ಇನ್ ಆಂಡ್ ಔಟ್ ರಾಜಕೀಯ ಎನ್ನುವುದು ರಾಜಕೀಯ ವ್ಯವಸ್ಥೆ ಅತ್ಯಂತ ಕೀಳು ಮಟ್ಟಕ್ಕೆ ತಲುಪಿದೆ ಎನ್ನುವುದಕ್ಕೆ ಸಾಕ್ಷಿ, ನಾಚಿಕೆ ಮಾನ ಮರ್ಯಾದಿಗಳಿದ್ದಿದ್ದರೆ ಇದೆಲ್ಲ ಪದೇ ಪದೇ ನಡೆಯಲು ಸಾಧ್ಯವಿಲ್ಲ, ನಾಚಿಕೆ ಮಾನ ಮರ್ಯಾದಿಗಳ ಬಗ್ಗೆ ಗಂಧ ಗಾಳಿಯಿಲ್ಲದ ವ್ಯಕ್ತಿಗಳಿಂದ ಇಷ್ಟು ಮಾತ್ರವಲ್ಲ ಇದಕ್ಕಿಂತಲೂ ಹೆಚ್ಚಿನದನ್ನೇ ಈ ನಿಷ್ಕ್ರೀಯ ಸಮಾಜ ನಿರೀಕ್ಷಿಸಬೇಕಾಗಿದೆ.
ಇಲ್ಲಿ ಕೋಮುವಾದವನ್ನು ಪಸರಿಸುವವವರು, ಅಭಿವೃದ್ಧಿಯ ಬಗ್ಗೆ ಮಾತನಾಡುವವರು, ಜಾತ್ಯತೀತತೆಯ ಮಾತೆತ್ತುವವರು, ಬಡವರ ಬಂಧುಗಳು ಎಂದು ಹೇಳುವವರು, ಅಲ್ಪಸಂಖ್ಯಾತರ ಪರವಾಗಿದ್ದೇವೆ ಎಂದು ಭಾಷಣ ಮಾಡುವವರು ಇರುವಾಗ ಒಟ್ಟಿನಲ್ಲಿ ಎಲ್ಲರೂ ಈ ವಂಚನೆಯ ನಾಟಕದಲ್ಲಿ ಪಾತ್ರಧಾರಿಗಳಾಗಿದ್ದಾರೆ. ಮಿತ ಕಾಲದಲ್ಲಿ ಗುರುತಿಸಲ್ಪಡುವ ಆತುರದಲ್ಲಿ ತಮ್ಮ ತತ್ವ ಆದರ್ಶಗಳನ್ನೆಲ್ಲ ಮೂಲೆಗುಂಪು ಮಾಡಿದ್ದಾರೆ.
ಇವರ ಗುಣ ನಡತೆಗಳ ಬಗ್ಗೆ ಸಂಶಯಿಸಿದ ಜನತೆ ಇವರಿಗೆ ಛೀ, ಥೂ ಎಂದು ಉಗಿದರೂ ಇವರು ಉಗಿಸಿಕೊಲ್ಲುತ್ತಾರೆಯೇ ಹೊರತು ಇವರ ನಿರ್ಣಯಗಳಲ್ಲಿ ಯಾವ ಬದಲಾವಣೆಯೂ ನಿರೀಕ್ಷಿಸಲು ಸಾಧ್ಯವಿಲ್ಲ, ಏಕೆಂದರೆ ಇವರು ಉಗಿಸಿಕೊಂಡು ಉಗುಳಿನ ಕೆಸರಿನಲ್ಲಿ ಲೀನವಾಗಿದ್ದಾರೆಯೇ ಹೊರತು ಇವರಿಗೆ ಜನತೆಯ ಅಸಹಾಯಕತೆಯ ಪರಿಚಯ ಯಾವ ಕಾಲದಲ್ಲಿಯೂ ಆಗಲು ಸಾದ್ಯವಿಲ್ಲ.ಸ್ವಾತಂತ್ರ್ಯ ಕಳೆದು ಆರು ದಶಕಗಳ ಅವಧಿಯಲ್ಲಿ ಇಡೀ ದೇಶವನ್ನು ಅಪಹಾಸ್ಯ ಮಾಡುವಂತೆ ಏನೆಲ್ಲಾ ಮಾಡಬೇಕೋ ಅದೆನ್ನೆಲ್ಲ ಮಾಡಿ ಮುಗಿಸಿ ಆಗಿದೆ, ಇವರಿಗಿನ್ನು ಕ್ಯಾಕರಿಸಿ ಉಗಿದರೂ ಪ್ರಯೋಜನ ಇಲ್ಲ, ಶಾಶ್ವತವಾದ ವಿಶ್ರಾಂತಿಗಾಗಿ ಇವರೆನ್ನೆಲ್ಲ ಮನೆಯಲ್ಲಿ ಕೂರಿಸಬೇಕು, ಜನತೆಯ ಪರವಾಗಿ ಎಂದು ಹೇಳಿಕೊಂಡು ತಿರುಗಾಡುವ ಇವರೆಲ್ಲರಿಗೂ ಜನತೆ ತಮ್ಮ ನೈಜ ಅಕ್ರೋಶವನ್ನು ಪ್ರಜಾಪ್ರಭುತ್ವದ ಅಡಿಪಾಯದಲ್ಲಿ ತೋರಿಸಿಕೊಡಬೇಕು, ಅಂದು ಅದು ಕ್ಯಾಕರಿಸಿ ಉಗಿಯುವುದಕ್ಕಿಂತಲೂ ಹೆಚ್ಚು ಪರಿಣಾಮ ಬೀರುವಂತಹದ್ದು ಅಲ್ಲಿಯವರೆಗೆ ಇನ್ ಆಂಡ್ ಔಟ್ ರಾಜಕೀಯಕ್ಕೆ ವಿರಾಮ ನೀಡಲು ಸಾಧ್ಯವಿಲ್ಲ.

No comments:
Post a Comment