ನೋವು ನಲಿವುಗಳ ಮಧ್ಯೆ ಬೆಳೆದವನು,
ಬಂದುಗಳ ಪ್ರೀತಿಗೆ ಮನಸೋತವನು,
ಸಣ್ಣ ಪುಟ್ಟ ವಿಚಾರಕ್ಕೂ ತಗಾದೆ ತೆಗೆದವನು,
ತಾಯಿಯೊಂದಿಗೂ ಕೋಪ ತೋರಿಸಿದವನು.
ತಂದೆಯ ಪ್ರೀತಿ ಅಷ್ಟಾಗಿ ಕಾಣ ಸಿಗದವನು,
ಅವರ ಜೊತೆ ಬೆರೆಯದವನು,
ಅಪರೂಪಕ್ಕೆ ಊರಲ್ಲಿ ಕಂಡವನು,
ಅವರ ಪ್ರೀತಿ, ಕೋಪ ಅರಿಯದವನು,
ಅವರೀಗ ಹತ್ತಿರವಿರುವಾಗ ಮಾತು ಬೆಳೆಸದವನು,
ನಿನ್ನೆ ಮೊನ್ನೆಯವರೆಗೆ ಅವರನ್ನು ಅಪರೂಪಕ್ಕೆ ಕಂಡವನು.
ವಂಚಿತನಾಗಿ ನನ್ನವರ ಬಳಿಯೇ ಇರ ಬಯಸಿದವನು,
ತಂದೆಯ ಸೌಮ್ಯತೆಯನ್ನು ಕಳೆದುಕೊಂಡವನು,
ಹತ್ತಿರವಿರುವಾಗ ಅದನ್ನು ತೋರ್ಪಡಿಸಲಾಗದವನು,
ಅಷ್ಟಕ್ಕೂ ಅವರನ್ನು ಅಪರೂಪಕ್ಕೆ ಕಂಡವನು.
ಸಹೋದರಿ, ಸಹೋದರರೊಂದಿಗೆ ಬೆರೆತವನು,
ಅರ್ಥಮಾಡಿಕೊಳ್ಳದಾಗ ರೇಗಿದವನು,
ಅಣ್ಣಂದಿರ ಪ್ರೀತಿಗೆ ಕರಗಿದವನು,
ದೌರ್ಬಾಗ್ಯಕ್ಕೆ ಅವರನ್ನು ದೂರದಿಂದ ಕಂಡವನು.
ನನ್ನ ತಾಯಿಯಂತೆ,
ನನ್ನ ಸೌಮ್ಯ ತಂದೆಯಂತೆ,
ನನ್ನ ಅಣ್ಣಂದಿರಂತೆ,
ನನ್ನ ಸಹೋದರಿಯರಂತೆ,
ತನ್ನವರನ್ನು ದೂರವಿಟ್ಟು ನೋವುಂಡ ಬಂದುಗಳಂತೆ,
ಎಲ್ಲರನ್ನು ಮೀರಿಸುವಷ್ಟು ದೊಡ್ಡ ತ್ಯಾಗಿಯಾಗಲಾರೆ
ಎಲ್ಲವನ್ನು ಕಳೆದುಕೊಂಡವನಾಗಿ
ಬದುಕಲು ಇಷ್ಟಪಡಲಾರೆ.
ಹಳೆಯ ದಾರಿಯಲ್ಲಿ ಸಾಗಿ
ನನ್ನವಳಿಗೆ,
ನನ್ನ ಮಕ್ಕಳಿಗೆ,
ನನ್ನವರಿಗೆ,
ದೂರವಾಗಿ ಇರಲಾರೆ.
ಇದ್ದುದರಲ್ಲೇ ಕಷ್ಟ ಪಟ್ಟು
ಜೀವಿಸಬಯಸುವೆ,
ನನ್ನ ನೋವು
ಬಂಧುಗಳ ನೋವು
ತಲೆಮಾರಿಗೆ ನಾ ಹಂಚಲಾರೆ.
ನನ್ನವರು ಹಂಚಿಕೊಂಡರು,
ಎಲ್ಲವನ್ನು ಕಳೆದುಕೊಂಡು.
ಮುದುಕನಾದ ಮೇಲೆ
ನನ್ನವರ ಜೊತೆ ಬದುಕುವ,
ಎಲ್ಲವನ್ನು ಕಳೆದುಕೊಂಡವ ನಾನಾಗಲಾರೆ.
ಕೊನೆಯಲ್ಲಿ ಕೈಮೀರಿದರೆ!
ನನಗಾಗಿ ಅಲ್ಲ.....
ನನ್ನವರಿಗಾಗಿ,
ಎಲ್ಲವನ್ನು ಕಳೆದುಕೊಂಡ
ನನ್ನವರ ಹಾಗೆ
ಕಲ್ಪನೆಗಳನ್ನು ಬದಿಗಿಟ್ಟು
ಬದುಕುವವನು ಕೂಡಾ ನಾನಾಗುವೆ,
ನಿಮ್ಮಂತೆ ಬಚ್ಚಿಟ್ಟು ಬದುಕುವವನಾಗುವೆ!
ಬದಲಾವಣೆಯ ಬಿರುಗಾಳಿಗೆ ಕೊನೆಯಾಗಿಸುವೆ.