ಹಲವಾರು ಮಹಿಳೆಯರು ಸಮಸ್ಯೆಗಳ ಸರಮಾಲೆಯನ್ನೆ ಹೊತ್ತು ತಂದಿದ್ದರು, ಜನ ಸಂಪರ್ಕ ಸಭೆಯಲ್ಲಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕಾತರ ಎದ್ದು ಕಾಣುತಿತ್ತು. ಒಬ್ಬೊಬ್ಬರದು ವಿಭಿನ್ನ ಪ್ರಶ್ನೆ! ಅಧಿಕಾರಿಗಳ ಮುಖದಲ್ಲಿ ಬೆವರು ತರಿಸಿದಂತಹ ಪ್ರಶ್ನೆಗಳು! ಉತ್ತರ ಮಾತ್ರ ಬಹಳ ನಾಜೂಕು!! ಅದು ನಮ್ಮ ವ್ಯಾಪ್ತಿಯಲ್ಲ, ಪರಿಶೀಲನೆ ನಡೆಯುತ್ತಿದೆ, ಸ್ಪಂದಿಸುತ್ತೇವೆ ಎಂದು ಕಾಲ ಕಾಲದಿಂದ ಹೇಳಿಕೊಂಡು ಬಂದಂತಹ ಸಿದ್ದಪಡಿಸಿಟ್ಟ ಉತ್ತರ. ಸುರತ್ಕಲ್ ನ ಸಾಲಿಯಾನ್ ಗ್ಯಾಸ್ ಏಜೆನ್ಸಿಯ ಬಗ್ಗೆಯಂತೂ ಭಾರೀ ದೂರುಗಳಿದ್ದವು, ಆಗಾಗ್ಗೆ ಪಾಲಿಸದೆ ತುಕ್ಕು ಹಿಡಿದಿರುವ ಸುಪ್ರೀಂ ಕೋರ್ಟಿನ ಕೆಲವು ಆದೇಶಗಳ ಬಗ್ಗೆಯೂ ಚರ್ಚೆ ನಡೆಯುತಿತ್ತು. ಜಿಲ್ಲೆಯಲ್ಲಿ 55 ಶೇಕಡಾ ಬಿಪಿಎಲ್ ಕಾರ್ಡ್ ಗಳಿದ್ದರೂ ಅರ್ಹತೆ ಹೊಂದದ ಹಲವರು ಬಿಪಿಏಲ್ ಕಾರ್ಡ್ ಹೊಂದಿ ನಿಜವಾದ ಬಿಪ್ಎಲ್ ದಾರರು ಎಪಿಎಲ್ ಪಡಿತರ ಚೀಟಿ ಪಡೆಯುವಂತಾಗಿದೆ ಎನ್ನುವ ಮಾತನ್ನು ಸಭೆಯಲ್ಲಿ ಹಾಜರಿದ್ದ ವಿಧಾನ ಪರಿಷತ್ ಸದಸ್ಯರಾದ "ಐವನ್ ಡಿಸೋಜ" ಒಪ್ಪಿಕೊಂಡರು ಹಾಗು ಹಲವು ದೂರುಗಳಿಗೆ ಸ್ಪಂದಿಸಿದ ಅವರು ಸೋಮವಾರವೆ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಜನರಲ್ಲಿ ಹೇಳಿಕೊಂಡರು! ಈ ಹಿಂದೆ ಇಂತಹ ಹಲವು ಸೋಮವಾರಗಳ ವಾಗ್ದಾನಗಳಾಗಿವೆ ನಮ್ಮ ಸಮಸ್ಯೆ ಪರಿಹಾರವಾಗಿಲ್ಲ ಎಂದು ಗೊಣಗುಟ್ಟುವಂತೆ ಸಭೆಯಲ್ಲಿ ಸೇರಿದ ಜನರ ಮನೋಸ್ಥಿತಿ ಎದ್ದು ಕಾಣುತಿತ್ತು.
ಗ್ಯಾಸ್ ಏಜೆನ್ಸಿಯವರು ಹೆಚ್ಚುವರಿ ಹಣ ವಸೂಲಿ ಮಾಡುವುದು, ತಿಂಗಳುಗಟ್ಟಲೆ ಗ್ಯಾಸ್ ಸಿಗದೇ ಇರುವುದು, ಫೋನ್ ಎತ್ತದೆ ಸತಾಯಿಸುವುದರ ಬಗ್ಗೆ ವಿಸ್ಕೃತ ಚರ್ಚೆ ನಡೆಯಿತು. ಎಲ್ಲದಕ್ಕಿಂತ ಮುಖ್ಯವಾಗಿ ಸಭೆಯಲ್ಲಿ ಒಂದು ವಿಶೇಷತೆ ಇತ್ತು! ಪ್ರಶ್ನಿಸಿದವರೆಲ್ಲ ಕನ್ನಡದಲ್ಲಿ ಪ್ರಶ್ನಿಸುವಾಗ ಉತ್ತರಿಸುವರು ಹಿಂದಿಯಲ್ಲಿ ಉತ್ತರಿಸುವ ಮತ್ತು ಅದನ್ನು ಭಾಷಾಂತರಿಸುವ ಸ್ಥಿತಿ ಒದಗಿತ್ತು, ಇದು ಜನರ ಮತ್ತು ಅಧಿಕಾರಿಗಳ ನಡುವೆ ಭಾಷಾ ಸಮಸ್ಯೆಯನ್ನು ಏರ್ಪಡಿಸಿತು. ಜನ ಸಂಪರ್ಕ ಸಭೆಯಲ್ಲಿ ಕನ್ನಡದ ಪ್ರಶ್ನೆಗಳಿಗೆ ಉತ್ತರಿಸಲಾಗದ ಅಧಿಕಾರಿಗಳು ನಮ್ಮ ಬಡ ಜನರು ಬರೆಯುವ ಕನ್ನಡದ ದೂರು ಪತ್ರಗಳಿಗೆ ಹೇಗೆ ಉತ್ತರಿಸಿಯಾರು? ಸಮಸ್ಯೆ ಪರಿಹಾರವಾಗುವುದಾದರೂ ಹೇಗೆ! ಎಷ್ಟು ಕನ್ನಡ ಬಲ್ಲ ಅಧಿಕಾರಿಗಳಿದ್ದಾರೆ ನಮ್ಮಲ್ಲಿ ಎನ್ನುವುದು ಕೂಡಾ ಪ್ರಶ್ನೆ. ಈ ಬಗ್ಗೆ ಅಕ್ರೂಶಿತರಾದ ಸಾರ್ವಜನಿಕರೊಬ್ಬರು ಅಚ್ಚ ಕನ್ನಡ ಮಾತನಾಡುವ ಸ್ವಚ್ಛ ಕನ್ನಡದ ಅಧಿಕಾರಿಗಳನ್ನು ನೇಮಿಸಿ ಗೋಳು ತಪ್ಪಿಸಿ ಎಂದು ಭಿನ್ನವಿಸಿಕೊಂಡರು.
ಕೊನೆಯದಾಗಿ ಒಂದು ಮಾತು ಮುಂದೆ ಇಂತಹ ಜನಸಂಪರ್ಕ ಸಭೆಗಳಿಗೆ "ಜನ ಮತ್ತು ಜನಪ್ರತಿನಿದಿಗಳ ಸಭೆ" ಎಂದು ಹೆಸರಿಡಬೇಕು ಆಗ ಜನಪ್ರತಿನಿಧಿಗಳು ಎನಿಸಿಕೊಂಡವರು ಕಾರ್ಯಕ್ರಮ್ಮೆ ಬಂದು ಹೋಗಿದ್ದೇವೆ ಎಂದು ಹೇಳುವುದಕ್ಕೆ ಮಾತ್ರ ಸೀಮಿತರಾಗದೆ ಕಾರ್ಯಕ್ರಮದ ಭಾಗವಾಗಿ ಸ್ವತಹ ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರೆರಣೆಯಾಗಬಹುದು.




No comments:
Post a Comment