....................
ಹೀಗೆ ಹಲವು ನಿರೀಕ್ಷೆಗಳೊಂದಿಗೆ ಒಂದು ಪ್ರಯಾಣ ದೆಹಲಿ ಕಡೆಗೆ ಸಾಗಿತ್ತು. ರೈಲಿನ ಪ್ರಯಾಣವಾಗಿದ್ದರಿಂದ ಹಾದುಹೋಗುವ ಕಡೆ ಜನರ ವಿವಿಧ ವೇಷಭೂಷಣ, ನಡತೆ, ವರ್ತನೆಗಳು ಕೆಲವೊಮ್ಮೆ ಗಂಭೀರತೆಯನ್ನು ಮೂಡಿಸುತ್ತಿತ್ತು ಮತ್ತು ಹಲವಾರು ಬಾರಿ ಭಿಕ್ಷುಕರು ಹಾದು ಹೋಗುವ ಸಂದರ್ಭ ತಲೆಯನ್ನು ತಗ್ಗಿಸುವಂತೆ ಮಾಡಿದ್ದು ಕೂಡಾ ನಿಜ. ಹೊಸದೊಂದು ಪರಿಸರದಲ್ಲಿ ಹೊಂದಿಕೊಳ್ಳುವುದು ಕಷ್ಟವಾಗಿದ್ದರೂ ಪ್ರಯಾಣ ಮಕ್ಕಳಿರುವಾಗಲೇ ಒಮ್ಮೆಯಾದರೂ ನೋಡಬೇಕೆಂದು ಹಂಬಲಿಸಿದ್ದ ದೆಹಲಿ ಕಡೆಗೆ ಎಂದಾಗ ಮನಸ್ಸು ನಿರಾಳವಾಗುತಿತ್ತು.
ಬೆಳೆದು ಬಂದ ಹಾದಿಯಲ್ಲಿ ದೆಹಲಿಯನ್ನು ಕಂಡದ್ದು ಹಲವು ವಿಷೇಷತೆಗಳೊಂದಿಗೆ, ಕುತುಬ್ ಮಿನಾರ್, ಕೆಂಪುಕೋಟೆ, ಇಂಡಿಯಾ ಗೇಟ್, ರಾಷ್ಟ್ರಪತಿ ಭವನ, ನಮ್ಮನ್ನಾಳುವ ಹಿರಿಯನ್ನರುಗಳಿರುವ ಪಾರ್ಲಿಮೆಂಟ್, ಗಾಂಧಿಯ ಸಮಾದಿ ಇರುವ ರಾಜ್ಘಾಟ್ ಮತ್ತು ಅಗಲವಾದ ರಸ್ತೆಗಳ ನಿರೀಕ್ಷೆಯಲ್ಲಿದ್ದ ನಮ್ಮನ್ನು ಇವಾವುವೂ ಸ್ವಾಗತಿಸಲೇ ಇಲ್ಲ!
ಇಸ್ಟೆಲ್ಲಾ ಇರುವ ದೆಹಲಿ ನಮ್ಮನ್ನು ಸ್ವಾಗತಿಸಿದ್ದಾದರೂ ಹೇಗೆ ??
ಇಂದಿನ ಪ್ರಜೆಗಳೇ ಈ ದೇಶದ ಮುಂದಿನ ನಾಯಕರು ಎನ್ನುವ ಮಾತಿಗೆ ಆಶಾಕಿರಣವಾಗಿ ಬೆಲೆಯಬೇಕಾಗಿದ್ದ ಪುಟ್ಟ ಬಾಲೆ ತನ್ನ ಹೊಟ್ಟೆಪಾಡಿಗಾಗಿ ಮಧುರವಾದ ಕಂಠದಿಂದ ಹಾಡಿ ಜನರಿಂದ ಐದೋ ಹತ್ತೋ ಪಡೆದ ಮುಗ್ದ ಬಾಲೆ ದೆಹಲಿಯ ಕನಸು ಕಟ್ಟಿದ್ದ ನಮ್ಮನ್ನು ಸ್ವಾಗತಿಸಿದ್ದು, ಸ್ಲಂಗಳು ಕಾಣತೊಡಗಿದಂತೆ ಅಲ್ಲಿ ಮಲಗಿದ್ದ ರಾಜಧಾನಿಯ ನಿರ್ವಸಿತ ಜನತೆ ಮತ್ತು ಪರಿಸರ ದುರ್ವಾಸನೆಯೊಂದಿಗೆ ನಮ್ಮನ್ನು ಸುಂದರ ದೆಹಲಿಗೆ ಸ್ವಾಗತಿಸಬಹುದೆಂದು ನವೊಮ್ಮೆಯೂ ನಿರೀಕ್ಷಿಸಿರಲಿಲ್ಲ. ದೂರದರ್ಶನದ ಪರದೆಯಲ್ಲಿ ಭ್ರಹದಾಕಾರದಲ್ಲಿ ಅಗಲವಾದ ರಸ್ತೆಯನ್ನು ಕಂಡಿದ್ದ ನಮ್ಮನ್ನು ನಮ್ಮ ಊರಿನಂತೆ ಇರುವ ಗುಂಡಿ ರಸ್ತೆಗಳು ನಮ್ಮನ್ನು ಸ್ವಾಗತಿಸಿ ನಿರಾಸದಾಯಕರನ್ನಾಗಿ ಮಾಡಬಹುದೆಂದು ನಾವಂದುಕೊಂಡಿರಲಿಲ್ಲ.ಹಾಗೆ ಮುಂದುವರಿದು ಭಾರವಾದ ಮನಸ್ಸಿನಿಂದ ಕುತುಬ್ ಮಿನಾರ್, ಕೆಂಪುಕೋಟೆಯ ಭವ್ಯ ಕಲೆಯನ್ನು ನೋಡಿ ಕಣ್ತುಂಬಿಕೊಂಡೆವು,ಮುಂದೆ ಐಶರಾಮಿ ಬಂಗಲೆಗಳು, ಹೋಟೆಲುಗಳನ್ನು ನೋಡಿದಾಗ ಬಡವರ್ಗಕ್ಕೂ ಶ್ರೀಮಂತವರ್ಗಕ್ಕೂ ನಡೆದಿರುವ ತಾರತಮ್ಯ ಮರೆಯಲಾಗಲಿಲ್ಲ. ಹೀಗೆ ಮುಂದುವರೆದು "ಇಂಡಿಯಾ ಗೇಟ್" ನ ಸೌಂದರ್ಯವನ್ನು ಸವಿದು ರಾಜ್ಪಥ್ ರಸ್ತೆಯ ಇಕ್ಕೆಲಗಳನ್ನು ವೀಕ್ಷಿಸಿ ರಾಷ್ಟ್ರಪತಿ ಭವನ ಸಮೀಪಿಸುತ್ತಿದ್ದಂತೆ ದೂರದಿಂದ ಕಟ್ಟಡದ ವೈಭವ ನೋಡಿದಾಗ ಅದರ ಹಿಂದೆ ಶ್ರಮಪಟ್ಟವರ ನೆನಪಾಯಿತು ಮತ್ತು ಮನಸ್ಸಿನಲ್ಲೆನೋ ಪುಳಕ, ಆದರೆ ತಕ್ಷಣವೇ ಅದರಿಂದ ಹೊರಗೆ ಬರಬೇಕಾಯಿತು! ನಮ್ಮೊರಿನ ಹಾಗೆ ಅಗತ್ಯವಿಲ್ಲದೆ ಕೈ ತೋರಿಸಿ ತಪಾಸಣೆಗೆಂದು ನಿಲ್ಲಿಸುವ ಪೋಲಿಸ್ ಅಲ್ಲಿ ಕೂಡಾ ಇದ್ದ, ಮರದಡಿಯಲ್ಲಿ ನೂರು ರೂಪಾಯಿ ಕೊಟ್ಟಾಗ ಎಲ್ಲವೂ ಮನ್ನಿಸಲ್ಪಡುವ ವಿಧಿ ದೂರದಿಂದ ಕಂಡು ಮರುಕವಾಯಿತು, ಅಸಹಾಯಕರಾಗಿ ಅದಕ್ಕೆ ಸಾಕ್ಷಿಯಗಿದ್ದಕ್ಕಾಗಿಯೂ ವಿಷಾದವಾಯಿತು ಆದರೆ ಆಶ್ಚರ್ಯವೇನೆಂದರೆ ಹಿಂದೆಯೇ ಇಂಡಿಯಾ ಗೇಟ್ ಇರುವಾಗ ಮುಂದುಗಡೆ ರಾಷ್ಟ್ರಪತಿ ಭವನ ಇರುವಲ್ಲಿ ಮತ್ತು ಕೂಗಳತೆಯ ದೂರದಲ್ಲಿ ದೇಶದ ಕಾರ್ಯಂಗವಾದ ಪಾರ್ಲಿಮೆಂಟ್ ಇರುವ ಜಾಗದಲ್ಲಿ ಮಾತ್ರವಲ್ಲ ವಿಜಯ್ ಚೌಕ್ನಲ್ಲೇ ನೂರು ರೂಪಾಯಿಗೆ ಎಲ್ಲವೂ ನಡೆದು ಮುಗಿದು ಹೊಗುವುದನ್ನು ಕಂಡಾಗ ರಾಜಧಾನಿಯ ಬಗ್ಗೆ ಇಟ್ಟುಕೊಂಡಿದ್ದ ನಿರೀಕ್ಷಗಳೆಲ್ಲ ಹುಸಿಯಾಯಿತು.
ಒಂದು ದೇಶದ ರಾಜಧಾನಿಯ ಕಾರ್ಯಾಂಗದ ತಳಸ್ಥಾನದಲ್ಲೇ ಭ್ರಷ್ಟಾಚಾರ ಯಾವ ಹಂಗಿಲ್ಲದೆ ನಡೆಯುವುದಾದರೆ ಮರವಾಗಿ ಬೆಳೆದಿರುವ ಹೆಮ್ಮರವನ್ನು ಕಡಿಯಲು ಸಾದ್ಯವೋ ಎಂದು ಚಿಂತೆಯಾಯಿತು ಮಾತ್ರವಲ್ಲ ಭ್ರಷ್ಟಾಚಾರ ಅಳಿಸಿ
ಹಾಕಬೇಕು ಎಂದು ಕಂಡಿದ್ದ ಕನಸು ನಿಲ್ಲಿಸಿ ಬಿಡಬೇಕೆನಿಸಿತು. ರಾಜಧಾನಿಯಲ್ಲೇ ಅವ್ಯವಸ್ಥೆಗಲು ತಾಂಡವಾಡುತ್ತಿರುವಾಗ, ಬಾಲಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿರುವಾಗ, ಬಡವರು ತುಂಬಿ ತುಳುಕಾಡುತ್ತಿರುವಾಗ, ಭ್ರಷ್ಟಾಚಾರ ವ್ಯಾಪಕವಾಗಿ ಹಬ್ಬಿರುವಾಗ ಇನ್ನು ದೇಶದ ಹಳ್ಳಿಗಳ ವ್ಯವಸ್ಥೆ ಹೇಗಿರಬಹುದು ಎಂದು ಆಲೋಚಿಸಿದಾಗ ದೇಶದಿಂದ ಇದನ್ನೆಲ್ಲಾ ಅಳಿಸಿ ಹಾಕಲು ಅಸ್ಟೊಂದು ಸುಲಭವಿಲ್ಲ ಎಂದು ಭಾರವಾದ ಮನಸ್ಸಿನಿಂದ ಕನಸುಗಳನ್ನು ಕಟ್ಟಿಕೊಂಡು ದೆಹಲಿ ಯಾತ್ರೆ ಮಾಡಿದ್ದ ನಾವು ನೋವಿನೊಂದಿಗೆ ದೆಹಲಿಗೆ ವಿದಾಯ ಹೇಳಬೇಕಾಯಿತು.ಆದರೆ ಇದೆಲ್ಲದರ ಮದ್ಯೆ ಒಂದಂತು ಸತ್ಯ, ಇತ್ತೀಚೆಗೆ ಕೇರಳದ ಹೈ ಕೋರ್ಟ್ ಹೇಳಿದಂತೆ ಜನರೇ ನೀವು ಪ್ರಶ್ನಿಸಬೇಕು ನೀವು ಪ್ರಶ್ನಿಸದ ಹೊರತು ಇಲ್ಲೇನು ಬದಲಾಗದು ಎನ್ನುವ ಮಾತನ್ನು ನಾವೆಲ್ಲ ಒಪ್ಪಿಕೊಂಡು ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಈ ದೇಶವನ್ನು ಮೇಲ್ಕಂಡ ಎಲ್ಲ ಸಮಸ್ಯೆಗಳಿಂದ ಮುಕ್ತ ಗೊಳಿಸಲು ಮತ್ತು ನಾವು ಗುಲಾಮರಾಗಿ ಬದುಕುವುದನ್ನು ತಪ್ಪಿಸಲು ಸಾದ್ಯ, ಹಾಗೆ ಬದಲಾದ ಒಂದು ದೇಶವನ್ನು ನಮ್ಮ ಕಣ್ಣುಗಳಿಂದ ತುಂಬಿಕೊಳ್ಳಲು ಸಾದ್ಯವಾಗದಿದ್ದರೂ ಇದೇ ಕಣ್ಣುಗಳ ವಾರಸುದಾರರಿಗಾದರೂ ಬದಲಾದ ದೇಶವನ್ನು ಕಣ್ತುಂಬಿಕೊಳ್ಳಲು ಅವಕಾಶ ನೀಡಲು ಸಾದ್ಯ.
2 comments:
ನಮ್ಮ ದೇಶ ಬದಲಾಗತ್ತೆ ಅನ್ನೋ ಕನಸು ಯಾವಾಗಲು ಕನಸಾಗೆ ಉಳಿದುಬಿಡತ್ತೇನೋ ಅನ್ಸತ್ತೆ ನಿಮ್ಮ ಲೇಖನ ಓದ್ತಿದ್ರೆ
Nanu innu Delhi nodilla , nanagu nimma taraha Delhi bagge anisike ittu
Post a Comment