಯಾಗಿ ಪ್ರೀತಿಸುವವರು ಮತ್ತು ದೇಶ ಮುನ್ನಡೆಯುವಲ್ಲಿ ಶಕ್ತಿ ನೀಡುವವರು.ಮಾಧ್ಯಮಗಳು ಮುಸಲ್ಮಾನರು ಭಯೋತ್ಪಾದನ ಸಂಬಂಧಿ ಕೇಸುಗಳಲ್ಲಿ ಆರೋಪಿ ಎಂದಾಗ ಡಂಗುರ ಸಾರಿ ಭಯೋತ್ಪಾದಕ ಎಂದು ಚಿತ್ರಿಸುತ್ತದೆ ಭಯೋತ್ಪಾದಕ ಚಟುವಟಿಕೆಗಳಲ್ಲಿ ಪಾತ್ರ ವಹಿಸುವ ಎಲ್ಲರನ್ನೂ ಸಮಾನವಾಗಿ ವಿಶ್ಲೇಷಿಸಬೇಕಾದದ್ದು ಮಾಧ್ಯಮಗಳ ಕರ್ತವ್ಯ, ಮಾಧ್ಯಮಗಳು ನ್ಯಾಯದ ಪರವಾಗಿ ನಿಲ್ಲಬೇಕು.

ಕಾಸರಗೋಡಿನ ಖಾದರ್ ಮಂಗಳೂರು ವಿಮಾನ ನಿಲ್ದಾಣದಲ್ಲಿ ತನಿಖೆಗೊಳಗಾದಾಗ ಮಾಧ್ಯಮಗಳು ಭಯೋತ್ಪಾದಕ ಎಂದು ಚಿತ್ರಿಸಿದವು ಆದರೆ ಆತನ ಬಳಿ ರಿಪೇರಿಗೆ ಇದ್ದಂತಹ ಎಲೆಕ್ಟ್ರೋನಿಕ್ ಉಪಕರಣಗಳು ಮಾತ್ರವೇ ಇತ್ತು ಎಂದು ಸಾಬೀತಾದಾಗ ಮೆಲ್ಲನೆ ಸುದ್ದಿಯಿಂದ ಜಾರಿಕೊಂಡವು ಆದರೆ ಅಬ್ಬರದ ಪ್ರಚಾರ ಆತನನ್ನು ಆತನ ಕುಟುಂಬವನ್ನು ಮಾನಸಿಕವಾಗಿ ಕೊಂದುಹಾಕಿತ್ತು ನೆರೆಮನೆಯವರು ಸಂಸಯಾಸ್ಪದವಾಗಿ ನೋಡಿಕೊಳ್ಳುವಂತೆ ಮಾಡಿತ್ತು.

ಭಯವನ್ನು ಉತ್ಪಾದಿಸುವ ಮುಸ್ಲಿಂ ಹೆಸರಿನವ ಭಯೋತ್ಪಾದಕ ಆದರೆ ಭಯವನ್ನು ಉತ್ಪಾದಿಸುವ ಹಿಂದು ಹೆಸರಿನವ ಮಾನಸಿಕ ಸ್ಥಿಮಿತ ಕಳೆದುಕೊಂಡವನು ನೀತಿ ದೇಶವನ್ನು ಇಬ್ಬಾಗ ಮಾಡುವ ಸಂಸ್ಕೃತಿಯ ಭಾಗ! ಮಾಧ್ಯಮಗಳ ಇಂತಹ ನೀತಿ ಮತ್ತಷ್ಟು ಖಾದರ್ ಗಳ ಮನಸ್ಸನ್ನು ಕುಗ್ಗಿಸಬಹುದು ಮತ್ತು ನಿಂಗೇಗೌಡ, ಶಿವಾನಂದ, ಪ್ರದೀಪ್ ನಂತರವರಿಗೆ ದುಸ್ಕ್ರುತ್ಯಗಳನ್ನು ಎಸಗುತ್ತೇವೆ ಎಂದು ಪೋಲಿಸ್ ವ್ಯವಸ್ಥೆಯನ್ನು ಹೆದರಿಸಿ ಸಿಕ್ಕಿಬಿದ್ದರೆ ಮಾನಸಿಕರೆಂದೆನಿಕೊಳ್ಳೋಣ ಎಂದು ಚಿಂತಿಸಿವ ಮಟ್ಟಕ್ಕೆ ಕೊಂಡುಹೋಗಬಹುದು.!!!